ಮರಣದಂಡನೆಗೆ ಗುರಿಯಾದವರನ್ನು ಗಲ್ಲಿಗೇರಿಸಿ ಜೀವಹರಣ ಮಾಡುವುದರ ಬಗ್ಗೆ ಸುಪ್ರೀಂ ಕೋರ್ಟ್ ಈಚೆಗೆ ಆಡಿರುವ ಕೆಲವು ಮಾತುಗಳು, ಈ ಚರ್ಚಾರ್ಹ ವಿಷಯದ ಕುರಿತ ಮಾತುಕತೆಗಳಿಗೆ ಮುಖ್ಯವಾದ ತಿರುವೊಂದನ್ನು ನೀಡಿವೆ. ಮರಣದಂಡನೆಗೆ ಗುರಿಯಾದವರನ್ನು ಗಲ್ಲಿಗೇರಿಸಿ ಪ್ರಾಣಹರಣ ಮಾಡುವ ಪದ್ಧತಿಯನ್ನು ಕೊನೆಗೊಳಿಸಬೇಕು; ಬದಲಿಗೆ ಅಪರಾಧಿಗೆ ಗುಂಡು ಹಾರಿಸಿ, ಪ್ರಾಣಾಂತಿಕ ಚುಚ್ಚುಮದ್ದು ನೀಡಿ ಅಥವಾ ವಿದ್ಯುತ್ ಶಾಕ್ ನೀಡಿ ಕೊಲ್ಲಬೇಕು ಎಂಬ ಮನವಿ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ (ಪಿಐಎಲ್) ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಈಚೆಗೆ ನಡೆಸಿತು. ಗಲ್ಲಿನ ಬದಲು ಈ ಮಾರ್ಗವನ್ನು ಅನುಸರಿಸಿದರೆ ಅಪರಾಧಿಯ ಜೀವಹರಣ ಅತಿ ಕಡಿಮೆ ಸಮಯದಲ್ಲಿ ಆಗುತ್ತದೆ ಎಂಬ ವಾದವು ಅರ್ಜಿಯಲ್ಲಿದೆ. ಸಾಯಲು ಕಡಿಮೆ ನೋವಿನ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಅಪರಾಧಿಗೆ ಅವಕಾಶ ಕಲ್ಪಿಸಬೇಕು ಎಂಬ ಮನವಿಯೂ ಅರ್ಜಿಯಲ್ಲಿದೆ. ಈ ಸಲಹೆಗಳನ್ನು ಆಲಿಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲದ್ದನ್ನು ಗಮನಿಸಿದ ಕೋರ್ಟ್, ವಿಚಾರಣೆಯನ್ನು ಮುಂದಿನ ತಿಂಗಳಿಗೆ ನಿಗದಿಪಡಿಸಿದೆ. ಹೊಸ ಆಲೋಚನೆಗಳಿಗೆ ಕಿವಿಗೊಡಲು ಕೇಂದ್ರವು ಮುಂದಾಗದೆ ಇರುವುದರ ಬಗ್ಗೆ ಹೇಳಿದಾಗ ಕೋರ್ಟ್, ಮರಣದಂಡನೆಯ ಸುತ್ತಲಿನ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಬದಲಾವಣೆಗಳನ್ನು ಕಂಡಿದ್ದರೂ ಸರ್ಕಾರವು ತನ್ನ ಆಲೋಚನೆಗಳನ್ನು ವಿಶಾಲಗೊಳಿಸಿಕೊಳ್ಳಲು ಸಿದ್ಧವಿಲ್ಲ ಎಂದು ಹೇಳಿದೆ.

ಅಪರಾಧಿಯನ್ನು ಗಲ್ಲಿಗೇರಿಸುವ ಮೂಲಕ ಮರಣದಂಡನೆ ಜಾರಿಗೊಳಿಸುವುದು ತ್ವರಿತವಾದ ಹಾಗೂ ಸುರಕ್ಷಿತವಾದ ಕ್ರಮ ಎಂದು ಕೋರ್ಟ್ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಮನಕಲಕುವ ಸಂಗತಿಯೆಂದರೆ, ಮರಣದಂಡನೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ‘ಮೇಲ್ನೋಟಕ್ಕೆ ಶಾಂತ ರೀತಿಯಲ್ಲಿ, ನೋವಿಲ್ಲದಂತೆ ಕಾಣುವ ಬಗೆಯಲ್ಲಿ ಮಾಡುವುದು’ ಆ ಶಿಕ್ಷೆಯು ಇತರರಿಗೆ ರವಾನಿಸಬೇಕಿರುವ ಸಂದೇಶದ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ಕೂಡ ಕೇಂದ್ರ ವಾದಿಸಿತ್ತು. ಶಿಕ್ಷೆಯ ತೀವ್ರತೆಯ ಬಗ್ಗೆ ಸಮಾಜದಲ್ಲಿ ಭೀತಿ ಮೂಡಿಸುವ ಉದ್ದೇಶದಿಂದ ಅಪರಾಧಿಗಳ ಜೀವವನ್ನು ಯಾತನಾಮಯವಾದ ಬಗೆಯಲ್ಲಿ ಹರಣಮಾಡುವ ಪ್ರಕ್ರಿಯೆಯನ್ನು ಬೆಂಬಲಿಸುವುದು ಮಾನವೀಯ ನಡೆಯಾಗುವುದಿಲ್ಲ. ‘ಜೈಲಿನಲ್ಲಿರುವ ವ್ಯಕ್ತಿಯಲ್ಲಿ ಇರುವ ಭೀತಿಯನ್ನು ಅನಗತ್ಯವಾಗಿ ಹೆಚ್ಚು ಮಾಡುವಂತಹ ಯಾವುದೂ ಗಲ್ಲಿಗೇರಿಸುವ ಪ್ರಕ್ರಿಯೆಯಲ್ಲಿ ಇಲ್ಲ’ ಎಂದು ಕೇಂದ್ರ ಸರ್ಕಾರವು ಹೇಳಿಕೆ ನೀಡಿತ್ತು. ಇದರ ಬಗ್ಗೆ ಅದು ಹೆಚ್ಚಿನ ವಿವರಣೆ ನೀಡಬೇಕಿದೆ. ಮರಣದಂಡನೆಗೆ ಗುರಿಯಾದವರ ಪ್ರಾಣಹರಣದ ಪ್ರಕ್ರಿಯೆಯು ಇನ್ನಷ್ಟು ಮಾನವೀಯ ಬಗೆಯಲ್ಲಿ ಇರಲಿ ಎಂಬುದು ಅರ್ಜಿದಾರರ ಕೋರಿಕೆ. ಗಲ್ಲಿಗೇರಿಸಿ, ಪ್ರಾಣ ತೆಗೆಯುವ ಪ್ರಕ್ರಿಯೆಯು ಮನಕಲಕುವಂಥದ್ದು, ಶಿಕ್ಷೆಯನ್ನು ಜಾರಿಗೊಳಿಸಿದ ನಂತರವೂ ಅರ್ಧ ತಾಸಿನವರೆಗೆ ಮೃತದೇಹವನ್ನು ನೇಣಿನ ಕುಣಿಕೆಯಲ್ಲೇ ಬಿಟ್ಟಿರಲಾಗುತ್ತದೆ ಎಂಬ ವಿವರವು ಅರ್ಜಿಯಲ್ಲಿದೆ. ಮರಣದಂಡನೆಯನ್ನು ಜಾರಿಗೆ ತರುತ್ತಿರುವ ಬಗೆಯು ಮಾನವೀಯವಾಗಿ ಇಲ್ಲ, ಅದು ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುವ ಬಗೆಯಲ್ಲಿ ಇದೆ ಎಂಬುದು ಅರ್ಜಿಯಲ್ಲಿನ ವಾದ.

ಮರಣದಂಡನೆ ಎಷ್ಟರಮಟ್ಟಿಗೆ ಮಾನವೀಯ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ಆಗುತ್ತಿರುವ ಹೊತ್ತಿನಲ್ಲಿ, ಪ್ರಾಣವನ್ನು ತೆಗೆಯಲು ಸರಿಯಾದ ಪ್ರಕ್ರಿಯೆ ಯಾವುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವುದು, ತೀರಾ ಹೆಚ್ಚು ಯಾತನೆ ನೀಡುವ ಪ್ರಕ್ರಿಯೆಯನ್ನು ಸರ್ಕಾರವು ಬೆಂಬಲಿಸುತ್ತಿರುವುದು ಒಂದು ವ್ಯಂಗ್ಯದಂತೆ ಕಾಣುತ್ತಿದೆ. ಮರಣದಂಡನೆಯು ಸಮಾಜದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದರ ವಿರುದ್ಧ ಭೀತಿಯನ್ನು ಸೃಷ್ಟಿಸುತ್ತದೆ ಎಂದು ಸರ್ಕಾರ ಹೇಳಿದ್ದರೂ, ವಾಸ್ತವ ಬೇರೆಯದೇ ಆಗಿದೆ. ಮರಣದಂಡನೆಯು ನ್ಯಾಯಸಮ್ಮತ ಅಲ್ಲ, ಅದು ತಾರತಮ್ಯದ ಶಿಕ್ಷೆ. ಏಕೆಂದರೆ, ಮರಣದಂಡನೆಗೆ ಗುರಿಯಾದವರಲ್ಲಿ ಬಹುತೇಕರು ಸಮಾಜದ ಅಂಚಿನ ಸಮುದಾಯಗಳಿಗೆ ಸೇರಿದವರು. ನ್ಯಾಯದಾನ ವ್ಯವಸ್ಥೆಯು ವ್ಯಕ್ತಿಯಲ್ಲಿ ಸುಧಾರಣೆ ತರುವುದಕ್ಕೆ ಆದ್ಯತೆ ನೀಡಬೇಕೇ ವಿನಾ ಪ್ರತೀಕಾರ ತೀರಿಸಿಕೊಳ್ಳುವುದು ಆ ವ್ಯವಸ್ಥೆಯ ಉದ್ದೇಶ ಆಗಬಾರದು ಎಂಬ ತತ್ತ್ವಕ್ಕೆ ಮರಣದಂಡನೆಯು ವಿರುದ್ಧವಾಗಿದೆ. ಮರಣದಂಡನೆಯನ್ನು ರದ್ದುಪಡಿಸುವ ದಿಕ್ಕಿನಲ್ಲಿ ಜಗತ್ತು ಸಾಗುತ್ತಿರುವಾಗ ನಮ್ಮಲ್ಲಿ ಸರ್ಕಾರವು ಮರಣದಂಡನೆಯ ಪ್ರಕ್ರಿಯೆಯನ್ನು ಯಾತನೆಯಿಂದ ಮುಕ್ತವಾಗಿಸುವಲ್ಲಿ ಇರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದೆ. ಇದು ದುರದೃಷ್ಟಕರ. ಸರ್ಕಾರದ ವಾದವು ನ್ಯಾಯದ ಪರಿಕಲ್ಪನೆಯಲ್ಲಿನ ದೋಷವನ್ನು ಹೇಳುತ್ತಿದೆ. ಕೋರ್ಟ್ ಹೇಳಿರುವಂತೆ, ಈ ವಿಚಾರದಲ್ಲಿ ಸರ್ಕಾರ ತಾಳಿರುವ ನಿಲುವು ಕಾಲದೊಂದಿಗೆ ವಿಕಾಸ ಹೊಂದಿಲ್ಲದಿರುವುದನ್ನು ತೋರಿಸುತ್ತಿದೆ. ಅದಕ್ಕೂ ಮುಖ್ಯವಾಗಿ, ಈ ನಿಲುವಿನಲ್ಲಿ ಮಾನವೀಯತೆಯ ಅಂಶವು ಇಲ್ಲದಿರುವುದು ಗೋಚರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.