ಬುಧವಾರ, ಸೆಪ್ಟೆಂಬರ್ 23, 2020
20 °C

ಅಧಿಕಾರ ಹಿಡಿಯುವಲ್ಲಿನ ಉತ್ಸಾಹ ಅಭಿವೃದ್ಧಿ ಸಾಧಿಸುವಲ್ಲೂ ಕಾಣಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ಚುಕ್ಕಾಣಿ ಹಿಡಿಯುವುದು ಯಾವುದೇ ಪಕ್ಷಕ್ಕೆ ಪ್ರತಿಷ್ಠೆಯ ವಿಷಯ. ಆದಕಾರಣ, ಈ ಮಹತ್ವದ ಸಂಸ್ಥೆಯ ಮೇಯರ್‌ ಚುನಾವಣೆಯು ಪ್ರತೀ ಸಲ ರಾಜಕೀಯ ಕುತೂಹಲ ಗರಿಗೆದರುವಂತೆ ಮಾಡುತ್ತದೆ. ಬಿಬಿಎಂಪಿ ಆಡಳಿತಾಧಿಕಾರ ದಕ್ಕಿಸಿಕೊಳ್ಳಲು ಪ್ರಸಕ್ತ ಅವಧಿಯ ನಾಲ್ಕು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದ ಬಿಜೆಪಿಗೆ ಈಗ ಮೇಯರ್‌, ಉಪಮೇಯರ್‌ ಪಟ್ಟ ಸಿಕ್ಕಿವೆ. ಪಕ್ಷದೊಳಗಿನ ಗೊಂದಲಗಳಿಂದ ಈ ಸಲವೂ ಅಧಿಕಾರ ವಂಚಿತವಾಗುವ ಭೀತಿ ಬಿಜೆಪಿ ನಾಯಕರನ್ನು ಆವರಿಸಿತ್ತು. ಅಂತಿಮ ಹಂತದ ಬೆಳವಣಿಗೆಗಳ ಬಳಿಕ, ಬಿಜೆಪಿಯಲ್ಲಿನ ಆತಂಕದ ತೆರೆ ಸರಿಯಿತು. ರಾಜ್ಯ ಮಟ್ಟದಲ್ಲಿ ಮೈತ್ರಿ ಕಡಿದುಕೊಂಡಿದ್ದರೂ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಕಸರತ್ತು ನಡೆಸಿದ್ದರು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ಬಿಬಿಎಂಪಿಯ ಅಧಿಕಾರ ಗಿಟ್ಟಿಸಿಕೊಂಡರೆ, 28 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಬೆಂಗಳೂರು ನಗರದಲ್ಲಿ ಪಕ್ಷದ ನೆಲೆ ಇನ್ನಷ್ಟು ಭದ್ರವಾಗುತ್ತದೆ ಎಂಬುದು ಎಲ್ಲ ಪಕ್ಷಗಳ ನಾಯಕರಲ್ಲೂ ಇರುವ ಲೆಕ್ಕಾಚಾರ. ಅದಕ್ಕಿಂತ ಮುಖ್ಯವಾಗಿ ಎಲ್ಲ ಪಕ್ಷಗಳ ನಾಯಕರು ಬಿಬಿಎಂ‍ಪಿಯನ್ನು ಆದಾಯದ ಬಹುದೊಡ್ಡ ಮೂಲವೆಂಬಂತೆ ಪರಿಗಣಿಸಿದ್ದಾರೆ. ಹೀಗಾಗಿ ಅಧಿಕಾರ ಹಿಡಿಯಲು ನಾನಾ ತಂತ್ರಗಳನ್ನು ಹೆಣೆಯುತ್ತಾರೆ. ಈ ವಿಷಯದಲ್ಲಿ ಇವರು ಹೆಚ್ಚು, ಅವರು ಕಡಿಮೆ ಎಂಬ ಭೇದ ಇಲ್ಲ. ಆದರೆ, ಅಧಿಕಾರ ಹಿಡಿಯುವಲ್ಲಿ ತೋರುವ ಆಸಕ್ತಿ, ನಗರದ ಅಭಿವೃದ್ಧಿಯ ವಿಚಾರದಲ್ಲಿ ಕಾಣಿಸುವುದಿಲ್ಲ ಎಂಬುದು ಸೂರ್ಯಸ್ಪಷ್ಟ. ಆಡಳಿತ ಹಳಿ ತಪ್ಪಿದೆ ಎಂಬುದಕ್ಕೆ ಹತ್ತೆಂಟು ನಿದರ್ಶನಗಳು ಸಿಗುತ್ತವೆ. ಹತ್ತಾರು ವರ್ಷಗಳಿಂದ ಕಗ್ಗಂಟಾಗಿರುವ ತ್ಯಾಜ್ಯ ವಿಲೇವಾರಿಯಂತಹ ಸಮಸ್ಯೆಯನ್ನೂ ಬಗೆಹರಿಸಲು ಪಾಲಿಕೆಗೆ ಈವರೆಗೆ ಸಾಧ್ಯವಾಗಿಲ್ಲ ಎಂಬುದು ಇದಕ್ಕೊಂದು ಉದಾಹರಣೆ.

ಜಾಗತಿಕ ಮಟ್ಟದಲ್ಲಿ ಬೆಂಗಳೂರು ತನ್ನದೇ ಆದ ಸ್ಥಾನ ಹೊಂದಿದೆ. ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಇದೂ ಒಂದು. ಭಾರತದ ಸಿಲಿಕಾನ್ ವ್ಯಾಲಿ, ಜ್ಞಾನಾಧಾರಿತ ನಗರ ಎಂಬ ಹಿರಿಮೆಗಳು ಈ ಮಹಾನಗರಕ್ಕೆ ಇವೆ. ಆದರೆ, ಅಧಿಕಾರಸ್ಥರ ದೂರದೃಷ್ಟಿ ಮತ್ತು ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ನಗರ ಸಮಸ್ಯೆಗಳ ಆಗರವಾಗಿ ಪರಿವರ್ತನೆ ಆಗತೊಡಗಿದೆ. ಪಾಲಿಕೆಯ ಆಡಳಿತದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ ಎಂಬುದು ನಾಗರಿಕರ ಅನುಭವದ ಮಾತು. ಸಂಚಾರ ದಟ್ಟಣೆಯು ಬದುಕನ್ನು ಅಸಹನೀಯಗೊಳಿಸುತ್ತಿದೆ. ಕುಡಿಯುವ ನೀರು ಪೂರೈಕೆ, ನೈರ್ಮಲ್ಯ ಕಾಯ್ದುಕೊಳ್ಳುವಿಕೆ ಬಹುದೊಡ್ಡ ಸವಾಲುಗಳಾಗಿ ಪರಿಣಮಿಸಿವೆ. ಆಡಳಿತ ವೈಫಲ್ಯದ ಪರಿಣಾಮವಾಗಿ ಪಾಲಿಕೆಗೆ ಕೋರ್ಟ್‌ಗಳು ಬೆತ್ತ ಹಿಡಿದು ಮಾರ್ಗದರ್ಶನ ಮಾಡಬೇಕಾದ ಸ್ಥಿತಿ ಇದೆ. ಮೂಲ ಸೌಲಭ್ಯಗಳ ಕೊರತೆಯ ಸುಳಿಗೆ ಸಿಲುಕಿರುವ ನಾಗರಿಕರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಕ್ಕಾಗಿ ಪೈಪೋಟಿ ನಡೆಸುವವರು ಅಭಿವೃದ್ಧಿಗಾಗಿಯೂ ಸ್ಪರ್ಧೆಗೆ ಬೀಳುವಂತೆ ಇದ್ದಿದ್ದರೆ? ರಾಜಧಾನಿ ಬೆಂಗಳೂರಿನ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೆರೆಸದೆ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಈ ವಿಷಯದಲ್ಲಿ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳ
ಬೇಕು. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಹಳಿ ತಪ್ಪಿರುವ ಆಡಳಿತವನ್ನು ಸರಿದಾರಿಗೆ ತರಬೇಕು. ಹಿಂದಿನ ಲೋಪಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಮತ್ತು ಹಗರಣಮುಕ್ತ ಆಡಳಿತ ನೀಡಬೇಕು. ಪಾಲಿಕೆ ವ್ಯಾಪ್ತಿಗೆ ಸೇರಿದ್ದರೂ ಅಭಿವೃದ್ಧಿಯಿಂದ ವಂಚಿತವಾಗಿರುವ ಬಡಾವಣೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಬೆಸ್ಕಾಂ, ಜಲಮಂಡಳಿ, ಬಿಡಿಎ, ಬಿಎಂಆರ್‌ಡಿಎ ಮತ್ತಿತರ ಸಂಸ್ಥೆಗಳ ಜತೆ ಉತ್ತಮ ಸಮನ್ವಯ ಸಾಧಿಸಿ, ನಗರದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಬೇಕು. ರಾಜ್ಯದ ಚುಕ್ಕಾಣಿಯನ್ನೂ ಬಿಜೆಪಿ ಹಿಡಿದಿರುವುದರ ಪ್ರಯೋಜನವು ಬಿಬಿಎಂಪಿ ಹಂತದಲ್ಲಿ ಪ್ರತಿಫಲಿಸುವಂತೆ ಆಗಬೇಕು. ಅನುದಾನಕ್ಕಾಗಿ ಸರ್ಕಾರದತ್ತಲೇ ಮುಖ ಮಾಡುವ ಬದಲು, ಸಂ‍ಪನ್ಮೂಲ ಸಂಗ್ರಹಕ್ಕೆ ಇರುವ ವಿಪುಲ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆದಾಯವನ್ನು ಹೆಚ್ಚಿಸಿ
ಕೊಳ್ಳುವ ಕಡೆಗೂ ಗಮನ ಕೊಡಬೇಕು. ರಾಜ್ಯದ ಒಟ್ಟಾರೆ ಆದಾಯಕ್ಕೆ ಬೆಂಗಳೂರು ಸುಮಾರು ಶೇಕಡ 70ರಷ್ಟು ಕೊಡುಗೆ ನೀಡುತ್ತಿರುವುದನ್ನೂ ಮರೆಯಬಾರದು. ‘ಬ್ರ್ಯಾಂಡ್‌ ಬೆಂಗಳೂರು’ ಘನತೆಗೆ ಧಕ್ಕೆಯಾಗದಂತೆ ಆಡಳಿತ ನಡೆಸುವತ್ತ ಎಚ್ಚರಿಕೆಯ ಹೆಜ್ಜೆ ಇಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು