ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಾರಿಗೆ ಅವ್ಯವಸ್ಥೆ ಎತ್ತಿ ತೋರಿದ ದುರಂತ ಗ್ರಾಮೀಣ ಜನರ ಸಂಕಟ ನಿವಾರಿಸಿ

Last Updated 22 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ತುಮಕೂರು ಜಿಲ್ಲೆಯ ಪಾವಗಡದ ಬಳಿ ಮೊನ್ನೆ ಖಾಸಗಿ ಬಸ್ಸೊಂದು ಉರುಳಿಬಿದ್ದು ಸಂಭವಿಸಿದ ದುರಂತ ಎಂಥವರ ಮನವನ್ನೂ ಕಲಕುವಂತಹದು. ಅಪಘಾತದಲ್ಲಿ ಮೃತಪಟ್ಟ ಆರೂ ಮಂದಿ 19ರಿಂದ 22 ವರ್ಷದೊಳಗಿನ ಯುವಕರು. ಅದರಲ್ಲೂ ಐವರು ವಿದ್ಯಾರ್ಥಿಗಳು. ಭವ್ಯ ಭವಿಷ್ಯದ ಕನಸು ಕಾಣುತ್ತಿದ್ದ ಯುವ ಜೀವಗಳ ಇಂತಹ ಅಕಾಲಿಕ ನಿರ್ಗಮನಕ್ಕಿಂತ ಹೃದಯವಿದ್ರಾವಕ ಘಟನೆ ಬೇರೊಂದು ಇರ ಲಾರದು. ಬಸ್‌ ಒಳಗಡೆ ಮಾತ್ರವಲ್ಲದೆ ಮೇಲೆಯೂ (ಟಾಪ್‌) ಜನರನ್ನು ತುಂಬಿಕೊಂಡು ಹೊರಟಿದ್ದು, ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿದ್ದು ದುರ್ಘಟನೆಗೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ರಾಜ್ಯದ ಗ್ರಾಮಾಂತರ ಭಾಗಗಳು ಅನುಭವಿಸುತ್ತಿರುವ ಸಾರಿಗೆ ಅವ್ಯವಸ್ಥೆಯನ್ನು ಈ ದುರ್ಘಟನೆ ಎತ್ತಿ ತೋರಿದೆ. ದುರಂತಕ್ಕೆ ಕಾರಣವಾದ ಆ ಖಾಸಗಿ ಬಸ್‌ನಲ್ಲಿ ಅಷ್ಟೊಂದು ಪ್ರಯಾಣಿಕರು ಏಕೆ ಕಿಕ್ಕಿರಿದಿದ್ದರು (ಬಸ್‌ನ ಧಾರಣೆ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಜನ ಅದರಲ್ಲಿದ್ದರು ಎಂದು ವರದಿಯಾಗಿದೆ) ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ಸಾಕು, ಗ್ರಾಮೀಣ ಪ್ರದೇಶಗಳ ಸಾರಿಗೆ ಅವ್ಯವಸ್ಥೆಯ ಕಾರಣಗಳೆಲ್ಲ ಒಂದೊಂದಾಗಿ ಹೊರಬೀಳುತ್ತವೆ. ಪಾವಗಡ ಸೇರಿ ದಂತೆ ರಾಜ್ಯದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್‌ ಸೌಕರ್ಯ ಸಮರ್ಪಕವಾಗಿ ಇಲ್ಲ. ಅದರಲ್ಲೂ ಬೆಳಗಿನ ಹೊತ್ತು ನಗರ ಪ್ರದೇಶಗಳಿಗೆ ಶಾಲಾ–ಕಾಲೇಜುಗಳಿಗಾಗಲೀ ಉದ್ಯೋಗಕ್ಕಾಗಲೀ ಹೋಗುವವರು ಖಾಸಗಿ ಬಸ್‌ಗಳನ್ನೇ ಅವಲಂಬಿಸುವುದು ಅನಿವಾರ್ಯ. ಇಂತಹ ಮಾರ್ಗಗಳಲ್ಲಿ ಓಡಾಡುವ ಪ್ರತೀ ಬಸ್ಸಿನಲ್ಲಿ ಪ್ರಯಾಣಿಕರನ್ನು ಕುರಿಗಳಂತೆ ತುಂಬುವುದು ಮಾಮೂಲು. ಸಾರಿಗೆ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆಯ ಮೂಲ ಏನು ಎನ್ನುವುದು ಗೊತ್ತಿಲ್ಲದ ಸಂಗತಿಯೇನಲ್ಲ. ಆದರೆ, ದುರ್ಘಟನೆಯ ಬಳಿಕ ತಪಾಸಣೆ, ಪರ್ಮಿಟ್‌ ರದ್ದತಿಯಂತಹ ಕಣ್ಣೊರೆಸುವ ಕ್ರಮಗಳ ಮೂಲಕ ಮೂಲ ಸಮಸ್ಯೆಯನ್ನು ಮೂಲೆಗೆ ಸರಿಸ ಲಾಗುತ್ತದೆ.

ಸರ್ಕಾರಿ ಬಸ್‌ಗಳು ಸಕಾಲದಲ್ಲಿ ಮತ್ತು ಸೂಕ್ತ ಪ್ರಮಾಣದಲ್ಲಿ ಸಂಚರಿಸದೇ ಇರುವುದರಿಂದ ತಾನೇ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಅಷ್ಟೊಂದು ಕಿಕ್ಕಿರಿದು ತುಂಬಿಸಿಕೊಂಡು ಹೋಗುತ್ತಿರುವುದು? ಮೂಲ ಸಮಸ್ಯೆಯನ್ನು ಹಾಗೆಯೇ ಉಳಿಸಿ, ಖಾಸಗಿ ಬಸ್‌ಗಳ ಓಡಾಟವನ್ನೇ ರದ್ದು ಮಾಡುವುದಾಗಿ ಸಾರಿಗೆ ಸಚಿವರು ಘೋಷಿಸಿದರೆ ಗ್ರಾಮೀಣ ಪ್ರದೇಶಗಳ ಜನರ ಸಂಚಾರ ಸೌಲಭ್ಯಕ್ಕಾಗಿ ಏನು ಮಾಡಬೇಕು, ಬೇರೆ ಯಾರನ್ನು ಆಶ್ರಯಿಸಬೇಕು? ಖಾಸಗಿ ಬಸ್‌ಗಳ ಪರ್ಮಿಟ್‌, ಫಿಟ್‌ನೆಸ್‌ ಪ್ರಮಾಣಪತ್ರ, ವಿಮೆ ನವೀಕರಣ ಮೊದಲಾದವುಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲು ಅಪಘಾತ ಸಂಭವಿಸುವವರೆಗೆ ಕಾಯ ಬೇಕಿತ್ತೇ? ಮೊದಲೇ ಈ ಕ್ರಮ ಕೈಗೊಳ್ಳುವುದರಿಂದ ಸಾರಿಗೆ ಅಧಿಕಾರಿಗಳನ್ನು ತಡೆದವರಾದರೂ ಯಾರು? ದುರ್ಘಟನೆಗೆ ಖಾಸಗಿ ಬಸ್‌ ಮಾಲೀಕರ ಧನದಾಹ ಎಷ್ಟು ಕಾರಣವೋ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯವೂ ಅಷ್ಟೇ ಕಾರಣ. ತಪ್ಪಿತಸ್ಥರ ವಿರುದ್ಧ ದಾಕ್ಷಿಣ್ಯವಿಲ್ಲದೆ ಕ್ರಮ ಕೈಗೊಳ್ಳಬೇಕು. ಅದು ಉಳಿದವರಿಗೂ ಪಾಠವಾಗಬೇಕು. ಈಗ ಆರಂಭಿಸಿರುವ ಸರ್ಕಾರಿ ಬಸ್‌ಗಳ ತಾತ್ಕಾಲಿಕ ಸೇವೆಯನ್ನು ಮುಂದೆ ದುರಂತದ ಬಿಸಿ ತಣ್ಣಗಾಗುತ್ತಿದ್ದಂತೆಯೇ ಯಾವುದೋ ಸಬೂಬು ಹೇಳಿ ನಿಲ್ಲಿಸದಿರುವ ಬದ್ಧತೆಯನ್ನೂ ಪ್ರದರ್ಶಿಸಬೇಕು.

ಸಾರಿಗೆ ಇಲಾಖೆಯು ಈ ದುರಂತವನ್ನು ಒಂದು ಪಾಠವನ್ನಾಗಿ ಭಾವಿಸುವುದಾದರೆ ರಾಜ್ಯದಾದ್ಯಂತ ಎಲ್ಲೆಲ್ಲಿ ಖಾಸಗಿ ಬಸ್‌ಗಳು ಹೆಚ್ಚಾಗಿ ಓಡಾಡುತ್ತವೆ, ಅವುಗಳ ಸ್ಥಿತಿಗತಿ ಹೇಗಿದೆ, ಯಾವ ಮಾರ್ಗದಲ್ಲಿ, ಯಾವ ಸಮಯದಲ್ಲಿ ಸರ್ಕಾರಿ ಬಸ್‌ಗಳ ಸಂಚಾರವನ್ನು ಹೆಚ್ಚಿಸಬೇಕಿದೆ ಎಂಬುದರ ಸಮೀಕ್ಷೆ ನಡೆಸಬೇಕು. ಸಮಯಕ್ಕೆ ಸರಿಯಾಗಿ ಬಸ್‌ಗಳ ಸೌಕರ್ಯವಿಲ್ಲದೆ ಪ್ರಾಣವನ್ನು ಒತ್ತೆ ಇಟ್ಟು ಸಿಕ್ಕ ಸಿಕ್ಕ ವಾಹನಗಳಲ್ಲಿ ಓಡಾಡುತ್ತಿರುವ ವಿದ್ಯಾರ್ಥಿಗಳ, ದುಡಿಮೆಗೆ ಹೋಗುವವರ ಸಂಕಟವು ಇಲಾಖೆಯನ್ನು ಕಾಡಬೇಕು. ಸಾರಿಗೆ ನಿಗಮಗಳು ಇರುವುದು ಜನಸಾಮಾನ್ಯರಿಗೆ ಸೇವೆಯನ್ನು ಒದಗಿಸಲೇ ಹೊರತು ಲಾಭ ಮಾಡುವುದಕ್ಕಲ್ಲ. ಪಾಸ್‌ ಹೊಂದಿದ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ ಎನ್ನುವ ಕಾರಣಕ್ಕೆ ಅಂತಹ ಮಾರ್ಗಗಳಲ್ಲಿ ಬಸ್‌ ಓಡಿಸಲು ಹಿಂದೇಟು ಹಾಕುವುದು ಅಮಾನವೀಯ. ಇಲಾಖೆಯ ‘ವರಮಾನ ಗುರಿ’ಗಿಂತಲೂ ಮಕ್ಕಳು ನಿಗದಿತ ಸಮಯದೊಳಗೆ ಸುರಕ್ಷಿತವಾಗಿ ಶಾಲೆ ತಲುಪುವ ಗುರಿ ಮುಟ್ಟುವುದು ಹೆಚ್ಚು ಮಹತ್ವದ್ದು. ಮಾನವೀಯವಾದದ್ದು ಕೂಡ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿ ಗಳಿಗೆ ಮುಖ್ಯಮಂತ್ರಿಯವರೇ ಕಿವಿಮಾತು ಹೇಳಬೇಕು. ಖಾಸಗಿ ಬಸ್‌ಗಳ ಸಂಚಾರ ರದ್ದುಗೊಳಿಸಿದ ಮಾರ್ಗಗಳಲ್ಲಿ ಸರ್ಕಾರಿ ಬಸ್‌ಗಳ ಸೇವೆಯನ್ನು ಹೆಚ್ಚಿಸಬೇಕು. ಆ ಬಸ್‌ಗಳು ಸಕಾಲದಲ್ಲಿ ಸಂಚರಿಸುವಂತೆ ನಿಗಾ ವಹಿಸಬೇಕು. ಹಾಗೆಯೇ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಗೆ ಶಿಕ್ಷಣ ಇಲಾಖೆಯು ಸಮರ್ಪಕ ಉತ್ತರವನ್ನು ಕಂಡುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT