ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ನೌಕಾಪಡೆಯ ಮಾಜಿ ಅಧಿಕಾರಿಗಳ ಬಿಡುಗಡೆ: ರಾಜತಾಂತ್ರಿಕತೆಗೆ ಸಿಕ್ಕ ಜಯ

Published : 14 ಫೆಬ್ರುವರಿ 2024, 0:30 IST
Last Updated : 14 ಫೆಬ್ರುವರಿ 2024, 0:30 IST
ಫಾಲೋ ಮಾಡಿ
Comments

ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಭಾರತವು ಎಚ್ಚರ ವಹಿಸಬೇಕಾದ ಅಗತ್ಯ ಇದೆ

ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳನ್ನು ಕತಾರ್‌ನ ಸೆರೆಮನೆಯಿಂದ ಬಿಡುಗಡೆ ಮಾಡಿರುವುದು ಸದ್ದುಗದ್ದಲವಿಲ್ಲದೆ ನಡೆಸಿದ ರಾಜತಾಂತ್ರಿಕ ಪ್ರಯತ್ನಕ್ಕೆ ಸಿಕ್ಕ ಗೆಲುವು. ಬೇಹುಗಾರಿಕೆ ನಡೆಸಿದ ಪ್ರಕರಣ ದಲ್ಲಿ ಇವರೆಲ್ಲರಿಗೆ ಶಿಕ್ಷೆ ವಿಧಿಸಲಾಗಿತ್ತು. ಸೆರೆಯಲ್ಲಿದ್ದವರ ಪೈಕಿ ಏಳು ಮಂದಿ ಈ ತಿಂಗಳ 12ರಂದು ಭಾರತಕ್ಕೆ ಬಂದಿದ್ದಾರೆ. ಆದರೆ, ಈ ಎಲ್ಲರೂ ಕೆಲಸ ಮಾಡುತ್ತಿದ್ದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಗಿದ್ದ ಎಂಟನೇ ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳೇನೂ ಬಹಿರಂಗವಾಗಿಲ್ಲ. ಎರಡೂ ಕಡೆಯ ಉನ್ನತ ಮಟ್ಟದ ವ್ಯಕ್ತಿಗಳು ನಡೆಸಿದ ಸಂಧಾನದ ಫಲವಾಗಿ ಈ ಬಿಡುಗಡೆ ಸಾಧ್ಯವಾಗಿದೆ ಎಂಬುದರಲ್ಲಿ ಅನುಮಾನವೇನೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕತಾರ್‌ನ ದೊರೆ ಶೇಖ್‌ ತಮೀಮ್‌ ಬಿನ್‌ ಹಮ್ಮದ್‌ ಅಲ್‌ ಥಾಣಿ ಅವರನ್ನು ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ ಡಿಸೆಂಬರ್‌ನಲ್ಲಿ ಭೇಟಿಯಾಗಿದ್ದು ಈ ಬಿಡುಗಡೆಯಲ್ಲಿ ಮಹತ್ವದ ಪಾತ್ರ ವಹಿಸಿದಂತಿದೆ. ಕತಾರ್‌ನ ವಿಚಾರಣಾ ನ್ಯಾಯಾಲಯವು ಭಾರತದ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಸುದ್ದಿ ಕೆಲವು ವಾರಗಳ ಹಿಂದೆ ಪ‍್ರಕಟವಾದಾಗ ಸರ್ಕಾರವು ‘ಆಘಾತ’ ವ್ಯಕ್ತಪಡಿಸಿತ್ತು. ಆದರೆ, ನಾಯಕರಿಬ್ಬರ ಭೇಟಿಯ ಬಳಿಕ, ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಮರಣದಂಡನೆಯನ್ನು ರದ್ದು ಮಾಡಿ, ವಿವಿಧ ಪ್ರಮಾಣದ ಶಿಕ್ಷೆಯನ್ನು ಅವರಿಗೆ ವಿಧಿಸಿತ್ತು. ಈ ಕುತೂಹಲಕರ ಪ್ರಕರಣದಲ್ಲಿ ಕತಾರ್‌ ದೇಶವು ತನ್ನ ನಿಲುವನ್ನು ಸೌಮ್ಯಗೊಳಿಸಿದ್ದರ ಮೊದಲ ಸೂಚನೆ ಅದಾಗಿತ್ತು.

2022ರ ಆಗಸ್ಟ್‌ನಲ್ಲಿ ಬಂಧನಕ್ಕೆ ಒಳಗಾದ ಬಳಿಕ ಈ ಎಂಟು ಮಂದಿ ಆಂತರಿಕ ಭದ್ರತಾ ಸಂಸ್ಥೆಯೊಂದರ ವಶದಲ್ಲಿ ಪ್ರತ್ಯೇಕವಾಗಿ ಸೆರೆಯಲ್ಲಿದ್ದರು. ಕಳೆದ ಮಾರ್ಚ್‌ನಲ್ಲಿ ವಿಚಾರಣೆ ಆರಂಭವಾಗುವ ತನಕ ಇದು ಮುಂದುವರಿದಿತ್ತು. ಭಾರತ ಸರ್ಕಾರವು ಈ ಪ್ರಕರಣದ ಆರಂಭದ ವಾರಗಳಲ್ಲಿ ತಟಸ್ಥವಾಗಿಯೇ ಇತ್ತು. ಈ ಎಲ್ಲರೂ ನೌಕಾಪಡೆಯ ಮಾಜಿ ಅಧಿಕಾರಿ ಗಳಾಗಿದ್ದು ತಮ್ಮ ಕೆಲಸದ ಮೂಲಕ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳಲು ಶ್ರಮಿಸಿದ್ದರು. ಕತಾರ್‌ ನೌಕಾಪಡೆಯ ಸಲಕರಣೆಗಳ ನಿರ್ವಹಣೆ ಮತ್ತು ಯೋಧರ ತರಬೇತಿಯಲ್ಲಿ ಇವರು ಭಾಗಿಯಾಗಿದ್ದರು. ಹೀಗಾಗಿಯೇ ಸರ್ಕಾರದ ತಟಸ್ಥ ಧೋರಣೆಯು ದೊಡ್ಡ ಪ್ರಶ್ನೆಯಾಗಿ ಕಾಡಿತ್ತು. ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದ ವ್ಯಕ್ತಿಗೆ 2019ರಲ್ಲಿ ‘ಪ್ರವಾಸಿ ಭಾರತ ಸಮ್ಮಾನ’ ನೀಡಿ ಪುರಸ್ಕರಿಸಲಾಗಿತ್ತು. ಈ ಗೌರವಕ್ಕೆ ಪಾತ್ರರಾದ ಮೊದಲ ಮಾಜಿ ಸೇನಾಧಿಕಾರಿ ಅವರಾಗಿದ್ದರು. ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪವಾಯಿತು, ಕುಟುಂಬದ ಸದಸ್ಯರು ಮತ್ತು ನಿವೃತ್ತ ಸೈನಿಕರ ಸಂಘಟನೆಗಳವರು ಸರ್ಕಾರದ ಮೇಲೆ ಒತ್ತಡ ತರಲಾರಂಭಿಸಿದರು. ಆ ಬಳಿಕವೇ ಸರ್ಕಾರ ಈ ಪ್ರಕರಣದಲ್ಲಿ ಆಸಕ್ತಿ ತಳೆಯಿತು. 

ವಿಚಾರಣೆಯು ಆರಂಭವಾದ ಬಳಿಕ, ಕಾನೂನು ಹೋರಾಟದ ವೆಚ್ಚವನ್ನು ಸರ್ಕಾರ ಭರಿಸಿತು. ಜೈಲಿನಲ್ಲಿದ್ದ ವ್ಯಕ್ತಿಗಳನ್ನು ಭೇಟಿಯಾಗುವುದಕ್ಕಾಗಿ ಕುಟುಂಬದ ಸದಸ್ಯರು ಅಲ್ಲಿಗೆ ಹೋಗುವುದಕ್ಕೆ ವ್ಯವಸ್ಥೆಯನ್ನೂ ಮಾಡಲಾಯಿತು. ಭಾರತವು ನೈಸರ್ಗಿಕ ಅನಿಲ ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ದೇಶಗಳಲ್ಲಿ ಕತಾರ್‌ ಕೂಡ ಒಂದು. 2028ರಿಂದ 2048ರವರೆಗೆ 20 ವರ್ಷ ನೈಸರ್ಗಿಕ ಅನಿಲ ಪೂರೈಕೆಯ ಒಪ್ಪಂದವನ್ನು ಕತಾರ್ ಜೊತೆಗೆ ಭಾರತ ಮಾಡಿಕೊಂಡಿದೆ. ಈ ಎಂಟು ಮಂದಿಯ ಬಿಡುಗಡೆಗೆ ವಾರಕ್ಕೆ ಮುಂಚೆ ಈ ಒಪ್ಪಂದಕ್ಕೆ ಸಹಿ ಆಗಿರುವುದು ಕಾಕತಾಳೀಯವೇ ಇರಬಹುದು. 

ಈ ಪ್ರಕರಣಕ್ಕೆ ಸಂಬಂಧಿಸಿ ಅಸಹಜ ಎನ್ನಿಸುವ ರೀತಿಯಲ್ಲಿ ಗೋಪ್ಯತೆ ಕಾಯ್ದುಕೊಳ್ಳಲಾಗಿದೆ. ಈ ಎಂಟು ಮಂದಿಯ ಮೇಲೆ ಇದ್ದ ಆರೋಪಗಳು ಏನು ಎಂಬುದರ ಕುರಿತು ಕತಾರ್‌ ಆಗಲೀ ಭಾರತ ಆಗಲೀ ಏನನ್ನೂ ಹೇಳಿಲ್ಲ. ನ್ಯಾಯಾಲಯದ ತೀರ್ಪು ಕೂಡ ಬಹಿರಂಗವಾಗಲಿಲ್ಲ. ಮರಣದಂಡನೆ ವಿಧಿಸಲಾಗಿದೆ ಎಂಬ ಒಂದು ಅಂಶ ಮಾತ್ರ ಬಹಿರಂಗವಾಯಿತು. ಹಾಗಾಗಿಯೇ ಎರಡೂ ದೇಶಗಳು ಯಾರನ್ನೋ ರಕ್ಷಿಸಲು ಯತ್ನಿಸುತ್ತಿವೆಯೇ ಎಂಬ ಪ್ರಶ್ನೆ ಮೌಲಿಕವೇ ಆಗಿದೆ. ಭಾರತದ ಕುಲಭೂಷಣ್‌ ಜಾಧವ್‌ ಅವರು ಪಾಕಿಸ್ತಾನದ ಸೆರೆಯಲ್ಲಿ ನರಳುತ್ತಿದ್ದಾರೆ. ಆದರೆ, ಪಾಕಿಸ್ತಾನದಂತೆ ಅಲ್ಲದೆ, ಕತಾರ್‌ ಜೊತೆಗೆ ಭಾರತವು ಸ್ನೇಹಬಂಧವನ್ನು ಹೊಂದಿದೆ.

ಹಾಗಾಗಿಯೇ ನಿಜಕ್ಕೂ ಗಂಭೀರವಾದ ಆರೋಪಗಳು ಇಲ್ಲದೇ ಇದ್ದರೆ ಪ್ರಕರಣವನ್ನು ಅನಗತ್ಯವಾಗಿ ಬೆಳೆಸುವುದರಲ್ಲಿ ಅರ್ಥವಿಲ್ಲ. ಕತಾರ್‌ನ 27 ಲಕ್ಷ ಜನಸಂಖ್ಯೆಯಲ್ಲಿ ಬಹುಭಾಗ ಬೇರೆ ದೇಶಗಳಿಂದ ಬಂದವರು. ಅಲ್ಲಿರುವ ಭಾರತೀಯರ ಸಂಖ್ಯೆಯೇ ಸುಮಾರು ಎಂಟು ಲಕ್ಷ. ಕೊಲ್ಲಿಯ ಇತರ ದೇಶಗಳಲ್ಲಿಯೂ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಈ ಎಂಟು ಮಂದಿಯ ಬಂಧನ ಮತ್ತು ವಿಧಿಸಲಾದ ಶಿಕ್ಷೆಯ ಪ್ರಮಾಣವು ಕೊಲ್ಲಿ ರಾಷ್ಟ್ರಗಳಲ್ಲಿ ಇದ್ದ ಜನರು ದಂಗಾಗುವಂತೆ ಮಾಡಿತ್ತು. ಈಗ ಎಲ್ಲವೂ ಸುಖಾಂತ್ಯವಾಗಿದೆ. ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಭಾರತವು ಎಚ್ಚರ ವಹಿಸಬೇಕಾದ ಅಗತ್ಯ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT