ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚಂಡೀಗಢ ಮೇಯರ್‌ ಆಯ್ಕೆ– ಪ್ರಜಾತಂತ್ರ ರಕ್ಷಿಸಿದ ‘ಸುಪ್ರೀಂ’

ಸಂಪಾದಕೀಯ
Published 21 ಫೆಬ್ರುವರಿ 2024, 22:41 IST
Last Updated 21 ಫೆಬ್ರುವರಿ 2024, 22:41 IST
ಅಕ್ಷರ ಗಾತ್ರ

ಚಂಡೀಗಢ ಮಹಾನಗರಪಾಲಿಕೆಯ ಮೇಯರ್‌ ಆಯ್ಕೆಯ ಮತದಾನ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಅನಿಲ್‌ ಮಸೀಹ್‌ ತೋರಿದ ‘ದುರ್ವರ್ತನೆ’ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಐತಿಹಾಸಿಕ. ಮೇಯರ್‌ ಚುನಾವಣೆಯಲ್ಲಿ ಎಎಪಿ–ಕಾಂಗ್ರೆಸ್‌ ಮೈತ್ರಿಕೂಟದ ಪರವಾಗಿ 20 ಮತಗಳು
ಚಲಾವಣೆಯಾಗಿದ್ದವು.

ಆದರೆ, ಅವುಗಳ ಪೈಕಿ ಎಂಟು ಮತಪತ್ರಗಳನ್ನು ಚುನಾವಣಾಧಿಕಾರಿಯೇ ವಿರೂಪ ಗೊಳಿಸಿದ್ದರು. ವಿರೂಪಗೊಳಿಸಿ ಮತಪತ್ರಗಳು ಅಸಿಂಧು ಎಂದು ಘೋಷಿಸಿದ್ದರು. ಪರಿಣಾಮವಾಗಿ, ಬಿಜೆಪಿ ಅಭ್ಯರ್ಥಿಗೆ ಮೈತ್ರಿಕೂಟದ ಅಭ್ಯರ್ಥಿಗಿಂತ ಹೆಚ್ಚು ಮತಗಳು ಸಿಕ್ಕವು. ಹೀಗಾಗಿ, ಬಿಜೆಪಿ ಅಭ್ಯರ್ಥಿಯು ಗೆದ್ದಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದರು.

ಆದರೆ, ಈಗ, ಅಭೂತಪೂರ್ವ ನಡವಳಿಕೆಯ ಮೂಲಕ ಮರು ಮತಎಣಿಕೆ ನಡೆಸಿರುವ ಸುಪ್ರೀಂ ಕೋರ್ಟ್‌, ಎಎಪಿ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಪ್ರಕಟಿಸಿದೆ. ಚುನಾವಣಾಧಿಕಾರಿಯ ನಡವಳಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದೆ.

‘ಚುನಾವಣಾಧಿಕಾರಿಯ ನಡವಳಿಕೆಯು ಗಂಭೀರ ದುರ್ವರ್ತನೆ ಎಂಬುದು ಸ್ಪಷ್ಟವಾಗಿ ಗೋಚರ
ವಾಗುತ್ತದೆ’ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ‘ಚುನಾವಣಾ ಪ್ರಜಾತಂತ್ರದ ಮೂಲಭೂತ ಜನಾದೇಶವು ಅನುಷ್ಠಾನಗೊಂಡಿದೆ ಎಂಬುದನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ನ್ಯಾಯಾಲಯವು ಅಸಾಧಾರಣವಾದ ಸಂದರ್ಭಗಳಲ್ಲಿ ಮಧ್ಯ ಪ್ರವೇಶಿಸಲೇಬೇಕು’ ಎಂದು ಕೋರ್ಟ್‌ ಹೇಳಿರುವುದು ಸಮಂಜಸವಾಗಿದೆ.

ಚುನಾವಣಾಧಿಕಾರಿಯು ಚುನಾವಣಾ ಪ್ರಕ್ರಿಯೆಯನ್ನು‍ ಹಾಳುಗೆಡವಿದ್ದಲ್ಲದೆ, ನ್ಯಾಯಾಲಯದಲ್ಲಿ ಸುಳ್ಳು ಹೇಳಿದ್ದಾರೆ. ಹಾಗಾಗಿ, ಅವರಿಗೆ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 340ರ ಅಡಿಯಲ್ಲಿ ನೋಟಿಸ್‌ ನೀಡುವಂತೆಯೂ ನ್ಯಾಯಪೀಠವು ಸೂಚಿಸಿದೆ. ಪ್ರಜಾಪ್ರಭುತ್ವದ ಪಾವಿತ್ರ್ಯ ಉಳಿಯುವುದಕ್ಕೆ ಅಗತ್ಯವಾಗಿ ಬೇಕಾಗಿದ್ದ ಕ್ರಮವನ್ನು ಸುಪ್ರೀಂ ಕೋರ್ಟ್‌ ಕೈಗೊಂಡಿದೆ. 

ಚುನಾವಣಾಧಿಕಾರಿಯು ಚುನಾವಣೆ ನಡೆಯುವ ಮುನ್ನ ಮತ್ತು ನಂತರ ಹಲವು ಕುತಂತ್ರಗಳನ್ನು ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಜನವರಿ 18ಕ್ಕೆ ಮತದಾನವು ನಿಗದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಮಗೆ ಅನಾರೋಗ್ಯವಿದೆ ಎಂಬ ಕಾರಣ ಒಡ್ಡಿ ಚುನಾವಣಾಧಿಕಾರಿಯು ಮತದಾನವನ್ನು ಫೆಬ್ರುವರಿ 6ಕ್ಕೆ ಮುಂದೂಡಿದ್ದರು. ಆದರೆ ಹೈಕೋರ್ಟ್‌ ಮಧ್ಯಪ್ರವೇಶಿಸಿ ಜನವರಿ 30ರಂದೇ ಮತದಾನ ನಡೆಸಲು ಆದೇಶಿಸಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ, ಚುನಾವಣಾಧಿಕಾರಿ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ಅವರು ಮರುಮತದಾನಕ್ಕೆ ಅವಕಾಶ ಕೊಡಬೇಕು ಎಂದು ಕೋರಿದ್ದರು. ಏಕೆಂದರೆ, ಜನವರಿ 30ರ ಮತದಾನದ ನಂತರ, ಎಎಪಿಯ ಮೂವರು ಕಾರ್ಪೊರೇಟರ್‌ಗಳು ಬಿಜೆಪಿ ಸೇರಿದ್ದರು. ಈಗ ಎಎಪಿ– ಕಾಂಗ್ರೆಸ್‌ ಮೈತ್ರಿಕೂಟಕ್ಕಿಂತ ಬಿಜೆಪಿಯ ಬಲ ಹೆಚ್ಚಾಗಿದೆ. ಮತದಾನವನ್ನು ಅನಗತ್ಯವಾಗಿ ಮುಂದೂಡಿದ್ದರ ಹಿಂದೆಯೂ ಕಾರ್ಪೊರೇಟರ್‌ಗಳನ್ನು ಖರೀದಿಸಿದ ನಂತರ ಮತದಾನ ನಡೆಸೋಣ ಎಂಬ ಸಂಚು ಇದ್ದಂತೆ ಈಗ ಕಾಣಿಸುತ್ತದೆ. ‘ಮತಪತ್ರ ವಿರೂಪಗೊಳಿಸಿದ್ದು ಬಿಟ್ಟರೆ ಮತದಾನ ಪ್ರಕ್ರಿಯೆಯಲ್ಲಿ ಬೇರೆ ಯಾವುದೇ ಲೋಪ ಆಗಿಲ್ಲ. ಹಾಗಾಗಿ, ಮರುಮತದಾನ ಅಗತ್ಯ ಇಲ್ಲ’ ಎಂಬ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವು ವಿವೇಕಯುತವಾದುದೇ ಆಗಿದೆ. 

ನಗರಪಾಲಿಕೆ ಮೇಯರ್‌ ಚುನಾವಣೆಯಲ್ಲಿಯೂ ಇಂತಹ ಕುಯುಕ್ತಿ ನಡೆಸುತ್ತಾರೆ ಎಂಬುದನ್ನು ಊಹಿಸುವುದೇ ಕಷ್ಟಕರ. ಸ್ಪಷ್ಟವಾದ ರಾಜಕೀಯ ಪ್ರಜ್ಞೆ ಇರುವ, ಸಾಕ್ಷರತೆ ಪ್ರಮಾಣವೂ ಹೆಚ್ಚು ಇರುವ ಚಂಡೀಗಢದಂತಹ ನಗರದಲ್ಲಿಯೇ ಇಂತಹ ನಡವಳಿಕೆ ಸಾಧ್ಯವಾಗುತ್ತದೆ ಎಂದಾದರೆ
ಇತರೆಡೆಗಳಲ್ಲಿಯೂ ಹೀಗೆಯೇ ಮಾಡಬಹುದು. ಸಾರ್ವಜನಿಕ ಅಭಿಪ್ರಾಯ, ಮಾಧ್ಯಮದ ಪರಿಶೀಲನೆ ಅಥವಾ ನ್ಯಾಯಾಲಯದ ಕ್ರಿಯೆಯ ಬಗ್ಗೆ ತಮಗೆ ಭೀತಿ ಇಲ್ಲ ಎಂಬಂತೆ ಚುನಾವಣಾಧಿಕಾರಿ ವರ್ತಿಸಿದ್ದು ಆಶ್ಚರ್ಯ ಹುಟ್ಟಿಸುತ್ತದೆ. ಬೇರೆ ಕಡೆಗಳಲ್ಲಿ, ಬೇರೆ ಚುನಾವಣೆಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಇಂತಹ ವಂಚನೆ ನಡೆದಿರಬಹುದು ಎಂಬುದಕ್ಕೆ ಚಂಡೀಗಢದ ವಿದ್ಯಮಾನವು ಪುಷ್ಟಿ ಕೊಡುತ್ತದೆ. ದೆಹಲಿ ಮೇಯರ್‌ ಚುನಾವಣೆಯನ್ನು ಕೂಡ ತಿರುಚುವ ಪ್ರಯತ್ನ ಈ ಹಿಂದೆ ನಡೆದಿತ್ತು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವು ಈ  ರೀತಿಯ ಚುನಾವಣಾ ಅಕ್ರಮವನ್ನು ಬೆಂಬಲಿಸುವುದಾಗಲೀ ಪ್ರೋತ್ಸಾಹಿಸುವುದಾಗಲೀ ಮಾಡಕೂಡದು. ಚಂಡೀಗಢದಲ್ಲಿ ನಡೆದಂತಹ ಘಟನೆಯು ಇನ್ನು ಮುಂದಿನ ಯಾವುದೇ ಚುನಾವಣೆಯಲ್ಲಿ ಮರುಕಳಿಸಬಾರದು ಎಂಬ ಧ್ವನಿಯು ಸುಪ್ರೀಂ ಕೋರ್ಟ್‌ನ ಆದೇಶದಲ್ಲಿ ಸ್ಪಷ್ಟವಾಗಿದೆ. ತಪ್ಪು ಎಸಗಿದ ಚುನಾವಣಾಧಿಕಾರಿಗೆ ಶಿಕ್ಷೆಯಾಗಬೇಕು ಎಂದೂ ಕೋರ್ಟ್‌ ಹೇಳಿದೆ. ಚುನಾವಣೆಗಳು ನ್ಯಾಯಯುತವಾಗಿ, ಪಾರದರ್ಶಕವಾಗಿ ನಡೆಯಬೇಕು. ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಇದು ಅಗತ್ಯ ಎಂಬುದನ್ನು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT