ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ನಾಟಕ ಪ್ರದರ್ಶನಕ್ಕೆ ಅಡ್ಡಿ: ಕಿಡಿಗೇಡಿಗಳಿಗೆ ಕಡಿವಾಣ ಅಗತ್ಯ

Last Updated 5 ಜುಲೈ 2022, 19:30 IST
ಅಕ್ಷರ ಗಾತ್ರ

‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಎದುರಾಗಿರುವ ವಿರೋಧವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಹಾಗೂ ಧಾರ್ಮಿಕ ಸಾಮರಸ್ಯ ಪರಂಪರೆಗೆ ಧಕ್ಕೆ ಉಂಟುಮಾಡುವಂತಹುದು. ‘ಮುಸ್ಲಿಂ ಪ್ರಧಾನ ಕಥಾಹಂದರ ಹೊಂದಿದೆ’ ಎನ್ನುವ ಕಾರಣಕ್ಕಾಗಿ ಬಜರಂಗದಳ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರು ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದಾರೆ. ‘ದೇಶದಲ್ಲಿ ಹಿಂದೂ– ಮುಸ್ಲಿಂ ಗಲಾಟೆ ನಡೆಯುತ್ತಿರುವಾಗ ಮುಸ್ಲಿಮರೇ ಪ್ರಧಾನವಾಗಿರುವ ನಾಟಕ ಪ್ರದರ್ಶನ ಸರಿಯಲ್ಲ’ ಎನ್ನುವುದು ಪ್ರತಿಭಟಿಸಿರುವ ಸಂಘಟನೆಗಳ ಕಾರ್ಯಕರ್ತರ ವಾದ. ‘ನಾಟಕವನ್ನು ಸಂಪೂರ್ಣ ನೋಡಿದ ನಂತರ ಚರ್ಚಿಸಿ’‌ ಎನ್ನುವ ಸಂಘಟಕರ ವಿನಂತಿಯನ್ನು ಒಪ್ಪದ ಪ್ರತಿಭಟನಕಾರರು, ನಾಟಕ ನೋಡಲು ಬಂದ ಪ್ರೇಕ್ಷಕರನ್ನು ರಂಗಮಂದಿರದಿಂದ ಒತ್ತಾಯಪೂರ್ವಕವಾಗಿ ಹೊರಗೆ ಕಳಿಸಿದ್ದಾರೆ. ಮಾರ್ಚ್‌ ತಿಂಗಳಲ್ಲಿ ನಡೆದ ಶಿವಮೊಗ್ಗದ ಮಾರಿಕಾಂಬಾ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನದ ಪರಿಸರದಲ್ಲಿ ಮಳಿಗೆ ಹಾಕಲು ಅವಕಾಶ ನಿರಾಕರಿಸಲಾಗಿತ್ತು. ಈಗ, ಶಿವಮೊಗ್ಗ ಪರಿಸರದಲ್ಲಿ ಮುಸ್ಲಿಮರ ವಿರುದ್ಧದ ಅಸಹನೆಯ ಮತ್ತೊಂದು ನಿದರ್ಶನವು ನಾಟಕ ಪ್ರದರ್ಶನಕ್ಕೆ ವಿರೋಧದ ರೂಪದಲ್ಲಿ ವ್ಯಕ್ತವಾಗಿದೆ. ಬೇಕರಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಹಾಗೂ ಆತನ ಕುಟುಂಬದ ಕಥೆಯನ್ನೊಳಗೊಂಡ ನಾಟಕ ‘ಜತೆಗಿರುವನು ಚಂದಿರ’. ಸಾಹಿತ್ಯ ಮತ್ತು ಸಂಗೀತ ಹದವಾಗಿ ಮಿಳಿತಗೊಂಡಿರುವ ಈ ರಂಗಕೃತಿ, ದೇಶದ ಏಕತೆಗೆ ಪೂರಕವಾಗಿರುವುದನ್ನು ಅನೇಕ ಸಹೃದಯರು ಗುರುತಿಸಿದ್ದಾರೆ. ಭಾರತೀಯರೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರುವ ನಾಟಕ ಪ್ರದರ್ಶನಕ್ಕೆ ಅಡ್ಡಿ ಉಂಟುಮಾಡಿರುವು
ದನ್ನು ಗಮನಿಸಿದರೆ, ಸಮಾಜದಲ್ಲಿ ಒಡಕು ಉಂಟು ಮಾಡುವುದು ಪ್ರತಿಭಟನಕಾರರ ಉದ್ದೇಶ ಎಂದು ಭಾವಿಸಬೇಕಾಗುತ್ತದೆ. ಸೃಜನಶೀಲ ಕಲಾಕೃತಿಯೊಂದನ್ನು ಮುಸ್ಲಿಂ ಪ್ರಧಾನ ಅಥವಾ ಹಿಂದೂ ಪ್ರಧಾನ ಎಂದು ನೋಡುವುದು ಸರಿಯಾದ ಸಾಮಾಜಿಕ ನಡವಳಿಕೆಯಲ್ಲ, ಕಲಾಸ್ವಾದನೆಯ ರೀತಿಯೂ ಅಲ್ಲ. ಧರ್ಮದ ಹೆಸರಿನಲ್ಲಿ ನಡೆಯುವ ವಿಭಜನೆಗಳ ಅಪಾಯಕಾರಿ ಪ್ರಯತ್ನಗಳು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದವು.

ಅಮೆರಿಕದ ನಾಟಕಕಾರ ಜೋಸೆಫ್‌ ಸ್ಟೀನ್‌ ಅವರ ‘ಫಿಡ್ಲರ್‌ ಆನ್‌ ದಿ ರೂಫ್‌’ ನಾಟಕವನ್ನು ‘ಜತೆಗಿರುವನು ಚಂದಿರ’ ಹೆಸರಿನಲ್ಲಿ ಕನ್ನಡಕ್ಕೆ ಜಯಂತ ಕಾಯ್ಕಿಣಿ ರೂಪಾಂತರಿಸಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ನಾಟಕದ ನೂರಾರು ಪ್ರದರ್ಶನಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿವೆ. ಸಾವಿರಾರು ಸಹೃದಯರು ರಂಗಪ್ರಯೋಗಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈವರೆಗೆ ನಾಟಕ ನೋಡಿದ ಯಾರೊಬ್ಬರೂ ರಂಗಕೃತಿಯ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಈಗ ಇದ್ದಕ್ಕಿದ್ದಂತೆ ಅಸಹನೆಯ ರೂಪದಲ್ಲಿ ನಾಟಕಕ್ಕೆ ವಿರೋಧ ಎದುರಾಗಿದೆ. ಕೆಲವರ ಈ ಅಸಹನೆಯನ್ನು ಮುಸ್ಲಿಂ ವಿರೋಧದ ರೂಪದಲ್ಲಷ್ಟೇ ನೋಡದೆ, ಆರೋಗ್ಯಕರ ಸಮಾಜಕ್ಕೆ ಎದುರಾಗಿರುವ ಕಂಟಕ ದಂತೆ ಪರಿಗಣಿಸಬೇಕು. ಈ ಘಟನೆಯನ್ನು ನಾಟಕವೊಂದರ ಪ್ರದರ್ಶನಕ್ಕೆ ಉಂಟಾದ ಅಡ್ಡಿ ಅಥವಾ ಲೇಖಕರೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಂಟಾದ ಧಕ್ಕೆ ಎಂದಷ್ಟೇ ಭಾವಿಸುವಂತಿಲ್ಲ. ಇದು ಸಮಾಜ ದಲ್ಲಿ ಧಾರ್ಮಿಕ ಅಸಹಿಷ್ಣುತೆಯನ್ನು ಮೂಡಿಸಲು ಕೆಲವರು ಪ್ರಯತ್ನಿಸುತ್ತಿರುವುದರ ಸಂಕೇತ. ಧರ್ಮ, ಜಾತಿ ಹಾಗೂ ಭಾಷೆಯ ನೆಪದಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂಥಪ್ರಯತ್ನಗಳನ್ನು ಮೊಳಕೆಯಲ್ಲೇ ಚಿವುಟದೆ ಹೋದರೆ, ಬೇರೆ ಬೇರೆ ಕಾರಣಗಳೊಡ್ಡಿ ಸೃಜನಶೀಲ ಚಟುವಟಿಕೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ಮತ್ತೆ ಮತ್ತೆ ನಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಕರ್ನಾಟಕದ ರಂಗಭೂಮಿ ತನ್ನ ಪ್ರಬುದ್ಧತೆ ಹಾಗೂ ಪ್ರಯೋಗಶೀಲ ಗುಣದಿಂದಾಗಿ ದೇಶದ ಗಮನಸೆಳೆದಿದೆ. ಜಾತ್ಯತೀತ ಪರಂಪರೆಯನ್ನು ಹೊಂದಿರುವ ಕರ್ನಾಟಕದ ರಂಗಭೂಮಿ, ಸಾಮಾಜಿಕ ಜಾಗೃತಿಯ ಉದ್ದೇಶಕ್ಕಾಗಿಯೂ ಬಳಕೆಯಾಗಿದೆ. ಈ ಉದಾತ್ತ–ಸೌಹಾರ್ದ ಪರಂಪರೆಗೆ ಆನವಟ್ಟಿಯ ಘಟನೆ ಕಪ್ಪುಚುಕ್ಕಿಯಂತಿದೆ. ಯಾವುದನ್ನು ಪ್ರದರ್ಶಿಸಬೇಕು, ಯಾವುದನ್ನು ಪ್ರದರ್ಶಿಸಬಾರದು ಎಂದು ನಿರ್ಬಂಧ ಹೇರುವವರನ್ನು ಹಾಗೂ ರಂಗಭೂಮಿಗೆ ಸೆನ್ಸಾರ್‌ ಹೇರಲು ಹವಣಿಸುವವರನ್ನು ಸಾಂಸ್ಕೃತಿಕ ವಲಯ ಗಂಭೀರವಾಗಿ ಪರಿಗಣಿಸಬೇಕು. ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಎದುರಾದ ವಿರೋಧವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ನಂಬಿಕೆಯುಳ್ಳ ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು. ಸಾಮಾಜಿಕ ಸೌಹಾರ್ದವನ್ನು ಕದಡುವ ಇಂಥ ಪ್ರಯತ್ನಗಳು ನಡೆದಾಗ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ತಕ್ಷಣ ಪ್ರತಿಕ್ರಿಯಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಗತ್ಯ. ಸಣ್ಣಪುಟ್ಟ ಘಟನೆ ಗಳೆಂದು ನಿರ್ಲಕ್ಷಿಸುವುದು ಅಥವಾ ಮೌನವಾಗಿ ಉಳಿಯುವುದು, ಸಮಾಜಘಾತುಕ ಶಕ್ತಿಗಳು ಬಲ ಗೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ. ಕಾನೂನನ್ನು ಕೈಗೆತ್ತಿಕೊಂಡು ಜನಸಾಮಾನ್ಯರಲ್ಲಿ ಆತಂಕ ಹಾಗೂ ತಪ್ಪು ತಿಳಿವಳಿಕೆ ಮೂಡಿಸಲು ಪ್ರಯತ್ನಿಸುವವರ ವಿರುದ್ಧ ಸರ್ಕಾರ ಕಠಿಣ ಕಾನೂನುಕ್ರಮ ಜರುಗಿ ಸಬೇಕು. ಆನವಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವ ಮೂಲಕ, ಧರ್ಮದ ಹೆಸರಿನಲ್ಲಿ ಸಾಮಾಜಿಕ ಸೌಹಾರ್ದ ಕದಡಲು ಪ್ರಯತ್ನಿಸುವವರಿಗೆ ಎಚ್ಚರಿಕೆಯ ಕಠಿಣ ಸಂದೇಶ ರವಾನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT