ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದಕ್ಕೆ ಡೆಮಾಕ್ರಟಿಕ್ ಪಕ್ಷದಲ್ಲಿ ವ್ಯಕ್ತವಾದ ಅಪಾರವಾದ ಬೆಂಬಲವು ಚಾರಿತ್ರಿಕವೇ ಆಗಿದೆ. ಅಮೆರಿಕದ ಅತ್ಯುನ್ನತ ಹುದ್ದೆಗೆ ಸ್ಪರ್ಧೆ ಮಾಡಲಿರುವ ಬಿಳಿಯರಲ್ಲದ ಮೊದಲ ಮಹಿಳೆ ಅವರು. ಈ ಹಿಂದೆ, 50ಕ್ಕೂ ಹೆಚ್ಚು ವರ್ಷಗಳಿಗೆ ಮುಂಚೆ ಕಪ್ಪುವರ್ಣೀಯ ಮಹಿಳೆಯೊಬ್ಬರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗುವ ಪ್ರಯತ್ನ ಮಾಡಿದ್ದರು. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಡೆಮಾಕ್ರಟಿಕ್ ಪಕ್ಷವು ಯಶಸ್ವಿಯಾಗಿದೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಮಧ್ಯದಲ್ಲಿಯೇ ಹಾಲಿ ಅಧ್ಯಕ್ಷರನ್ನು ಹಿಂದೆ ಸರಿಯುವಂತೆ ಮನವೊಲಿಸಿದ್ದು ಕೂಡ ಇದೇ ಮೊದಲು. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಜೊತೆ ಈ ತಿಂಗಳ ಆರಂಭದಲ್ಲಿ ನಡೆಸಿದ ಟಿ.ವಿ. ಚರ್ಚೆಯಲ್ಲಿ ಬೈಡನ್ ಅವರ ಭಾಗವಹಿಸುವಿಕೆ ಬಹಳ ಕಳಪೆಯಾಗಿತ್ತು. ಆಗಿನಿಂದಲೇ ಅವರು ಅಭ್ಯರ್ಥಿ ಆಗುವುದರ ಕುರಿತು ಸಂದೇಹಗಳು ಮೂಡಿದ್ದವು. ಈ ಚರ್ಚೆಯಲ್ಲಿ ಬೈಡನ್ ಅವರಿಗೆ ಗ್ರಹಿಕೆಯ ಸಮಸ್ಯೆಗಳು ಕಂಡುಬಂದಿದ್ದವು. ಹಾಗಾಗಿಯೇ, ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಹಲವರು ಬಹಿರಂಗವಾಗಿ ಮತ್ತು ಹಲವರು ಖಾಸಗಿಯಾಗಿ ಬೈಡನ್ ಅವರನ್ನು ಕೋರಿದ್ದರು. ಪಕ್ಷ ಮತ್ತು ಪ್ರಜಾತಂತ್ರದ ಹಿತದೃಷ್ಟಿಯಿಂದ ಇದು ಅಗತ್ಯ ಎಂದು ವಿವರಿಸಿದ್ದರು. ಟ್ರಂಪ್ ಅವರ ಹತ್ಯೆ ಯತ್ನ ನಡೆದ ಬಳಿಕ ಅವರು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿದ್ದವು. ಈ ಸನ್ನಿವೇಶದಲ್ಲಿ, 80 ವರ್ಷ ವಯಸ್ಸಿನ ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.

ಕಮಲಾ ಹ್ಯಾರಿಸ್ ಅವರು ಅಭ್ಯರ್ಥಿ ಎಂಬುದನ್ನು ಡೆಮಾಕ್ರಟಿಕ್ ಪಕ್ಷವು ಇನ್ನಷ್ಟೇ ದೃಢಪಡಿಸಬೇಕಿದೆ. ಆಗಸ್ಟ್ ಮಧ್ಯಭಾಗದಲ್ಲಿ ನಡೆಯಲಿರುವ ಪಕ್ಷದ ಸಮಾವೇಶದಲ್ಲಿ ಈ ನಿರ್ಧಾರ ಆಗಲಿದೆ. ನಾಲ್ಕು ದಿನಗಳ ಹಿಂದಿನವರೆಗೂ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಕೈಚೆಲ್ಲಿ ಕುಳಿತಿದ್ದ ಪಕ್ಷದಲ್ಲಿ ಈಗ ಹೊಸ ಭರವಸೆ ಮೂಡಿದೆ. ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ಈವರೆಗಿನ ಚರ್ಚೆಯಲ್ಲಿ ವಯಸ್ಸಿನ ವಿಚಾರವೇ ಮುನ್ನೆಲೆಯಲ್ಲಿತ್ತು. ಬೈಡನ್ ಅವರನ್ನು ಟ್ರಂಪ್ ಅವರು ‘ಮುದಿಯ’ ಎಂದು ಹಂಗಿಸಿದ್ದರು. ಈಗ, ಕಮಲಾ ಹ್ಯಾರಿಸ್ ಅವರು ತಮ್ಮ ಪ್ರತಿಸ್ಪರ್ಧಿ
ಗಿಂತ 20 ವರ್ಷ ಕಿರಿಯರು. ಕಮಲಾ ಹ್ಯಾರಿಸ್ ಅವರು ಈಗ ಡೆಮಾಕ್ರಟಿಕ್ ಪಕ್ಷದ ಪ್ರಚಾರಕ್ಕೆ ಹೆಚ್ಚಿನ ಚೈತನ್ಯ ತುಂಬಲಿದ್ದಾರೆ ಎಂಬುದರ ಮೇಲೆ ಎಲ್ಲರ ಕಣ್ಣು ಇದೆ. ಆದರೆ ಅವರ ಮುಂದೆ ಇರುವ ಸವಾಲುಗಳು ಕಡಿಮೆಯೇನೂ ಅಲ್ಲ. ಇಸ್ರೇಲ್ ಮತ್ತು ಹಮಾಸ್ ನಡುವಣ ಸಂಘರ್ಷದಲ್ಲಿ ಬೈಡನ್ ಅವರು ನಿರಂತರವಾಗಿ ಇಸ್ರೇಲ್ಗೆ ಬೆಂಬಲ ನೀಡಿದ್ದರಿಂದಾಗಿ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾಗಿರುವ ಯುವಜನರಲ್ಲಿ ಹಲವರು ಈ ಬಾರಿ ಮತದಾನದಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಕೆಲವೇ ದಿನಗಳ ಹಿಂದಿನವರೆಗೆ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಕಮಲಾ ಹ್ಯಾರಿಸ್ ಅವರು ಇಸ್ರೇಲ್ ವಿಚಾರದಲ್ಲಿ ತೀರಾ ಭಿನ್ನವಾದ ನಿಲುವು ತಳೆಯುವುದು ಸಾಧ್ಯವಿಲ್ಲ. ಇನ್ನೊಂದೆಡೆ, ಗರ್ಭಪಾತಕ್ಕೆ ಸಂಬಂಧಿಸಿದ ವಿಚಾರಗಳು ಅಮೆರಿಕದ ಚುನಾವಣೆಯಲ್ಲಿ ಗಂಭೀರ ಚರ್ಚೆಗೆ ಒಳಪಟ್ಟಿವೆ. ಈ ವಿಚಾರದಲ್ಲಿ ಯುವಸಮೂಹ ಮತ್ತು ಮಹಿಳೆಯರ ಮತಗಳನ್ನು ಅವರು ಸೆಳೆಯಬಹುದು. ಆದರೆ, ಜನಾಂಗೀಯ ಅಸ್ಮಿತೆಯು ಕಮಲಾ ಹ್ಯಾರಿಸ್ ಅವರಿಗೆ ಮುಳುವಾಗಬಹುದೇ ಎಂಬ ಪ್ರಶ್ನೆ ಇದೆ. ಬರಾಕ್ ಒಬಾಮ ಅವರ ಎಂಟು ವರ್ಷದ ಆಳ್ವಿಕೆಯೇ ಟ್ರಂಪ್ 2016ರಲ್ಲಿ ಆಯ್ಕೆ ಆಗಲು ಕಾರಣ ಎಂದು ಹೇಳಲಾಗುತ್ತಿದೆ. ಹಾಗಿರುವಾಗ, ಅಧ್ಯಕ್ಷ ಸ್ಥಾನಕ್ಕೆ ಬಿಳಿಯರಲ್ಲದ ಮಹಿಳೆಯೊಬ್ಬರನ್ನು ಅಮೆರಿಕ ಒಪ್ಪುವುದೇ? ಕಮಲಾ ಅವರ ತಾಯಿ ಭಾರತೀಯರಾಗಿದ್ದರೆ ತಂದೆ ಜಮೈಕಾದವರು. ಅವರು ಕಪ್ಪುವರ್ಣೀಯ ಸಮುದಾಯದವರು. ಈಗ, ಅವರು ಮಹಿಳೆ ಎಂಬುದು ಕೂಡ ರಿಪಬ್ಲಿಕನ್ ಪಕ್ಷದ ಪ್ರಚಾರದಲ್ಲಿ ಮುಂಚೂಣಿಗೆ ಬರಬಹುದು. ‘ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸೋಣ’ ಎಂಬ ಟ್ರಂಪ್ ಅವರ ಘೋಷಣೆಯ ಹಿಂದೆ ಜನಾಂಗದ್ವೇಷ ಮತ್ತು ಮಹಿಳಾದ್ವೇಷವೇ ಇವೆ.

ಕಮಲಾ ಅವರು ಸ್ಪರ್ಧಾಕಣ ಪ್ರವೇಶಿಸಿದ ನಂತರ ಲೆಕ್ಕಾಚಾರಗಳು ಬದಲಾಗಿವೆ ಎಂಬುದರಲ್ಲಿ ಅನುಮಾನವೇನೂ ಇಲ್ಲ. ಟ್ರಂಪ್ಗೆ ಚುನಾವಣೆಯಲ್ಲಿ ಅನಾಯಾಸ ಗೆಲುವು ಸಿಗಲಿದೆ ಎಂಬ ಭಾವನೆ ಈಗ ಬದಲಾಗಿದೆ. ಆದರೆ, ಮಾಜಿ ಅಧ್ಯಕ್ಷ ಟ್ರಂಪ್ ಅವರು 2020ರಲ್ಲಿ ಗೆಲುವನ್ನು ತಮ್ಮಿಂದ ‘ಕದ್ದುಕೊಂಡಿದ್ದಾರೆ’ ಎಂದು ಹುಯಿಲೆಬ್ಬಿಸಿದ್ದರು. ಅಂತಹ ಟ್ರಂಪ್, ಕಮಲಾ ಗೆದ್ದರೆ ಅದನ್ನು ಒಪ್ಪಿಕೊಳ್ಳುತ್ತಾರೆಯೇ? ಈ ಬಾರಿ ಅಧ್ಯಕ್ಷೀಯ ಚುನಾವಣೆಯು ಸಾಮಾನ್ಯವಲ್ಲ ಎಂಬ ಭಾವನೆ ಈಗಾಗಲೇ ಇದೆ. ಕಳೆದ ಬಾರಿ ಆದಂತೆ ಫಲಿತಾಂಶದ ಬಳಿಕ ಕ್ಯಾಪಿಟಲ್ ಹಿಲ್ಗೆ ಮುತ್ತಿಗೆ ಇರಬಹುದೇ ಅಥವಾ ಅದಕ್ಕಿಂತ ಕೆಟ್ಟದ್ದು ನಡೆಯಬಹುದೇ ಎಂಬ ಕಳವಳ ಅಮೆರಿಕದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.