ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಆಯುಕ್ತರ ನೇಮಕ ತಡೆಗೆ ನಕಾರ: ಕಾನೂನಿನ ದೋಷ ನಿವಾರಣೆ ಎಂದು?

Published 21 ಮಾರ್ಚ್ 2024, 23:02 IST
Last Updated 21 ಮಾರ್ಚ್ 2024, 23:02 IST
ಅಕ್ಷರ ಗಾತ್ರ

ಇಬ್ಬರು ಚುನಾವಣಾ ಆಯುಕ್ತರನ್ನು ಕಳೆದ ವಾರ ಅವಸರದಲ್ಲಿ ನೇಮಕ ಮಾಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಆದರೆ, ಸರ್ಕಾರದ ನಡೆಯು
‘ಅನಗತ್ಯವಾಗಿತ್ತು, ತಡೆಹಿಡಿಯಬಹುದಾಗಿತ್ತು’ ಎಂದು ಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರವು ಅದಾಗಲೇ ಆಗಿಹೋಗಿರುವ ಸಂಗತಿಯೊಂದನ್ನು ಸುಪ್ರೀಂ ಕೋರ್ಟ್‌ಗೆ ವಿವರಿಸುವ ಕೆಲಸ ಮಾಡಿದೆ ಹಾಗೂ ಅದು ಕೋರ್ಟ್‌ ಗಮನದಲ್ಲಿ ಇದೆ ಕೂಡ. ಹೊಸ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ಮಾರ್ಚ್‌ 14ರಂದು ನೇಮಕ ಮಾಡಲಾಯಿತು. ಈ ನೇಮಕ ನಡೆದದ್ದು, ನೇಮಕಾತಿಗೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಳ್ಳ
ಬೇಕಿದ್ದ ಒಂದು ದಿನ ಮೊದಲು. ವಿಚಾರವು ನ್ಯಾಯಾಂಗದ ಮುಂದೆ ಇದ್ದ ಕಾರಣ ಕೇಂದ್ರವು ಸಭೆಯನ್ನು ಒಂದು ದಿನ ಅಥವಾ ಎರಡು ದಿನಗಳ ಮಟ್ಟಿಗೆ ಮುಂದೂಡಬಹುದಿತ್ತು ಎಂದು ಕೂಡ ಕೋರ್ಟ್‌ ಹೇಳಿದೆ. ಆದರೂ, ಇಷ್ಟು ಹೇಳಿದ್ದನ್ನು ಹೊರತುಪಡಿಸಿದರೆ ನ್ಯಾಯಾಲಯವು ಇಡೀ ವಿಚಾರವನ್ನು ಮುಂದಿನ ಹಂತಕ್ಕೆ ಒಯ್ದಿಲ್ಲ. ಚುನಾವಣಾ ಆಯುಕ್ತರ ನೇಮಕವನ್ನು ಕೋರ್ಟ್‌ ಮಾನ್ಯ ಮಾಡಿದೆ. ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ 2023ರಲ್ಲಿ ರೂಪಿಸಿದ ಕಾಯ್ದೆಗೆ ಅನುಗುಣವಾಗಿ ಈ ಇಬ್ಬರನ್ನು ನೇಮಕ ಮಾಡಲಾಗಿದೆ. ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರೂ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದ ನಂತರದಲ್ಲಿ ರೂಪಿಸಿದ ಕಾಯ್ದೆ ಇದು.

‘ಕಾಯ್ದೆಗೆ ಈಗ ತಡೆ ನೀಡಲು ಸಾಧ್ಯವಿಲ್ಲ. ತಡೆ ನೀಡಿದರೆ ಗೊಂದಲಗಳು ಹಾಗೂ ಅನಿಶ್ಚಿತತೆಗಳು ಸೃಷ್ಟಿಯಾಗುತ್ತವೆ’ ಎಂದು ಕೋರ್ಟ್ ಹೇಳಿದೆ. ಅಂದರೆ, ಕೋರ್ಟ್‌ ಯಾವುದೇ ಆದೇಶ ನೀಡುವ ಮೊದಲು ಚುನಾವಣಾ ಆಯುಕ್ತರನ್ನು ನೇಮಕ ಮಾಡಬೇಕು ಎಂದು ಸರ್ಕಾರದ ಕಡೆಯಿಂದ ನಡೆದ ಯತ್ನಕ್ಕೆ ಜಯ ಸಿಕ್ಕಿದೆ ಎಂಬುದನ್ನು ಇದು ತೋರಿಸುತ್ತದೆ. ಆಯ್ಕೆ ಸಮಿತಿಯ ಸದಸ್ಯರಿಗೆ ಹೆಸರುಗಳನ್ನು ಪರಿಶೀಲಿಸಲು ಇನ್ನಷ್ಟು ಸಮಯ ನೀಡಬೇಕಿತ್ತು ಎಂದು ಕೋರ್ಟ್‌ ಹೇಳಿರುವುದು ಇಲ್ಲಿ ಸಂಗತವಲ್ಲ. ಏಕೆಂದರೆ, ಕೋರ್ಟ್‌ ಹೇಳಿರುವಂತೆ, ಅವಸರದಿಂದ ಕೈಗೊಂಡ ಕ್ರಮವು ಇಲ್ಲಿ ಅಮಾನ್ಯವೇನೂ ಆಗಿಲ್ಲ. ಸರ್ಕಾರವು ಏನು ಮಾಡಲು ಹೊರಟಿದೆ ಎಂಬುದನ್ನು ಕೋರ್ಟ್‌ ಮೊದಲೇ ಊಹಿಸಬಹುದಿತ್ತೇ ಎಂಬ ಪ್ರಶ್ನೆಯು ಇಲ್ಲಿ ಮಹತ್ವದ್ದಾಗುತ್ತದೆಯಾದರೂ, ನೇಮಕಾತಿ ಪ್ರಕ್ರಿಯೆಯನ್ನು ಕೋರ್ಟ್‌ ತಾನೇ ಮಾನ್ಯ ಮಾಡಿದೆ ಎಂಬುದನ್ನು ಗಮನಿಸಬೇಕು. ‘ನೇಮಕ ಆಗಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಆರೋಪ ಇಲ್ಲವಾದ ಕಾರಣ’ ಸರ್ಕಾರ ರೂಪಿಸಿರುವ ಕಾಯ್ದೆಯು ತಪ್ಪು ಎಂದು ಭಾವಿಸಲು ಆಗದು ಎಂದು ಕೋರ್ಟ್ ಹೇಳಿದೆ. ಆದರೆ ಇಲ್ಲಿ ಪ್ರಶ್ನೆ ಇದ್ದದ್ದು ಆಯ್ಕೆಗೆ ಅಂತಿಮಗೊಂಡ ವ್ಯಕ್ತಿಗಳ ಅರ್ಹತೆಗೆ ಸಂಬಂಧಿಸಿದ್ದಾಗಿರಲಿಲ್ಲ. ಆಯ್ಕೆ ಸಮಿತಿಯಲ್ಲಿ ಕಾರ್ಯಾಂಗವು ಹೊಂದಿರುವ ನಿರ್ಣಾಯಕ ಪಾತ್ರವನ್ನು ಇಲ್ಲಿ ಕೋರ್ಟ್‌ ಗಮನಕ್ಕೆ ತರಲಾಗಿತ್ತು.

ಸರ್ಕಾರವು ತೋರಿದ ಅನಗತ್ಯ ಅವಸರದ ಬಗ್ಗೆ ಕೋರ್ಟ್‌ ಪರಿಶೀಲನೆ ನಡೆಸಿದೆಯಾದರೂ, ನೇಮಕಾತಿಗೆ ತಡೆ ನೀಡಲು ತಾನು ನಿರಾಕರಿಸಿರುವುದು ಏಕೆ ಎಂಬ ಬಗೆಗಿನ ಆದೇಶವು ಅದರಿಂದ ಬರಬೇಕಿದೆ. ‘ಚುನಾವಣೆಯು ಹತ್ತಿರವಾಗುತ್ತಿದೆ. ಈ ಹೊತ್ತಿನಲ್ಲಿ ಅನುಕೂಲಗಳ ಸಮತೋಲನವೊಂದನ್ನು ಕಂಡುಕೊಂಡು, ಅದಕ್ಕೆ ಮಹತ್ವ ನೀಡಬೇಕಾಗುತ್ತದೆ’ ಎಂದು ಕೋರ್ಟ್‌ ಹೇಳಿದೆ. ನ್ಯಾಯದಾನ ಮಾಡಿದರೆ ಮಾತ್ರವೇ ಸಾಕಾಗುವುದಿಲ್ಲ, ನ್ಯಾಯದಾನ ಆಗುತ್ತಿದೆ ಎಂಬುದು ಗೊತ್ತಾಗುವಂತೆಯೂ ಇರಬೇಕು ಎಂದು ಕೂಡ ಕೋರ್ಟ್ ಹೇಳಿದೆ. ಈ ಮಾತನ್ನು ಅದು ಸರ್ಕಾರ ತೋರಿಸಿದ ಅವಸರವನ್ನು ಉದ್ದೇಶಿಸಿ ಹೇಳಿದೆ. ಈ ಮಾತು ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಗೆ ಕೂಡ ಸಮಾನವಾಗಿ ಅನ್ವಯ ಆಗಬೇಕು. ಆಯ್ಕೆ ಪ್ರಕ್ರಿಯೆಯು ನ್ಯಾಯಸಮ್ಮತವಾಗಿ ಇರುತ್ತದೆ ಎಂಬುದು ಇತರರಿಗೂ ಗೊತ್ತಾಗುವಂತೆ ಮಾಡುವ ಉದ್ದೇಶದಿಂದ ಆಯ್ಕೆ ಸಮಿತಿಯಲ್ಲಿ ಸಿಜೆಐ ಇರಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ತನ್ನ ಮಾತೇ ಅಂತಿಮವಾಗುವ ಆಯ್ಕೆ ಪ್ರಕ್ರಿಯೆಯೊಂದನ್ನು ಸರ್ಕಾರ ರೂಪಿಸಿತು. ಇದು ಈ ಕಾನೂನಿನಲ್ಲಿ ಹಾಗೂ ಕಾನೂನು ವಿವರಿಸಿರುವ ಪ್ರಕ್ರಿಯೆಯಲ್ಲಿ ಒಂದು ದೋಷವಾಗಿ ಉಳಿದುಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT