ಆನೆಗಳ ವಿಷಯದಲ್ಲಿ ಕರ್ನಾಟಕಕ್ಕೆ ಸಿಕ್ಕ ಜಾಗತಿಕ ಪ್ರಸಿದ್ಧಿ ನಮ್ಮ ದೇಶದ ಬೇರಾವ ರಾಜ್ಯಗಳಿಗೂ ಇಲ್ಲ. ಹಿಂದೆ ಮೈಸೂರು ಅರಸರ ಕಾಲದಲ್ಲಿ ಕಬಿನಿ, ಕಾಕನಕೋಟೆ ಅರಣ್ಯಗಳಲ್ಲಿ ಕಾಡಾನೆಗಳನ್ನು ಖೆಡ್ಡಾಕ್ಕೆ ಕೆಡವಿ ಪಳಗಿಸುವುದನ್ನು ನೋಡಲೆಂದೇ ವಿದೇಶಿ ಗಣ್ಯರು ಬರುತ್ತಿದ್ದರು. ಅಂಥ ಕ್ರೂರರಂಜನೆಗೆ ತಡೆ ಹಾಕಿದ ನಂತರವೂ ರಾಜವೈಭೋಗದ ಸಂಕೇತವಾಗಿ ಈಗಲೂ ದಸರಾ ಜಂಬೂಸವಾರಿ ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇದೆ. ಈಚಿನ ಗಜಗಣತಿಯ ಪ್ರಕಾರ ನಮ್ಮಲ್ಲಿ ಕಾಡಾನೆಗಳ ಸಂಖ್ಯೆ 6,395ಕ್ಕೆ ಏರಿದ್ದು, ಕರ್ನಾಟಕವೇ ಅಗ್ರಸ್ಥಾನದಲ್ಲಿದೆ. ಈಚೆಗಷ್ಟೇ ನಾವೆಲ್ಲ ಹೆಮ್ಮೆಪಡುವಂತೆ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದನ್ನು ವನ್ಯಪ್ರೇಮಿಗಳು ಸಂಭ್ರಮಿಸಿದ್ದರು. ಹುಲಿಯ ವಿಷಯದಲ್ಲಿ ಅಂದು ಮುಂದಿಟ್ಟ ಪ್ರಶ್ನೆಯನ್ನೇ ಇಂದು ಕಾಡಾನೆಗಳ ವಿಷಯದಲ್ಲೂ ಎತ್ತಬೇಕಾಗಿದೆ: ಸಂಭ್ರಮ ನಮಗೇನೋ ಸರಿ, ಆದರೆ ಕಾಡಂಚಿನಲ್ಲಿ ವಾಸಿಸುವ ಜನರೂ ಈ ಖುಷಿಯಲ್ಲಿ ಪಾಲುದಾರರೇ? ಪ್ರಶ್ನೆ ಗಡಚಿನದು. ಆನೆ– ಮಾನವ ಸಂಘರ್ಷ ವರ್ಷವರ್ಷಕ್ಕೆ ಹೆಚ್ಚುತ್ತಿದೆ. ಹಿಂದೆಲ್ಲ ಖೆಡ್ಡಾದಲ್ಲಿ ಕಾಡಾನೆಗಳು ಮಾತ್ರ ಗಾಸಿಗೊಂಡು, ಸೋತು ಶರಣಾಗುತ್ತಿದ್ದವು. ಈಗ ಗ್ರಾಮೀಣ ಜನರೂ ಹೈರಾಣಾಗುತ್ತಿದ್ದಾರೆ; ಪ್ರಾಣ ತೆರುತ್ತಿದ್ದಾರೆ; ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಅವರಿಗೇನೊ ಸರ್ಕಾರ ತುಸು ನಿಧಾನವಾಗಿಯಾದರೂ ಪರಿಹಾರ ನೀಡುತ್ತಿದೆ. ಆದರೆ ಆನೆಗಳ ಸಂಕಷ್ಟಕ್ಕೆ ಪರಿಹಾರ ಏನಿದೆ, ಎಲ್ಲಿದೆ? ಈ ವರ್ಷದ ಮೊದಲ ಆರು ತಿಂಗಳುಗಳಲ್ಲೇ 22 ಆನೆಗಳು ಸತ್ತಿವೆ. ಆರು ಆನೆಗಳು ಅನಧಿಕೃತ ವಿದ್ಯುತ್ ಬೇಲಿಗೆ ಸಿಕ್ಕು ಸತ್ತಿವೆ. ಅಂಬಾರಿ ಹೊತ್ತು ಮೆರೆದಿದ್ದ ಬಲರಾಮನಿಗೇ ಗುಂಡೇಟು ಬಿದ್ದಿತ್ತಲ್ಲ?
ಆನೆಗಳ ಸಮಸ್ಯೆ ಆನೆಗಾತ್ರದ್ದಾಗುತ್ತಿದೆ. ಅಭಯಾರಣ್ಯಗಳ ಧಾರಣ ಶಕ್ತಿಯನ್ನು ಮೀರಿ ಅವುಗಳ ಸಂಖ್ಯೆ ಹೆಚ್ಚುತ್ತಿದೆ. ಮೇವು ಹುಡುಕಿಕೊಂಡು 792 ಆನೆಗಳು ಆಸುಪಾಸಿನ ಕಾಡುಮೇಡುಗಳಲ್ಲಿ ಅಲೆಯುತ್ತಿದ್ದು, 161 ಆನೆಗಳು ಕಾಫಿ ಎಸ್ಟೇಟಿನಂಥ ಖಾಸಗಿ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಂಡಿವೆ. ಕಾಡಿನಿಂದ ಕಾಡಿಗೆ ಅವುಗಳ ಮುಕ್ತ ಸಂಚಾರಕ್ಕೆಂದು ಪ್ರತ್ಯೇಕ ಕಾರಿಡಾರ್ ನಿರ್ಮಿಸಬೇಕೆಂಬ ವಿಚಾರವಿದ್ದರೂ ಹೆದ್ದಾರಿಜಾಲ, ವಿದ್ಯುತ್ ಮಾರ್ಗ, ಜಲಾಶಯ, ಗಣಿಗಾರಿಕೆಗಳಂಥ ಅಡೆತಡೆಗಳ ಜೊತೆ ಅಲ್ಲಲ್ಲಿ ಪ್ರತಿಷ್ಠಿತ ಬಿಳಿಯಾನೆಗಳೇ ರೆಸಾರ್ಟ್ ನಿರ್ಮಿಸಿಕೊಂಡು ಕೂತಿರುವಾಗ ಕೃಷಿಕರನ್ನು ಮಾತ್ರ ಎತ್ತಂಗಡಿ ಮಾಡುವಷ್ಟಕ್ಕೆ ಈ ಯೋಜನೆ ಸೀಮಿತವಾಗುತ್ತದೆ. ಆನೆಗಳು ರೈತರ ಹೊಲಕ್ಕೆ ನುಗ್ಗದಂತೆ ರೈಲುಕಂಬಿಗಳ ಸುದೃಢ ಬೇಲಿಯನ್ನು ಎಲ್ಲಾ ಕಡೆ ವಿಸ್ತರಿಸಲು ಹಣಕಾಸಿನ ಅಡಚಣೆ ಎದುರಾಗಿದೆ. ಗಜದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಿಂದ ನೂರಾರು ಆನೆಗಳನ್ನು ಬೇರೆಡೆ ಎತ್ತಂಗಡಿ ಮಾಡಲು ಹೋದರೆ ಸಮಸ್ಯೆಯ ಎತ್ತಂಗಡಿ ಆದೀತೆ ವಿನಾ ಪರಿಹಾರ ಮಾರ್ಗವಂತೂ ಆಗಲಿಕ್ಕಿಲ್ಲ.
ವನ್ಯಜೀವಿಗಳ ಸಂಖ್ಯೆ ಹೆಚ್ಚಿದಂತೆಲ್ಲ ಗ್ರಾಮವಾಸಿಗಳ ಮತ್ತು ಕಾಡುಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚುತ್ತಲೇ ಹೋಗುವುದು ಮಾಮೂಲು. ಅದರಾಚೆ ಇನ್ನೊಂದು ಬಗೆಯ ಸಂಘರ್ಷವಿದೆ. ಅದು ಅಧಿಕಾರಿ ವರ್ಗ ಮತ್ತು ವನಸಂಶೋಧಕರ ನಡುವಣ ತಿಕ್ಕಾಟ. ಅಧಿಕಾರಿಗಳಲ್ಲಿ ಅರಣ್ಯದ ಹಿತರಕ್ಷಣೆಗಿಂತ ಇಲಾಖೆಯ ಹಿತರಕ್ಷಣೆ, ಸ್ವಂತದ ಹಿತರಕ್ಷಣೆಯೇ ಹೆಚ್ಚಿರುತ್ತದೆಂದು ಸಂಶೋಧಕರು ವಾದಿಸಿದರೆ, ಇಲಾಖೆಯ ಕೆಲಸಗಳಿಗೆಲ್ಲ ವನ್ಯಪ್ರೇಮಿ ಸಂಘ–ಸಂಸ್ಥೆಗಳು ಅಡ್ಡಗಾಲು ಹಾಕುತ್ತವೆಂದು ಅಧಿಕಾರಿ ವರ್ಗ ಆರೋಪಿಸುತ್ತಿರುತ್ತದೆ. ಈ ಎರಡು ಬಣಗಳು ಪರಸ್ಪರರ ಚಟುವಟಿಕೆಗಳ ಮೇಲೆ ಕಣ್ಣಿಡುವುದು ವನ್ಯಪರಿಸರದ ಒಟ್ಟಾರೆ ಹಿತರಕ್ಷಣೆಗೆ ಒಳ್ಳೆಯದೇ ಹೌದಾದರೂ ಕೆಲವು ಪ್ರಸಂಗಗಳಲ್ಲಿ ಉಲ್ಟಾ ಆಗಿದ್ದೂ ಇದೆ. ಹೆಣ್ಣಾನೆಗಳಿಗೆ ಜನನ ನಿಯಂತ್ರಣ ಲಸಿಕೆ ಹಾಕಬೇಕೆಂದು ಅಧಿಕಾರಿಗಳು ನಿರ್ಣಯಿಸಿದರೆ, ಅದರಿಂದ ಸಂಘರ್ಷ, ಸಂಕಟಗಳು ಹೆಚ್ಚೇ ಆಗುತ್ತವೆಂದು ಸಂಶೋಧಕರು, ವನ್ಯಪ್ರೇಮಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೂ ಇದೆ. ಹುಲಿ, ಚಿರತೆ, ಆನೆ, ಹಂದಿ, ಕೋತಿ ಮತ್ತು ಕಾಟಿಗಳನ್ನು ಹೇಗೆ ಸಂಭಾಳಿಸಬೇಕು ಎಂಬುದರ ಬಗ್ಗೆ ಈ ಎರಡು ಬಣಗಳಲ್ಲಿ ಒಮ್ಮತದ ಅಭಿಪ್ರಾಯವೇ ಅಪರೂಪ. ಅರಣ್ಯಾಸಕ್ತರನ್ನು ದೂರವಿಟ್ಟು ಮೂರು ರಾಜ್ಯಗಳ ಅರಣ್ಯ ಸಿಬ್ಬಂದಿಯೇ ಈಚಿನ ಗಣತಿಕಾರ್ಯ ಮುಗಿಸಿದೆಯೆಂದು ಇಲಾಖೆ ಹೆಮ್ಮೆಯಿಂದ ಹೇಳಿಕೊಂಡಿದೆಯಾದರೂ ಅದು ಈ ಸಂಘರ್ಷದ ಅನಪೇಕ್ಷಿತ ಮುಖವನ್ನು ತೋರುತ್ತದೆ ವಿನಾ ಬೇರೇನಲ್ಲ. ಆನೆಗಳ ಗಣತಿ ವಿಧಾನ, ರೇಡಿಯೊ ಕಾಲರ್ ಅಳವಡಿಕೆ, ಸಂಖ್ಯಾನಿಯಂತ್ರಣ ತಂತ್ರ, ಫಸಲು ನಷ್ಟದ ಅಂದಾಜು, ಕಳೆಸಸ್ಯಗಳ ನಿರ್ವಹಣೆ, ರಕ್ಷಾಬೇಲಿಗಳ ವಿನ್ಯಾಸ ಇವೆಲ್ಲವುಗಳಲ್ಲೂ ಅದೆಷ್ಟೇ ಪ್ರಶ್ನೆಗಳಿದ್ದರೂ ಅಂತಿಮವಾಗಿ ಸರ್ಕಾರಿ ಅನುದಾನವನ್ನೇ ಅವಲಂಬಿಸಿ ವನ್ಯ ಕಾರ್ಯಾಚರಣೆ ನಡೆಯುತ್ತದೆ. ಈಗಂತೂ ಹಣಕಾಸಿನ ಕಾರಣವನ್ನು ಮುಂದಿಟ್ಟು ಕೇಂದ್ರ ಸರ್ಕಾರವೇ ʻಹುಲಿಯೋಜನೆʼ ಮತ್ತು ʻಆನೆ ಯೋಜನೆʼ ಎರಡನ್ನೂ ಒಂದುಗೂಡಿಸಿ, ಅಧಿಕಾರಿಗಳ ಸಂಖ್ಯೆಯನ್ನೇ ಕಡಿಮೆ ಮಾಡುವ ದಿಸೆಯಲ್ಲಿ ಹೆಜ್ಜೆಯಿಟ್ಟಿದೆ. ಅರಣ್ಯ ರಕ್ಷಣಾ ಕಾನೂನುಗಳಿಗೆ ಸಂಬಂಧಿಸಿದಂತೆ ಈಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಎರಡೂ ತಿದ್ದುಪಡಿಗಳು ಹೂಡಿಕೆದಾರರ ಅನುಕೂಲಕ್ಕೇ ಆದ್ಯತೆ ಕೊಟ್ಟಂತಿವೆ. ವನಕಲ್ಯಾಣಕ್ಕಿಂತ ಜನಕಲ್ಯಾಣವೇ ಹೆಚ್ಚೆಂಬ ಧೋರಣೆ ಸರ್ಕಾರಕ್ಕಿದ್ದರೆ ಆ ಎರಡೂ ರಂಗಗಳನ್ನು ಮುಖಾಮುಖಿ ಮಾಡಿದಂತಾಗುತ್ತದೆ. ಗೆಲುವು ಅಂತಿಮವಾಗಿ ಮನುಷ್ಯನಿಗೇ ಎಂದು ನಾವೆಣಿಸುವುದೂ ತಪ್ಪಾಗುತ್ತದೆ. ಪ್ರಕೃತಿಯನ್ನು ಸೋಲಿಸಿ ಸಾಧಿಸಿದ ಗೆಲುವು ಗೆಲುವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.