ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ನವೋದ್ಯಮಗಳಿಗೆ ಸರ್ಕಾರದ ನೆರವು– ಆಗಬೇಕಾದ ಕೆಲಸಗಳು ಇನ್ನೂ ಹಲವು

Last Updated 17 ಜನವರಿ 2022, 19:55 IST
ಅಕ್ಷರ ಗಾತ್ರ

ದೇಶದಲ್ಲಿ ಇರುವ ಒಟ್ಟು 54 ಸಾವಿರ ನವೋದ್ಯಮಗಳ ಪೈಕಿ 13 ಸಾವಿರ ನವೋದ್ಯಮಗಳು ಕರ್ನಾಟಕದಲ್ಲಿಯೇ ಇವೆ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿಗೆ ಸೀಮಿತವಾಗಿರುವ ನವೋದ್ಯಮ ಚಟುವಟಿಕೆಗಳನ್ನು ರಾಜ್ಯದ ಇತರ ಕಡೆಗಳಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಭಾನುವಾರ ‘ನವೋದ್ಯಮ ದಿನಾಚರಣೆ’ಯ ಪ್ರಯುಕ್ತ ಘೋಷಣೆಯೊಂದನ್ನು ಮಾಡಿರುವ ಐ.ಟಿ., ಬಿ.ಟಿ. ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಹೆಚ್ಚುವರಿಯಾಗಿ 75 ನವೋದ್ಯಮಗಳಿಗೆ ಮೂಲನಿಧಿಯನ್ನು (ಸೀಡ್‌ ಫಂಡ್‌) ಸರ್ಕಾರದ ಕಡೆಯಿಂದ ನೀಡಲಾಗುವುದು ಎಂದಿದ್ದಾರೆ. ರಾಜ್ಯ ಸರ್ಕಾರವು ಈ ವರ್ಷ, ಹೆಚ್ಚುವರಿ 75 ನವೋದ್ಯಮಗಳು ಸೇರಿದಂತೆ ಒಟ್ಟು 200 ನವೋದ್ಯಮಗಳಿಗೆ ಗರಿಷ್ಠ ತಲಾ ₹ 50 ಲಕ್ಷದವರೆಗೆ ಮೂಲನಿಧಿಯನ್ನು ಒದಗಿಸಲಿದೆ. ನವೋದ್ಯಮ ದಿನದ ಆಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಹೇಳಿರುವ ಮಾತುಗಳು ಹಾಗೂ ಸಚಿವರು ಮಾಡಿರುವ ಘೋಷಣೆ ಸ್ವಾಗತಾರ್ಹ. ರಾಜ್ಯವು ಇದುವರೆಗೆ ಅಂದಾಜು ಐದುನೂರು ನವೋದ್ಯಮಗಳಿಗೆ ಮೂಲನಿಧಿಯನ್ನು ಒದಗಿಸಿದೆ. ನವೋದ್ಯಮ ಆರಂಭಿಸಲು ಬಹಳ ಅಗತ್ಯವಾದ ಇಂತಹ ನೆರವನ್ನು ಒದಗಿಸುವ ವ್ಯವಸ್ಥೆಯು ಬೇರೆ ರಾಜ್ಯಗಳಲ್ಲಿ ಇಲ್ಲ ಎಂದೂ ಸಚಿವರು ಹೇಳಿದ್ದಾರೆ. ಬೆಂಗಳೂರಿಗೆ ಭಾರತದ ನವೋದ್ಯಮಗಳ ರಾಜಧಾನಿ ಎಂಬ ಹೆಗ್ಗಳಿಕೆ ಈಗಾಗಲೇ ದೊರೆತಿದೆ. ಇದನ್ನು ಉಳಿಸಿಕೊಳ್ಳಲು, ನವೋದ್ಯಮಗಳು ಇಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ಜನ್ಮತಾಳುವಂತೆ ಮಾಡಲು ಇಂತಹ ಕ್ರಮಗಳು ಅಗತ್ಯ. ಹಣಕಾಸು ತಂತ್ರಜ್ಞಾನ, ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುವುದು, ಕೃಷಿ, ಇಂಟರ್ನೆಟ್ ಆಫ್ ಥಿಂಗ್ಸ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ನವೋದ್ಯಮಗಳು ಇಲ್ಲಿ ಹುಟ್ಟು ಪಡೆದಿವೆ. ಆದರೆ, ನೀತಿ ನಿರೂಪಕರ ಕಡೆಯಿಂದ ಇಲ್ಲಿ ಆಗಬೇಕಾದ ಕೆಲಸಗಳು ಇನ್ನೂ ಹಲವು ಇವೆ.

ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಕೌಶಲಗಳನ್ನು ತುಂಬಿ, ಅವರು ಒಳ್ಳೆಯ ನೌಕರರು ಆಗುವಂತೆ ಮಾತ್ರ ಮಾಡಬೇಕಾಗಿಲ್ಲ. ಅವರು ಒಳ್ಳೆಯ ಉದ್ಯಮಿಗಳು ಕೂಡ ಆಗುವಂತೆ ಮಾಡಬೇಕು. ಭಾರತದ ಬೇರೆ ಬೇರೆ ಸಮುದಾಯಗಳಿಗೆ ಹೋಲಿಕೆ ಮಾಡಿದರೆ, ಕನ್ನಡನಾಡಿನ ಸಮುದಾಯಗಳಲ್ಲಿ ಉದ್ಯಮಶೀಲತೆಯ ಹಸಿವು ಕಡಿಮೆ ಎಂಬ ಮಾತುಗಳು ಇವೆ. ಈ ಮಾತು ಚರ್ಚಾರ್ಹ ಆಗಿರಬಹುದು. ರಾಜ್ಯದ ಕೆಲವು ಸಮುದಾಯಗಳಲ್ಲಿ ಉದ್ಯಮಶೀಲತೆಯು ಅತ್ಯಂತ ಸ್ಪರ್ಧಾತ್ಮಕವಾಗಿ ಬೆಳೆದಿರಬಹುದು. ಆದರೆ, ಒಟ್ಟಾರೆಯಾಗಿ ಉದ್ಯಮಶೀಲ ಮನೋಭಾವವು ನಮ್ಮಲ್ಲಿ ಕಡಿಮೆ ಎಂಬುದು ಮೇಲ್ನೋಟಕ್ಕೆ ಅರಿವಿಗೆ ಬರುವ ಸತ್ಯ. ಎಲ್ಲರಲ್ಲಿಯೂ ಈ ಮನೋಭಾವ, ಉದ್ಯಮ ಕಟ್ಟುವ ಛಲ ಮೂಡುವಂತೆ ಮಾಡುವಲ್ಲಿ ಶಿಕ್ಷಣವು ಮಹತ್ವದ ಪಾತ್ರವನ್ನು ವಹಿಸಬಹುದು. ಅದು ಸಾಧ್ಯವಾಗಬೇಕು ಎಂದಾದರೆ ನೀತಿ ನಿರೂಪಕರ ಕಡೆಯಿಂದ ಇನ್ನಷ್ಟು ಒತ್ತಾಸೆ ಸಿಗಬೇಕು. ಜಗತ್ತಿನಲ್ಲಿ ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳು, ಉದ್ಯಮಶೀಲತೆಗೆ ಒತ್ತಾಸೆ ನೀಡಿದ್ದರಿಂದ ಮತ್ತು ತಂತ್ರಜ್ಞಾನದ ವ್ಯಾ‍ಪಕ ಬಳಕೆಯ ಕಾರಣದಿಂದಾಗಿ ‘ಮುಂದುವರಿದ’ ಎಂಬ ಹಿರಿಮೆಗೆ ಪಾತ್ರವಾಗಿವೆ. ಉದ್ಯಮಗಳಿಗೆ ನೆಲೆ ಒದಗಿಸಿದ ಪ್ರದೇಶಗಳು ಆರ್ಥಿಕವಾಗಿ ಬೆಳೆದಿವೆ. ನವೋದ್ಯಮಗಳಿಗೆ ಮೂಲನಿಧಿಯನ್ನು ಒದಗಿಸುವುದರ ಜೊತೆಯಲ್ಲೇ, ಮುಂದೆ ಅವು ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಲ್ಲಲು ಪೂರಕವಾದ ವಾತಾವರಣವನ್ನೂ ಸೃಷ್ಟಿಸಬೇಕು. ಅದು ಸರ್ಕಾರಗಳಿಂದ ಮಾತ್ರ ಸಾಧ್ಯವಾಗುವ ಕೆಲಸ.

ರಾಜ್ಯದಲ್ಲಿ ಐ.ಟಿ. ಹಾಗೂ ಬಿ.ಟಿ. ಉದ್ದಿಮೆಗಳು ಬೆಂಗಳೂರಿನ ಆಚೆಯೂ ದೊಡ್ಡ ಪ್ರಮಾಣದಲ್ಲಿ ನೆಲೆ ಕಂಡುಕೊಳ್ಳುವಂತೆ ಮಾಡಲಾಗುವುದು ಎನ್ನುವ ಮಾತನ್ನು ಸರ್ಕಾರದಲ್ಲಿ ಇರುವವರು ವರ್ಷಗಳಿಂದ ಹೇಳುತ್ತ ಬಂದಿದ್ದಾರೆ. ಆದರೆ, ಐ.ಟಿ. ಉದ್ದಿಮೆಯು ಮೈಸೂರು, ಮಂಗಳೂರು ಹೊರತುಪಡಿಸಿದರೆ ಬೆಂಗಳೂರಿನ ಆಚೆ ದೊಡ್ಡ ಮಟ್ಟದಲ್ಲಿ ಬೆಳೆದಿಲ್ಲ. ಲಕ್ಷಗಳ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ಐ.ಟಿ. ಉದ್ಯಮದಲ್ಲಿ ಉದ್ಯೋಗ ಬಯಸುವವರು ಬೆಂಗಳೂರಿಗೇ ಬರಬೇಕಿದೆ. ಈ ಹಿನ್ನೆಲೆಯಲ್ಲಿ, ‘ನವೋದ್ಯಮಗಳು ರಾಜ್ಯದ ಇತರ ಕಡೆಗಳಲ್ಲಿಯೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂಬ ಮಾತು ಕಾರ್ಯರೂಪಕ್ಕೆ ಬರುವುದು ಯಾವಾಗ ಎಂಬ ಪ್ರಶ್ನೆ ಖಂಡಿತ ಮೂಡುತ್ತದೆ. ಕೋವಿಡ್‌–19 ನಂತರದಲ್ಲಿ ಮನೆಯಿಂದಲೇ ಕೆಲಸ ಮಾಡುವ ಅಥವಾ ಇಂಟರ್ನೆಟ್ ಲಭ್ಯವಿರುವ ಎಲ್ಲಿಂದಲಾದರೂ ಕೆಲಸ ಮಾಡುವ ಸಂಸ್ಕೃತಿ ವ್ಯಾಪಕವಾಗಿ ಬೆಳೆದಿದೆ. ಅಷ್ಟೇ ಅಲ್ಲ, ಕೆಲಸದ ಈ ಹೊಸ ಸಂಸ್ಕೃತಿಯು ಪರಿಣಾಮಕಾರಿಯೂ ಆಗಿದೆ. ಈ ಪರಿಸ್ಥಿತಿಯನ್ನು ಬಳಸಿಕೊಂಡು, ನವೋದ್ಯಮಗಳ ಬೇರುಗಳು ರಾಜ್ಯದ ಎಲ್ಲ ಕಡೆಗಳಲ್ಲಿಯೂ ವಿಸ್ತರಿಸುವಂತೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಸರ್ಕಾರ ಗಮನ ನೀಡಬೇಕು. ಉದ್ಯಮ ಮತ್ತು ಅಲ್ಲಿನ ಉದ್ಯೋಗಿಗಳು ರಾಜ್ಯದ ಎಲ್ಲ ಪ್ರದೇಶಗಳಲ್ಲಿ ನೆಲೆ ಕಂಡುಕೊಂಡರೆ, ಅಲ್ಲೆಲ್ಲ ಹಣದ ಚಲಾವಣೆ ಸಹಜವಾಗಿಯೇ ಹೆಚ್ಚುತ್ತದೆ. ಅದು ನೇರವಾಗಿ ಅಭಿವೃದ್ಧಿಗೆ ನೆರವಾಗುತ್ತದೆ. ಇದನ್ನು ಸಾಧ್ಯವಾಗಿಸುವುದು ಕೂಡ ಸರ್ಕಾರದಿಂದ ಮಾತ್ರ ಆಗುವ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT