ಭಾನುವಾರ, ಜೂಲೈ 12, 2020
24 °C

ಸಂಪಾದಕೀಯ | ಕೋವಿಡ್‌–19 ವಿರುದ್ಧದ ಹೋರಾಟ ಜನರೇ ನಿಭಾಯಿಸಬೇಕಾದ ಸವಾಲು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಜನರು ಮುಖ್ಯ ಪಾತ್ರ ವಹಿಸಬೇಕಾದ ಸಮಯ ಎದುರಾಗಿದೆ. ಲಾಕ್‌ಡೌನ್‌ ಹೇರಿಕೆಯ ಮೂಲಕ ವಿಧಿಸಿದ ಬಹುತೇಕ ನಿರ್ಬಂಧಗಳು ತೆರವು ಗೊಂಡಿರುವ ಸಂದರ್ಭದಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ನಾಗರಿಕರು ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ.

ಲಾಕ್‌ಡೌನ್ ಎನ್ನುವುದು ಕೊರೊನಾ ನಿಯಂತ್ರಣದ ಪ್ರಯತ್ನವೇ ವಿನಾ ಪರಿಹಾರವಲ್ಲ. ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಲಾಕ್‌ಡೌನ್‌ ಸಮಯ ಸರ್ಕಾರಕ್ಕೆ ಅನುಕೂಲಕರವಾಗಿತ್ತು. ಆದರೆ, ಯಾವುದೇ ನಿರ್ಬಂಧವನ್ನು ದೀರ್ಘಕಾಲ ಮುಂದುವರಿಸುವುದು ಅಸಾಧ್ಯ.

ಕೊರೊನಾ ಹರಡುವುದನ್ನು ತಡೆಯಲು ದೇಶವ್ಯಾಪಿ ಹೇರಿದ್ದ ಲಾಕ್‌ಡೌನ್‌ ಆರ್ಥಿಕ ಸ್ಥಿತಿಯನ್ನು ಏರುಪೇರು ಮಾಡಿದೆ, ಜನಜೀವನವನ್ನು ಸಂಕಷ್ಟಕ್ಕೀಡುಮಾಡಿದೆ. ಹಾಗಾಗಿಯೇ, ಕೆಲವು ನಿರ್ಬಂಧಗಳೊಂದಿಗೆ ಎಂದಿನಂತೆ ಜನಜೀವನ ಸಾಗಲು ಸರ್ಕಾರ ಅವಕಾಶ ಕಲ್ಪಿಸಿದೆ. ಜುಲೈ 5ರಿಂದ ಪ್ರತೀ ಭಾನುವಾರ ರಾಜ್ಯದಾದ್ಯಂತ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದೈನಂದಿನ ಕರ್ಫ್ಯೂ ಅವಧಿಯನ್ನು ಒಂದು ತಾಸು ಹಿಗ್ಗಿಸಿದೆ. ಅಂದರೆ, ಪ್ರತೀ ರಾತ್ರಿ 8ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಕಚೇರಿಗಳ ನೌಕರರಿಗೆ ಜುಲೈ 10ರಿಂದ ಅನ್ವಯ ಆಗುವಂತೆ ವಾರದ ಕೆಲಸದ ದಿನಗಳನ್ನು ಒಂದು ತಿಂಗಳ ಮಟ್ಟಿಗೆ ಐದು ದಿನಗಳಿಗೆ ಇಳಿಸಿದೆ. ಜನಜೀವನಕ್ಕೆ ಧಕ್ಕೆಯಾಗದಂತೆ ನಿರ್ಬಂಧಗಳನ್ನು ಪಾಲಿಸುವ ಮೂಲಕ ಕೊರೊನಾವನ್ನು ತಡೆಗಟ್ಟುವ ಸಣ್ಣ ಪ್ರಯತ್ನಗಳು ಇವಾಗಿವೆ.

ಈ ಕ್ರಮಗಳು ಕೂಡ ವ್ಯಾಪಾರ– ವಹಿವಾಟಿಗೆ ಪೂರಕವಲ್ಲದ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಈ ನಿರ್ಬಂಧಗಳನ್ನೂ ತೆರವು ಗೊಳಿಸುವುದು ಅನಿವಾರ್ಯ. ಹೀಗೆ ನಿರ್ಬಂಧಗಳು ತೆರವುಗೊಂಡ ಸಂದರ್ಭದಲ್ಲಿ ಕೊರೊನಾ ವಿರುದ್ಧದ ಸಮುದಾಯದ ಹೋರಾಟ ಮತ್ತಷ್ಟು ಪರಿಣಾಮಕಾರಿ ಆಗಬೇಕಾಗಿದೆ. ಲಾಕ್‌ಡೌನ್‌ ಇಲ್ಲದ ಸಂದರ್ಭವು ಕೊರೊನಾ ನಿಯಂತ್ರಣದ ಹೋರಾಟದಲ್ಲಿ ಜನರನ್ನು ಮುಂಚೂಣಿಗೆ ತಂದು ನಿಲ್ಲಿಸಿದೆ. ಜನರ ಪ್ರಯತ್ನಗಳಿಗೆ ಸರ್ಕಾರವು ಪೂರಕವಾಗಿ ಸ್ಪಂದಿಸಲಿದೆ ಎಂಬ ಸೂಚನೆಗಳು ಈಗಾಗಲೇ ಸ್ಪಷ್ಟವಾಗಿವೆ.

‘ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ ಜನರದೇ ನೇತೃತ್ವವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ಕೂಡ ಈಗಿನ ಪಿಡುಗನ್ನು ಹಿಮ್ಮೆಟ್ಟಿಸು ವಲ್ಲಿ ಜನರ ಪ್ರಯತ್ನಗಳಿಗೆ ಇರುವ ಮಹತ್ವವನ್ನು ಸೂಚಿಸುವಂತಿದೆ.

ಪ್ರಧಾನಿಯ ಕರೆಗೆ ಓಗೊಟ್ಟು ದೀಪ ಹಚ್ಚುವುದಕ್ಕೆ ಹಾಗೂ ಚಪ್ಪಾಳೆ ತಟ್ಟುವುದಕ್ಕೆ ನಾಗರಿಕರು ವ್ಯಕ್ತಪಡಿಸಿದ ಉತ್ಸಾಹವನ್ನು ಸರ್ಕಾರ ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸು ವುದಕ್ಕೂ ತೋರಿಸಬೇಕಾಗಿದೆ. ಲಸಿಕೆ ಅಥವಾ ಔಷಧ ಕಂಡುಹಿಡಿಯುವವರೆಗೂ ಕೊರೊನಾ ಸೋಂಕಿನ ಬಿಕ್ಕಟ್ಟಿಗೆ ಪರಿಹಾರವಿಲ್ಲ. ಮಾಸ್ಕ್ ಹಾಕಿಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಿರುವುದು, ಆಗಾಗ ಕೈತೊಳೆಯುವುದು ಹಾಗೂ ಅಂತರ ಪಾಲಿಸುವ ಮುನ್ನೆಚ್ಚರಿಕೆಗಳು ಜೀವನಕ್ರಮವೇ ಆಗಬೇಕು. ಇಲ್ಲದಿದ್ದರೆ ಕೊರೊನಾ ನಿಯಂತ್ರಣ ಸಾಧ್ಯವಾಗದು.

ಈ ಮುನ್ನೆಚ್ಚರಿಕೆ ಗಳು ಜನರ ನಡವಳಿಕೆಯಲ್ಲಿ ಅಂತರ್ಗತವಾಗಬೇಕೇ ವಿನಾ ಕಾನೂನು ಮೂಲಕ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರ ಜೊತೆಗೆ ನಮ್ಮ ಜೀವನಶೈಲಿಯನ್ನೂ ಬದಲಿಸಿಕೊಳ್ಳುವ ಅಗತ್ಯವಿದೆ. ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಒತ್ತಡ ಉಂಟಾಗದಂತೆ ಎಚ್ಚರಿಕೆ ವಹಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ನಾವು ಬದುಕುವುದಲ್ಲದೆ, ನಮ್ಮ ಸುತ್ತಮುತ್ತಲಿನ ಜನರೂ ಸುರಕ್ಷಿತವಾಗಿರಲು ಅವಕಾಶ ಕಲ್ಪಿಸಬೇಕಾಗಿದೆ.

ಹಿರಿಯ ನಾಗರಿಕರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಈ ನಿರ್ಣಾಯಕ ಹೋರಾಟ ವೈಯಕ್ತಿಕವೂ ಹೌದು ಸಾಮುದಾಯಿಕವೂ ಹೌದು. ಸಾರ್ವಜನಿಕರ ಪ್ರಯತ್ನದೊಂದಿಗೆ ಸರ್ಕಾರ ಕೂಡ ಕೊರೊನಾ ತಡೆಗಟ್ಟುವ ವಿಷಯವನ್ನು ಆದ್ಯತೆಯ ಸಂಗತಿಯನ್ನಾಗಿ ಪರಿಗಣಿಸಿ ಕ್ರಿಯಾಶೀಲವಾಗಬೇಕಾಗಿದೆ. ಕಾರ್ಯಾಂಗ ಮತ್ತು ಶಾಸಕಾಂಗದ ಸಂಪೂರ್ಣ ಗಮನ ಆರೋಗ್ಯ ಕ್ಷೇತ್ರದ ಮೇಲೆ ಕೇಂದ್ರೀಕೃತಗೊಳ್ಳಬೇಕಾದ ಸಮಯವಿದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು