ಮಂಗಳವಾರ, ಏಪ್ರಿಲ್ 20, 2021
32 °C

ಬಜೆಟ್: ಮುಂದುವರಿದ ಸಂಪ್ರದಾಯ, ಕಾಣದ ಆಸ್ಥೆ, ಕೈತಪ್ಪಿದ ಅವಕಾಶ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಒಂದೊಂದು ತಲೆಮಾರು ಒಂದೊಂದು ಬಗೆಯ ದುರಂತಕ್ಕೆ ಸಾಕ್ಷಿಯಾಗುತ್ತದೆ ಎಂಬ ಮಾತಿದೆ. ದುರಂತವನ್ನು ಕಂಡ ತಲೆಮಾರು, ಮುಂದೆ ಅಂತಹ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಆಲೋಚಿಸುವುದು ಸಹಜ. ಇಂದಿನ ತಲೆಮಾರು ಕೊರೊನಾ ವೈರಾಣು ತಂದಿತ್ತ ಆರ್ಥಿಕ ಸಂಕಷ್ಟದ ಸ್ಥಿತಿಗೆ ಸಾಕ್ಷಿಯಾಗಿದೆ. ಜೀವನದಿಗಳಂತಿದ್ದ ಆದಾಯ ಮೂಲಗಳು ಇದ್ದಕ್ಕಿದ್ದಂತೆ ಬತ್ತಿದವು. ಇಂತಹ ವಿಚಿತ್ರ ಹಾಗೂ ಸಂಕಷ್ಟಕರ ಸಂದರ್ಭಕ್ಕೆ ಸಾಕ್ಷಿಯಾದ ತಲೆಮಾರು, ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಆ ಸಂಕಷ್ಟಗಳಿಗೆ ಒಂದು ಸ್ಪಂದನ ಇರಲಿ ಎಂದು ಬಯಸುವುದು ಸಹಜ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ 2021–22ನೇ ಸಾಲಿನ ಬಜೆಟ್‌ನಲ್ಲಿ ಅಂತಹ ಸ್ಪಂದನ ಮೇಲ್ನೋಟಕ್ಕಂತೂ ಕಾಣಿಸುತ್ತಿಲ್ಲ. ಕೊರೊನಾ ಸೃಷ್ಟಿಸಿದ ಆರ್ಥಿಕ ವಿಕೋಪಗಳಿಗೆ ಮುಲಾಮು ಹಚ್ಚುವುದಕ್ಕಿಂತಲೂ ಹೆಚ್ಚಾಗಿ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಈ ಬಜೆಟ್‌ ಆದ್ಯತೆ ನೀಡಿರುವಂತೆ ಕಾಣುತ್ತಿದೆ.

ಲಾಕ್‌ಡೌನ್‌ ಕಾರಣದಿಂದಾಗಿ ಆರ್ಥಿಕ ಚಲನೆಯೇ ಇಲ್ಲದ ಸಂದರ್ಭದ ನಂತರ ಮಂಡನೆಯಾಗಿರುವ ಈ ಬಜೆಟ್, ಈ ಹಿಂದಿನ ಕೆಲವು ಸಂದರ್ಭಗಳಲ್ಲಿ ನೀಡಿದಷ್ಟು ಅಲ್ಲದಿದ್ದರೂ ಮಠ–ದೇವಸ್ಥಾನಗಳಿಗೆ ಒಂದಿಷ್ಟು ಅನುದಾನ ಒದಗಿಸಿದೆ, ಜಾತಿ–ಸಮುದಾಯ ಆಧಾರಿತವಾಗಿ ಅಷ್ಟಿಷ್ಟು ಹಣ ಹಂಚಿಕೆ ಮಾಡುವುದಕ್ಕೆ ಗಮನ ನೀಡಿದೆ. ರಾಜ್ಯದ ಆರ್ಥಿಕ ಸಂಪನ್ಮೂಲಗಳನ್ನು ಗಟ್ಟಿ ಮಾಡಿಕೊಳ್ಳುವ, ರಾಜ್ಯದ ಜನರ ಆರ್ಥಿಕ ಸ್ಥಿತಿಗತಿಯನ್ನು ಇಂತಿಷ್ಟು ವರ್ಷಗಳಲ್ಲಿ ಇಷ್ಟರಮಟ್ಟಿಗೆ ಸುಧಾರಿಸಬೇಕು ಎಂಬ ಗುರಿಯನ್ನು ಕಟ್ಟಿಕೊಡುವ ಮುಂಗಾಣ್ಕೆಗಿಂತಲೂ, ಇರುವ ಹಣವನ್ನು ‘ಎಲ್ಲರಿಗೂ ಒಂದಿಷ್ಟು’ ಎಂಬ ಸೂತ್ರದ ಅಡಿಯಲ್ಲಿ ಹಂಚಿಕೆ ಮಾಡಲು ಆದ್ಯತೆ ನೀಡಿರುವಂತೆ ಗೋಚರಿಸುತ್ತಿದೆ.

ಲಾಕ್‌ಡೌನ್‌ ನಂತರದ ಸಂದರ್ಭದಲ್ಲಿ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಗಮನಿಸಿ ಈ ಬಾರಿಯ ಬಜೆಟ್‌ ಯಾವ ವರ್ಗದ ಮೇಲೆಯೂ ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೇರಿಲ್ಲ. ಇದು ಸಮಾಧಾನ ತರುವಂಥದ್ದು. ಆದರೆ, ಜನ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಡೆಯುವ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಈ ಸಂದರ್ಭದಲ್ಲೂ ರಾಜ್ಯವು ಆಲೋಚಿಸಿದಂತೆ ತೋರುವುದಿಲ್ಲ. ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳು ಮುಂದೆ ಬರಬೇಕು ಎಂಬ ಉದ್ದೇಶದಿಂದ ಅವರಿಗೆ ವಾರ್ಷಿಕ ಶೇಕಡ 4ರ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗಿರುವುದು ಸ್ವಾಗತಾರ್ಹವೂ ಅತ್ಯಂತ ಸೂಕ್ತವೂ ಆದ ಕ್ರಮ. ಉದ್ಯಮ ವಲಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾದರೆ ಉದ್ಯೋಗ ಸೃಷ್ಟಿಯೂ ಹೆಚ್ಚುತ್ತದೆ, ರಾಷ್ಟ್ರದ ಜಿಡಿಪಿ ಕೂಡ ಏರಿಕೆ ಕಾಣುತ್ತದೆ ಎಂದು ಅಧ್ಯಯನಗಳು ಈಗಾಗಲೇ ಹೇಳಿವೆ. ಆದರೆ, ಮಹಿಳೆಯರನ್ನು ಉದ್ದೇಶಿಸಿ ಘೋಷಿಸಿರುವ ಇತರ ಕೆಲವು ಕ್ರಮಗಳು ಬಜೆಟ್‌ ಮೂಲಕ ಅನುಷ್ಠಾನಕ್ಕೆ ತರಬೇಕಾದಂಥವಲ್ಲ. ಅವುಗಳನ್ನು ಆಡಳಿತಾತ್ಮಕವಾಗಿ ಯಾವುದೇ ಸಂದರ್ಭದಲ್ಲಿ ಜಾರಿಗೆ ತರಬಹುದಿತ್ತು. ಈಚಿನ ವರ್ಷಗಳಲ್ಲಿ ಪ್ರತೀ ಬಜೆಟ್‌ನಲ್ಲೂ ಒಂದಲ್ಲ ಒಂದು ಸಮುದಾಯದ ಸಾಲಗಳನ್ನು ಮನ್ನಾ ಮಾಡುವ ಪರಿಪಾಟ ಬೆಳೆದು ಬಂದಿದ್ದರೂ ಈ ಬಾರಿಯ ಬಜೆಟ್‌ ಅದಕ್ಕೆ ವಿರಾಮ ನೀಡಿದೆ.

ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳಲು ಇದು ಬಹಳ ಮುಖ್ಯ. ಸಾಲ ಮನ್ನಾ ಎಂಬುದು ಯಾವುದೇ ಸ್ವರೂಪದಲ್ಲಿದ್ದರೂ ಅದು ಆರ್ಥಿಕ ಶಿಸ್ತಿಗೆ ವಿರುದ್ಧ. ಈ ಬಾರಿ ಸಾಲ ಮನ್ನಾ ಘೋಷಣೆಗೆ ಸರ್ಕಾರ ಮುಂದಾಗದಿರುವುದಕ್ಕೆ ಒಂದು ಕಾರಣ ವರಮಾನ ಕೊರತೆ. ಲಾಕ್‌ಡೌನ್‌ ನಂತರದಲ್ಲಿ ಬೇರೆ ಬೇರೆ ಉದ್ಯಮ ವಲಯಗಳು ತಮ್ಮ ನೌಕರರಿಗೆ ಮನೆಗಳಿಂದಲೇ, ಪುಟ್ಟ ಹಳ್ಳಿಗಳಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಕಲ್ಪಿಸಿವೆ. ಇದು ಒಂದು ಹಂತದವರೆಗೆ ಯಶಸ್ವಿಯೂ ಆಗಿದೆ.

ಇದನ್ನು ಒಂದು ಪಾಠವಾಗಿ ಪರಿಗಣಿಸಿ, ರಾಜ್ಯದ ಹಳ್ಳಿ–ಹಳ್ಳಿಗಳಲ್ಲೂ ಮೂಲಸೌಕರ್ಯ ಕಲ್ಪಿಸಿ, ಹಳ್ಳಿಗಳಿಂದಲೇ ಕೆಲಸ ಮಾಡುವಂತಹ ಅನುಕೂಲ ಸೃಷ್ಟಿಸುವ ಕೆಲಸಗಳನ್ನೂ ಸರ್ಕಾರ ಮಾಡಬಹುದಿತ್ತು. ಆದರೆ, ಒಂದು ಬಿಕ್ಕಟ್ಟಿನ ಸಂದರ್ಭವನ್ನು ಇಂತಹ ಪಾಠಗಳನ್ನು ಕಲಿಯಲು ಬಳಸಿಕೊಳ್ಳುವ ಆಸ್ಥೆ ಆಳುವವರಿಗೆ ಇರುವುದು ಈ ಬಜೆಟ್‌ನ ಪಠ್ಯದಲ್ಲಿ ಕಾಣುತ್ತಿಲ್ಲ. ಕೆಲವು ಒಳ್ಳೆಯ ಕ್ರಮಗಳನ್ನು ಒಳಗೊಂಡಿರುವ ಈ ಬಜೆಟ್, ಹಲವು ಅವಕಾಶಗಳನ್ನು ಕೈಚೆಲ್ಲಿರುವುದೂ ಹೌದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು