ಮಣ್ಣಿನಲ್ಲಿ ಕರಗಬಲ್ಲ ಪ್ಲಾಸ್ಟಿಕ್ ಕವರ್ಗಳಲ್ಲಿ ಹಾಲು ಪೂರೈಸುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಬೆಂಗಳೂರು ಹಾಲು ಒಕ್ಕೂಟ (ಬಮೂಲ್), ಹಾಲಿನ ವಿತರಣೆಯನ್ನು ಪಾಲಿಥೀನ್ ತೆಕ್ಕೆಯಿಂದ ಹೊರತರುವ ಭರವಸೆ ಹುಟ್ಟಿಸಿದೆ. ವಿದೇಶಿ ತಂತ್ರಜ್ಞಾನದ ನೆರವಿನೊಂದಿಗೆ ತಯಾರಾಗುತ್ತಿರುವ, ಜೈವಿಕವಾಗಿ ವಿಘಟನೆ ಹೊಂದುವ ಪ್ಲಾಸ್ಟಿಕ್ ಕವರ್ಗಳನ್ನು ಬಳಸುವ ದಿಸೆಯಲ್ಲಿ ಬಮೂಲ್ ಕಾರ್ಯಪ್ರವೃತ್ತವಾಗಿದೆ. ಪ್ರಸ್ತುತ ಹಾಲು ಪೂರೈಕೆಗೆ ಬಳಸಲಾಗುತ್ತಿರುವ ಪಾಲಿಥೀನ್ ಕವರ್ಗಳು ಮಣ್ಣಿನಲ್ಲಿ ಕರಗಲು ಐದುನೂರು ವರ್ಷಗಳು ಬೇಕು. ಆದರೆ, ಈಗ ಬಮೂಲ್ ಬಳಸುತ್ತಿರುವ, ಜೋಳದ ಗಂಜಿಯಿಂದ ತಯಾರಾಗುವ ಕವರ್ಗಳು ಮಣ್ಣು ಸೇರಿದ ಆರು ತಿಂಗಳಲ್ಲಿಯೇ ಜೈವಿಕ ಗೊಬ್ಬರವಾಗಿ ರೂಪಾಂತರ ಹೊಂದಲಿವೆ; ಆ ಮೂಲಕ ಮಣ್ಣಿನ ಫಲವತ್ತತೆಯೂ ಹೆಚ್ಚಲಿದೆ ಎಂದು ಹೇಳಲಾಗಿದೆ. ಕನಕಪುರ ತಾಲ್ಲೂಕಿನ ಶಿವನಹಳ್ಳಿಯಲ್ಲಿರುವ ಮೆಗಾ ಡೇರಿ ಘಟಕದಲ್ಲಿ ಬಮೂಲ್ನ ಪರಿಸರಸ್ನೇಹಿ ಪ್ರಯೋಗ ಆರಂಭಗೊಂಡಿದೆ. ದೇಶದಲ್ಲೇ ಮೊದಲು ಎನ್ನಲಾದ ಈ ಪ್ರಯೋಗ ಯಶಸ್ವಿಗೊಂಡಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಪರಿಸರಸ್ನೇಹಿ ಕವರ್ಗಳನ್ನು ಹಾಲಿನ ವಿತರಣೆಗೆ ಬಳಸಬಹುದಾಗಿದೆ. ಹೈನೋದ್ಯಮದಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯ ಕಂಡುಕೊಳ್ಳುವ ದಿಸೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡುವ ಉದ್ದೇಶದಿಂದ ಕೇರಳದಲ್ಲಿ ಹಾಲನ್ನು ಎಟಿಎಂ ಯಂತ್ರದ ಮೂಲಕ ಪೂರೈಸುವ ಪ್ರಯತ್ನಕ್ಕೆ ಬಳಕೆದಾರರ ಸ್ಪಂದನ ದೊರೆತಿರಲಿಲ್ಲ. ಪಾಲಿಥೀನ್ಗೆ ಪರ್ಯಾಯವಾಗಿ ಪರಿಸರಸ್ನೇಹಿ ಪ್ಲಾಸ್ಟಿಕ್ ಇಲ್ಲವೇ ಗಾಜಿನ ಸೀಸೆಗಳನ್ನು ಬಳಸುವ ಚಿಂತನೆ ತಮಿಳುನಾಡಿನಲ್ಲಿ ನಡೆದಿತ್ತು. ಆದರೆ, ಆರ್ಥಿಕ ಹೊರೆ ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ ಪ್ಲಾಸ್ಟಿಕ್ಗೆ ಪರ್ಯಾಯ ಕಂಡುಕೊಳ್ಳುವ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಪ್ರಸ್ತುತ, ಬಮೂಲ್ ಪ್ರತಿಪಾದಿಸುತ್ತಿರುವ ಜೈವಿಕ ವಿಘಟನೆ ಹೊಂದಬಲ್ಲ ಪ್ಲಾಸ್ಟಿಕ್ ಕವರ್ಗಳ ಉತ್ಪಾದನೆಗೆ ಶೇ 5ರಷ್ಟು ಮಾತ್ರವೇ ಹೆಚ್ಚು ವೆಚ್ಚ ತಗಲುತ್ತದೆ ಎನ್ನುವ ಸಂಗತಿ, ಹಾಲು ಉದ್ಯಮದಲ್ಲಿ ಪಾಲಿಥೀನ್ಗೆ ಪರ್ಯಾಯ ಕಂಡುಕೊಳ್ಳುವ ದಿಸೆಯಲ್ಲಿ ಹೊಸ ಭರವಸೆ ಹುಟ್ಟಿಸುವಂತಿದೆ.

ಮಣ್ಣು ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುತ್ತಿರುವ ಅಪಾಯಗಳ ಹಿನ್ನೆಲೆಯಲ್ಲಿ ಪಾಲಿಥೀನ್ಗೆ ಪರ್ಯಾಯ ಕಂಡುಕೊಳ್ಳುವ ಬಮೂಲ್ ಪ್ರಯತ್ನಕ್ಕೆ ವಿಶೇಷ ಮಹತ್ವವಿದೆ. ಪ್ಲಾಸ್ಟಿಕ್ ತ್ಯಾಜ್ಯಗಳ ಸಂಸ್ಕರಣೆ ಕಷ್ಟಕರವಾದುದರಿಂದ, ಪಾಲಿಥೀನ್ ಕವರ್ಗಳಿಗೆ ಪರ್ಯಾಯ ಕಂಡುಕೊಳ್ಳುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2018ರಲ್ಲಿ ಕೆಎಂಎಫ್ಗೆ ಸೂಚಿಸಿತ್ತು. ಬೆಂಗಳೂರಿನಂಥ ಮಹಾನಗರಗಳ ಕೆಲವು ಬಡಾವಣೆಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವುದರಲ್ಲಿ ಪ್ಲಾಸ್ಟಿಕ್ ಕವರ್ಗಳ ಪಾತ್ರವೂ ಇದೆ. ಚರಂಡಿಗಳಲ್ಲಿ ಹಾಗೂ ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರಿಕೊಂಡು, ನೀರು ಸರಾಗವಾಗಿ ಹರಿಯಲು ತೊಡಕುಂಟಾಗುತ್ತದೆ. ಮಳೆನೀರಿನ ಹರಿವಿಗೆ ಅಡ್ಡಿ ಉಂಟಾದಾಗ ಅದರ ದುಷ್ಪರಿಣಾಮ ವಸತಿ ಪ್ರದೇಶಗಳ ಮೇಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ಸೇವನೆಯ ಪರಿಣಾಮ ಬೀಡಾಡಿ ಜಾನುವಾರುಗಳ ಆರೋಗ್ಯದ ಮೇಲೂ ಆಗುತ್ತದೆ ಹಾಗೂ ಅವುಗಳಿಂದ ಉತ್ಪಾದನೆಯಾಗುವ ಹಾಲಿನ ಗುಣಮಟ್ಟವನ್ನೂ ಪ್ರಭಾವಿಸುತ್ತದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳ ನಿಯಂತ್ರಣಕ್ಕೆ ಮುಂದಾಗಿರುವ ಬಮೂಲ್ ಜೊತೆ ಸಾರ್ವಜನಿಕರೂ ಕೈಜೋಡಿಸುವುದು ಅಗತ್ಯ. ದೈನಂದಿನ ಜೀವನದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಆಗುತ್ತಿರುವ ಸ್ಥಳಗಳಲ್ಲಿ, ಪರ್ಯಾಯ ಕಂಡುಕೊಳ್ಳುವ ಪ್ರಯತ್ನಗಳು ವ್ಯಾಪಕವಾಗಿ ನಡೆಯಬೇಕಾಗಿದೆ. ಈ ದಿಸೆಯಲ್ಲಿ, ರಾಜ್ಯದ ದೇವಸ್ಥಾನಗಳಲ್ಲಿ ಆಗಸ್ಟ್ 15ರಿಂದ ನೀರಿನ ಬಾಟಲ್ ಸೇರಿದಂತೆ ಎಲ್ಲ ರೀತಿಯ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಈ ನಿಷೇಧವು ಮದುವೆ ಸೇರಿದಂತೆ ನೂರಾರು ಜನ ಭಾಗವಹಿಸುವ ಕಾರ್ಯಕ್ರಮಗಳಿಗೂ ಅನ್ವಯವಾಗಬೇಕು. ಆಹಾರ ಪದಾರ್ಥಗಳ ತಯಾರಿಕೆ, ಸಂಗ್ರಹ ಹಾಗೂ ವಿತರಣೆಯ ವಿವಿಧ ಹಂತಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಪ್ರಯತ್ನಗಳೂ ನಡೆದಿವೆ. ಆದರೆ, ಪ್ಲಾಸ್ಟಿಕ್ ನಿಷೇಧದಂಥ ಹೋರಾಟವು ಕಾನೂನು ನಿರ್ಬಂಧಗಳಿಂದಷ್ಟೇ ಯಶಸ್ವಿಯಾಗುವುದು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರ ದೊರೆಯದೇ ಹೋದರೆ ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಪ್ರಯತ್ನಗಳು ಮಾತು–ಬರಹದಲ್ಲಷ್ಟೇ ಉಳಿಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.