ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೃಷಿ ಕಾಯ್ದೆ ಹಿಂಪಡೆಯುವ ಘೋಷಣೆ- ಚುನಾವಣೆ ದೃಷ್ಟಿಯ ನಿರ್ಧಾರ

Last Updated 19 ನವೆಂಬರ್ 2021, 21:15 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ರೂಪಿಸಿದ್ದ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಕಾಯ್ದೆಗಳು ಅಂಗೀಕಾರವಾಗಿ 406 ದಿನಗಳ ಬಳಿಕ ಈ ನಿರ್ಧಾರವನ್ನು ಅವರು ಪ್ರಕಟಿಸಿದ್ದಾರೆ. ಈ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆದಿದೆ. ಮುಖ್ಯವಾಗಿ, ಪಂಜಾಬ್‌, ಹರಿಯಾಣ ಮತ್ತು ಉತ್ತರಪ‍್ರದೇಶದ ಪಶ್ಚಿಮ ಭಾಗದ ರೈತರು ದೆಹಲಿಯ ಮೂರು ಗಡಿಗಳಲ್ಲಿ ಬೀಡುಬಿಟ್ಟು ಪ್ರತಿಭಟನೆ ಆರಂಭಿಸಿ ವರ್ಷ ತುಂಬಲು ಇನ್ನೇನು ಒಂದು ವಾರವಷ್ಟೇ ಇದೆ. ಈ ಹೊತ್ತಲ್ಲಿ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಮೂರೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಮೋದಿ ಅವರು ಘೋಷಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈ ಕಾಯ್ದೆಗಳ ಸುತ್ತ ನಡೆದಿರುವ ವಿದ್ಯಮಾನಗಳು ಅಸಂಖ್ಯ; ಸರ್ಕಾರ ಮತ್ತು ಪ್ರತಿಭಟನೆ ನಡೆಸುತ್ತಿರುವ ರೈತರ ಮಧ್ಯೆ 11 ಸುತ್ತು ಮಾತುಕತೆ ನಡೆದಿದ್ದರೂ ಯಾವುದೇ ವಿಚಾರದಲ್ಲಿ ಸಹಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಜನವರಿ 22ರ ಬಳಿಕ ಮಾತುಕತೆ ನಡೆದಿಲ್ಲ. ಪ್ರತಿಭಟನೆ ಹಿಂದಕ್ಕೆ ಪಡೆಯದೆ ಮಾತುಕತೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು 2020ರ ಡಿಸೆಂಬರ್‌ನಲ್ಲಿಯೇ ಹೇಳಿದ್ದರು. ಪ್ರತಿಭಟನಕಾರರನ್ನು ಖಲಿಸ್ತಾನಿಗಳು, ಭಯೋತ್ಪಾದಕರು, ದೇಶದ್ರೋಹಿಗಳು ಎಂದೆಲ್ಲ ಆಡಳಿತ ಪಕ್ಷದ ಹಲವು ಮುಖಂಡರು ಹಂಗಿಸಿದ್ದರು. ಪ್ರತಿಭಟನಕಾರರ ಮೇಲೆ ದೇಶದ ಹಲವೆಡೆ ಕ್ರಿಮಿನಲ್‌ ಪ್ರಕರಣಗಳೂ ದಾಖಲಾಗಿವೆ. ರೈತರ ಪ್ರತಿಭಟನೆಯನ್ನು ಸರ್ಕಾರವು ಅತ್ಯಂತ ಲಘುವಾಗಿ ಪರಿಗಣಿಸಿತ್ತು, ಗ್ರಹಿಸಬಾರದ ಬಗೆಯಲ್ಲಿ ಗ್ರಹಿಸಿತ್ತು ಎಂಬುದಕ್ಕೆ ಇವೆಲ್ಲ ದ್ಯೋತಕಗಳಾಗಿವೆ. ಅದೇನೇ ಇದ್ದರೂ ರೈತರು ನಡೆಸಿದ ಬಹುತೇಕ ಶಾಂತಿಯುತ ಮತ್ತು ದೃಢ ಮನಸ್ಸಿನ ಹೋರಾಟಕ್ಕೆ ಸರ್ಕಾರ ಮಣಿದಿದೆ. ರೈತರ ಹೋರಾಟಕ್ಕೆ ದೊರೆತ ಮೊದಲ ಗೆಲುವು ಎಂದು ಇದನ್ನು ಪರಿಗಣಿಸಬಹುದು. ಬೆಳೆಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಬೇಕು ಎಂಬ ರೈತರ ಬೇಡಿಕೆಯ ಬಗ್ಗೆ ಸರ್ಕಾರ ಇನ್ನೂ ಏನನ್ನೂ ಹೇಳಿಲ್ಲ.

ತಮಗೆ ಬೇಕಾಗಿಲ್ಲ ಎಂದು ರೈತರು ದೃಢ ಮತ್ತು ದಿಟ್ಟ ಧ್ವನಿಯಲ್ಲಿ ಸಾರಿದ ಮೂರು ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದರ ಜತೆಗೆ, ಅದನ್ನು ಒಂದು ವರ್ಗದ ರೈತರಿಗೆ ಮನದಟ್ಟು ಮಾಡಲಾಗದ್ದಕ್ಕೆ ಪ್ರಧಾನಿಯವರು ದೇಶದ ಜನರ ಕ್ಷಮೆಯನ್ನೂ ಕೇಳಿದ್ದಾರೆ. ರೈತರ ಪ್ರತಿಭಟನೆಯನ್ನು ಸರ್ಕಾರ ಲಘುವಾಗಿ ಪರಿಗಣಿಸಿದ್ದರಿಂದಾಗಿಯೇ ಕ್ಷಮೆ ಕೇಳುವ ಸನ್ನಿವೇಶ ಸೃಷ್ಟಿಯಾಯಿತು. ಸಿಖ್‌ ಧರ್ಮಸ್ಥಾಪಕ ಗುರು ನಾನಕ್‌ ಅವರ ಹುಟ್ಟುಹಬ್ಬದ ದಿನ ದೇಶವನ್ನು ಉದ್ದೇಶಿಸಿ ಮಾತನಾಡಿ, ಪ್ರಧಾನಿಯವರು ಕಾಯ್ದೆ ಹಿಂದಕ್ಕೆ ಪಡೆಯುವ ಭರವಸೆ ಕೊಟ್ಟಿದ್ದಾರೆ. ಪಂಜಾಬ್‌ ಮತ್ತು ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪಂಜಾಬ್‌ನಲ್ಲಿ ಮತ್ತು ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ಸಿಖ್ಖರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಗುರು ನಾನಕ್‌ ಅವರ ಹುಟ್ಟುಹಬ್ಬದಂದೇ ಪ್ರಧಾನಿ ಘೋಷಿಸಿದ್ದು ಕಾಕತಾಳೀಯ ಏನಲ್ಲ. ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿ ಕೈಯಲ್ಲಿದ್ದ ಎರಡು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರವನ್ನು ಕಸಿದುಕೊಂಡಿತ್ತು. ಕೃಷಿ ಕಾಯ್ದೆಗಳ ಬಗ್ಗೆ ರೈತರಲ್ಲಿ ಇದ್ದ ಆಕ್ರೋಶವೇ ಈ ಸೋಲಿಗೆ ಕಾರಣ ಎಂಬ ವಿಶ್ಲೇಷಣೆ ಇದೆ. ಭೂಸ್ವಾಧೀನ ಸುಗ್ರೀವಾಜ್ಞೆಯ ಬಗ್ಗೆಯೂ ರೈತರು ಈ ಹಿಂದೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಯನ್ನೂ ನಡೆಸಿದ್ದರು. 2015ರಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯುವ ಮುನ್ನ ಆ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿತ್ತು.ಹಾಗಾಗಿ, ಕೇಂದ್ರ ಸರ್ಕಾರವು ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡೇ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿದೆ ಎಂಬುದರಲ್ಲಿ ಅನುಮಾನ ಇಲ್ಲ. ಚುನಾವಣೆಯನ್ನು ಮಾತ್ರ ಗಮನದಲ್ಲಿ ಇರಿಸಿ ಕೊಂಡು ಸರ್ಕಾರವೊಂದು ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬುದು ಜನಪರ ಆಡಳಿತದ ಲಕ್ಷಣವಲ್ಲ.

ಕೃಷಿ ಕಾಯ್ದೆಗಳ ವಿಚಾರವನ್ನು ಸರ್ಕಾರವು ಪ್ರತಿಷ್ಠೆ ಮಾಡಿಕೊಂಡದ್ದು ಸರಿಯಲ್ಲ. ಅದು ದೇಶದ ರೈತರಲ್ಲಿ ಸರ್ಕಾರದ ಕುರಿತು ಮೂಡಿಸಿದ ಅಪನಂಬಿಕೆಯು ಕೂಡ ಪ್ರಧಾನಿಯ ಘೋಷಣೆಯ ಬಳಿಕ ಸ್ಪಷ್ಟವಾಯಿತು. ರೈತರ ಬೇಡಿಕೆ ಈಡೇರಿಸುವುದಾಗಿ ಪ್ರಧಾನಿಯೇ ಘೋಷಿಸಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ರೈತರು ಇಲ್ಲ. ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವವರೆಗೆ ಪ್ರತಿಭಟನೆ ನಿಲ್ಲದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್‌ ಯೂನಿಯನ್‌ನ ನಾಯಕ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. ಸರ್ಕಾರವು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುತ್ತದೆ ಎಂಬ ಸಂಭ್ರಮವೂ ಈಗ ಬೇಡ ಎಂದು ಅವರು ಹೇಳಿದ್ದಾರೆ. ಪ್ರಧಾನಿಯ ಮಾತನ್ನೇ ಜನ ನಂಬಲಾಗದಂತಹ ಸ್ಥಿತಿಯು ಶೋಚನೀಯ. ಈ ಸ್ಥಿತಿ ನಿರ್ಮಾಣವಾಗಿರುವುದರ ಹೊಣೆಯನ್ನು ಸರ್ಕಾರವೇ ಹೊರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT