ಶನಿವಾರ, ಫೆಬ್ರವರಿ 22, 2020
19 °C

ಸ್ಪೀಕರ್‌ ಅಧಿಕಾರ: ‘ಸುಪ್ರೀಂ’ ಸಲಹೆಯ ಸಾಧಕ–ಬಾಧಕ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಪಕ್ಷಾಂತರ ನಿಷೇಧ ಕಾನೂನನ್ನು ಒಳಗೊಂಡಿರುವ ಸಂವಿಧಾನದ ಹತ್ತನೆಯ ಶೆಡ್ಯೂಲ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ಮಾತುಗಳನ್ನು ಆಡಿದೆ. ‘ಸ್ಪೀಕರ್‌ ಹುದ್ದೆಯಲ್ಲಿ ಇರುವವರು ಒಂದಲ್ಲ ಒಂದು ರಾಜಕೀಯ ಪಕ್ಷಕ್ಕೆ ಸೇರಿರುತ್ತಾರಾದ ಕಾರಣ, ಶಾಸನಸಭೆಗಳ ಸದಸ್ಯರ ಅನರ್ಹತೆಗೆ ಸಂಬಂಧಿಸಿದ ಪ್ರಕರಣಗಳನ್ನು ಅವರಿಗೆ ವಹಿಸಬೇಕೇ ಎಂಬ ಬಗ್ಗೆ ಸಂಸತ್ತು ಮತ್ತೊಮ್ಮೆ ಆಲೋಚನೆ ನಡೆಸಲು ಇದು ಸಕಾಲ’ ಎಂದು ನ್ಯಾಯಮೂರ್ತಿ ಆರ್.ಎಫ್. ನರಿಮನ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಮಂಗಳವಾರ ನೀಡಿದ ತೀರ್ಪೊಂದರಲ್ಲಿ ಅಭಿಪ್ರಾಯಪಟ್ಟಿದೆ.

‘ಸಂವಿಧಾನದ ಹತ್ತನೆಯ ಶೆಡ್ಯೂಲ್‌ ಅಡಿ ಬರುವ, ಅನರ್ಹತೆಗೆ ಸಂಬಂಧಿಸಿದ ತಕರಾರುಗಳನ್ನು ಇತ್ಯರ್ಥಪಡಿಸುವ ಕೆಲಸವನ್ನು ಲೋಕಸಭೆ ಹಾಗೂ ವಿಧಾನಸಭೆಗಳ ಸ್ಪೀಕರ್‌ ಬದಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಮಂಡಳಿಗೆ ವಹಿಸಲು ಅನುವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರುವುದನ್ನು ಸಂಸತ್ತು ಗಂಭೀರವಾಗಿ ಪರಿಗಣಿಸಬಹುದು ಅಥವಾ ಹೊರಗಿನ ಯಾವುದಾದರೂ ಸ್ವತಂತ್ರ ವ್ಯವಸ್ಥೆಗೆ ಆ ಜವಾಬ್ದಾರಿಯನ್ನು ವಹಿಸುವ ಬಗ್ಗೆ ಪರಿಗಣಿಸಬಹುದು. ಇಂತಹ ತಕರಾರುಗಳು ತ್ವರಿತವಾಗಿ ಹಾಗೂ ನಿಷ್ಪಕ್ಷಪಾತ ಧೋರಣೆಯಿಂದ ಇತ್ಯರ್ಥವಾಗಬೇಕು ಎಂಬುದು ಇದರ ಆಶಯ.

ಇದು, ನಮ್ಮ ಪ್ರಜಾತಂತ್ರ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ಬಹಳ ಮುಖ್ಯ’ ಎಂದೂ ಈ ನ್ಯಾಯಪೀಠವು ಹೇಳಿದೆ. ಜನಪ್ರತಿನಿಧಿಗಳು ಒಂದಲ್ಲ ಒಂದು ಕಾರಣ ನೀಡಿ ನಡೆಸುವ ಪಕ್ಷಾಂತರವು ತರಬಲ್ಲ ಸಮಸ್ಯೆಗಳು ಏನು ಎಂಬುದನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಗಿರುವ ಬೆಳವಣಿಗೆಗಳು ಸಾರಿ ಹೇಳಿವೆ. ಪಕ್ಷಾಂತರ ನಿಷೇಧ ಕಾನೂನಿನ ಆಶಯವೇ ನಾಚಿಕೊಳ್ಳುವ ಬಗೆಯಲ್ಲಿ ಪಕ್ಷಾಂತರಗಳು ನಡೆದಿವೆ. ಇಂತಹ ಪಕ್ಷಾಂತರಗಳ ಪರಿಣಾಮವಾಗಿ, ಬಹುಮತ ಹೊಂದಿದ್ದ ಸರ್ಕಾರಗಳು ಉರುಳಿವೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಸುಪ್ರೀಂ ಕೋರ್ಟ್ ಸಲಹಾ ಸ್ವರೂಪದಲ್ಲಿ ಆಡಿರುವ ಮಾತುಗಳು ಸ್ವಾಗತಾರ್ಹವಾಗಿ ಕಾಣಿಸುತ್ತವೆ. ಆದರೆ, ಇನ್ನಷ್ಟು ಸೂಕ್ಷ್ಮವಾಗಿ ನೋಡಿದಾಗ ಒಂದಿಷ್ಟು ಪ್ರಶ್ನೆಗಳೂ ಮೂಡುತ್ತವೆ. ಸ್ಪೀಕರ್ ಹುದ್ದೆಗೆ ಏರುವ ವ್ಯಕ್ತಿ ರಾಜಕಾರಣಿ ಆಗಿರುತ್ತಾನಾದರೂ, ಆತ ಸಾಮಾನ್ಯವಾಗಿ ಒಂದಲ್ಲ ಒಂದು ಪಕ್ಷದ ಹೆಸರಿನಲ್ಲಿ ಚುನಾಯಿತನಾಗಿರುತ್ತಾನಾದರೂ, ಪಕ್ಷಾಂತರ– ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳನ್ನು ಆತ ನಿಷ್ಪಕ್ಷಪಾತವಾಗಿ ವಿಲೇವಾರಿ ಮಾಡಲಾರ ಎಂದು ಸಾರಾಸಗಟಾಗಿ ಹೇಳುವುದು ಉಚಿತವೇ? ಹಾಗಾದರೆ, ಸದನದ ವಿಚಾರದಲ್ಲಿ ಪರಮಾಧಿಕಾರ ಹೊಂದಿರುವ ಸ್ಪೀಕರ್‌ ನೀಡುವ ರೂಲಿಂಗ್‌ಗಳನ್ನೂ ಅನುಮಾನದಿಂದ ನೋಡಬೇಕಾಗುತ್ತದೆ, ಅಲ್ಲವೇ? ‘ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳ ಇತ್ಯರ್ಥಕ್ಕೆ ಬಾಹ್ಯ, ಸ್ವತಂತ್ರ ವ್ಯವಸ್ಥೆ’ ರೂಪಿಸುವ ಸಲಹೆ ಕೂಡ ಸುಪ್ರೀಂ ಕೋರ್ಟ್‌ನ ಮಾತುಗಳಲ್ಲಿ ಇದೆ.

‘ಬಾಹ್ಯ’ ವ್ಯವಸ್ಥೆಯು ಎಲ್ಲ ಸಂದರ್ಭಗಳಲ್ಲೂ ‘ಸ್ವತಂತ್ರ’ವಾಗಿ ಕೆಲಸ ಮಾಡುತ್ತದೆಯೇ, ಆ ವ್ಯವಸ್ಥೆಯ ಮೇಲೆ ಅನುಚಿತ ಒತ್ತಡಗಳು ಬರಲಾರವೇ, ಒತ್ತಡಗಳನ್ನು ಆ ವ್ಯವಸ್ಥೆ ತಾಳಿಕೊಳ್ಳಬಲ್ಲದೇ ಎಂಬ ‍ಪ್ರಶ್ನೆಗಳನ್ನು ಈ ಸಲಹೆ ಹುಟ್ಟುಹಾಕುತ್ತದೆ. ಸ್ಪೀಕರ್ ಸ್ಥಾನದಲ್ಲಿ ಇದ್ದವರು ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳನ್ನೆಲ್ಲ ನಿಷ್ಪಕ್ಷಪಾತವಾಗಿ ಇತ್ಯರ್ಥಪಡಿಸಿದ್ದರು ಎಂಬುದನ್ನೂ ಖಡಾಖಂಡಿತವಾಗಿ ಹೇಳಲು ಆಗುವುದಿಲ್ಲ. ನಿರ್ದಿಷ್ಟ ಜನಪ್ರತಿನಿಧಿಯನ್ನು ಅನರ್ಹಗೊಳಿಸಬೇಕು ಎಂಬ ಅರ್ಜಿಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿನಾಕಾರಣ ವಿಳಂಬ ಧೋರಣೆ ಅನುಸರಿಸಿದ ನಿದರ್ಶನಗಳು ಇವೆ.

ಕೆಲವು ಅರ್ಜಿಗಳನ್ನು ತರಾತುರಿಯಲ್ಲಿ ಇತ್ಯರ್ಥಪಡಿಸಿದ ಉದಾಹರಣೆಗಳೂ ಇವೆ. ಅನರ್ಹತೆಗೆ ಸಂಬಂಧಿಸಿದ ವಿಚಾರದಲ್ಲಿ ಸ್ಪೀಕರ್‌ಗೆ ಇರುವ ಅಧಿಕಾರವನ್ನು ಉಳಿಸಿಕೊಂಡೇ, ಸುಪ್ರೀಂ ಕೋರ್ಟ್‌ನ ಆಶಯಗಳನ್ನು ಜಾರಿಗೆ ತರುವ ಮಾರ್ಗೋಪಾಯಗಳ ಬಗ್ಗೆ ವಿಸ್ತೃತ ಚರ್ಚೆ ಆಗುವುದು ಅಗತ್ಯ. ಸ್ಪೀಕರ್‌ಗೆ ಇರುವ ಅಧಿಕಾರವು ದುರ್ಬಳಕೆ ಆಗದಂತೆ ಮಾಡುವುದು ಹೇಗೆ ಎಂಬುದರ ಕುರಿತೂ ಚರ್ಚೆ ನಡೆಯಬೇಕು.

ಅನರ್ಹತೆಗೆ ಸಂಬಂಧಿಸಿದ ಅರ್ಜಿಗಳ ಇತ್ಯರ್ಥಕ್ಕೆ ಸ್ಪೀಕರ್‌ಗೆ ಕಾಲಮಿತಿ ನಿಗದಿ ಮಾಡುವ ಕೆಲಸವನ್ನು ಕಾನೂನು ತಿದ್ದುಪಡಿಯ ಮೂಲಕವೇ ಮಾಡಬಹುದು. ವಿವೇಚನಾಧಿಕಾರವನ್ನು ಕಡಿಮೆ ಮಾಡಿ, ಅವುಗಳನ್ನು ಕಾನೂನಿನ ಮೂಲಕ ಹೆಚ್ಚು ಸ್ಪಷ್ಟಗೊಳಿಸಬೇಕು. ಆಗ ಕೋರ್ಟ್‌ನ ಆಶಯಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಬಹುದು. ಪಕ್ಷಾಂತರ ನಿಷೇಧ ಕಾನೂನಿಗೆ ಕೂಡ ಇನ್ನಷ್ಟು ಬಲ ಬರಬಹುದು.

ಇದನ್ನೂ ಓದಿ... ಶಾಸಕರ ಅನರ್ಹತೆ: ಸ್ಪೀಕರ್‌ಗೆ ಅಧಿಕಾರ ಬೇಡ, ಮರು ಚಿಂತನೆಗೆ 'ಸುಪ್ರೀಂ' ಸಲಹೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು