ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಚಿತ್ರಾ ರಾಮಕೃಷ್ಣ ಪ್ರಕರಣ; ಎನ್‌ಎಸ್‌ಇ ಪಾಲಿನ ಕಪ್ಪುಚುಕ್ಕೆ

Last Updated 23 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಸಿದ್ಧಪುರುಷನ ಹೆಸರಿನಲ್ಲಿ ಚಿತ್ರಾ ಅವರ ಮೂಲಕ ಎನ್‌ಎಸ್‌ಇ ಆಡಳಿತದ ಮೇಲೆ ಹಿಡಿತ ಸಾಧಿಸಿದ್ದ ವ್ಯಕ್ತಿ ಯಾರು ಎಂಬ ಬಗ್ಗೆ ಸೂಕ್ತ ಸಂಸ್ಥೆಯಿಂದ ತನಿಖೆ ನಡೆಸಬೇಕು.

ದೇಶದ ವಿವಿಧ ಉದ್ಯಮ ವಲಯಗಳಿಗೆ ಸೇರಿದ ಹೆಸರಾಂತ ಕಂಪನಿಗಳು ಒಂದಾದ ನಂತರ ಒಂದರಂತೆ ಬಂಡವಾಳ ಮಾರುಕಟ್ಟೆಯತ್ತ ಮುಖ ಮಾಡುತ್ತಿರುವ ಸಂದರ್ಭ ಇದು. ಸಣ್ಣ ಹೂಡಿಕೆದಾರರು ಸಹ ಇಂತಹ ಕಂಪನಿಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಇದು ಬಂಡವಾಳ ಸಂಗ್ರಹಿಸುವ ಉದ್ದೇಶ ಹೊಂದಿರುವ ಕಂಪನಿಗಳ ಪಾಲಿಗೆ, ಈಕ್ವಿಟಿ ಹೂಡಿಕೆಯ ಸಂಸ್ಕೃತಿಗೆ ತೆರೆದು
ಕೊಳ್ಳುತ್ತಿರುವವರಿಗೆ ಶುಭಶಕುನವೂ ಹೌದು. ಆದರೆ, ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಷೇರುಪೇಟೆಯಿಂದ (ಎನ್‌ಎಸ್‌ಇ) ವಿಚಿತ್ರವಾದ ಪ್ರಸಂಗವೊಂದು ವರದಿಯಾಗಿದೆ. ಎನ್‌ಎಸ್‌ಇ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಅವರು ‘ಹಿಮಾಲಯ ಪರ್ವತ ಶ್ರೇಣಿಯಲ್ಲಿ ಎಲ್ಲೋ ಒಂದು ಕಡೆ ವಾಸಿಸುವ ಸಿದ್ಧಪುರುಷನೊಬ್ಬನ ಕೈಗೊಂಬೆ ಆಗಿದ್ದರು’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಆದೇಶವೊಂದರಲ್ಲಿ ಹೇಳಿದೆ. ಆ ಸಿದ್ಧಪುರುಷ ಯಾರು, ಅವರ ಹೆಸರು ಏನು ಎಂಬುದು ನಿಗೂಢವಾಗಿಯೇ ಇದೆ. ಹೂಡಿಕೆದಾರರ ಪಾಲಿಗೆ ಷೇರುಗಳನ್ನು ಖರೀದಿಸಲು ಇರುವ ಅತ್ಯಂತ ಪ್ರಮುಖ ಮಾರುಕಟ್ಟೆ ಎನ್‌ಎಸ್‌ಇ. ಇಂತಹ ಪ್ರಮುಖ ಸಂಸ್ಥೆಯೊಂದರ ಮುಖ್ಯಸ್ಥೆಯು ಯಾವುದೋ ಸಿದ್ಧಪುರುಷನ ಮಾತು ಕೇಳಿ ವೃತ್ತಿಗೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರು ಎಂಬುದೇ ಆಘಾತಕಾರಿ. ಸಾಂಸ್ಥಿಕ ಹೂಡಿಕೆದಾರರು, ಸಣ್ಣ ಹೂಡಿಕೆದಾರರು ಎನ್‌ಎಸ್‌ಇಯಂತಹ ವೇದಿಕೆಗಳ ನೆರವು ಇಲ್ಲದೆ ಹೂಡಿಕೆ ಮಾಡಲು ಆಗದು. ಆದರೆ, ಅದರ ಮುಖ್ಯಸ್ಥರಾಗಿದ್ದವರು
ಯಾರದ್ದೋ ಮಾತು ಕೇಳಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು, ಆ ತೀರ್ಮಾನಗಳು ವೃತ್ತಿಪರವಾಗಿ ಇರುತ್ತಿರಲಿಲ್ಲ ಎಂಬುದು ನಂಬಿಕೆಯ ಆಧಾರದಲ್ಲಿ ನಡೆಯುವ ವ್ಯವಸ್ಥೆಯೊಂದರ ತಳಪಾಯವನ್ನೇ ಅಲುಗಾಡಿಸಬಲ್ಲದು.

ಆನಂದ್ ಸುಬ್ರಮಣಿಯನ್ ಎನ್ನುವವರನ್ನು ಚಿತ್ರಾ ಅವರು ಉನ್ನತ ಹುದ್ದೆಗೆ ನೇಮಕ ಮಾಡಿದ್ದರು. ನಂತರದಲ್ಲಿ ಸುಬ್ರಮಣಿಯನ್ ಅವರಿಗೆ ತೀರಾ ಅಸಹಜ ಎನ್ನುವಷ್ಟು ವೇತನ ಹೆಚ್ಚಳ ಮಾಡಲಾಯಿತು. ಹೀಗೆ ವೇತನ ಹೆಚ್ಚಿಸಿದ್ದರ ಹಿಂದೆ ಸಿದ್ಧಪುರುಷನ ಸಲಹೆ ಕೆಲಸ ಮಾಡಿದೆ. ಅಲ್ಲದೆ, ಎನ್‌ಎಸ್‌ಇಗೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ಚಿತ್ರಾ ಅವರು ಸಿದ್ಧಪುರುಷನ ಜೊತೆ ಹಂಚಿಕೊಂಡಿದ್ದರು. ಗೋಪ್ಯ ಸಂಗತಿಗಳನ್ನು ನಿಗೂಢ ವ್ಯಕ್ತಿಯೊಬ್ಬನ ಜೊತೆ ಹಂಚಿಕೊಂಡಿದ್ದು ತಪ್ಪು ಎಂದು ಚಿತ್ರಾ ಅವರಿಗೆ ಅನ್ನಿಸಿಯೇ ಇಲ್ಲ. ಈ ರೀತಿ ಮಾಹಿತಿ ಹಂಚಿಕೊಂಡಿದ್ದು ವೃತ್ತಿಯ ನಿಬಂಧನೆಗಳಿಗೆ ವಿರುದ್ಧ ಎಂಬ ಭಾವನೆಯ ಬದಲು, ‘ನಮ್ಮದು ಆಧ್ಯಾತ್ಮಿಕ ಮಟ್ಟದ ಮಾತುಕತೆ ಆಗಿದ್ದ ಕಾರಣ, ಸಂಸ್ಥೆಯ ಗೋಪ್ಯ ವಿಚಾರಗಳು ಇನ್ನೊಬ್ಬರ ಗಮನಕ್ಕೆ ಬರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂಬ ಸಮರ್ಥನೆಯನ್ನು ಚಿತ್ರಾ ನೀಡಿದ್ದರು. ಚಿತ್ರಾ ಅವರಿಗೆ ತಾವು ಹೊಂದಿದ್ದ ಸ್ಥಾನದ ಮಹತ್ವ ಏನೆಂಬುದೇ ಅರ್ಥ ಆಗಿರಲಿಲ್ಲ ಎಂದು ಇಂತಹ ಹೇಳಿಕೆಗಳನ್ನು ಕಂಡು ಅನ್ನಿಸುತ್ತದೆ. ಚಿತ್ರಾ ಮತ್ತು ಸಿದ್ಧಪುರುಷನ ಪ್ರಕರಣವು ಎನ್‌ಎಸ್‌ಇ ಆಡಳಿತ ಮಂಡಳಿಯಲ್ಲಿ ವೃತ್ತಿಪರ ಮನಸ್ಸಿನ ಕೊರತೆ ತೀವ್ರವಾಗಿ ಇತ್ತು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಆದರೆ, ಸಂಸ್ಥೆಯ ಮುಖ್ಯಸ್ಥೆಯು ಯಾವುದೋ ಒಬ್ಬ ವ್ಯಕ್ತಿಯ ಮಾತು ಕೇಳಿ, ವೃತ್ತಿಗೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳುವ ಸ್ಥಿತಿಯು ದೀರ್ಘಾವಧಿಗೆ ನಡೆದಿದ್ದು ಹೇಗೆ ಎಂಬುದು ಅರ್ಥವಾಗದ ವಿಚಾರ. ಈ ಕುರಿತು ತನಿಖೆ ಆಗಬೇಕು. ಸಿದ್ಧಪುರುಷನ ಹೆಸರಿನಲ್ಲಿ ಚಿತ್ರಾ ಅವರ ಮೇಲೆ ಪ್ರಭಾವ ಬೀರಿದ್ದ, ಆ ಮೂಲಕ ಎನ್‌ಎಸ್‌ಇ ಆಡಳಿತದ ಮೇಲೆ ಹಿಡಿತ ಸಾಧಿಸಿದ್ದ ವ್ಯಕ್ತಿ ಯಾರು ಎಂಬುದು ದೇಶದ ಎಲ್ಲ ಹೂಡಿಕೆದಾರರಿಗೆ ಗೊತ್ತಾಗಬೇಕು. ಇದಕ್ಕೆ ಅಗತ್ಯವಿರುವ ತನಿಖೆ ನಡೆಸುವ ಅಧಿಕಾರ ಸೆಬಿಗೆ ಇಲ್ಲದಿರಬಹುದು. ಸೂಕ್ತ ಸಂಸ್ಥೆಯಿಂದ ಈ ತನಿಖೆ ಆಗಬೇಕು.

ಚಿತ್ರಾ ಅವರು ‘ಸಿದ್ಧಪುರುಷ’ ಎಂದು ಚಿತ್ರಿಸಿರುವ ವ್ಯಕ್ತಿ ಯಾರಿದ್ದಿರಬಹುದು ಎಂಬ ವಿಚಾರವಾಗಿ ಕೆಲವು ವರದಿಗಳು ಇವೆ. ಹಲವು ಅನುಮಾನಗಳೂ ಇವೆ. ತನಿಖೆಯಿಂದ ಮಾತ್ರ ಆ ವ್ಯಕ್ತಿಯ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರುತ್ತದೆ. ಚಿತ್ರಾ ಅವರಿಗೆ ಸೆಬಿ ಈಗ ದಂಡ ವಿಧಿಸಿದೆ. ಆದರೆ, ಅವರು ಸಿದ್ಧಪುರುಷನ ಮಾತು ಕೇಳಿ, ಇನ್ನೂ ಯಾವ ಅಕ್ರಮಗಳನ್ನು ಎಸಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆದು, ಅವುಗಳಿಗೆ ಕೂಡ ಸೂಕ್ತ ಶಿಕ್ಷೆ ಆಗಬೇಕು. ಭಾರತದ ಬಂಡವಾಳ ಮಾರುಕಟ್ಟೆಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳಲು ಆರಂಭಿಸಿವೆ. ಚಿತ್ರಾ ಪ್ರಕರಣವು ಹೂಡಿಕೆದಾರರ ವಿಶ್ವಾಸಕ್ಕೆ ಪೆಟ್ಟು ಕೊಡಬಲ್ಲದು. ಹಾಗಾಗಿ, ವೃತ್ತಿಗೆ ಸಂಬಂಧಪಡದ ವ್ಯಕ್ತಿಯೊಬ್ಬನ ಮಾತು ಕೇಳಿ ಸಂಸ್ಥೆ ಮುನ್ನಡೆಸುವವರು ಎನ್‌ಎಸ್‌ಇಗೆ ಪ್ರವೇಶಿಸದಂತೆ ಸೆಬಿ ಕೂಡ ನಿಗಾ ವಹಿಸಬೇಕು. ತಾಂತ್ರಿಕವಾಗಿ ಅತ್ಯುನ್ನತ ಸ್ಥಾನದಲ್ಲಿ ಇರುವುದಾಗಿ ಹೇಳಿಕೊಳ್ಳುವ ಎನ್‌ಎಸ್‌ಇ ಪಾಲಿಗೆ ಈ ಪ್ರಕರಣ ಒಂದು ಕಪ್ಪುಚುಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT