ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಬಾಂಗ್ಲಾದಲ್ಲಿ ರಾಜಕೀಯ ಬಿಕ್ಕಟ್ಟು: ಭಾರತಕ್ಕೆ ಭಾರಿ ಕಳವಳಕಾರಿ

Published 6 ಆಗಸ್ಟ್ 2024, 23:35 IST
Last Updated 6 ಆಗಸ್ಟ್ 2024, 23:35 IST
ಅಕ್ಷರ ಗಾತ್ರ
ಬಾಂಗ್ಲಾ ಸೇನೆಯು ಅಧಿಕಾರದ ಮೋಹಕ್ಕೆ ಬೀಳದೆ, ದೇಶದಲ್ಲಿ ನಿಷ್ಪಕ್ಷಪಾತ ಮತ್ತು ನ್ಯಾಯಯುತ ಚುನಾವಣೆ ನಡೆದು ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಳ್ಳುವಂತೆ ನೋಡಿಕೊಳ್ಳಬೇಕು

ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಬಿಕ್ಕಟ್ಟು ಉಂಟಾಗಿರುವುದು ಕಳವಳಕಾರಿ ವಿದ್ಯಮಾನ. ಅವಾಮಿ ಲೀಗ್‌ ಮುಖ್ಯಸ್ಥೆ ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡಿದೆ ಮತ್ತು ಹಸೀನಾ ಅವರು ಸದ್ಯ ಭಾರತದಲ್ಲಿ ಇದ್ದಾರೆ. 1971ರ ಬಾಂಗ್ಲಾ ವಿಮೋಚನೆ ಸಂಘರ್ಷದಲ್ಲಿ ಭಾಗಿಯಾದ ಸೈನಿಕರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 30ರಷ್ಟು ಮೀಸಲಾತಿ ನೀಡುವುದರ ವಿರುದ್ಧ ನಡೆದ ಪ್ರತಿಭಟನೆಯು ದೇಶದಾದ್ಯಂತ ಪಸರಿಸಿ ಚಳವಳಿಯ ರೂಪ ಪಡೆದುಕೊಂಡಿತು.

ವಿದ್ಯಾರ್ಥಿಗಳು ಮತ್ತು ಯುವಸಮೂಹದ ಈ ಪ್ರತಿಭಟನೆಗೆ ವಿವಿಧ ರಾಜಕೀಯ ಪಕ್ಷಗಳು, ಗಣ್ಯರು ಬೆಂಬಲ ನೀಡಿದರು. ಪರಿಣಾಮವಾಗಿ ಮೀಸಲಾತಿ ವಿರುದ್ಧ ಆರಂಭಗೊಂಡ ಪ್ರತಿಭಟನೆಯು ಹಸೀನಾ ನೇತೃತ್ವದ ಸರ್ಕಾರವನ್ನು ಪತನಗೊಳಿಸುವ ಹೋರಾಟವಾಯಿತು. ದೇಶದಾದ್ಯಂತ ವಿಧಿಸಲಾಗಿದ್ದ ಕರ್ಫ್ಯೂವನ್ನು ಲೆಕ್ಕಿಸದೆ ಪ್ರತಿಭಟನಕಾರರು ಢಾಕಾದತ್ತ ನುಗ್ಗಿದರು. ಪ್ರತಿಭಟನೆಯ ಸಂದರ್ಭದಲ್ಲಿ 440ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭಾನುವಾರ ಒಂದೇ ದಿನ ಸುಮಾರು ನೂರು ಮಂದಿ ಬಲಿಯಾದರು. ಪ್ರತಿಭಟನಕಾರರು ಪ್ರಧಾನಿಯ ಅರಮನೆಗೆ ನುಗ್ಗುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲು ಸೇನೆಯ ಸಲಹೆಯಂತೆ ಹಸೀನಾ ಅವರು ಸೇನೆಯ ವಿಮಾನದಲ್ಲಿ ಭಾರತಕ್ಕೆ ಬಂದಿದ್ದಾರೆ. ಇದರೊಂದಿಗೆ ಅವರ ಸತತ 15 ವರ್ಷಗಳ ಆಧಿಪತ್ಯ ಕೊನೆಗೊಂಡಿದೆ.

1975ರಲ್ಲಿ ತಮ್ಮ ತಂದೆ ಮುಜೀಬುರ್‌ ರೆಹಮಾನ್‌ ಮತ್ತು ಕುಟುಂಬದ ಇತರರ ಹತ್ಯೆಯಾದ ಬಳಿಕ ದೇಶಭ್ರಷ್ಟರಾಗಿ ಭಾರತದಲ್ಲಿ ಆಶ್ರಯ ಪಡೆದಿದ್ದ ಹಸೀನಾ ಅವರು, 1981ರಲ್ಲಿ ಸ್ವದೇಶಕ್ಕೆ ಮರಳಿದ್ದರು. ಇತರ ಪಕ್ಷಗಳ ಜೊತೆಗೆ ಸೇರಿ ಪ್ರಜಾಪ್ರಭುತ್ವ ಸ್ಥಾಪನೆಗೆ ಹೋರಾಡಿದ್ದರು. ಈ ಹೋರಾಟವು ಅವರಿಗೆ ದೇಶದಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಟ್ಟಿತ್ತು.

1996ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯೂ ಆದರು. ಬಳಿಕ ಸೋತರು. ಆದರೆ, 2008ರ ಚುನಾವಣೆಯಲ್ಲಿ ಗೆದ್ದು ಮರಳಿ ಅಧಿಕಾರಕ್ಕೆ ಬಂದ ಅವರು ದೇಶದ ಮೇಲೆ ಬಿಗಿಹಿಡಿತ ಸಾಧಿಸಿದ್ದರು. ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ್ದ ಅವರ ಆಳ್ವಿಕೆಯು ನಿರಂಕುಶವಾಗಿತ್ತು ಎಂಬ ಆರೋಪಗಳು ಇವೆ. ತಮ್ಮ ವಿರುದ್ಧದ ಟೀಕೆಗಳನ್ನು ಅವರು ಸಹಿಸುತ್ತಿರಲಿಲ್ಲ, ಟೀಕಾಕಾರರು, ವಿರೋಧಿಗಳನ್ನು ದಮನ ಮಾಡುತ್ತಿದ್ದರು ಎಂದೂ ಹೇಳಲಾಗುತ್ತಿದೆ. ಆದರೆ ಈ ಎಲ್ಲ ಆರೋಪಗಳನ್ನು ಹಸೀನಾ ನಿರಾಕರಿಸಿದ್ದಾರೆ. ಆದರೆ, ಜನರು ಈಗ ಪ್ರದರ್ಶಿಸಿರುವ ಆಕ್ರೋಶವನ್ನು ಗಮನಿಸಿದರೆ ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಲಾಗದು. 

ಬಾಂಗ್ಲಾದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯ ಹಿಂದೆ ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆ ಐಎಸ್‌ಐ ಮತ್ತು ಚೀನಾದ ಪಿತೂರಿ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ನಿಜವೇ ಆಗಿದ್ದರೆ ಖಂಡನೀಯ. ಒಂದು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಿ ದೇಶವನ್ನು ಅಸ್ಥಿರ
ಗೊಳಿಸುವುದು ಅಕ್ಷಮ್ಯ. ನಾಲ್ಕು ಸಾವಿರಕ್ಕೂ ಹೆಚ್ಚು ಕಿಲೊಮೀಟರ್‌ ಉದ್ದದ ಗಡಿಯನ್ನು ಭಾರತದ ಜೊತೆಗೆ ಹಂಚಿಕೊಂಡಿರುವ ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟನ್ನು ಭಾರತವು ಲಘುವಾಗಿ ತೆಗೆದು
ಕೊಳ್ಳುವಂತಿಲ್ಲ.

ಜೊತೆಗೆ ಈಗಿನ ಬಿಕ್ಕಟ್ಟಿನ ಹಿಂದೆ ಐಎಸ್‌ಐ ಮತ್ತು ಚೀನಾದ ಕೈವಾಡ ಇದೆ ಎಂದಾದರೆ, ಅದು ಭಾರತಕ್ಕೆ ಅಪಾಯದ ಕರೆಗಂಟೆ ಎಂದೇ ಅರ್ಥ. ಹಸೀನಾ ತಮ್ಮ ಆಳ್ವಿಕೆಯ ಅವಧಿಯಲ್ಲಿ ಬಾಂಗ್ಲಾವು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಕೆ ಆಗದಂತೆ ನೋಡಿಕೊಂಡಿದ್ದರು. ಇನ್ನು ಮುಂದೆ ಅಂತಹ ಭರವಸೆ ಇಲ್ಲ. ಬಾಂಗ್ಲಾದೇಶವು ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿ ದೊಡ್ಡ ವ್ಯಾಪಾರ ಪಾಲುದಾರ. ರಾಜಕೀಯ ಅಸ್ಥಿರತೆಯು ದ್ವಿಪಕ್ಷೀಯ ವ್ಯಾಪಾರಕ್ಕೂ ಧಕ್ಕೆ ಉಂಟುಮಾಡಬಹುದು. ಬಾಂಗ್ಲಾದೇಶದ ಈಗಿನ ಬಿಕ್ಕಟ್ಟಿಗೆ ಒಂದು ರೀತಿಯಲ್ಲಿ ಹಸೀನಾ ಅವರೂ ಕಾರಣರಾಗಿದ್ದಾರೆ.

ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ್ದ ಅವರು ಸರ್ವಾಧಿಕಾರಿಯಂತೆ ವರ್ತಿಸಬಾರದಿತ್ತು. ಸರ್ಕಾರಿ ಉದ್ಯೋಗಗಳೇ ಕಡಿಮೆ ಇರುವ ದೇಶದಲ್ಲಿ ಶೇ 30ರಷ್ಟು ಹುದ್ದೆಗಳನ್ನು ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಬಂಧುಗಳಿಗೆ ಮೀಸಲಿರಿಸಿದರೆ ಪರಿಣಾಮ ಏನಾಗಬಹುದು ಎಂಬುದನ್ನು ಅವರು ಅಂದಾಜಿಸಬೇಕಿತ್ತು.


ಪ್ರತಿಭಟನಕಾರರ ಬೇಡಿಕೆಗಳಿಗೆ ಸಹಾನುಭೂತಿ ತೋರದೆ, ಅವರನ್ನು ಭಯೋತ್ಪಾದಕರು ಎಂದು ಕರೆದು, ಉರಿಯುವ ಬೆಂಕಿಗೆ ತುಪ್ಪ ಸುರಿದರು. ಪ್ರತಿಭಟನಕಾರರ ಬೇಡಿಕೆ ಈಡೇರಿದೆ. ಸರ್ಕಾರ ಪತನಗೊಂಡಿದೆ. ಆದರೆ, ಹಿಂಸಾಚಾರದಿಂದ ಏನನ್ನು ಬೇಕಿದ್ದರೂ ಸಾಧಿಸಬಹುದು ಎಂದು ಅವರು ಭಾವಿಸಬಾರದು. ಪಾಕಿಸ್ತಾನ ಪರ ಒಲವು ಹೊಂದಿರುವ, ಮೂಲಭೂತವಾದಿಯಾಗಿರುವ ಹಲವು ಗುಂ‍ಪುಗಳು ಬಾಂಗ್ಲಾದೇಶದಲ್ಲಿ ಇವೆ. ಹಿಂಸಾಚಾರವು ದೇಶವನ್ನು ಪ್ರಪಾತಕ್ಕೆ ತಳ್ಳಬಹುದು. ಪ್ರತಿಭಟನಕಾರರು ತಕ್ಷಣಕ್ಕೆ ಹಿಂಸೆ ನಿಲ್ಲಿಸದಿದ್ದರೆ ಸೇನಾ ಆಡಳಿತ ಕಾಯಂಗೊಳ್ಳುವ ಅಪಾಯ ಇದ್ದೇ ಇದೆ. ಇದನ್ನು ಪ್ರತಿಭಟನಕಾರರು ಅರ್ಥ ಮಾಡಿಕೊಳ್ಳಬೇಕು. ಪ್ರಭಾವಿಯಾಗಿರುವ ಸೇನೆಯು ಅಧಿಕಾರದ ಮೋಹಕ್ಕೆ ಬೀಳದೆ, ದೇಶದಲ್ಲಿ ನಿಷ್ಪಕ್ಷಪಾತ ಮತ್ತು ನ್ಯಾಯಯುತ ಚುನಾವಣೆ ನಡೆದು ಪ್ರಜಾಪ್ರಭುತ್ವ ಇನ್ನಷ್ಟು
ಗಟ್ಟಿಗೊಳ್ಳುವಂತೆ ನೋಡಿಕೊಳ್ಳಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT