ಶುಕ್ರವಾರ, ಜೂನ್ 18, 2021
24 °C

ಕೋವಿಡ್‌ ನಿರ್ವಹಣೆ: ಕೇಂದ್ರ, ರಾಜ್ಯಗಳ ನಾಯಕರು ಪ್ರಬುದ್ಧತೆ ತೋರಬೇಕಿದೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಸಾಂಕ್ರಾಮಿಕವು ದೇಶಕ್ಕೆ ಬಹುದೊಡ್ಡ ಸವಾಲು ಒಡ್ಡಿದೆ. ಸಾವು–ನೋವು ಮತ್ತು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಆಗಿರುವ ನಷ್ಟವು ದಿಗಿಲು ಹುಟ್ಟಿಸಿದೆ. ಕೋವಿಡ್‌ ಪಿಡುಗು ಈ ಶತಮಾನದ ಅತ್ಯಂತ ಗಂಭೀರ ಬಿಕ್ಕಟ್ಟು ಎಂದೇ ಬಿಂಬಿಸಲಾಗುತ್ತಿದೆ. ಅಸಾಧಾರಣವಾದ ಈ ಸಂದರ್ಭವನ್ನು ಎದುರಿಸಲು ಅಸಾಮಾನ್ಯವಾದ ಸಿದ್ಧತೆ, ಕ್ರಮಗಳು, ಮನಃಸ್ಥಿತಿ ಮತ್ತು ಇಚ್ಛಾಶಕ್ತಿ ಬೇಕು. ನಿತ್ಯರೂಢಿಗಳನ್ನೆಲ್ಲ ಬದಿಗೊತ್ತಿ ಹೊಸ ರೀತಿಯಲ್ಲಿ ಚಿಂತಿಸಬೇಕು. ಆದರೆ, ನಮ್ಮ ರಾಜಕೀಯ ನಾಯಕರ ವರ್ತನೆ, ಧೋರಣೆ ಗಮನಿಸಿದರೆ ಇವೆಲ್ಲವೂ ಕಾರ್ಯರೂಪಕ್ಕೆ ಬಂದಿವೆ ಎಂದು ಅನ್ನಿಸುತ್ತಿಲ್ಲ. ಕೋವಿಡ್‌ನಿಂದಾಗಿ ಜನರು ಅನುಭವಿಸುತ್ತಿರುವ ಘೋರ ಸಂಕಷ್ಟವು ಕೂಡ ಈ ಮಾತಿಗೆ ಪುಷ್ಟಿ ನೀಡುವಂತೆಯೇ ಇದೆ. ದೇಶದ ಪರಿಸ್ಥಿತಿಯನ್ನು ತಿಳಿಯುವುದಕ್ಕಾಗಿ, ಮಾರ್ಗದರ್ಶನ ಮಾಡುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರೀತಿಯ ಸಭೆಗಳನ್ನು ನಡೆಸುತ್ತಿದ್ದಾರೆ. ಪ್ರಾಮಾಣಿಕ ಕಾಳಜಿಯಿಂದ ಗಂಭೀರ ಚಿಂತನ–ಮಂಥನ ನಡೆಯಬೇಕಿದ್ದ ಈ ಸಭೆಗಳೇ ವಿವಾದಕ್ಕೆ ಕಾರಣವಾಗಿರುವುದು ವಿಷಾದನೀಯ. ಕೋವಿಡ್‌ ಪ್ರಕರಣಗಳು ಹೆಚ್ಚು ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ
ಗಳ ಜತೆ ಪ್ರಧಾನಿಯವರು ಗುರುವಾರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ‘ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಕ್ಕೂ ಮೊದಲಿನ ಬೇರೊಂದು ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಾವು ಮಾತನಾಡುತ್ತಿರುವ ಸಂದರ್ಭವನ್ನು ನೇರ ಪ್ರಸಾರ ಮಾಡಿದ್ದಾರೆ ಎಂಬುದು ಪ್ರಧಾನಿಯ ಸಿಟ್ಟಿಗೆ ಕಾರಣವಾಗಿತ್ತು. ಕೋವಿಡ್‌ ಪರಿಸ್ಥಿತಿಯನ್ನು ವಿಚಾರಿಸುವುದಕ್ಕಾಗಿ ದೂರವಾಣಿ ಕರೆ ಮಾಡಿದ್ದ ಪ್ರಧಾನಿಯವರು ‘ತಮ್ಮ ಮನದ ಮಾತು ಮಾತ್ರ ಹೇಳಿಕೊಂಡಿದ್ದಾರೆ. ನಮ್ಮ ಮಾತು ಕೇಳಿಲ್ಲ’ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಹೇಳಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು. ವಿವಿಧ ರಾಜ್ಯಗಳಲ್ಲಿ ಹತ್ತು ಹಲವು ಪಕ್ಷಗಳು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರದಲ್ಲಿವೆ. ಸಿದ್ಧಾಂತಗಳು ಮತ್ತು ರಾಜಕೀಯ ಕಾರಣಗಳಿಗಾಗಿ ಈ ಪಕ್ಷಗಳ ನಾಯಕರ ನಡುವೆ ಭಿನ್ನಮತವೂ ಇದೆ. ಆದರೆ, ಕೋವಿಡ್‌ ಪಿಡುಗಿನ ಮುಂದೆ ಜನರು ನಿಸ್ಸಹಾಯಕರಾಗಿ, ತತ್ತರಿಸಿ ನಿಂತಿರುವ ಈ ಸಂದರ್ಭದಲ್ಲಿಯೂ ಕ್ಷುಲ್ಲಕ ಭಿನ್ನಮತವನ್ನು ಮೀರುವ ಪ್ರಬುದ್ಧತೆ ತೋರಲು ಚುನಾಯಿತ ನಾಯಕರಿಗೆ ಸಾಧ್ಯವಾಗುತ್ತಿಲ್ಲ ಎಂಬುದೇ ದೊಡ್ಡ ದುರಂತ. 

‘ಮಾತನಾಡಲು ಅವಕಾಶ ಕೊಟ್ಟಿಲ್ಲ’ ಎಂದು ಸಭೆ ಮುಗಿದ ಮೇಲೆ ಹೇಳಿಕೊಂಡು ತಿರುಗುವುದು ಸರಿಯಾದ ನಡವಳಿಕೆಯೇನೂ ಅಲ್ಲ. ತಮ್ಮ ರಾಜ್ಯದ ಜನರ ಬವಣೆಗಳನ್ನು ಪ್ರಧಾನಿಯ ಮುಂದೆ ಇರಿಸುವುದು ಮುಖ್ಯಮಂತ್ರಿಯ ಕರ್ತವ್ಯ. ಅದಕ್ಕೆ ಅವಕಾಶ ಸಿಗುತ್ತಿಲ್ಲ ಅನ್ನಿಸಿದರೆ, ಅದನ್ನು ಪಡೆದುಕೊಳ್ಳುವುದು ಮುಖ್ಯಮಂತ್ರಿಯ ಹೊಣೆಗಾರಿಕೆ. ಈಗ ನಮ್ಮ ಮುಂದೆ ಇರುವುದು ಜನರ ಜೀವ ರಕ್ಷಣೆಯ ಪ್ರಶ್ನೆ. ಇಲ್ಲಿ ರಾಜಕೀಯ ಪ್ರತಿಷ್ಠೆಗೆ ಅವಕಾಶ ಇಲ್ಲ. ಹಾಗೆಯೇ, ಪ್ರಧಾನಿಯ ನಡೆಯನ್ನು ಪ್ರಶ್ನಿಸಿದ ಮಮತಾ ಅವರ ಮೇಲೆ ಕೇಂದ್ರದ ಆಡಳಿತಾರೂಢ ಪಕ್ಷದ ಮುಖಂಡರು ಮುಗಿಬಿದ್ದದ್ದು ಕೂಡ ಸರಿಯಾದ ನಡೆ ಅಲ್ಲ. ಪ್ರಧಾನಿಯಾಗಲೀ, ಮುಖ್ಯಮಂತ್ರಿಯಾಗಲೀ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಪ್ರಶ್ನಾತೀತರು ಅಲ್ಲ. ಪ್ರಧಾನಿಯನ್ನು ಪೌರರು ಯಾವುದೇ ವಿಚಾರದಲ್ಲಿ, ಯಾವುದೇ ಸಂದರ್ಭದಲ್ಲಿ ಪ್ರಶ್ನಿಸಲು ಸಾಧ್ಯವಾಗುವಂತಹ ವಾತಾವರಣ ಇದೆ ಎಂದರೆ ಅಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದು ಅರ್ಥ. ಅಂತಹ ಸನ್ನಿವೇಶವು ಪ್ರಜಾಪ್ರಭುತ್ವ ದೇಶದ ನಾಯಕನಿಗೆ ಹೆಮ್ಮೆ ತರುವ ವಿಚಾರ. ಆದರೆ, ‘ನಮ್ಮ ದೇಶದ ಮಕ್ಕಳಿಗೆ ಸಿಗಬೇಕಾದ ಲಸಿಕೆಯನ್ನು ವಿದೇಶಗಳಿಗೆ ನೀಡಿದ್ದು ಏಕೆ’ ಎಂದು ಪ್ರಶ್ನಿಸಿದ್ದ ಜನರನ್ನೇ ಜೈಲಿಗೆ ಅಟ್ಟಿದ ಪ್ರಕರಣ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗಷ್ಟೇ ನಡೆದಿದೆ. ಇದು ನಮ್ಮ ಪ‍್ರಜಾಪ್ರಭುತ್ವದ ಸದ್ಯದ ಸ್ಥಿತಿಗೆ ಹಿಡಿದ ಕನ್ನಡಿ. ಕೋವಿಡ್‌ ನಿರ್ವಹಣೆಗೆ ಬೇಕಾದ ಸಾಮಗ್ರಿಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದ ವಿಚಾರದಲ್ಲಿ ಕೇಂದ್ರ ತಾರತಮ್ಯ ಮಾಡಿದೆ ಎಂಬ ಆರೋಪ ಹತ್ತಾರು ಬಾರಿ ಕೇಳಿ ಬಂದಿದೆ. ಆಮ್ಲಜನಕ ಅಥವಾ ಇತರ ಅಗತ್ಯ ಸಾಮಗ್ರಿಗಳನ್ನು ಕರ್ನಾಟಕವೂ ಸೇರಿ ಹಲವು ರಾಜ್ಯಗಳು ನ್ಯಾಯಾಲಯಕ್ಕೆ ಹೋಗಿ ಪಡೆದುಕೊಳ್ಳಬೇಕಾದ ಸ್ಥಿತಿಯನ್ನು ಕೇಂದ್ರ ಸರ್ಕಾರ ಸೃಷ್ಟಿಸಿದ್ದು ದುರದೃಷ್ಟಕರ. ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್‌ ಪಿಡುಗು ರೌದ್ರಾವತಾರ ತಾಳಿರುವ ಈ ಸಂದರ್ಭದಲ್ಲಿಯೂ ಕ್ಷುಲ್ಲಕತನ ಮೀರಲಾರದ ನಮ್ಮ ಆಡಳಿತ ವ್ಯವಸ್ಥೆಗೆ, ನಾಯಕರ ಮನಃಸ್ಥಿತಿಗೆ ಕಾಯಕಲ್ಪ ಆಗಬೇಕಿರುವುದು ತಕ್ಷಣದ ಅಗತ್ಯ. ಇಲ್ಲದೇ ಹೋದರೆ, ಸಾಂಕ್ರಾಮಿಕಕ್ಕೆ ದೇಶವು ತೆರಬೇಕಾದ ಬೆಲೆ ಇನ್ನಷ್ಟು ದುಬಾರಿಯಾದೀತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು