ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಗ್ರಾಹಕರ ಹಿತರಕ್ಷಣೆಗೆ ಮಹತ್ವದ ಹೆಜ್ಜೆ

ಗ್ರಾಹಕರ ಹಿತರಕ್ಷಣಾ ಕಾಯ್ದೆ–2019
Last Updated 23 ಜುಲೈ 2020, 1:13 IST
ಅಕ್ಷರ ಗಾತ್ರ

ಕಲಬೆರಕೆ, ದೋಷಪೂರಿತ ಉತ್ಪನ್ನಗಳ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಕಾಶವನ್ನು ನೂತನ ಕಾಯ್ದೆ ತೆರೆದಿಟ್ಟಿದೆ

***

ಬದಲಾದ ಕಾಲಮಾನ ಮತ್ತು ಮಾರುಕಟ್ಟೆಯ ವಿಸ್ತಾರಕ್ಕೆ ಅನುಗುಣವಾಗಿ ಗ್ರಾಹಕರ ಹಿತವನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ‘ಗ್ರಾಹಕರ ಹಿತರಕ್ಷಣಾ ಕಾಯ್ದೆ–2019’ ಸೋಮವಾರದಿಂದ ಭಾಗಶಃ ಜಾರಿಗೆ ಬಂದಿದೆ. 1986ರ ಗ್ರಾಹಕರ ಹಿತರಕ್ಷಣಾ ಕಾಯ್ದೆಗೆ ಹಲವು ಹೊಸ ವಿಷಯಗಳನ್ನು ಸೇರಿಸಿದ್ದು, ಅವುಗಳ ಜಾರಿಯು ಗ್ರಾಹಕರ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಗ್ರಾಹಕರ ಬೇಡಿಕೆ ಮತ್ತು ಆಸಕ್ತಿಗಳನ್ನು ಹೊಸ ಕಾಯ್ದೆಯ ಅಡಿಯಲ್ಲಿ ಕಾನೂನುಬದ್ಧ ಹಕ್ಕುಗಳೆಂದು ಮಾನ್ಯ ಮಾಡುವ ಮೂಲಕ ಗ್ರಾಹಕರ ಕೈ ಬಲಪಡಿಸಲಾಗಿದೆ.

‘ಗ್ರಾಹಕ’ ಎಂಬ ಪದದ ವ್ಯಾಖ್ಯೆಯನ್ನೇ ವಿಸ್ತಾರಗೊಳಿಸಿದ್ದು, ಆನ್‌ಲೈನ್‌ ಮಾರ್ಕೆಟಿಂಗ್‌, ನೇರ ವ್ಯಾಪಾರ (ಡೈರೆಕ್ಟ್‌ ಸೆಲ್ಲಿಂಗ್‌) ಮತ್ತು ಇತರ ಎಲ್ಲ ಬಗೆಯ ಡಿಜಿಟಲ್‌ ಮಾರ್ಕೆಟಿಂಗ್‌ ಚಟುವಟಿಕೆಗಳನ್ನೂ ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ. 1986ರಲ್ಲಿ ಗ್ರಾಹಕ ಹಿತರಕ್ಷಣಾ ಕಾಯ್ದೆ ರೂಪಿಸಿದ ಸಮಯದಲ್ಲಿ ದೇಶದಲ್ಲಿ ಇ–ಕಾಮರ್ಸ್‌ ಕ್ಷೇತ್ರ ಕಣ್ಣು ತೆರೆದಿರಲಿಲ್ಲ. ಹೀಗಾಗಿ ಅದು ಕಾಯ್ದೆಯ ಭಾಗವೇ ಆಗಿರಲಿಲ್ಲ. ಮೂರು ದಶಕಗಳಿಂದ ಕಾಯ್ದೆಯಲ್ಲಿ ಉಳಿದಿದ್ದ ಹಲವು ನ್ಯೂನತೆಗಳನ್ನು ಹೊಸ ಕಾಯ್ದೆಯಲ್ಲಿ ಸರಿಪಡಿಸಿದ್ದು, ಗ್ರಾಹಕರ ಹಕ್ಕುಗಳಿಗೆ ಹೊಸ ಶಕ್ತಿ ದೊರಕಿದಂತಾಗಿದೆ. ಇ–ಕಾಮರ್ಸ್‌, ಡಿಜಿಟಲ್‌ ಸೇವೆಗಳು, ಉತ್ಪನ್ನ ಬಾಧ್ಯತೆ, ತಪ್ಪು ಮಾಹಿತಿ ನೀಡುವ ಜಾಹೀರಾತಿಗೆ ತಡೆಯು ಕಾಯ್ದೆಯ ಪ್ರಮುಖ ಭಾಗವಾಗಿವೆ. ಕಲಬೆರಕೆ, ದೋಷಪೂರಿತ ಉತ್ಪನ್ನಗಳ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಕಾಶವನ್ನು ನೂತನ ಕಾಯ್ದೆ ತೆರೆದಿಟ್ಟಿದೆ.

ಅನುಚಿತ ವ್ಯಾಪಾರ ಪದ್ಧತಿಯನ್ನು ವಿಸ್ತೃತವಾಗಿ ವಿವರಿಸಿದ್ದು, ಅದನ್ನು ನಿಯಂತ್ರಿಸಲು ಪ್ರಬಲವಾದ ಕಾನೂನಿನ ಅಸ್ತ್ರವನ್ನು ಕಾಯ್ದೆ ಒದಗಿಸಿದೆ. ಸೇವಾವಲಯಕ್ಕೆ ಸಂಬಂಧಿಸಿದಂತೆಯೂ ಕಾಯ್ದೆಯಲ್ಲಿ ಹಲವು ವಿಷಯಗಳನ್ನು ಸೇರಿಸಲಾಗಿದೆ. ತೊಂದರೆಗೊಳಗಾದ ಗ್ರಾಹಕರು ಉತ್ಪಾದಕರು, ಮಾರಾಟಗಾರರು ಹಾಗೂ ಸೇವೆ ಒದಗಿಸುವವರ ವಿರುದ್ಧಬಹು ಹಂತಗಳಲ್ಲಿ ಕಾನೂನು ಸಮರ ನಡೆಸಲು ಹೊಸ ಕಾಯ್ದೆಯಿಂದ ಅವಕಾಶ ಸೃಷ್ಟಿಯಾಗಿದೆ.

ಗ್ರಾಹಕ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿಹೊಸ ಕಾಯ್ದೆಯಡಿ ಕೇಂದ್ರ ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ರಾಜ್ಯ ಹಾಗೂ ಪ್ರಾಂತೀಯ ಮಟ್ಟದಲ್ಲಿ ಪ್ರಾಧಿಕಾರಗಳನ್ನು ರಚಿಸುವ ಅವಕಾಶವೂ ಕಾಯ್ದೆಯಲ್ಲಿದೆ. ಎಲ್ಲ ಜಿಲ್ಲೆಗಳಲ್ಲಿ ಗ್ರಾಹಕ ಹಿತರಕ್ಷಣಾ ಆಯೋಗಗಳು ಕಾರ್ಯಾರಂಭ ಮಾಡಲಿವೆ. ಅನುಚಿತವಾದ ವ್ಯಾಪಾರ ಕ್ರಮದಿಂದ ಗ್ರಾಹಕರನ್ನು ರಕ್ಷಿಸುವ ಗುರುತರವಾದ ಹೊಣೆಗಾರಿಕೆಯನ್ನು ಗ್ರಾಹಕರ ಹಿತರಕ್ಷಣಾ ಪ್ರಾಧಿಕಾರವು ನಿರ್ವಹಿಸಲಿದೆ.

ಗ್ರಾಹಕರಿಗೆ ವಂಚನೆಯಾದ ಪ್ರಕರಣಗಳಲ್ಲಿ ತನಿಖೆ ನಡೆಸಿ ವರದಿ ಪಡೆಯುವ ಅಧಿಕಾರವನ್ನೂ ಪ್ರಾಧಿಕಾರ ಹೊಂದಿರುತ್ತದೆ. ಅಂತಹ ಪ್ರಕರಣಗಳಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ, ಗ್ರಾಹಕರಿಗೆ ಹಣ ಹಿಂದಿರುಗಿಸುವಂತೆ ಮತ್ತು ಮತ್ತೆ ಆ ಉತ್ಪನ್ನವನ್ನು ಉತ್ಪಾದಿಸದಂತೆ ಕಂಪನಿಗಳಿಗೆ ನಿರ್ದೇಶನ ನೀಡುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ. ಆಧಾರರಹಿತ, ಹಾದಿ ತಪ್ಪಿಸುವ ಮತ್ತು ತಪ್ಪು ಮಾಹಿತಿಯ ಜಾಹೀರಾತುಗಳಿಂದ ಗ್ರಾಹಕರನ್ನು ವಂಚಿಸುವ ಉತ್ಪಾದಕರು ಹಾಗೂ ಅನುಮೋದಕರ (ರೂಪದರ್ಶಿಗಳು) ವಿರುದ್ಧ ವಿಚಾರಣೆ ನಡೆಸಿ, ಶಿಕ್ಷೆ ವಿಧಿಸುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಜಾಹೀರಾತು ನೀಡುವ ಉತ್ಪಾದಕರು ಮತ್ತು ರೂಪದರ್ಶಿಗಳಿಗೆ ದೊಡ್ಡ ಮೊತ್ತದ ದಂಡ ವಿಧಿಸಬಹುದು.

ರೂಪದರ್ಶಿಗಳು ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಮತ್ತೆ ಜಾಹೀರಾತುಗಳಲ್ಲಿ ಪಾಲ್ಗೊಳ್ಳದಂತೆ ಮಾಡಬಹುದು. ಕಲಬೆರಕೆ ಉತ್ಪನ್ನಗಳ ಉತ್ಪಾದನೆ, ಆಮದು, ದಾಸ್ತಾನು, ಮಾರಾಟ ಮಾಡುವವರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಇದರ ಜೊತೆಯಲ್ಲೇ ನಕಲಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಮಾಡುವವರಿಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಇದೆ. ಈವರೆಗೂ ಜಿಲ್ಲಾ ಮಟ್ಟದಲ್ಲಿ ಗ್ರಾಹಕ ರಕ್ಷಣಾ ಪರಿಷತ್ತುಗಳಿದ್ದವು. ಕಾಟಾಚಾರಕ್ಕೆಂಬಂತೆ ಇದ್ದ ಈ ಪರಿಷತ್ತುಗಳ ಸ್ಥಾನದಲ್ಲಿ ಹೆಚ್ಚಿನ ಅಧಿಕಾರವುಳ್ಳ ಗ್ರಾಹಕ ಹಿತರಕ್ಷಣಾ ಆಯೋಗಗಳು ಬರಲಿವೆ. ಗ್ರಾಹಕರ ದೂರುಗಳನ್ನು ಮಧ್ಯಸ್ಥಿಕೆ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಲು ಮಧ್ಯಸ್ಥಿಕೆ ಘಟಕಗಳೂ ಕಾರ್ಯಾರಂಭ ಮಾಡಲಿವೆ. ಗ್ರಾಹಕರು ತಾವು ಇರುವ ಸ್ಥಳದಿಂದ, ಸರಳ ವಿಧಾನದಲ್ಲಿ ದೂರು ಸಲ್ಲಿಸಲು ಕಾಯ್ದೆಯು ಅವಕಾಶ ನೀಡಿದೆ.

ಗ್ರಾಹಕರ ಹಿತರಕ್ಷಣೆಗೆ ಹೆಚ್ಚು ಬಲಶಾಲಿಯಾದ ಕಾಯ್ದೆ ಜಾರಿಗೆ ಬಂದಿದೆ ಎಂಬ ಸಂತಸ ಜನರಲ್ಲಿ ಮೂಡಿದೆ. ಆದರೆ, ಪ್ರಕರಣಗಳ ತ್ವರಿತ ಇತ್ಯರ್ಥದ ಮೂಲಕ ವೇಗವಾಗಿ ಅದರ ಫಲವನ್ನು ಗ್ರಾಹಕರಿಗೆ ವರ್ಗಾಯಿಸುವ ಸವಾಲು ಆಡಳಿತ ವ್ಯವಸ್ಥೆಯ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT