ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಚೀನಾದಲ್ಲಿ ವ್ಯಾಪಕವಾಗಿ ಹರಡಿದ ಜ್ವರ; ಭಾರತದಲ್ಲೂ ನಿಕಟ ನಿಗಾ ಬೇಕಿದೆ

Published 30 ನವೆಂಬರ್ 2023, 20:50 IST
Last Updated 30 ನವೆಂಬರ್ 2023, 20:50 IST
ಅಕ್ಷರ ಗಾತ್ರ

ಚೀನಾದ ಉತ್ತರ ಭಾಗದಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಜ್ವರದ ರೀತಿಯ ಅನಾರೋಗ್ಯವು ಜಗತ್ತಿನ ಇತರ ಭಾಗಗಳಲ್ಲಿ ಕೂಡ ಕಳವಳಕ್ಕೆ ಕಾರಣವಾಗಿದೆ. ಅಕ್ಟೋಬರ್‌ ತಿಂಗಳಲ್ಲಿಯೇ ಆರಂಭವಾಗಿರುವ ಈ ಅನಾರೋಗ್ಯವು ಅಪಾಯಕಾರಿ ಅಲ್ಲ ಎಂದು ಚೀನಾ ಹೇಳಿದ್ದರೂ ಕಳವಳವನ್ನು ಅದು ಕಡಿಮೆ ಮಾಡಿಲ್ಲ. ಚೀನಾದಲ್ಲಿ ಹೊಸ ರೋಗಾಣು ಅಥವಾ ಅಸಹಜವಾದ ರೋಗಾಣುವೇನೂ ಪತ್ತೆ ಆಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಈಗಾಗಲೇ ತಿಳಿದಿರುವ ರೋಗಾಣುಗಳಿಂದಲೇ ಕಾಣಿಸಿಕೊಂಡಿವೆ ಎಂದಿದೆ. ಮಕ್ಕಳಲ್ಲಿ ವ್ಯಾಪಕವಾಗಿ ಜ್ವರ ಇರುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವಂತೆ ಚೀನಾಕ್ಕೆ ಡಬ್ಲ್ಯುಎಚ್‌ಒ ಸೂಚಿಸಿದೆ. ‘ಕೋವಿಡ್‌–19ಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಕೈಬಿಟ್ಟಿರುವ ಕಾರಣ ಈ ರೋಗ ಕಾಣಿಸಿಕೊಂಡಿದೆ. ಇದು ಅನಿರೀಕ್ಷಿತವೇನೂ ಅಲ್ಲ. ಬೇರೆ ದೇಶಗಳಲ್ಲಿಯೂ ಇಂತಹ ಪರಿಸ್ಥಿತಿ ತಲೆದೋರಿತ್ತು. ಸಾಮಾನ್ಯವಾಗಿ ವೈರಾಣು ಜ್ವರ ಕಾಣಿಸಿಕೊಳ್ಳುವ ಅವಧಿಗಿಂತ ಮುಂಚಿತವಾಗಿಯೇ ಕೆಲವೆಡೆ ಜ್ವರ ಬಂದಿತ್ತು. ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯವು ಹಲವೆಡೆ ಕಾಣಿಸಿಕೊಂಡಿದೆ; ಜ್ವರ ಸ್ವರೂಪದ ಈ ರೋಗವು ಸಣ್ಣ ಮಕ್ಕಳನ್ನು ಹೆಚ್ಚಾಗಿ ಕಾಡುತ್ತಿದೆ’ ಎಂದು ಚೀನಾದ ಆರೋಗ್ಯ ಆಯೋಗವು ಹೇಳಿದ ಬಳಿಕ ಇತರ ದೇಶಗಳಲ್ಲಿಯೂ ಕಳವಳ ವ್ಯಕ್ತವಾಗಿದೆ. 

ಕೋವಿಡ್‌ ಸಾಂಕ್ರಾಮಿಕದ ಕರಾಳ ಅನುಭವವು ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಜ್ವರದ ಸುದ್ದಿಯು ಚೀನಾದಿಂದ ಬಂದಾಗ ಜಗತ್ತು ಬೆಚ್ಚಿತು. ನೂರು ವರ್ಷಗಳಲ್ಲಿಯೇ ಅತಿ ಹೆಚ್ಚು ಜನರನ್ನು ಕೋವಿಡ್‌ ಸಾಂಕ್ರಾಮಿಕವು ಬಲಿ ಪಡೆದಿತ್ತು. ರೋಗದ ಕುರಿತು ಚೀನಾದಲ್ಲಿ ಪಾರದರ್ಶಕತೆ ಇಲ್ಲದಿದ್ದುದೇ ಕೋವಿಡ್‌ ಹರಡುವಿಕೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಪಾರದರ್ಶಕತೆಯ ಪ್ರಶ್ನೆಯನ್ನು ಈಗಲೂ ಎತ್ತಲಾಗಿದೆ. ಅನಾರೋಗ್ಯವು ಪಸರಿಸುತ್ತಿದೆ ಎಂಬ ವಿಚಾರವನ್ನು ಚೀನಾದ ಆರೋಗ್ಯ ಅಧಿಕಾರಿಗಳು ಡಬ್ಲ್ಯುಎಚ್‌ಒಗೆ ತಿಳಿಸಿಲ್ಲ. ಮಾಧ್ಯಮ ವರದಿಗಳ ಮೂಲಕವಷ್ಟೇ ಹೊಸ ಸೋಂಕಿನ ಕುರಿತು ಡಬ್ಲ್ಯುಎಚ್‌ಒ ತಿಳಿದುಕೊಂಡಿತು. ಸೋಂಕಿನ ಹೆಚ್ಚಳಕ್ಕೆ ಈಗಾಗಲೇ ತಿಳಿದಿರುವ ರೋಗಕಾರಕಗಳು ಕಾರಣ ಎಂಬುದು ದೃಢಪಟ್ಟಿದ್ದರೂ ಈ ಕುರಿತು ಡಬ್ಲ್ಯುಎಚ್‌ಒಗೆ ತಿಳಿಸುವುದು ಚೀನಾದ ಕರ್ತವ್ಯವಾಗಿತ್ತು. 

ಬ್ರಿಟನ್‌ ಮತ್ತು ಅಮೆರಿಕ ಸೇರಿದಂತೆ ಇತರ ಕೆಲವು ದೇಶಗಳಲ್ಲಿಯೂ ಕೋವಿಡ್‌ ನಿರ್ಬಂಧಗಳನ್ನು ತೆಗೆದುಹಾಕಿದ ಬಳಿಕ ಜ್ವರದ ರೀತಿಯ ಅನಾರೋಗ್ಯ ವ್ಯಾಪಕವಾಗಿ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಲಾಕ್‌ಡೌನ್‌ ನಿರ್ಬಂಧವು ಹೆಚ್ಚಿನ ಅವಧಿಗೆ ಜಾರಿಯಲ್ಲಿತ್ತು. ಈಗ ಅಲ್ಲಿ  ಕೋವಿಡ್‌ ಲಾಕ್‌ಡೌನ್‌ ಬಳಿಕದ ಮೊದಲ ಚಳಿಗಾಲ ಶುರುವಾಗಿದೆ. ಜ್ವರ ವ್ಯಾಪಿಸಲು ಇದು ಕಾರಣ ಎಂದು ಹೇಳಲಾಗಿದೆ. ಸುದೀರ್ಘವಾದ ಲಾಕ್‌ಡೌನ್‌ನಿಂದ ಜನರಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿರುವುದು ಮತ್ತೊಂದು ಕಾರಣ ಎಂಬ ವಾದ ಇದೆ. ಸಮರ್ಪಕ ಮಾಹಿತಿ ಈಗಲೂ ಲಭ್ಯ ಇಲ್ಲದೇ ಇರುವುದು ರೋಗ ಪತ್ತೆಗೆ ತೊಡಕಾಗಿದೆ ಎಂದು ಹೇಳಲಾಗಿದೆ. ವಿಶೇಷವಾಗಿ, ಕೋವಿಡ್‌ನಿಂದ ಅತಿ ಹೆಚ್ಚು ತೊಂದರೆ ಅನುಭವಿಸಿದ ದೇಶಗಳು ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸಿವೆ. ಚೀನಾದ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದು, ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸಿರುವುದಾಗಿ ಡಬ್ಲ್ಯುಎಚ್‌ಒ ಕೂಡ ಹೇಳಿದೆ.

ಭಾರತದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ‍‍ಪರಿಶೀಲನೆಗೆ ಒಳಪಡಿಸಿ, ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ. ರೋಗದ ಮೇಲೆ ನಿಗಾ ಇರಿಸುವುದಕ್ಕಾಗಿ ಈಗಾಗಲೇ ಇರುವ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರಗಳನ್ನು ಪಾಲಿಸಲು ಹೇಳಲಾಗಿದೆ. ದಿಗಿಲುಗೊಳ್ಳುವ ಅಗತ್ಯ ಇಲ್ಲ, ಆದರೆ, ಜಾಗರೂಕತೆ ಬೇಕಿದೆ. ಎಲ್ಲ ದೇಶಗಳಿಗೂ ಸಾಂಕ್ರಾಮಿಕವು ಕಲಿಸಿದ ಮಹತ್ವದ ಪಾಠ ಇದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT