ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೋವಿಡ್‌ ನಿಯಂತ್ರಣ: ಹೈಕೋರ್ಟ್ ‌ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ

Last Updated 16 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಎಫ್‌ಐಆರ್‌ ದಾಖಲಿಸಬೇಕು ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಸೂಚಿಸಿರುವುದು ಸ್ವಾಗತಾರ್ಹ. ರಾಜಕಾರಣಿಗಳು, ಧಾರ್ಮಿಕ ಮುಖಂಡರುನಿಯಮಗಳನ್ನು ಪಾಲಿಸುವ ಮೂಲಕ ಜನಸಾಮಾನ್ಯರಿಗೆ ಮಾದರಿಯಾಗಬೇಕಿತ್ತು. ಅದು ಆಗುತ್ತಿಲ್ಲ. ನಿಯಮ ಉಲ್ಲಂಘಿಸಿದವರಲ್ಲಿ ಅಂತಹವರೂ ಇರುವ ಕಾರಣದಿಂದಲೇ, ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ–2020ರ ಪ್ರಕಾರ ಕ್ರಮ ಕೈಗೊಳ್ಳಲು ಪೊಲೀಸರು ಹಿಂಜರಿಯುತ್ತಿರುವಂತಿದೆ. ಇದು ಸರಿಯಲ್ಲ.ಹೀಗಾಗಿ ಪ್ರಭಾವಿಗಳ ವಿರುದ್ಧವೇ ತ್ವರಿತವಾಗಿ ಕ್ರಮ ಜರುಗಿಸಬೇಕು ಎಂದು ಹೇಳಿರುವುದು ಸರಿಯಾಗಿಯೇ ಇದೆ. ಬೆಂಗಳೂರಿನಲ್ಲಿ ನಡೆದ ಕೆಲವು ಸಭೆ–ಸಮಾರಂಭ ಗಳಲ್ಲಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಉಲ್ಲಂಘನೆ ಆಗಿದ್ದು, ಇದಕ್ಕಾಗಿ ಆಯೋಜಕರ ವಿರುದ್ಧವಷ್ಟೇ ಕ್ರಮ ಜರುಗಿಸಿರುವುದು ಸರಿಯಲ್ಲ. ಪಾಲ್ಗೊಳ್ಳುವವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂಬ ಕೋರ್ಟ್‌ ಸೂಚನೆಯನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಸಭೆ, ಸಮಾರಂಭಗಳಲ್ಲಿ ಮುಖಗವಸು ಧರಿಸದ, ವೈಯಕ್ತಿಕ ಅಂತರ ಕಾಯ್ದುಕೊಳ್ಳದ ಎಲ್ಲರ ವಿರುದ್ಧವೂ ಎಫ್‍ಐಆರ್ ದಾಖಲಿಸಲು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ತಕ್ಷಣ ಸೂಚಿಸಿ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶ ನೀಡಿದೆ.ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕೈಗೊಂಡ ಕ್ರಮಗಳ ಉಸ್ತುವಾರಿ ನೋಡಿಕೊಳ್ಳಲು ಉನ್ನತ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸುವಂತೆಯೂ ಕೋರ್ಟ್ ಸೂಚಿಸಿದೆ. ಕೆಲವು ದಿನಗಳಿಂದ ರಾಜ್ಯದಲ್ಲಿ ಒಂದೇ ಸಮನೆ ಏರುತ್ತಿರುವ ಕೋವಿಡ್ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ, ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವೇ ಪೊಲೀಸ್ ಮುಖ್ಯಸ್ಥರಿಗೆ ನೇರ ಆದೇಶ ನೀಡಿರುವುದು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಆಡಳಿತ ವ್ಯವಸ್ಥೆ ಎಡವಿದೆ ಎನ್ನುವುದನ್ನು ಸೂಚಿಸುತ್ತದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಸಚಿವರೊಬ್ಬರು ಇತ್ತ ಪದೇ ಪದೇ ಹೇಳಿಕೆ ನೀಡುತ್ತಿದ್ದ ಸಂದರ್ಭದಲ್ಲಿಯೇ ಅತ್ತ ಸಚಿವರು, ಶಾಸಕರ ದಂಡೇ ಉಪಚುನಾವಣೆಯ ಪ್ರಚಾರದ ನೆಪದಲ್ಲಿ ಭಾರಿ ಜನಜಂಗುಳಿಯ ರಾಜಕೀಯ ಸಭೆಗಳನ್ನು ನಡೆಸುತ್ತಿದ್ದುದು ವಿಪರ್ಯಾಸವೇ ಸರಿ. ಇತರ ರಾಜಕೀಯ ಪಕ್ಷಗಳ ನಾಯಕರೂ ಇದಕ್ಕೆ ಹೊರತಾಗಿರಲಿಲ್ಲ. ಬಹುತೇಕ ರಾಜಕೀಯ ಸಭೆಗಳಲ್ಲಿ ಜನರು ಮುಖಗವಸು ಹಾಕಿದ್ದಾಗಲೀ ವೈಯಕ್ತಿಕ ಅಂತರ ಪಾಲಿಸಿದ್ದಾಗಲೀ ಕಂಡು ಬರಲಿಲ್ಲ. ಖುದ್ದಾಗಿ ಹೀಗೆ ನಿಯಮಗಳನ್ನು ಉಲ್ಲಂಘಿಸುವಅಧಿಕಾರಸ್ಥ ರಿಗೆಜನಸಾಮಾನ್ಯರಿಗೆ ಬುದ್ಧಿ ಹೇಳುವ ನೈತಿಕ ಅಧಿಕಾರವಾದರೂ ಎಲ್ಲಿ ಉಳಿಯುತ್ತದೆ?ಧಾರ್ಮಿಕ ಸಭೆಗಳ ಮೂಲಕ ಹಲವು ಧಾರ್ಮಿಕ ಮುಖಂಡರೂ ಕೊರೊನಾ ಸೋಂಕು ಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಗಣ್ಯರು, ಪ್ರಭಾವಿ ಗಳು ನಿಯಮ ಉಲ್ಲಂಘಿಸುವುದನ್ನು ಮೂಕ ಪ್ರೇಕ್ಷಕರಂತೆ ನೋಡುವ ಪೊಲೀಸರು, ಜನಸಾಮಾನ್ಯರ ಮೇಲೆ ಮಾತ್ರ ಮುಗಿಬೀಳುತ್ತಿರುವುದು ಕೊರೊನಾ ನಿಯಂತ್ರಣ ಪ್ರಕ್ರಿಯೆಯನ್ನೇ ನಗೆಪಾಟಲಿಗೆ ಈಡುಮಾಡಿದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ ಕಟ್ಟಾಜ್ಞೆ ಸರಿಯಾಗಿಯೇ ಇದೆ. ರಾಜ್ಯದಲ್ಲಿ ಗುರುವಾರ 14,738 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 66 ಜನ ಮರಣ ಹೊಂದಿದ್ದಾರೆ. ಇದು ಒಂದು ದಿನದಲ್ಲಿ ದಾಖಲಾದ ಅತ್ಯಧಿಕ ಪ್ರಕರಣಗಳ ಸಂಖ್ಯೆ ಎನ್ನುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಅನಿವಾರ್ಯ ಇದೆ. ಬೆಂಗಳೂರು, ಬೆಳಗಾವಿ, ಕಲಬುರ್ಗಿ ಮತ್ತು ಹಾಸನದಲ್ಲಿ ಕೊರೊನಾ ಲಸಿಕೆಯ ಕೊರತೆ ಇದೆ ಎಂದು ವರದಿಯಾಗಿದೆ. ಕೊರತೆ ನೀಗಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯದ ಇತರ ನಗರಗಳಲ್ಲೂ ಈ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.

ದೇಶದಲ್ಲೂ ಸತತ ಎರಡನೇ ದಿನ ಸೋಂಕುಪೀಡಿತರ ಸಂಖ್ಯೆ ಎರಡು ಲಕ್ಷ ದಾಟಿರುವುದು ಆರೋಗ್ಯ ತುರ್ತುಪರಿಸ್ಥಿತಿಯ ಲಕ್ಷಣಗಳನ್ನು ಸೂಚಿಸುವಂತಿದೆ. ಜನರ ಆರೋಗ್ಯಕ್ಕಿಂತ ಚುನಾವಣೆ ಗಳೇ ಮುಖ್ಯ ಎಂದು ಭಾವಿಸುವ ನಮ್ಮ ರಾಜಕಾರಣಿಗಳ ಧೋರಣೆ ಹೇವರಿಕೆ ಹುಟ್ಟಿಸುತ್ತಿದೆ. ಆಸ್ಪತ್ರೆ ಗಳಲ್ಲಿ ರೋಗಿಗಳಿಗೆ ಹಾಸಿಗೆಯ ಕೊರತೆ, ಮುನ್ನೆಚ್ಚರಿಕೆಯಾಗಿ ನೀಡಬೇಕಾದ ಲಸಿಕೆಗಳ ಕೊರತೆ, ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ನೂಕುನುಗ್ಗಲು ಉಂಟಾಗಿರುವ ಪರಿಸ್ಥಿತಿ ಕಣ್ಣಮುಂದಿದೆ. ಇಂತಹ ಆತಂಕಕಾರಿ ಸನ್ನಿವೇಶದಲ್ಲಿ ಚುನಾವಣಾ ಭಾಷಣದ ಹೆಸರಲ್ಲಿ ಸಾವಿರಾರು ಜನರನ್ನು ಒಂದೆಡೆ ಸೇರಿಸುವುದು, ಧಾರ್ಮಿಕ ಸಮಾವೇಶದ ನೆಪದಲ್ಲಿ ಲಕ್ಷಾಂತರ ಮಂದಿ ಒಂದೆಡೆ ಸೇರುವುದು ಎಷ್ಟು ಸರಿ? ಸೋಂಕು ತಗುಲಿದರೆ ಅಧಿಕಾರಸ್ಥರಿಗೆ ಮತ್ತು ಗಣ್ಯರಿಗೆ ಸುಸಜ್ಜಿತ ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆ ದೊರೆಯುತ್ತದೆ. ಆದರೆ ಅತ್ತ ದುಡಿಮೆಯೂ ಇಲ್ಲದೆ, ಇತ್ತ ಚಿಕಿತ್ಸೆ ಪಡೆಯಲು ಆರ್ಥಿಕ ಸಾಮರ್ಥ್ಯವೂ ಇಲ್ಲದೆ ನರಳುತ್ತಿರುವ ಜನಸಾಮಾನ್ಯರನ್ನು ಉಳಿಸುವವರು ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT