ಶಿಕ್ಷಣ ಕ್ಷೇತ್ರದ ಮೇಲೆ ರಾಜ್ಯಗಳಿಗೆ ಇರುವ ಕಾನೂನುಬದ್ಧ ಅಧಿಕಾರವನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬಾರದು

ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ಬೋಧನಾ ಸಿಬ್ಬಂದಿ ಹಾಗೂ ಕಾಲೇಜುಗಳ ಬೋಧನಾ ಸಿಬ್ಬಂದಿಯ ನೇಮಕಕ್ಕೆ ಸಂಬಂಧಿಸಿ ಕರಡು ನಿಯಮಾವಳಿಯನ್ನು ಹೊರಡಿಸಿದೆ. ಈ ನಿಯಮಾವಳಿ ಜಾರಿಗೆ ಬಂದರೆ ಉನ್ನತ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಲಿದೆ. ವ್ಯವಸ್ಥೆಯ ನಿಯಂತ್ರಣವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಪರಿಧಿಗೆ ಒಳಪಡಲಿದೆ. ರಾಜ್ಯದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದಲ್ಲಿ ಕುಲಾಧಿಪತಿಗಳಿಗೆ ಅಪರಿಮಿತ ಅಧಿಕಾರ ನೀಡಲಾಗಿದೆ. ಕುಲಪತಿ ನೇಮಕದ ಶೋಧನಾ ಸಮಿತಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ಇರುವುದಿಲ್ಲ.

ರಾಜ್ಯದ ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾಗಿರುತ್ತಾರೆ. ರಾಜ್ಯಪಾಲರನ್ನು ಕೇಂದ್ರ ಸರ್ಕಾರವು ನೇಮಿಸುತ್ತದೆ. ಹೀಗಾಗಿ, ಕುಲಪತಿಗಳ ನೇಮಕವನ್ನು ಕೇಂದ್ರ ಸರ್ಕಾರವೇ ಮಾಡಿದಂತಾಗುತ್ತದೆ. ಕುಲಪತಿಯಾಗಿ ನೇಮಕಗೊಳ್ಳಲು ಪಿಎಚ್ಡಿ ಪದವಿಯಾಗಲೀ ಬೋಧನೆಯ ಅನುಭವವಾಗಲೀ ಅಗತ್ಯವಿಲ್ಲ ಎಂದು ಕರಡು ನಿಯಮವು ಹೇಳುತ್ತದೆ. ಉದ್ಯಮ, ಆಡಳಿತ ಅಥವಾ ಇನ್ನಾವುದೇ ಕ್ಷೇತ್ರದ ವ್ಯಕ್ತಿಯು ಕುಲಪತಿಯಾಗಿ ನೇಮಕವಾಗಬಹುದು. ಬೋಧಕರ ನೇಮಕ ಮತ್ತು ಬಡ್ತಿಗೆ ಸಂಬಂಧಿಸಿ ಈಗ ಇರುವ ಅರ್ಹತೆಗಳನ್ನೂ ಬದಲಾಯಿಸುವ ಪ್ರಸ್ತಾವವು ಕರಡು ನಿಯಮಾವಳಿಯಲ್ಲಿ ಇದೆ.

ಈ ಕರಡು ನಿಯಮಾವಳಿಯು ಜಾರಿಗೆ ಬಂದರೆ, ಕುಲಪತಿ ನೇಮಕದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಪಾತ್ರ ಇರುವುದಿಲ್ಲ. ಇದು ಒಕ್ಕೂಟ ತತ್ವಗಳ ಸ್ಪಷ್ಟ ಉಲ್ಲಂಘನೆ. ಬಹಳ ಮುಖ್ಯವಾದ ಕ್ಷೇತ್ರವೊಂದರ ಸಂಪೂರ್ಣ ನಿಯಂತ್ರಣವನ್ನು ಕೈಗೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನ. ಇದು ಸಂವಿಧಾನದ ಆಶಯಗಳಿಗೂ ವಿರುದ್ಧವಾಗಿದೆ. ಸಂವಿಧಾನದ ಏಳನೇ ಪರಿಚ್ಛೇದದಲ್ಲಿರುವ ಕೇಂದ್ರ ಪಟ್ಟಿಯ 66ನೇ ಅಂಶವು ಹೀಗೆ ಹೇಳುತ್ತದೆ: ‘ಉನ್ನತ ಶಿಕ್ಷಣ ಅಥವಾ ಸಂಶೋಧನಾ ಸಂಸ್ಥೆಗಳು ಮತ್ತು ವೈಜ್ಞಾನಿಕ ಹಾಗೂ ತಾಂತ್ರಿಕ ಸಂಸ್ಥೆಗಳ ಸಮನ್ವಯ ಮತ್ತು ಗುಣಮಟ್ಟ ನಿರ್ಧಾರ’ವು ಕೇಂದ್ರ ಸರ್ಕಾರದ ಹೊಣೆ.

ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಇದೆ ಎಂದು ಇದರ ಅರ್ಥವಲ್ಲ. ಮಾನದಂಡ ರಚನೆ, ನಿಯಮಗಳ ರೂಪಿಸುವಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಸಮನ್ವಯ ಎಂಬುದನ್ನು ಶಿಕ್ಷಣ ಕ್ಷೇತ್ರದ ಮೇಲೆ ರಾಜ್ಯಗಳಿಗೆ ಇರುವ ಕಾನೂನುಬದ್ಧ ಅಧಿಕಾರವನ್ನು ಕಸಿದುಕೊಳ್ಳಲು ಬಳಸಿಕೊಳ್ಳಬಾರದು.

ರಾಜ್ಯಗಳು ರೂಪಿಸಿರುವ ಕಾಯ್ದೆಗಳ ಅಡಿಯಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡಿವೆ. ಇವುಗಳಿಗೆ ಅನುದಾನವನ್ನೂ ರಾಜ್ಯ ಸರ್ಕಾರಗಳೇ ನೀಡುತ್ತವೆ. ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇದ್ದರೂ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುವ ಅಧಿಕಾರ ಯುಜಿಸಿಗೆ ಇಲ್ಲ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಹೆಚ್ಚಿನ ರಾಜ್ಯಗಳಲ್ಲಿ ಕುಲಪತಿಗಳ ನೇಮಕವು ಸದಾ ವಿವಾದಾತ್ಮಕ ವಿಚಾರವೇ ಆಗಿದೆ. ಕುಲಾಧಿಪತಿಗಳಾಗಿ ರಾಜ್ಯಪಾಲರು ಸೃಷ್ಟಿಸಿರುವ ವಿವಾದಗಳು ಮತ್ತು ಸಂಘರ್ಷದಿಂದಾಗಿ ಕುಲಪತಿ ನೇಮಕದ ಅಧಿಕಾರವನ್ನು ರಾಜ್ಯಪಾಲರಿಂದ ವಾಪಸ್ ಪಡೆಯಲು ಕೆಲವು ರಾಜ್ಯ ಸರ್ಕಾರಗಳು ಮುಂದಾಗಿವೆ. ಈಗ, ಕುಲಪತಿ ನೇಮಕದ ಪರಮಾಧಿಕಾರವನ್ನು ರಾಜ್ಯಪಾಲರಿಗೆ ನೀಡಲು ಯುಜಿಸಿ ಮುಂದಾಗಿದೆ.

ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕರು ಕರಡು ನಿಯಮಾವಳಿಯನ್ನು ವಿರೋಧಿಸಿದ್ದಾರೆ. ಪಠ್ಯಕ್ರಮ ಬದಲಾವಣೆಯಂತಹ ನಡೆಗಳ ಮೂಲಕ ಶಿಕ್ಷಣವನ್ನು ನಿಯಂತ್ರಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರವು ಮಾಡಿದೆ. ಯುಜಿಸಿ ಮೂಲಕ ಕೇಂದ್ರ ಸರ್ಕಾರವು ಈಗ ಕೈಗೊಂಡಿರುವ ಕ್ರಮವು ವಿಶ್ವವಿದ್ಯಾಲಯಗಳು ಮತ್ತು ಇಡೀ ಉನ್ನತ ಶಿಕ್ಷಣ ಕ್ಷೇತ್ರದ ರಾಜಕೀಯ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನು ಕೈಗೆ ತೆಗೆದುಕೊಳ್ಳುವ ಹುನ್ನಾರವಾಗಿದೆ. ರಾಜ್ಯಗಳು, ವಿಶ್ವವಿದ್ಯಾಲಯಗಳು ಮತ್ತು ಇತರರು ಈ ಕ್ರಮಕ್ಕೆ ಬಲವಾದ ಪ್ರತಿರೋಧ ಒಡ್ಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.