ಶುಕ್ರವಾರ, ಏಪ್ರಿಲ್ 10, 2020
19 °C

ಕೆಪಿಸಿಸಿಗೆ ಅಧ್ಯಕ್ಷರ ನೇಮಕ ನಾಯಕತ್ವ ಗುಣದ ಸತ್ವಪರೀಕ್ಷೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಗೆ (ಕೆಪಿಸಿಸಿ) ಸಾರಥಿಯಾಗಿ ಯಾರು ನೇಮಕಗೊಳ್ಳಬಹುದು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯು ಡಿ.ಕೆ. ಶಿವಕುಮಾರ್ ಅವರ ಹೆಗಲೇರಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ 2019ರ ಡಿಸೆಂಬರ್‌ 5ರಂದು ನಡೆದ ಉಪಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿದ್ದರ ನೈತಿಕ ಹೊಣೆ ಹೊತ್ತು ದಿನೇಶ್‌ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಾದರೂ ಅದು ಅಂಗೀಕಾರ ಆಗಿರಲಿಲ್ಲ. ಅವರು ಒಲ್ಲದ ಮನಸ್ಸಿನಿಂದಲೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು. ಪರಿಣಾಮವಾಗಿ, ಪ್ರದೇಶ ಕಾಂಗ್ರೆಸ್ ಸಮಿತಿಗೆ ಮೂರು ತಿಂಗಳಿನಿಂದ ಅಧ್ಯಕ್ಷರು ಇದ್ದೂ ಇಲ್ಲದಂತಾಗಿತ್ತು. ನಿರ್ಧಾರ ಮುಂದೂಡುವುದರಲ್ಲೇ ಹಿತ ಅಡಗಿದೆ ಎಂಬಂತೆ ತೂಕಡಿಕೆಗೆ ಜಾರಿದ್ದ ಹೈಕಮಾಂಡ್, ಕೊನೆಗೂ ಎಚ್ಚೆತ್ತು ತೀರ್ಮಾನ ಕೈಗೊಂಡಿದೆ.

ಮಧ್ಯಪ್ರದೇಶದಲ್ಲಿ ಪಕ್ಷದ ನೇತೃತ್ವದ ಸರ್ಕಾರವು ಪತನದ ಅಂಚಿಗೆ ಸರಿದಿರುವ ಹೊತ್ತಿನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ಕಾಕತಾಳೀಯ ಆಗಿರಬಹುದೇ?! ಆಗಿರಲೂಬಹುದು. ಆದರೆ, ಆ ಬೆಳವಣಿಗೆಗೂ ಈ ನಿರ್ಧಾರಕ್ಕೂ ಯಾರಾದರೂ ನಂಟು ಕಲ್ಪಿಸಿದರೆ ಅದಕ್ಕೆ ಹೈಕಮಾಂಡ್‌ ಇತ್ತೀಚಿನ ವರ್ಷಗಳಲ್ಲಿ ನಡೆದುಕೊಳ್ಳುತ್ತಿರುವ ರೀತಿಯೇ ಕಾರಣ. ಇದು, ಏನಾದರೂ ಆಗಿರಲಿ; ಜಾತಿ–ಪ್ರದೇಶಗಳನ್ನು ಗಣನೆಗೆ ತೆಗೆದುಕೊಂಡು, ಕೂಡಿ–ಕಳೆಯುವ ಲೆಕ್ಕಾಚಾರ ನಡೆಸಿ ಎಚ್ಚರಿಕೆಯ ಹೆಜ್ಜೆ ಇರಿಸಿದೆ ಹೈಕಮಾಂಡ್‌.

ಹಳೆ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಶಿವಕುಮಾರ್‌ ಅವರಿಗೆ ಅಧ್ಯಕ್ಷ ಗಾದಿ ಕೊಟ್ಟಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲರೆನಿಸಿದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಈಶ್ವರ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮುಂದುವರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಂಘಟಿತರಾದಂತೆ ತೋರುತ್ತಿರುವ ವಾಲ್ಮೀಕಿ ಸಮುದಾಯದ ಸತೀಶ ಜಾರಕಿಹೊಳಿ ಹಾಗೂ ಮುಸ್ಲಿಂ ಸಮುದಾಯದ ಸಲೀಂ ಅಹಮದ್‌ ಅವರನ್ನೂ ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ರಾಜ್ಯದ ಪ್ರಮುಖ ಜಾತಿ–ಸಮುದಾಯಗಳ ನಡುವೆ ಸಮತೋಲನ ಸಾಧಿಸುವ ಪ್ರಯತ್ನ ನಡೆಸಿದೆ.

ಪಕ್ಷದ ಕೆಲವು ಹಿರಿಯರ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರನ್ನು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮುಂದುವರಿಸುವ ಮೂಲಕ ಪಕ್ಷದೊಳಗಿನ ಶಕ್ತಿಕೇಂದ್ರಗಳ ನಡುವೆಯೂ ಸಮತೋಲನ ಸಾಧಿಸಲು ಯತ್ನಿಸಿದೆ.

ಕಾಂಗ್ರೆಸ್‌ಗೆ ಈಗ ಕಷ್ಟಕಾಲ. ಲೋಕಸಭೆ ಚುನಾವಣೆಯಲ್ಲಿ ಹಾಗೂ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷ ಗೆದ್ದ ಸ್ಥಾನಗಳನ್ನು ಗಮನಿಸಿದರೆ, ಕಷ್ಟದ ತೀವ್ರತೆ ಯಾರಿಗಾದರೂ ಅರ್ಥವಾದೀತು. ಸೋತಾಗ ನಾಯಕರು ಪಕ್ಷ ತೊರೆಯುವುದು ಸಹಜ. ಅದಕ್ಕೆ ಕಾಂಗ್ರೆಸ್‌ ಕೂಡ ಹೊರತಲ್ಲ. ಜತೆಗೆ ಬಣ ರಾಜಕೀಯವು ಬೇರೆ ಬೇರೆ ಸ್ವರೂಪ ಮತ್ತು ಹಂತಗಳಲ್ಲಿ ಪಕ್ಷವನ್ನು ಒಳಗಿನಿಂದಲೇ ಕೊರೆಯತೊಡಗಿದೆ. ‘ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ಸಿಗರೇ ಕಾರಣ’ ಎಂಬುದು ರಾಜಕೀಯ ವಲಯದಲ್ಲಿ ಜನಜನಿತವಾದ ಮಾತು.

ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನು ಬೆಳೆಸುವ ಕೆಲಸ ಆಗುತ್ತಿಲ್ಲ. ಕಾಂಗ್ರೆಸ್‌ನ ಅಸ್ಮಿತೆಯೂ ಅಲುಗಾಡತೊಡಗಿದೆ. ಯಾವ ಮೌಲ್ಯ, ಸಿದ್ಧಾಂತವನ್ನು ಪಕ್ಷ ಪ್ರತಿನಿಧಿಸುತ್ತಿದೆ ಎಂಬುದರ ಕುರಿತು ಅದರ ನಾಯಕರಲ್ಲೇ ಸ್ಪಷ್ಟತೆ ಇಲ್ಲ. ತನ್ನ ಸೈದ್ಧಾಂತಿಕ ನಿಲುವನ್ನು ಗಟ್ಟಿಧ್ವನಿಯಲ್ಲಿ ಜನರ ನಡುವೆ ಪ್ರತಿಪಾದಿಸುವ ಸಾಧನಗಳು ಕೂಡ ಪಕ್ಷದ ಬಳಿ ಇದ್ದಂತಿಲ್ಲ. ಬಿಜೆಪಿಯ ಆಕ್ರಮಣಶೀಲ ರಾಜಕಾರಣದ ಎದುರು ಎದೆಯೊಡ್ಡಿ ನಿಲ್ಲುವ ಚೈತನ್ಯವನ್ನು ಪಕ್ಷ ಕಳೆದುಕೊಂಡಿದೆಯೇನೋ ಎಂಬ ಅನುಮಾನ ಆ ಪಕ್ಷದ ಕಾರ್ಯಕರ್ತರಲ್ಲೇ ಇದೆ.

ಸಂಪನ್ಮೂಲದ ವಿಚಾರದಲ್ಲಿಯೂ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ದುರ್ಬಲಗೊಂಡಿದೆ ಎಂಬುದಕ್ಕೆ ಪುರಾವೆಯನ್ನು ಕಾರ್ಪೊರೇಟ್‌ ವಲಯದಿಂದ ಬಂದ ದೇಣಿಗೆಗೆ ಸಂಬಂಧಿಸಿದ ಅಂಕಿಅಂಶಗಳೇ ಒದಗಿಸುತ್ತವೆ. ಇಂತಹ ಅರೆಕೊರೆಗಳೆಲ್ಲವನ್ನೂ ನಿವಾರಿಸಿಕೊಂಡು, ವಿವಿಧ ಬಣಗಳ ನಡುವೆ ಸಮನ್ವಯ ಸಾಧಿಸಿ ಪಕ್ಷವನ್ನು ಸಂಘಟಿಸುವುದು ಯಾರಿಗೇ ಆದರೂ ಸವಾಲಿನ ಕೆಲಸ. ಅಂತಹ ಸವಾಲು ಈಗ ಶಿವಕುಮಾರ್ ಮುಂದಿದೆ. ಕಾಂಗ್ರೆಸ್ಸಿಗೆ ಹಿಂದೆ ಇದ್ದಷ್ಟರ ಮಟ್ಟಿಗೆ ಸಾಂಪ್ರದಾಯಿಕ ಮತಬ್ಯಾಂಕ್‌ ಈಗ ಇಲ್ಲ. ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದ ಮತಗಳನ್ನು ಕ್ರಮವಾಗಿ ಜೆಡಿಎಸ್‌ ಮತ್ತು ಬಿಜೆಪಿ ಗಣನೀಯ ಪ್ರಮಾಣದಲ್ಲಿ ಸೆಳೆದುಕೊಳ್ಳುತ್ತಿವೆ ಎಂಬುದು ಬಹುಮಟ್ಟಿಗೆ ಒಪ್ಪಿತ ಸಂಗತಿ.

ಸಾಂಪ್ರದಾಯಿಕ ಮತಗಳನ್ನು ಪುನಃ ಗಟ್ಟಿಗೊಳಿಸಿಕೊಳ್ಳುವುದರ ಜತೆಯಲ್ಲೇ ಪ್ರಬಲ ಸಮುದಾಯಗಳನ್ನು ಒಲಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಎಚ್‌.ಡಿ. ದೇವೇಗೌಡ ಕುಟುಂಬದ ಜತೆ ಜಿದ್ದಿಗೆ ಬಿದ್ದು ರಾಜಕೀಯ ನಡೆಸಿದ್ದ ಶಿವಕುಮಾರ್ ಈಗ ಆ ಕುಟುಂಬದ ಜತೆ ಸಖ್ಯ ಹೊಂದಿದ್ದಾರೆ.

ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೂಡಿದ ಈ ಸಖ್ಯ, ಈಗ ಪಕ್ಷ ಸಂಘಟನೆಯಲ್ಲಿ ತೊಡಕಾಗಿ ಪರಿಣಮಿಸದಂತೆ ನೋಡಿಕೊಳ್ಳುವುದು ಹಗ್ಗದ ಮೇಲಿನ ನಡಿಗೆಯಂತೆ. ಮುನ್ನುಗ್ಗುವ ಛಾತಿ ಮತ್ತು ಹಣಬಲ ಶಿವಕುಮಾರ್‌ ಅವರಿಗೆ ಇದೆ. ಆದರೆ, ಈ ಎಲ್ಲ ಸವಾಲುಗಳನ್ನು ನಿಭಾಯಿಸಲು ಇವನ್ನು ಮೀರಿದ ನಾಯಕತ್ವದ ಗುಣ ಬೇಕು. ಅಂತಹ ನಾಯಕತ್ವದ ಗುಣವನ್ನು ಅವರು ತೋರಬಲ್ಲರೇ? 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು