ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಕಡತಗಳ ‘ಬೆಟ್ಟ’ ಕರಗಿಸಿ ಆಡಳಿತಕ್ಕೆ ಚುರುಕು ಮುಟ್ಟಿಸಿ

Last Updated 24 ಫೆಬ್ರುವರಿ 2020, 19:31 IST
ಅಕ್ಷರ ಗಾತ್ರ

ಕಡತಗಳು ತ್ವರಿತವಾಗಿ ವಿಲೇವಾರಿ ಆಗುತ್ತಿವೆ ಎನ್ನುವುದು ಸರ್ಕಾರದ ಆಡಳಿತಯಂತ್ರ ಸಕ್ರಿಯವಾಗಿದೆ ಎನ್ನುವುದರ ಸಂಕೇತ. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಮುಖ್ಯಮಂತ್ರಿ ಮತ್ತು ವಿವಿಧ ಸಚಿವರ ಹಂತದಲ್ಲಿ ಒಟ್ಟು 1,07,971 ಕಡತಗಳು ವಿಲೇವಾರಿಯಾಗದೇ ಉಳಿದಿವೆ ಎಂಬ ಆಘಾತಕಾರಿ ಅಂಶವು ಆಡಳಿತ ವ್ಯವಸ್ಥೆ ಜಡವಾಗಿರುವುದರ ದ್ಯೋತಕ. ಅದರಲ್ಲೂ ಲೋಕೋಪಯೋಗಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಕಂದಾಯ, ನಗರಾಭಿವೃದ್ಧಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ ಮುಂತಾದ ಪ್ರಮುಖ ಇಲಾಖೆಗಳಲ್ಲೇ ಕಡತದ ‘ಬೆಟ್ಟ’ಗಳು ಬೆಳೆದಿವೆ ಎನ್ನುವುದು ಸರ್ಕಾರದ ಅಸೀಮ ನಿರ್ಲಕ್ಷ್ಯಕ್ಕೆ ನಿದರ್ಶನ. ಜೆ.ಎಚ್‌.ಪಟೇಲರು ಯಾವಾಗಲೂ ಹೇಳುತ್ತಿದ್ದ ಮಾತು– ‘ಸರ್ಕಾರದ ಆಡಳಿತದ ಯಶಸ್ಸು ಇಲಾಖೆಗಳ ಕಡತ ವಿಲೇವಾರಿಯಲ್ಲಿ ಅಡಗಿದೆ’. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದರೂ ಆಡಳಿತ ಇನ್ನೂ ಚುರುಕಾಗಿಲ್ಲ ಎಂಬುದನ್ನು ಕಡತ ವಿಲೇವಾರಿಯಲ್ಲಿನ ವಿಳಂಬ ಸಾರಿ ಸಾರಿ ಹೇಳುತ್ತಿದೆ.

ಆಡಳಿತದ ಮೂಲ ಸ್ಥಾನದಲ್ಲೇ ಈ ರೀತಿ ಗಂಭೀರ ಸಮಸ್ಯೆ ಇದೆ ಎಂದಾದರೆ, ಇನ್ನು ಕೆಳ ಹಂತಗಳಲ್ಲಿ ಯಾವ ರೀತಿ ಇರಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದು. ರಾಜ್ಯದ ನಾಗರಿಕರಿಗೆ ಸರ್ಕಾರಿ ಸೇವೆಯನ್ನು ವಿಳಂಬ ಇಲ್ಲದೆ ಕಾಲಮಿತಿ ಒಳಗೆ ಒದಗಿಸುವ ದೃಷ್ಟಿಯಿಂದ ಸರ್ಕಾರವು 2012ರಲ್ಲಿ ಸಕಾಲ ಯೋಜನೆಯನ್ನು ಜಾರಿಗೆ ತಂದಿತು. ಬಹುತೇಕ ಸರ್ಕಾರಿ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತಂದಿರುವುದರಿಂದ ತ್ವರಿತಗತಿಯಲ್ಲಿ ಜನರಿಗೆ ಸೇವೆ ಸಿಗುತ್ತಿದೆ ಎಂದೇ ನಂಬಲಾಗಿತ್ತು. ಆದರೆ, ಅದು ಕೂಡ ಈಗ ಹುಸಿಯಾಗಿದೆ. ‘ಇಂದು, ನಾಳೆ... ಇನ್ನಿಲ್ಲ... ಹೇಳಿದ ದಿನ ತಪ್ಪೊಲ್ಲ...’ ಎಂಬ ಅದರ ಧ್ಯೇಯವೇ ಹಳಿ ತಪ್ಪಿದೆ. ನೀವು ಯಾವುದೇ ಇಲಾಖೆಯ ಕಚೇರಿಗೆ ಹೋಗಿ, ಮೊದಲು ಕೇಳಿಬರುವ ಮಾತು ‘ಸರ್ವರ್ ಡೌನ್’. ಇ–ಆಡಳಿತ ಬಂದು ಇಷ್ಟು ವರ್ಷಗಳಾದರೂ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸರ್ಕಾರಕ್ಕೆ ಆಗಿಲ್ಲ. ಪೆಡಂಭೂತದಂತೆ ಕಾಡುತ್ತಿರುವ ‘ಸರ್ವರ್ ಡೌನ್’ ಸಮಸ್ಯೆ ನಿವಾರಿಸಿಕೊಳ್ಳದಿದ್ದರೆ, ತಂತ್ರಜ್ಞಾನ ಕುರಿತಂತೆ ಸರ್ಕಾರ ಆಡುವ ಮಾತು ಅರ್ಥಹೀನ ಎನ್ನಿಸಿಕೊಳ್ಳುತ್ತದೆ.

ಕಡತಗಳ ವಿಲೇವಾರಿಯಲ್ಲಿನ ವಿಳಂಬಕ್ಕೂ ಭ್ರಷ್ಟಾಚಾರಕ್ಕೂ ನೇರ ಸಂಬಂಧ ಇದೆ. ಜನರಲ್ಲಿ ಹತಾಶೆಯ ಮನೋಭಾವ ಸೃಷ್ಟಿಯಾಗುವಂತೆ ಮಾಡಿ, ಲಂಚ ಕೊಡಲೇಬೇಕಾದ ಪರಿಸ್ಥಿತಿಗೆ ದೂಡುವುದನ್ನೇ ಕೆಲವು ಅಧಿಕಾರಿಗಳು ರೂಢಿಸಿಕೊಂಡಿದ್ದಾರೆ. ಈ ಮಧ್ಯೆ, ಸಚಿವಾಲಯದಲ್ಲಿ ರಾಜಕೀಯ ಹಸ್ತಕ್ಷೇಪ ವಿ‍ಪರೀತವಾಗಿದೆ ಎಂಬುದನ್ನು ರಾಜಕೀಯ ಮುಖಂಡರೇ ಒಪ್ಪುತ್ತಾರೆ. ಕಡತಗಳು ಬೆಟ್ಟದಂತೆ ಬೆಳೆಯಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಬ್ಬರೂ ಕಾರಣ ಎನ್ನುವುದು ಸ್ಪಷ್ಟ.

ಸ್ವಾರ್ಥ ಮರೆತು ಜನರ ಒಳಿತಿಗಾಗಿ ಕೆಲಸ ಮಾಡದಿದ್ದರೆ ಆಡಳಿತದ ಬಗ್ಗೆ ಜನ ಹೇಗೆ ನಂಬಿಕೆ ಇಟ್ಟುಕೊಳ್ಳುತ್ತಾರೆ? ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿಗಳ ಬಹುತೇಕ ಸೇವೆಗಳನ್ನು ಸಕಾಲದ ಅಡಿ ಈಗಾಗಲೇ ತರಲಾಗಿದೆ. ಹಾಗಿದ್ದರೂ ಸಚಿವಾಲಯವನ್ನು ಅದರಿಂದ ಹೊರಗಿಟ್ಟಿರುವುದೇಕೆ ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಅಧಿಕಾರಿ ವರ್ಗದ ವಿರೋಧ ಇದೆ; ಶಿಷ್ಟಾಚಾರಕ್ಕೆ ಕಟ್ಟುಬೀಳುವ ಪರಿಣಾಮವಾಗಿ ನಿರ್ದಿಷ್ಟ ಸಮಯದಲ್ಲಿ ಕಡತ ವಿಲೇವಾರಿ ಆಗುತ್ತಿಲ್ಲ ಎಂದಿದ್ದಾರೆ ಸಕಾಲ ಯೋಜನೆಯ ಮೇಲುಸ್ತುವಾರಿಯನ್ನೂ ಹೊಂದಿರುವ ಸಚಿವ ಎಸ್‌. ಸುರೇಶ್‌ ಕುಮಾರ್. ವಿಪರೀತ ಶಿಷ್ಟಾಚಾರ ಸೃಷ್ಟಿಸಿದವರು ಯಾರು? ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಸಚಿವಾಲಯವನ್ನೂ ಸಕಾಲದಡಿ ತಂದರೆ, ಈ ಕಡತಗಳ ರಾಶಿಯನ್ನು ಕರಗಿಸಬಹುದು.
ಇಲ್ಲದಿದ್ದರೆ ಈ ರಾಶಿ ಇನ್ನಷ್ಟು ವಿಕಾರವಾಗಿ ಬೆಳೆದು, ಆಡಳಿತ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುವ ಅಪಾಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT