ಶನಿವಾರ, ಜುಲೈ 31, 2021
25 °C

ಚೀನೀ ಆ್ಯಪ್‌ ನಿಷೇಧ: ಬಲವಾದ ಸಂದೇಶ ರವಾನೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

prajavani

ಚೀನಾದಲ್ಲಿ ನೆಲೆ ಹೊಂದಿರುವ ಅಥವಾ ಚೀನಾ ಜೊತೆ ನಂಟು ಹೊಂದಿರುವ ಒಟ್ಟು 59 ಮೊಬೈಲ್‌ ಅಪ್ಲಿಕೇಷನ್‌ಗಳನ್ನು (ಆ್ಯಪ್‌ಗಳು) ಕೇಂದ್ರ ಸರ್ಕಾರವು ಭಾರತದಲ್ಲಿ ನಿಷೇಧಿಸಿದೆ. ಚೀನಾದ ಹಿತಾಸಕ್ತಿಗಳ ಮೇಲೆ ವಾಸ್ತವದಲ್ಲಿ ಬಲವಾದ ಏಟು ನೀಡುವುದಕ್ಕಿಂತಲೂ, ಏಟು ಕೊಡುವ ಉದ್ದೇಶ ತನಗಿದೆ ಎಂಬ ಸಂದೇಶವನ್ನು ರವಾನಿಸಿದಂತೆ ಇದೆ ಕೇಂದ್ರದ ಈ ತೀರ್ಮಾನ. ಈ ತೀರ್ಮಾನದ ಮೂಲಕ ಕೇಂದ್ರವು ರವಾನಿಸಿರುವ ಸಂದೇಶದ ಮಹತ್ವ ದೊಡ್ಡದು ಎಂಬುದರಲ್ಲಿ ಎರಡನೆಯ ಮಾತಿಲ್ಲ.

ಕೇಂದ್ರದ ತೀರ್ಮಾನದಿಂದ ಭಾರತದಲ್ಲಿ ನಿಷೇಧಕ್ಕೆ ಒಳಗಾದ ಆ್ಯಪ್‌ಗಳ ಪಟ್ಟಿಯಲ್ಲಿ ಜನಪ್ರಿಯ ಟಿಕ್‌ಟಾಕ್, ಶೇರ್‌ಇಟ್‌, ಯುಸಿ ಬ್ರೌಸರ್ ಸೇರಿವೆ. ಅದರಲ್ಲೂ, ಟಿಕ್‌ಟಾಕ್‌ನ ಜನಪ್ರಿಯತೆ ಜನಜನಿತ. ಈಗ ಇವುಗಳನ್ನೆಲ್ಲ ನಿಷೇಧಿಸಿರುವ ಕಾರಣ, ಇವುಗಳನ್ನು ಇದುವರೆಗೆ ಬಳಸುತ್ತಿದ್ದವರಿಗೆ ಒಂದಿಷ್ಟು ಅಡಚಣೆ ಆಗಬಹುದು. ಕೇಂದ್ರದ ಈ ತೀರ್ಮಾನವು ಚೀನಾಕ್ಕೆ ಒಂದು ಪೆಟ್ಟು ನೀಡಿದಂತೆ ಕಾಣಬಹುದು. ಆದರೆ ಇದರ ಪರಿಣಾಮವು ಬಹಳ ದೊಡ್ಡದಾಗಿ ಇರಲಿಕ್ಕಿಲ್ಲ. ನಿಷೇಧಕ್ಕೆ ಒಳಗಾಗಿರುವ ಕೆಲವು ಆ್ಯಪ್‌ ಕಂಪನಿಗಳ ಮಾರುಕಟ್ಟೆ ಮೌಲ್ಯವು ತಗ್ಗಬಹುದು. ಏಕೆಂದರೆ, ಆ ಮಾರುಕಟ್ಟೆ ಮೌಲ್ಯವು ಕಂಪನಿಗಳು ಭಾರತದಲ್ಲಿ ಹೊಂದಿರುವ ಗ್ರಾಹಕರನ್ನೂ ಪರಿಗಣಿಸಿ ಅಂದಾಜಿಸಿದ್ದಾಗಿತ್ತು. ಹೀಗಿದ್ದರೂ, ಮಾರುಕಟ್ಟೆ ಮೌಲ್ಯದಲ್ಲಿ ಆಗಬಹುದಾದ ಇಳಿಕೆ ಕೂಡ ದೊಡ್ಡ ಪ್ರಮಾಣದಲ್ಲಿ ಇರಲಿಕ್ಕಿಲ್ಲ. ‘ದೇಶದ ಸಾರ್ವಭೌಮತ್ವ, ದೇಶದ ಭದ್ರತೆ, ರಕ್ಷಣೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿ ಆಗುವ ರೀತಿಯ’ ಚಟುವಟಿಕೆ ಗಳಲ್ಲಿ ಈ ಆ್ಯಪ್‌ಗಳು ತೊಡಗಿದ್ದವು ಎಂಬುದು ಖಚಿತವಾಗಿದ್ದ ಕಾರಣ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಸಂಕಲನ | ಚೀನಾ ಗಡಿ ಸಂಘರ್ಷ: ಈವರೆಗೆ ಏನೆಲ್ಲಾ ಆಯ್ತು? ತಂತ್ರ ಪ್ರತಿತಂತ್ರಗಳ ನೋಟ

‘ಬಳಕೆದಾರರ ವಿವರಗಳನ್ನು, ಅವರ ಮಾಹಿತಿಗಳನ್ನು ಕದ್ದು, ಭಾರತದಿಂದ ಹೊರಗಡೆ ಇರುವ ಸರ್ವರ್‌ಗಳಿಗೆ ರಹಸ್ಯವಾಗಿ ಮತ್ತು ಅಕ್ರಮವಾಗಿ ರವಾನಿಸಿದ’ ವರದಿಗಳು ಕೂಡ ಈ ಆ್ಯಪ್‌ಗಳ ವಿರುದ್ಧ ಇವೆ. ಇವೆಲ್ಲ ಗಂಭೀರ ಸ್ವರೂಪದ ಆರೋಪಗಳು. ಆದರೆ, ಈ ಆ್ಯಪ್‌ಗಳನ್ನು ಈಗಲೇ ನಿಷೇಧಿಸಿದ್ದು ಏಕೆ ಎಂಬ ಪ್ರಶ್ನೆ ಮೂಡಬಹುದು. ಇಂತಹ ಆ್ಯಪ್‌ಗಳು ಈ ಕೃತ್ಯಗಳಲ್ಲಿ ತೊಡಗಿರುವ ಕುರಿತ ಮಾಹಿತಿಯು ಭಾರತ–ಚೀನಾ ಗಡಿಯಲ್ಲಿ ಸಂಘರ್ಷ ಆರಂಭವಾಗುವ ಮೊದಲೂ ಸರ್ಕಾರದ ಬಳಿ ಇತ್ತು. ಹಾಗೆಯೇ, ಚೀನಾ ಮೂಲದ ಆ್ಯಪ್‌ಗಳ ವಿಚಾರದಲ್ಲಿ ಇರುವಂತಹ ವರದಿಗಳು, ಆ ದೇಶದ್ದಲ್ಲದ ಇತರ ಕೆಲವು ಆ್ಯಪ್‌ಗಳ ವಿಚಾರದಲ್ಲಿಯೂ ಇವೆ. ಈ ಹಿನ್ನೆಲೆಯಲ್ಲಿ, ಈಗ ಕೇಂದ್ರ ತೆಗೆದುಕೊಂಡಿರುವ ತೀರ್ಮಾನವು ಚೀನಾಕ್ಕೆ ರವಾನಿಸಿದ ಒಂದು ಸಂದೇಶವೆಂಬಂತೆ ಕಾಣುತ್ತದೆ. ಕೇಂದ್ರದ ತೀರ್ಮಾನವು ಪಕ್ಷಪಾತಿತನದ್ದು ಎಂದು ಚೀನಾ ಹೇಳಿದೆ. ತೀರ್ಮಾನವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ಆದರೆ, ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರವು, ಜನರ ಮಾಹಿತಿಯ ರಕ್ಷಣೆಯ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ ಎಂದು ಹೇಳಿದೆ. ಈ ತೀರ್ಮಾನವು ಚೀನಾ ಮೇಲಿನ ‘ಡಿಜಿಟಲ್ ದಾಳಿ’ ಎಂದೂ ಬಣ್ಣಿಸಲಾಗಿದೆ. ನೆರೆಯ ದೇಶಗಳಿಂದ ಬರುವ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮೇಲಿನ ನಿರ್ಬಂಧ, ಕೆಲವು ಮೂಲಸೌಕರ್ಯ ನಿರ್ಮಾಣ ಯೋಜನೆಗಳಲ್ಲಿ ಚೀನಾದ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದ್ದರ ಜೊತೆಯಲ್ಲೇ ಈಗಿನ ಕ್ರಮವನ್ನೂ ಗ್ರಹಿಸಬಹುದು. ಆದರೆ, ದೇಶದ ಅರ್ಥವ್ಯವಸ್ಥೆಯ ಹಲವು ಅಂಗಗಳಲ್ಲಿ ಇರುವ ಚೀನಾದ ದೊಡ್ಡ ಪ್ರಮಾಣದ ಹೂಡಿಕೆಗಳನ್ನು, ಆ ಹೂಡಿಕೆಗಳನ್ನು ಸುಲಭವಾಗಿ ತಗ್ಗಿಸಲು ಆಗುವುದಿಲ್ಲ ಎಂಬ ವಾಸ್ತವವನ್ನು ಉಪೇಕ್ಷೆ ಮಾಡಲಾಗದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು