ಭಾನುವಾರ, ಮಾರ್ಚ್ 29, 2020
19 °C

ರಾಜ್ಯದ ಗಡಿಯಲ್ಲಿ ಕೇರಳದ ತ್ಯಾಜ್ಯನಿಯಂತ್ರಣಕ್ಕೆ ಬೇಕು ಕಟ್ಟುನಿಟ್ಟಿನ ಕ್ರಮ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಅಪಾಯಕಾರಿ ತ್ಯಾಜ್ಯವನ್ನು ಕೇರಳದಿಂದ ಕದ್ದುಮುಚ್ಚಿ ತಂದು ಕರ್ನಾಟಕದ ಗಡಿಗ್ರಾಮಗಳ ವ್ಯಾಪ್ತಿಯಲ್ಲಿ ಸುರಿಯುವ ಪರಿಪಾಟ ಇದ್ದುದನ್ನು ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಈಗ ಒಪ್ಪಿಕೊಂಡಿದೆ. ಇಂತಹ ಕುಕೃತ್ಯಗಳನ್ನು ನಿಯಂತ್ರಣಕ್ಕೆ ತರಲು ತಕ್ಷಣ ಕ್ರಮ ಜರುಗಿಸುವುದಾಗಿಯೂ ಅದು ಭರವಸೆ ನೀಡಿದೆ. ಕೇರಳದ ಈ ವಿಷಕಾರಿ ವೈದ್ಯಕೀಯ ತ್ಯಾಜ್ಯವು ರಾಜ್ಯದ ಪರಿಸರವನ್ನು ಮಲಿನಗೊಳಿಸುತ್ತಿದೆ ಎಂಬ ದೂರುಗಳು ವ್ಯಾಪಕವಾಗಿರುವ ಸಂದರ್ಭದಲ್ಲೇ ಈ ವಿದ್ಯಮಾನ ನಡೆದಿದೆ. ರಾಜ್ಯದ ಹಲವು ಅರಣ್ಯ ಪ್ರದೇಶಗಳು ಹಾಗೂ ಗಡಿ ಗ್ರಾಮಗಳನ್ನೇ ತಿಪ್ಪೆಗುಂಡಿ ಮಾಡಿಕೊಂಡ ಕೇರಳ ರಾಜ್ಯದವರು, ಅಲ್ಲಿ ವಿಷಕಾರಿ ತ್ಯಾಜ್ಯವನ್ನು ರಾತ್ರೋರಾತ್ರಿ ತಂದು ಸುರಿಯುತ್ತಿದ್ದುದು ಗುಟ್ಟಿನ ಸಂಗತಿಯಾಗಿ ಏನೂ ಉಳಿದಿರಲಿಲ್ಲ. ಅತ್ತ ‘ಸ್ವಚ್ಛ ಕೇರಳ’ ಪರಿಕಲ್ಪನೆ ಬಲಗೊಳ್ಳುತ್ತಿದ್ದಂತೆಯೇ ಆ ರಾಜ್ಯದ ಕಸವನ್ನು ಇತ್ತ ಕರ್ನಾಟಕದ ಗಡಿಯಲ್ಲಿ ತಂದು ಸುರಿಯುವ ದೊಡ್ಡ ಮಾಫಿಯಾ ತಲೆಎತ್ತಿದೆ. ಕರ್ನಾಟಕದ ಹಲವರು ತಮ್ಮ ಜಮೀನನ್ನೇ ಕಸ ಸುರಿಯಲು ಗುತ್ತಿಗೆಗೆ ನೀಡುವ ಮೂಲಕ ಈ ಕೃತ್ಯಕ್ಕೆ ಸಹಕರಿಸುತ್ತಿರುವ ಕುರಿತು ದೂರುಗಳಿವೆ. ಹಾಗೆಯೇ ಚಾಮರಾಜನಗರ ಜಿಲ್ಲಾ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಸಡಿಲಗೊಂಡಿರುವ ತಪಾಸಣಾ ವ್ಯವಸ್ಥೆಯಿಂದ ಸಮಸ್ಯೆ ಬಿಗಡಾಯಿಸಿದೆ ಎಂದೂ ಹೇಳಲಾಗಿದೆ. ರಾಜ್ಯದ ಪರಿಸರಕ್ಕೆ ವಿಷ ಉಣಿಸುವ ಈ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಮೈಸೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಆರು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ಕೇರಳದಿಂದ ತಂದ ತ್ಯಾಜ್ಯವನ್ನು ಸುರಿಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಇತ್ತೀಚೆಗಷ್ಟೇ ಬಂಧಿಸಲಾಗಿದೆ. ಗಡಿಭಾಗದಲ್ಲಿ ಸುರಿದ ವಿಷಕಾರಿ ವೈದ್ಯಕೀಯ, ಜೈವಿಕ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯದಿಂದ ರಾಜ್ಯದ ಅರಣ್ಯ ಪ್ರದೇಶದ ಪರಿಸರ ಹಾಳಾಗುತ್ತಿದ್ದು, ಗಡಿಗ್ರಾಮಗಳಲ್ಲಿ ಕಾಯಿಲೆಪೀಡಿತರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಆರೋಗ್ಯ ಇಲಾಖೆಯ ದಾಖಲೆಗಳೇ ಹೇಳುತ್ತಿವೆ.

ಕರ್ನಾಟಕದಿಂದ ತರಕಾರಿ ಹಾಗೂ ವಿವಿಧ ಸರಕುಗಳನ್ನು ತೆಗೆದುಕೊಂಡು‌ ಹೋಗುವ ಲಾರಿಗಳಲ್ಲೇ, ಚಾಲಕ ಹಾಗೂ ಕ್ಲೀನರ್‌ಗಳಿಗೆ ದುಡ್ಡಿನ ಆಮಿಷವೊಡ್ಡಿ, ವೈದ್ಯಕೀಯ ತ್ಯಾಜ್ಯವನ್ನು ಸಾಗಿಸಲಾಗುತ್ತಿದೆ ಎಂಬ ವರದಿಗಳಿವೆ. ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿಯ ಕಣ್ಣುತಪ್ಪಿಸಿ ಅಥವಾ ಅವರಿಗೆ ಲಂಚ ಕೊಟ್ಟು ಕಸವನ್ನು ಇತ್ತ ರವಾನಿಸಲಾಗುತ್ತದೆ ಎಂದೂ ದೂರಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ, ಸರ್ಕಾರಿ ಭೂಮಿಯಲ್ಲಿ, ರೈತರ ಪಾಳು ಬಿದ್ದಿರುವ ಜಮೀನುಗಳಲ್ಲಿ ತ್ಯಾಜ್ಯವು ಗುಡ್ಡದಂತೆ ಬಿದ್ದಿರುವುದನ್ನು ಕಾಣಬಹುದಾಗಿದೆ. ಕೇರಳದಲ್ಲಿ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯವು ಮಂಡ್ಯ ಜಿಲ್ಲೆಯ ಆಲೆಮನೆಗಳಲ್ಲಿ ಉರಿಯುತ್ತಿದೆ. ಚಿಮಣಿಗಳು ಹೊರಸೂಸುತ್ತಿರುವ ಹೊಗೆಯಿಂದ ಹಳ್ಳಿಗಳ ಮನೆಗಳ ಗೋಡೆಗಳು ಕಪ್ಪಾಗಿದ್ದು, ಮಕ್ಕಳು, ವೃದ್ಧರಲ್ಲಿ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂಬ ವರದಿಗಳು ಇವೆ. ಕೇರಳದ ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿಯ ಗುತ್ತಿಗೆ ಪಡೆದಿರುವವರು ಮೈಸೂರಿನಲ್ಲಿರುವ ಕೆಲವು ಏಜೆಂಟರ ಮೂಲಕ ಹಣ ಕೊಟ್ಟು, ಕಸ ಸಾಗಿಸುತ್ತಾರೆ ಎನ್ನುವ ಮಾಹಿತಿಯೂ ಇದೆ. ಇಂತಹ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದವರನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅಪಾಯಕಾರಿ ಕಸದ ದುಷ್ಪರಿಣಾಮಗಳು ಗೊತ್ತಿದ್ದೂ ಅದನ್ನು ಸುರಿಯಲು ಜಮೀನನ್ನು ಗುತ್ತಿಗೆಗೆ ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು.

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣಾ ವ್ಯವಸ್ಥೆಯನ್ನು ಬಿಗಿಗೊಳಿಸಬೇಕು. ತ್ಯಾಜ್ಯದ ಒಂದು ತುಣುಕೂ ರಾಜ್ಯದ ಗಡಿ ಪ್ರವೇಶಿಸದಂತೆ ನಿಗಾ ವಹಿಸಬೇಕು. ಪರಿಸರದ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಸಲ್ಲ ಎನ್ನುವುದನ್ನು ಗಡಿ ಭಾಗದ ಜಿಲ್ಲಾ ಆಡಳಿತ ವ್ಯವಸ್ಥೆಯು ಅರ್ಥ ಮಾಡಿಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು