ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಹಿರಿಮೆ ಉಳಿಸುವ ಸಂಕಲ್ಪ ಅಗತ್ಯ

Last Updated 20 ಜನವರಿ 2020, 19:45 IST
ಅಕ್ಷರ ಗಾತ್ರ

ವಿಶ್ವದ 130 ‘ಅತ್ಯಂತ ಕ್ರಿಯಾಶೀಲ ನಗರ’ಗಳ ಪಟ್ಟಿಯಲ್ಲಿ ಹೈದರಾಬಾದ್‌ ಮತ್ತು ಬೆಂಗಳೂರು ಮೊದಲ ಎರಡು ಸ್ಥಾನ ಗಳಿಸಿರುವುದು ದೇಶಕ್ಕೇ ಹೆಮ್ಮೆ ತಂದಿದೆ. ಅಮೆರಿಕ ಮೂಲದ ಜೋನ್ಸ್‌ ಲೆಂಗ್‌ ಲೆಸ್ಯಾಲ್‌ (ಜೆಎಲ್‌ಎಲ್‌) ಈಚೆಗೆ ಪ್ರಕಟಿಸಿರುವ ‘ಅತ್ಯಂತ ಕ್ರಿಯಾಶೀಲ ನಗರ’ಗಳ ಪಟ್ಟಿಯ ‘ಅಗ್ರ 20’ರಲ್ಲಿ ಭಾರತದ ಏಳು ಮಹಾನಗರಗಳು ಸ್ಥಾನ ಪಡೆದಿವೆ.

ಚೆನ್ನೈ, ದೆಹಲಿ ಮತ್ತು ಪುಣೆ ಕ್ರಮವಾಗಿ 5, 6 ಮತ್ತು 12ನೇ ಸ್ಥಾನ ಪಡೆದಿವೆ. ಕೋಲ್ಕತ್ತ 16ನೇ ಸ್ಥಾನ ಮತ್ತು ಮುಂಬೈ 20ನೇ ಸ್ಥಾನ ಗಳಿಸಿರುವುದು ಗಮನಾರ್ಹ. ದೇಶದ ಒಟ್ಟಾರೆ ಆರ್ಥಿಕ ವೃದ್ಧಿ ದರ ಕುಸಿತದ ಹೊರತಾಗಿಯೂ ಈ ಮಹಾನಗರಗಳು ಸಾಮಾಜಿಕ– ಆರ್ಥಿಕ ಸೂಚ್ಯಂಕದಲ್ಲಿ ಮುನ್ನಡೆ ಸಾಧಿಸಿವೆ ಎನ್ನುವುದು ಭರವಸೆ ಹುಟ್ಟಿಸುವಂತಿದೆ.

ಪ್ರತಿಭಾವಂತರ ಲಭ್ಯತೆ, ಸಂಶೋಧನಾ ಕೇಂದ್ರಗಳ ವಿಸ್ತರಣೆ, ಉತ್ತಮ ನಗರ ಅಭಿವೃದ್ಧಿ ಯೋಜನೆ, ವಾಣಿಜ್ಯ ಉದ್ದೇಶದ ರಿಯಲ್‌ ಎಸ್ಟೇಟ್‌ ವೃದ್ಧಿ ಮತ್ತಿತರ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಜೆಎಲ್ಎಲ್‌ ಸಂಸ್ಥೆಯು ನಗರ ವೃದ್ಧಿ ವೇಗ ಸೂಚ್ಯಂಕ ಪಟ್ಟಿಯನ್ನು ಸಿದ್ಧಪಡಿಸಿದೆ.

ಹೈದರಾಬಾದ್‌ ನಗರವು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಗಮನಾರ್ಹ ಮುನ್ನಡೆಯನ್ನು ಸಾಧಿಸಿರುವುದು ಎದ್ದು ಕಾಣುವ ಅಂಶ. ಕಳೆದ ವರ್ಷ ಜೆಎಲ್‌ಎಲ್‌ ಪ್ರಕಟಿಸಿದ ‘ಅತ್ಯಂತ ಕ್ರಿಯಾಶೀಲ ನಗರ’ಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದು, ಹೈದರಾಬಾದ್‌ ನಗರವನ್ನು ಎರಡನೇ ಸ್ಥಾನಕ್ಕೆ ತಳ್ಳಿತ್ತು. ಅದಕ್ಕೂ ಹಿಂದಿನ ವರ್ಷ ಹೈದರಾಬಾದ್‌ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಎರಡನೇ ಸ್ಥಾನದಲ್ಲಿತ್ತು. ಮೊದಲ ಎರಡು ಸ್ಥಾನಗಳಿಗೆ ಈ ನಗರಗಳು ಪೈಪೋಟಿ ನಡೆಸುತ್ತಿರುವುದು ಕುತೂಹಲಕರ.

2019ರಲ್ಲಿ ವಿಶ್ವದ ಅತ್ಯುತ್ತಮ ಕಂಪನಿಗಳು ಹೈದರಾಬಾದ್‌ನಲ್ಲಿ ಕಚೇರಿಯನ್ನು ಹೊಂದಲು ಹೆಚ್ಚು ಆಸಕ್ತಿ ತಳೆದಿವೆ. ತಂತ್ರಜ್ಞಾನ ಆಧಾರಿತ ಆರ್ಥಿಕ ವೃದ್ಧಿಯ ವೇಗದಲ್ಲಿ ಮುಂದಿರುವ ಹೈದರಾಬಾದ್‌, ಸಹಜವಾಗಿಯೇ ವಿಶ್ವದ ದೈತ್ಯ ತಂತ್ರಜ್ಞಾನ ಕಂಪನಿಗಳು ಮತ್ತು ಇ–ವಾಣಿಜ್ಯ ಸಂಸ್ಥೆಗಳನ್ನು ಆಕರ್ಷಿಸುವಲ್ಲಿ ಬೆಂಗಳೂರನ್ನು ಹಿಂದಿಕ್ಕಿದೆ.

‘ತೆಲಂಗಾಣ ಸರ್ಕಾರದ ಉದ್ಯಮಸ್ನೇಹಿ ನೀತಿಗಳು ಮತ್ತು ಗುಣಮಟ್ಟದ ಮೂಲಸೌಕರ್ಯ ವ್ಯವಸ್ಥೆ ಈ ಯಶಸ್ಸಿಗೆ ಮುಖ್ಯ ಕಾರಣ’ ಎಂದು ಜೆಎಲ್‌ಎಲ್‌ ಸಂಸ್ಥೆಯ ಸಿಇಒ ರಮೇಶ್‌ ನಾಯರ್‌ ಅವರು ತಿಳಿಸಿರುವುದನ್ನು ಕರ್ನಾಟಕ ಸರ್ಕಾರ ಗಮನಿಸಬೇಕಿದೆ.

ತಂತ್ರಜ್ಞಾನ ಕಂಪನಿಗಳ ವಿಸ್ತರಣೆ ಮತ್ತು ಸ್ಟಾರ್ಟ್‌ಅಪ್‌ ಉದ್ಯಮ ಸಂಸ್ಕೃತಿಯನ್ನು ರೂಪಿಸುವ ನಿಟ್ಟಿನಲ್ಲಿ ಹೈದರಾಬಾದ್‌ ಮತ್ತು ಬೆಂಗಳೂರು ಜೊತೆಜೊತೆಯಾಗಿಯೇ ಹೆಜ್ಜೆ ಇಡುತ್ತಿವೆ ಎನ್ನುವುದು ಸ್ಪಷ್ಟ. ಹೈದರಾಬಾದ್‌ಗಿಂತ ಬೆಂಗಳೂರಿನ ಜನಸಂಖ್ಯೆ ತುಸು ಹೆಚ್ಚು. ಹಾಗೆ ನೋಡಿದರೆ, ಬೆಂಗಳೂರು ನಗರ ಇವತ್ತಿಗೂ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ 20ರಿಂದ 40 ವರ್ಷ ವಯೋಮಾನದ ಕುಶಲ ಕೆಲಸಗಾರರನ್ನು ಹೊಂದಿದೆ. ಇದರ ಹೊರತಾಗಿಯೂ ಗುಣಮಟ್ಟದ ಮೂಲಸೌಕರ್ಯಗಳನ್ನು ವಿಸ್ತರಿಸುವಲ್ಲಿ ಬೆಂಗಳೂರು ಹೆಜ್ಜೆ ತಪ್ಪಿದೆ ಎನ್ನುವುದು ಮೇಲ್ನೋಟಕ್ಕೇ ಎದ್ದು ಕಾಣುತ್ತಿದೆ.

ಮುಖ್ಯವಾಗಿ ಸಂಚಾರ ದಟ್ಟಣೆಯನ್ನು ನಿರ್ವಹಿಸುವಲ್ಲಿ ಬೆಂಗಳೂರು ಹೆಚ್ಚು ದಕ್ಷತೆ ತೋರಬೇಕಿದೆ. ನಗರದ ಎಲ್ಲ ತುದಿಗಳನ್ನು ತಲುಪುವಂತೆ ಮೆಟ್ರೊ ರೈಲು ಸಂಚಾರವನ್ನು ವಿಸ್ತರಿಸಲು ಬೆಂಗಳೂರು ಇನ್ನೂ ಏದುಸಿರು ಬಿಡುತ್ತಿದೆ. ನಗರದ ಕಸ ನಿರ್ವಹಣೆಯ ಗೋಳು ಮುಗಿದಿಲ್ಲ. ಹೈದರಾಬಾದ್‌ ಈಗ ‘ನಂಬರ್‌ ಒನ್‌’ ಸ್ಥಾನವನ್ನು ಗಳಿಸುವಲ್ಲಿ ತೆಲಂಗಾಣ ಸರ್ಕಾರದ ಯೋಜನಾಬದ್ಧ ಅಭಿವೃದ್ಧಿ ಕಾರ್ಯಾನುಷ್ಠಾನ ಮುಖ್ಯ ಪಾತ್ರ ವಹಿಸಿದೆ.

ಆಂಧ್ರಪ್ರದೇಶ ವಿಭಜನೆಯಾಗಿ ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ಹೈದರಾಬಾದಿನ ಅಭಿವೃದ್ಧಿಯ ವೇಗದ ಕುರಿತು ಹಲವು ಶಂಕೆಗಳು ಮೂಡಿದ್ದವು. 2015ರಲ್ಲಿವಿಶ್ವದ ‘ಅತ್ಯಂತ ಕ್ರಿಯಾಶೀಲ ನಗರ’ಗಳ ಪಟ್ಟಿಯಲ್ಲಿ 20ರ ಒಳಗಿನ ಸ್ಥಾನ ಗಳಿಸಿದ್ದ ಹೈದರಾಬಾದ್‌, ಮರುವರ್ಷವೇ ಐದನೇ ಸ್ಥಾನಕ್ಕೆ ಏರಿತ್ತು. 2018ರಲ್ಲಿ ಪ್ರಕಟವಾದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಈಗ ಮತ್ತೆ ಅಗ್ರಸ್ಥಾನ ಅದರ ಪಾಲಾಗಿದೆಯೆಂದರೆ, ಅದರ ಬೆಳವಣಿಗೆಯ ವೇಗವನ್ನು ಊಹಿಸಬಹುದು.

ಹೈದರಾಬಾದ್‌ನಲ್ಲಿ ವರ್ಷದ ನಾಲ್ಕು ತಿಂಗಳಲ್ಲಿ ಇರುವ ಅತ್ಯಧಿಕ ಬಿಸಿಲಿನ ವಾತಾವರಣಕ್ಕೆ ಹೋಲಿಸಿದರೆ ಬೆಂಗಳೂರಿನ ಹವಾಮಾನ ಹೆಚ್ಚು ಹಿತಕರ. ಆದರೆ ಇತ್ತೀಚಿನ ರಾಜಕೀಯ ಅಸ್ಥಿರತೆಯು ನಗರದ ಸಮಗ್ರ ಅಭಿವೃದ್ಧಿಗೆ ಅಡ್ಡಗಾಲಾಗಿರುವುದು ಸ್ಪಷ್ಟ. ರಾಜಕೀಯ ಮೇಲಾಟವನ್ನು ಕೊನೆಗೊಳಿಸಿ, ದಕ್ಷ ಆಡಳಿತ ನೀಡುವತ್ತ ಸರ್ಕಾರ ತುರ್ತು ಗಮನ ಹರಿಸಬೇಕಾದ ಅಗತ್ಯವಿದೆ ಎನ್ನುವುದನ್ನೂ ‘ಕ್ರಿಯಾಶೀಲ ನಗರ’ಗಳ ಪಟ್ಟಿ ನೆನಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT