ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆಗೆ ಕೋವಿಡ್‌ ಭೀತಿ: ಪರಿಣಾಮ ತಗ್ಗಿಸಲು ಬೇಕು ಕಾರ್ಯಯೋಜನೆ

Last Updated 2 ಮಾರ್ಚ್ 2020, 20:14 IST
ಅಕ್ಷರ ಗಾತ್ರ

ಚೀನಾದಲ್ಲಿ 2,800ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು ಆತಂಕ ಸೃಷ್ಟಿಸಿರುವ ‘ಕೋವಿಡ್‌–19’ ವೈರಸ್‌, ವಿಶ್ವದಾದ್ಯಂತ ಹಬ್ಬುತ್ತಿದೆ. ಈ ವೈರಸ್‌ ಹಾವಳಿ ವ್ಯಾಪ್ತಿಗೆ ಬಂದಿರುವ ದೇಶಗಳ ಸಂಖ್ಯೆ 59ಕ್ಕೆ ತಲುಪಿ, ತೀವ್ರ ಸ್ವರೂಪದ ತಲ್ಲಣ ಸೃಷ್ಟಿಸಿದೆ. ಜಾಗತಿಕ ಆರ್ಥಿಕತೆ ಮೇಲೆ ಆತಂಕದ ಕಾರ್ಮೋಡಗಳು ಆವರಿಸಿವೆ. ಹಲವೆಡೆ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಳ್ಳುವ ಅಪಾಯ ಎದುರಾಗಿದೆ.

ಚೀನಾ ದೇಶವು ಜಗತ್ತಿನ ಎರಡನೇ ಅತಿದೊಡ್ಡ ಅರ್ಥವ್ಯವಸ್ಥೆ. ಅಲ್ಲಿನ ಬಿಕ್ಕಟ್ಟು ಇತರ ದೇಶಗಳ ಅರ್ಥವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರತೊಡಗಿದೆ. ಆರ್ಥಿಕತೆಯ ನಾಡಿಮಿಡಿತ ಎಂದೇ ಪರಿಗಣಿಸಲಾಗುವ ಷೇರುಪೇಟೆಗಳಲ್ಲಿನ ವಹಿವಾಟು ಎಲ್ಲೆಡೆ ಕುಸಿಯುತ್ತಿದೆ. ಮುಂಬೈ ಷೇರುಪೇಟೆಯೂ ಇದಕ್ಕೆ ಹೊರತಲ್ಲ. ಶುಕ್ರವಾರ ಕಂಡುಬಂದ ಮಾರಾಟ ಒತ್ತಡಕ್ಕೆ ಸಂವೇದಿ ಸೂಚ್ಯಂಕವು 1,448 ಅಂಶಗಳಷ್ಟು ಕುಸಿದಿದೆ. ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತುಆರು ದಿನಗಳಲ್ಲಿ ₹ 11.76 ಲಕ್ಷ ಕೋಟಿ ಮೊತ್ತದಷ್ಟು ಕರಗಿದೆ. ಮಂಕು ಕವಿದಿರುವ ದೇಶಿ ಆರ್ಥಿಕತೆಯಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬರುತ್ತಿವೆ ಎಂಬ ಅಭಿಪ್ರಾಯ ಕೇಳಿಬರುತ್ತಿರುವಾಗಲೇ ಕೋವಿಡ್‌ ವೈರಸ್‌ ಎರಗಿದೆ.

ಜಾಗತಿಕ ಸರಕು ಪೂರೈಕೆ ಸರಪಳಿ ತುಂಡಾಗುವ ಭೀತಿ ಉಂಟಾಗಿದೆ. ತೈಲ ಉತ್ಪಾದನೆ, ಪ್ರವಾಸೋದ್ಯಮ ತೀವ್ರವಾಗಿ ಬಾಧಿತವಾಗಿವೆ. ಸರಕು–ಸೇವೆಗಳ ಬೇಡಿಕೆ ಕಡಿಮೆಯಾಗುವ ಸೂಚನೆಗಳಿವೆ. ಹೂಡಿಕೆ ಮತ್ತು ಉದ್ಯೋಗ ಅವಕಾಶಗಳ ಸೃಷ್ಟಿಯ ಮೇಲೂ ಇದರ ಪರಿಣಾಮ ಇರಲಿದೆ. ಭಾರತದಲ್ಲಿ ಔಷಧ, ಮೊಬೈಲ್‌ ಫೋನ್‌, ಎಲೆಕ್ಟ್ರಾನಿಕ್‌ ಉಪಕರಣ, ವಾಹನ ತಯಾರಿಕೆ, ಪ್ರವಾಸೋದ್ಯಮ ಮತ್ತು ಸೌರಶಕ್ತಿ ಫಲಕಗಳ ವಹಿವಾಟಿಗೂ ಇದರ ಬಿಸಿ ತಟ್ಟಲಿದೆ. ದೇಶಿ ಆಮದು ಪ್ರಮಾಣದಲ್ಲಿ ಚೀನಾದ ಕಂಪನಿಗಳ ಪಾಲು ಶೇ 50ಕ್ಕೂ ಹೆಚ್ಚು ಇರುವುದು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಲಿದೆ.

ಈ ವೈರಸ್‌ ಹಾವಳಿಯಿಂದಾಗಿ ಚೀನಾದಲ್ಲಿ ತಯಾರಿಕೆ ಚಟುವಟಿಕೆ ಸ್ಥಗಿತಗೊಂಡಿದೆ. ಇದರಿಂದಾಗಿ ರಫ್ತು ವಹಿವಾಟಿಗೆ ದೊಡ್ಡ ಹೊಡೆತ ಬೀಳಲಿದೆ. ಚೀನಾದಿಂದ ಆಮದಾಗುವ ಕಚ್ಚಾ ಸರಕನ್ನೇ ನೆಚ್ಚಿಕೊಂಡಿರುವ ಭಾರತದ ಹಲವು ಉದ್ದಿಮೆಗಳು ಅನಿವಾರ್ಯವಾಗಿ ತಯಾರಿಕೆ ತಗ್ಗಿಸಿವೆ. ಆದಷ್ಟು ಬೇಗ ಪರಿಸ್ಥಿತಿ ಸುಧಾರಿಸದಿದ್ದರೆ ಈ ಉದ್ದಿಮೆಗಳ ಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಆರ್ಥಿಕತೆಯ ಚೇತರಿಕೆಗೆ ಬಲ ತುಂಬಲು ಕೇಂದ್ರ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಮೂರನೇ ತ್ರೈಮಾಸಿಕದಲ್ಲಿನ ಆರ್ಥಿಕ ವೃದ್ಧಿ ದರ ಶೇ 4.7ರಷ್ಟು ದಾಖಲಾಗಿದೆ. ಜನವರಿ ತಿಂಗಳಲ್ಲಿ ಎಂಟು ಪ್ರಮುಖ ಮೂಲ ಸೌಕರ್ಯ ವಲಯಗಳು ಶೇ 2.2ರಷ್ಟು ಪ್ರಗತಿ ದಾಖಲಿಸಿ ತುಸು ಭರವಸೆ ಮೂಡಿಸಿವೆ.ಈ ಹಂತದಲ್ಲಿ ಅಪ್ಪಳಿಸಿರುವ ಕೋವಿಡ್‌ ವೈರಸ್‌ ಮತ್ತೊಂದು ಬಗೆಯಲ್ಲಿ ಚಿಂತೆಗೆ ಕಾರಣವಾಗಿದೆ.

ಜಾಗತಿಕ ಮಟ್ಟದಲ್ಲಿ ಇದು ಉಂಟುಮಾಡಿರುವ ನಷ್ಟದ ಪ್ರಮಾಣವನ್ನು ಇನ್ನಷ್ಟೇ ಅಂದಾಜಿಸಬೇಕಾಗಿದೆ. ಈ ಸೋಂಕು ಇನ್ನೂ ಹೆಚ್ಚು ಹಬ್ಬದಂತೆ, ಜನರ ಜೀವಕ್ಕೆ ಮತ್ತು ಆರ್ಥಿಕತೆಗೆ ಮಾರಕವಾಗದಂತೆ ತಡೆಗಟ್ಟಲು ಸರ್ಕಾರಗಳು ತುರ್ತಾಗಿ ಕಾರ್ಯೋನ್ಮುಖವಾಗಬೇಕು. ಭಾರತದಲ್ಲಿಯೂ ವೈರಸ್‌ ಸೋಂಕಿನ ಕೆಲವು ಪ್ರಕರಣಗಳು ವರದಿಯಾಗಿವೆ. ಹಾಗಾಗಿ, ನಾವು ಕೂಡ ತೀವ್ರ ಎಚ್ಚರ ವಹಿಸಬೇಕಾದ ಅಗತ್ಯ ಇದೆ. ಸೋಂಕಿನಿಂದ ಆರ್ಥಿಕತೆ ಮೇಲೆ ಆಗುವ ಪರಿಣಾಮಗಳನ್ನು ಕನಿಷ್ಠಗೊಳಿಸಲು ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಆಮದು ಕೊರತೆಯ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಬಿಡಿಭಾಗ, ಕಚ್ಚಾ ಸರಕು ಪೂರೈಕೆಯ ಪರ್ಯಾಯ ಮೂಲಗಳನ್ನು ಗುರುತಿಸಬೇಕು. ಆ ಮೂಲಕ, ತಯಾರಿಕೆ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಎದುರಾಗದಂತೆ ನೋಡಿಕೊಳ್ಳಬೇಕು. ವಿವಿಧ ಇಲಾಖೆಗಳು ಈ ದಿಸೆಯಲ್ಲಿ ಸಮನ್ವಯದಿಂದ ಕೆಲಸ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT