ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜಾನುವಾರಿಗೆ ಮೇವು– ನೀರು ಕೊರತೆಯಾಗದಂತೆ ನೋಡಿಕೊಳ್ಳಿ

Last Updated 6 ಮೇ 2020, 3:24 IST
ಅಕ್ಷರ ಗಾತ್ರ

ರಾಜ್ಯದಾದ್ಯಂತ ಬಿಸಿಲಿನ ಬೇಗೆ ತೀವ್ರವಾಗಿದೆ. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇನ್ನು ಕೆಲವು ಕಡೆ ಜಾನುವಾರುಗಳಿಗೆ ನೀರು– ಮೇವಿನ ಕೊರತೆ ಉಂಟಾಗಿದೆ. ಮಂಗಳೂರು, ಉಡುಪಿ ಭಾಗದ ಗೋಶಾಲೆಗಳಲ್ಲಿ ಮೇವಿಲ್ಲದ ದಯನೀಯ ಸ್ಥಿತಿ. ಸಮುದಾಯದ ನೆರವಿನೊಂದಿಗೆ ನಡೆಯುತ್ತಿರುವ ಹಲವು ಗೋಶಾಲೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂಬ ಸುದ್ದಿ ಇದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿಧಿಸಿರುವ ‘ದಿಗ್ಬಂಧನ’ದ ಬಿಸಿ ಜನರಿಗಷ್ಟೇ ಅಲ್ಲದೆ ಜಾನುವಾರುಗಳಿಗೂ ತಟ್ಟಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಕಡು ಬೇಸಿಗೆಯ ಕಾರಣ, ಸ್ಥಳೀಯವಾಗಿ ಹಸಿರು ಮೇವು ಹೆಚ್ಚಿಗೆ ಉತ್ಪಾದನೆಯಾಗುತ್ತಿಲ್ಲ. ಮೇವಿನ ಕೊರತೆಯು ಕೆಲವು ಜಿಲ್ಲೆಗಳಲ್ಲಿ ಹೈನುಗಾರಿಕೆ ಮೇಲೆ ಪರಿಣಾಮ ಬೀರಿದೆ. ವಾಹನ ಸಂಚಾರಕ್ಕೆ ನಿರ್ಬಂಧವಿದ್ದುದರಿಂದ ಪಶು ಆಹಾರ ಪೂರೈಕೆಗೂ ಅನನುಕೂಲ ಆಗಿತ್ತು. ಪರಿಣಾಮವಾಗಿ ಕೆಲವೆಡೆ ಪಶು ಆಹಾರಕ್ಕೆ ಬೇಡಿಕೆ ಹೆಚ್ಚಾಗಿ, ಬೆಲೆಯಲ್ಲೂ ಏರಿಕೆಯಾಗಿದೆ.

ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಈ ಬೆಳವಣಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಹಾಲು ನೀಡುವ ಹಸುಗಳಿಗೆ ಅಗತ್ಯವಿರುವಷ್ಟು ಆಹಾರ ನೀಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಮೇವು ಖರೀದಿಸಲು ಸಾಧ್ಯವಾಗದಿದ್ದುದು, ರೈತರ ಸಂಕಷ್ಟವನ್ನು ಹೆಚ್ಚಿಸಿತ್ತು. ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಜಿಲ್ಲೆಗಳ ನಡುವೆ ಸಂಚಾರಕ್ಕೆ ಪಾಸ್ ಲಭ್ಯವಿದ್ದರೂ ಮೇವಿನ ಕೊರತೆ ಮತ್ತು ಅದನ್ನು ಉಚಿತವಾಗಿ ನೀಡುವ ದಾನಿಗಳ ಕೊರತೆಯ ಕಾರಣದಿಂದ, ದಾನಿಗಳ ನೆರವಿನಿಂದಲೇ ನಡೆಯುತ್ತಿರುವ ಗೋಶಾಲೆಗಳಲ್ಲೂ ಮೇವಿನ ಸಮಸ್ಯೆ ಎದುರಾಗಿದೆ. ಉಡುಪಿ ಸಮೀಪ ಮಠವೊಂದು ನಡೆಸುವ ಗೋಶಾಲೆಯಲ್ಲಿ ಇತ್ತೀಚೆಗೆ ಮೇವಿನ ಕೊರತೆ ಉಂಟಾಗಿದ್ದು, ಸಚಿವರೊಬ್ಬರು ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ. ಇದು, ಇತರೆಡೆಯೂ ಜಾನುವಾರುಗಳ ಮೇವಿನ ಸಮಸ್ಯೆಯನ್ನು ಗ್ರಹಿಸಿ ಪರಿಹಾರ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪ್ರೇರಣೆಯಾಗಬೇಕು.

ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಜನರ ಜೀವರಕ್ಷಣೆಗೆ ಸರ್ಕಾರವು ಗಮನ ಕೇಂದ್ರೀಕರಿಸಿದೆ. ಇದು ಅನಿವಾರ್ಯವೂ ಹೌದು. ಅದೇ ರೀತಿ ಜಾನುವಾರುಗಳ ಸುರಕ್ಷೆಗೂ ಆದ್ಯತೆ ನೀಡಬೇಕಿದೆ. ಮನುಷ್ಯನಿಗೆ ಆಹಾರ ಭದ್ರತೆಯ ಅಗತ್ಯ ಇರುವಂತೆ ಜಾನುವಾರುಗಳ ಮೇವಿನ ಭದ್ರತೆ ಕುರಿತೂ ಶಾಶ್ವತ ಕ್ರಮಗಳ ಅಗತ್ಯ ಇರುವುದನ್ನು, ಈ ಕೊರೊನಾ ಸಂಕಷ್ಟದ ಕಾಲಘಟ್ಟ ನಮಗೆ ತಿಳಿಸಿಕೊಟ್ಟಿದೆ. ರಾಜ್ಯದಾದ್ಯಂತ ಸಾಧ್ಯವಿರುವ ಕಡೆ ‘ಮೇವಿನ ಬ್ಯಾಂಕ್‌’ಗಳನ್ನು ಸ್ಥಾಪಿಸಿ, ಮೇವನ್ನು ದಾಸ್ತಾನು ಮಾಡಬೇಕು. ಯಾವ ಕಾಲಕ್ಕೂ ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಹೋಬಳಿ ಮಟ್ಟದಲ್ಲಿ ರಸಮೇವು ಘಟಕಗಳನ್ನು ತೆರೆಯಬೇಕು.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ‘ಕಾವಲ್‌’ಗಳಲ್ಲಿ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಬಹುದು. ಇವೆಲ್ಲ ದೂರಗಾಮಿ ಕ್ರಮಗಳು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾನುವಾರುಗಳಿಗಿರುವ ಮೇವು ಮತ್ತು ನೀರಿನ ಲಭ್ಯತೆ ಬಗ್ಗೆ ವರದಿ ತರಿಸಿಕೊಳ್ಳುವ ಕಾರ್ಯ ತ‌ಕ್ಷಣ ಆಗಬೇಕು. ಗೋಶಾಲೆಗಳನ್ನು ತೆರೆಯುವ ಅಗತ್ಯದ ಬಗ್ಗೆಯೂ ಮಾಹಿತಿ ಪಡೆಯಬೇಕು. ರಾಜ್ಯದಲ್ಲಿರುವ ನೋಂದಾಯಿತ ಗೋಶಾಲೆಗಳಲ್ಲಿ ಮೇವು– ನೀರಿನ ಪರಿಸ್ಥಿತಿಯನ್ನು ಅವಲೋಕಿಸಬೇಕು. ಅಲ್ಲಿನ ಪ್ರತೀ ಜಾನುವಾರು ನಿರ್ವಹಣೆಗಾಗಿ ಸರ್ಕಾರ ಇಂತಿಷ್ಟು ಹಣ ಪೂರೈಸುತ್ತಿದೆ.

ಈ ಹಣ ಸಮರ್ಪಕವಾಗಿ ಬಳಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅಗತ್ಯಬಿದ್ದರೆ ರಾಜ್ಯ ವಿಪತ್ತು ನಿರ್ವಹಣಾ ನಿಧಿ ಬಳಸಿಕೊಂಡು ಜಾನುವಾರು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಈ ಬಾರಿ ಹಿಂಗಾರಿನಲ್ಲಿ ಹಲವೆಡೆ ಉತ್ತಮ ಮಳೆಯಾಗಿರುವುದರಿಂದ ಹಾಗೂ ಹಿಂಗಾರು ಹಂಗಾಮಿನಲ್ಲಿ ಮೇವಿನ ಬಿತ್ತನೆಯಾಗಿರುವುದರಿಂದ ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆಯಾಗದು ಎಂದು ಸರ್ಕಾರ ಅಂದಾಜಿಸಿದೆ. ಆದರೂ ಜಾನುವಾರುಗಳ ಹಿತದೃಷ್ಟಿಯಿಂದ, ಗೋಶಾಲೆ ನಡೆಸುವವರು ತಮ್ಮ ಕಾರ್ಯಚಟುವಟಿಕೆ ವ್ಯಾಪ್ತಿಯ ಜಮೀನಿನಲ್ಲಿ ಮೇವು ಬೆಳೆದುಕೊಳ್ಳಲು ತಕ್ಷಣವೇ ಮೇವಿನ ಬೀಜಗಳನ್ನು ವಿತರಿಸಬೇಕು. ಹೈನುಗಾರಿಕೆನಿರತ ರೈತರಿಗೂ ಮೇವು ಬೆಳೆಯಲು ಉತ್ತೇಜನ ನೀಡಬೇಕು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT