ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ದುರ್ಘಟನೆ: ಪೊಲೀಸರ ನಿಷ್ಕ್ರಿಯತೆ ಖಂಡನಾರ್ಹ

Last Updated 31 ಜನವರಿ 2020, 19:45 IST
ಅಕ್ಷರ ಗಾತ್ರ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಯೊಬ್ಬ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಒಬ್ಬರನ್ನು ಗಾಯಗೊಳಿಸಿರುವ ಕೃತ್ಯ ಆತಂಕ ಹುಟ್ಟಿಸುವಂತಿದೆ. ಅಪಾರ ಸಂಖ್ಯೆಯಲ್ಲಿದ್ದ ಪೊಲೀಸರ ಸಮ್ಮುಖದಲ್ಲೇ ಈತ ಪಿಸ್ತೂಲ್‌ ಹಿಡಿದುಕೊಂಡು ಕೂಗಾಡುತ್ತಿದ್ದರೂ ಪೊಲೀಸರು ತಕ್ಷಣ ಆತನನ್ನು ಬಂಧಿಸದೆ ಮೂಕಪ್ರೇಕ್ಷಕರಾಗಿದ್ದುದು ಆಘಾತಕಾರಿ ಸಂಗತಿ.

ಮಹಾತ್ಮ ಗಾಂಧಿ ಹತ್ಯೆಗೀಡಾದ ಜನವರಿ 30 ಅನ್ನು ಹುತಾತ್ಮರ ದಿನ ಎಂದು ಆಚರಿಸಲಾಗುತ್ತಿದೆ. ಅಂದು ವಿದ್ಯಾರ್ಥಿಗಳು ರಾಜಘಾಟ್‌ನತ್ತ ಮೆರವಣಿಗೆ ಹೊರಟಿದ್ದಾಗಲೇ ಈ ಕೃತ್ಯ ನಡೆದಿದೆ. ಕೆಲವು ದಿನಗಳ ಹಿಂದೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ (ಜೆಎನ್‌ಯು) ಮುಸುಕುಧಾರಿ ದುಷ್ಕರ್ಮಿಗಳು ನುಗ್ಗಿ ದಾಂದಲೆ ಮಾಡಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರ ನೆನಪು ಮಾಸುವ ಮುನ್ನವೇ ಈ ದುರ್ಘಟನೆ ಜರುಗಿದೆ. ಜೆಎನ್‌ಯು ಪ್ರಕರಣದಲ್ಲಿ ಇನ್ನೂ ಆರೋಪಿಗಳ ಬಂಧನವಾಗಿಲ್ಲ.

ದೇಶದ ರಾಜಧಾನಿಯಾಗಿ ಅಂತರರಾಷ್ಟ್ರೀಯ ಮಹತ್ವ ಹೊಂದಿರುವ ದೆಹಲಿಯಲ್ಲಿ ಪೊಲೀಸ್‌ ಆಡಳಿತ ಹದಗೆಟ್ಟರೆ ದೇಶಕ್ಕೇ ಕೆಟ್ಟ ಹೆಸರು ಬರುತ್ತದೆ. ಕೇಂದ್ರ ಗೃಹ ಸಚಿವರ ನೇರ ಸುಪರ್ದಿಯಲ್ಲಿರುವ ದೆಹಲಿ ಪೊಲೀಸರು ಇಷ್ಟೊಂದು ಅಸಹಾಯಕತೆಯಿಂದ ವರ್ತಿಸುತ್ತಿರುವುದೇಕೆ? ‘ಗುಂಡು ಹಾರಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಜೆಎನ್‌ಯು ಪ್ರಕರಣದ ತನಿಖೆಯ ಗತಿಯನ್ನು ಗಮನಿಸಿದರೆ, ಗೃಹ ಸಚಿವರ ಈ ಹೇಳಿಕೆಯು ಕಾರ್ಯರೂಪಕ್ಕೆ ಇಳಿಯುವ ಬಗ್ಗೆ ಅನುಮಾನ ಮೂಡಬಹುದು.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದೇಶದಾದ್ಯಂತ ಜನಾಂದೋಲನ ಭುಗಿಲೆದ್ದಿರುವ ಸಮಯದಲ್ಲೇ ದೆಹಲಿ ವಿಧಾನಸಭೆ ಚುನಾವಣಾ ಪ್ರಚಾರವೂ ನಡೆದಿದೆ. ಬಿಜೆಪಿ ನಾಯಕರುಪ್ರಚಾರ ಸಭೆಗಳಲ್ಲಿ ಬೆಂಕಿಯುಗುಳುವ ಭಾಷಣ ಮಾಡಿ, ಚುನಾವಣಾ ಆಯೋಗದಿಂದ ಶಿಸ್ತು ಕ್ರಮಕ್ಕೆ ಒಳಗಾಗಿದ್ದಾರೆ. ಇವರ ಹೇಳಿಕೆಗಳುಹಿಂಸೆಯನ್ನು ಪ್ರಚೋದಿಸುತ್ತಿವೆ ಎಂದು ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷದ ನಾಯಕರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲದೇ ಇಲ್ಲ.

ಚುನಾವಣಾ ಪ್ರಚಾರ ಸಭೆಗಳಲ್ಲಿ ಸವಾಲು– ಜವಾಬುಗಳ ಜಟಾಪಟಿ ನಡೆಯುವುದು ಸಹಜ. ಆದರೆ, ಹಿಂಸೆಯನ್ನು ಪ್ರಚೋದಿಸುವಂತಹ ಭಾಷಣಗಳನ್ನು ಒಪ್ಪಲಾಗದು.ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು, ‘ದೇಶದ್ರೋಹಿಗಳಿಗೆ ಗುಂಡಿಕ್ಕಿ’ ಎಂದು ಸಭಿಕರು ಘೋಷಣೆ ಕೂಗುವಂತೆ ಕುಮ್ಮಕ್ಕು ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಸಚಿವರೇ ಹೀಗೆ ಹಿಂಸೆಯನ್ನು ಪ್ರಚೋದಿಸಿ ಭಾಷಣ ಮಾಡಿರುವುದು ಎಳ್ಳಷ್ಟೂ ಸರಿಯಲ್ಲ. ತಮ್ಮ ಸಂಪುಟ ಸಹೋದ್ಯೋಗಿಯ ಇಂತಹ ಪ್ರಚೋದನಕಾರಿ ಉಗ್ರಭಾಷಣಗಳ ಕುರಿತು ಪ್ರಧಾನಿ ಮೌನ ತಳೆದಿರುವುದೇಕೆ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.

ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ದೆಹಲಿ ಹೊರವಲಯದ ಶಾಹೀನ್‌ಬಾಗ್‌ ಪ್ರದೇಶವನ್ನು ಬಿಜೆಪಿಯ ಒಬ್ಬ ಅಭ್ಯರ್ಥಿಯಂತೂ ಮಿನಿ ಪಾಕಿಸ್ತಾನ ಎಂದು ಕರೆದು, ದೆಹಲಿಯ ಚುನಾವಣೆಯನ್ನು ಭಾರತ– ಪಾಕಿಸ್ತಾನದ ನಡುವಣ ಸ್ಪರ್ಧೆ ಎಂದಿದ್ದಾರೆ. ಪ್ರಚೋದನಾತ್ಮಕ ಭಾಷಣ ಮಾಡಿದ್ದಕ್ಕಾಗಿ ಅನುರಾಗ್‌ ಠಾಕೂರ್‌ ಹಾಗೂ ಬಿಜೆಪಿಯ ಸಂಸದ ಪರ್ವೇಶ್‌ ವರ್ಮಾ ಅವರನ್ನುಕೇಂದ್ರ ಚುನಾವಣಾ ಆಯೋಗವು ನಿರ್ದಿಷ್ಟ ಅವಧಿಯವರೆಗೆ ಚುನಾವಣಾ ಪ್ರಚಾರ ಮಾಡುವುದರಿಂದ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಇಂತಹ ಸಂದರ್ಭಗಳಲ್ಲಿ ಚುನಾವಣಾ ಆಯೋಗವು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಪ್ರಚಾರ ಭಾಷಣದ ಮೂಲಕ ಮತದಾರರನ್ನು ಧರ್ಮ ಮತ್ತು ಜಾತಿಗಳ ಆಧಾರದಲ್ಲಿ ವಿಭಜನೆಯಾಗುವಂತೆ ಮಾಡಿ ವೋಟು ಗಳಿಸುವ ತಂತ್ರಗಳು ದೇಶದ ಸಂವಿಧಾನದ ಚೌಕಟ್ಟನ್ನು ಇನ್ನಷ್ಟು ದುರ್ಬಲಗೊಳಿಸಲಿವೆ. ಇಂತಹ ಕೋಮುಪ್ರಚೋದಕ ಭಾಷಣಗಳನ್ನು ಮಾಡುವ ನಾಯಕರು ಯಾವುದೇ ಪಕ್ಷದವರಾಗಿರಲಿ, ಚುನಾವಣಾ ಆಯೋಗವು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪ್ರಚಾರಕ್ಕೆ ನಿರ್ಬಂಧ ವಿಧಿಸುವುದು ಮಾತ್ರವಲ್ಲ, ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಿರ್ಬಂಧ ವಿಧಿಸುವ ಕುರಿತೂ ಆಲೋಚಿಸಬೇಕು. ಚುನಾವಣೆಗಳು ಬರುತ್ತವೆ ಹೋಗುತ್ತವೆ, ಆದರೆ ಅದರ ಹಿನ್ನೆಲೆಯಲ್ಲಿ ಸಮಾಜದ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟಾಗುವುದು ದೇಶದ ಹಿತದೃಷ್ಟಿಯಿಂದ ಖಂಡಿತಾ ಅಪೇಕ್ಷಣೀಯ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT