ಬುಧವಾರ, ಮೇ 27, 2020
27 °C

ಬನ್ನೇರುಘಟ್ಟ ಅರಣ್ಯದಲ್ಲಿ ಬೆಂಕಿ ಎಚ್ಚೆತ್ತುಕೊಳ್ಳಲು ಎಚ್ಚರಿಕೆ ಗಂಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣುವಿನ ಭೀತಿಯ ಬಾಣಲೆಯಲ್ಲಿ ಬಿದ್ದು ನಾಡೆಲ್ಲ ಬೇಯುತ್ತಿರುವ ಈ ಸನ್ನಿವೇಶದಲ್ಲಿ ಕಾಡಿನಲ್ಲೂ ಬೆಂಕಿ ಕಾಣಿಸಿಕೊಂಡ ವರ್ತಮಾನ ಬಂದಿದೆ. ಬೇಸಿಗೆ ಈಗಷ್ಟೇ ಆರಂಭವಾಗಿದೆ. ಅಷ್ಟರಲ್ಲಿಯೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಪದೇ ಪದೇ ಅಗ್ನಿ ಅವಘಡಗಳು ಸಂಭವಿಸುತ್ತಿರುವುದು ಆತಂಕಕಾರಿ.

ಬೇಸಿಗೆಯು ಕಾಡುಗಳ ಪಾಲಿಗೆ ಅಪಾಯಕಾರಿ ಅವಧಿ. ಎಲ್ಲೋ ಬೀಳುವಂತಹ ಒಂದು ಸಣ್ಣ ಕಿಡಿಯೇ ಕಾಳ್ಗಿಚ್ಚಾಗಿ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಜೀವವೈವಿಧ್ಯದ ತಾಣಗಳಾದ ಅರಣ್ಯಗಳನ್ನು ಸಂರಕ್ಷಿಸಿಕೊಳ್ಳುವ ತುರ್ತು, ಹವಾಮಾನ ವೈಪರೀತ್ಯದ ಅಡ್ಡಪರಿಣಾಮಗಳು ಕಣ್ಣಿಗೆ ರಾಚುವಂತೆ ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಆದರೆ, ಸಸ್ಯ ಸಂಪತ್ತಿನ ಸಂರಕ್ಷಣೆ ವಿಷಯದಲ್ಲಿ ಅರಣ್ಯ ಇಲಾಖೆಯು ಮೇಲಿಂದ ಮೇಲೆ ಎಡವುತ್ತಲೇ ಇದೆ.

ಕಳೆದ ವರ್ಷದ ಉದಾಹರಣೆಯನ್ನೇ ತೆಗೆದುಕೊಂಡರೆ, ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ಹತ್ತಾರು ವರ್ಷಗಳಿಂದ ಬೆಳೆದು ನಿಂತಿದ್ದ 11 ಸಾವಿರ ಎಕರೆಗಳಷ್ಟು ಅಮೂಲ್ಯ ವನಸಿರಿಯು ಸಂಪೂರ್ಣ ಸುಟ್ಟು ಕರಕಲಾಗಿ, ಬೂದಿಯ ಹಾಸಿಗೆಯೇ ಅಲ್ಲೆಲ್ಲ ಹರಡಿತ್ತು. ಎಷ್ಟು ಪ್ರಾಣಿಗಳು ಮೃತಪಟ್ಟವು ಎಂಬುದು ಲೆಕ್ಕಕ್ಕೂ ಸಿಕ್ಕಿರಲಿಲ್ಲ. ಬೆಂಕಿಯ ಕೆನ್ನಾಲಗೆ ವ್ಯಾಪಿಸದಂತೆ ಮಾಡುವುದು ಕಷ್ಟಸಾಧ್ಯವಾಗಿ ಪರಿಣಮಿಸಿತ್ತು. ಹೆಲಿಕಾಪ್ಟರ್‌ನ ನೆರವು ಸಿಗದೇ ಇದ್ದಿದ್ದರೆ ಇನ್ನಷ್ಟು ಸಸ್ಯಸಂಕುಲವನ್ನು ಕಳೆದುಕೊಳ್ಳುವ ಅಪಾಯವೂ ಇತ್ತು.

ಬಂಡೀಪುರ ಮಾತ್ರವಲ್ಲದೆ ಕಾವೇರಿ ವನ್ಯಜೀವಿಧಾಮ, ಚಾಮುಂಡಿಬೆಟ್ಟ, ಕಪ್ಪತಗುಡ್ಡ ಸೇರಿದಂತೆ ರಾಜ್ಯದ ಹಲವು ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ಈ ಹಿಂದಿನ ಅವಘಡಗಳು ಯಾವುವೂ ಅರಣ್ಯ ಇಲಾಖೆಗೆ ಪಾಠವಾದಂತೆಯೇ ಇಲ್ಲ.

ಬಂಡೀಪುರದಲ್ಲಿ ಸಂಭವಿಸಿದ ಬೆಂಕಿ ಅನಾಹುತದ ತನಿಖೆಗಾಗಿ ಹರಿಕುಮಾರ್‌ ಝಾ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ‘ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳಲ್ಲಿ ವ್ಯವಸ್ಥಿತವಾಗಿ ಬೆಂಕಿ ರೇಖೆ (ಫೈರ್‌ ಲೈನ್‌) ನಿರ್ಮಿಸದಿರುವುದೇ ಕಾಳ್ಗಿಚ್ಚಿಗೆ ಪ್ರಮುಖ ಕಾರಣ’ ಎಂದು ವರದಿ ನೀಡಿತ್ತು. ಬೆಂಕಿ ರೇಖೆಗಳು ಕನಿಷ್ಠ ಹತ್ತು ಮೀಟರ್‌ ಅಗಲ ಇರಬೇಕು ಎನ್ನುವುದು ನಿಯಮ.

ಬಂಡೀಪುರ ಸೇರಿದಂತೆ ರಾಜ್ಯದ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಈ ನಿಯಮ ಪಾಲನೆಯಾಗಿಲ್ಲ ಎನ್ನುವುದಕ್ಕೆ ಝಾ ಸಮಿತಿಯ ವರದಿಯೇ ಪುರಾವೆ. ‘ಬಹುತೇಕ ಕಾಳ್ಗಿಚ್ಚುಗಳು ಮಾನವ ನಿರ್ಮಿತ. ಕಾಡಂಚಿನ ಪ‍್ರದೇಶದ ಕಿಡಿಗೇಡಿಗಳು ಹಾಕಿದ ಬೆಂಕಿಯೇ ಕಾಳ್ಗಿ‌ಚ್ಚಾಗಿರುತ್ತದೆ. ಅಂಥವರನ್ನು ನಿಯಂತ್ರಿಸಲು ಅರಣ್ಯ ಇಲಾಖೆಯು ವಿಫಲವಾಗಿದೆ’ ಎನ್ನುವುದು ಪರಿಸರ ಕಾರ್ಯಕರ್ತರ ದೂರು.

ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಕಾಡಿನಂಚಿನ ಸ್ಥಳೀಯರ ನಡುವಿನ ತಿಕ್ಕಾಟದಿಂದಲೇ ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂಬ ದೂರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅರಣ್ಯ ಕಾವಲು ಬಲವಾಗಿದ್ದರೆ, ಬೆಂಕಿ ಹಾಕುವ ಕಿಡಿಗೇಡಿಗಳನ್ನು ನಿಯಂತ್ರಿಸುವುದು ಕಷ್ಟವೇನಲ್ಲ. ಅದರೊಟ್ಟಿಗೆ ಕಾಡಂಚಿನ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನೂ ಮಾಡಬೇಕು. ಅಂತಹ ಪುಟ್ಟ ಯತ್ನಗಳು ಈಗ ಬಂಡೀಪುರದಲ್ಲಿ ಶುರುವಾಗಿರುವುದು ಆಶಾದಾಯಕ ಬೆಳವಣಿಗೆ.

ಅಲ್ಲೀಗ ಕ್ಯಾಂಟೀನ್‌ನ ಗುತ್ತಿಗೆಯನ್ನು ಸೋಲಿಗರಿಗೆ ವಹಿಸಲಾಗಿದ್ದು, ರೈತರಿಗೆ ಉಚಿತ ಸಫಾರಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಈ ಮಾದರಿಯನ್ನು ಉಳಿದ ಅರಣ್ಯ ಪ್ರದೇಶಗಳಲ್ಲೂ ಅನುಸರಿಸಬೇಕು. ‘ಬೇಸಿಗೆಯಲ್ಲಿ ಕಾಡಿನ ಹುಲ್ಲಿಗೆ ಬೆಂಕಿ ಹಾಕಿದರೆ ಅದು ಮಳೆಗಾಲದಲ್ಲಿ ಹುಲುಸಾಗಿ ಬೆಳೆಯುತ್ತದೆ’ ಎಂದು ಕೆಲವು ಗ್ರಾಮಸ್ಥರು ಹೊಂದಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಜಾಗೃತಿ ಅಭಿಯಾನ ನಡೆಸಬೇಕು.

ಸಿಬ್ಬಂದಿ ಕೊರತೆ ಕೂಡ ಅರಣ್ಯ ಸಂರಕ್ಷಣೆಯಲ್ಲಿ ಬಹುದೊಡ್ಡ ಅಡ್ಡಿಯಾಗಿದ್ದು, ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು. ಅರಣ್ಯ ಸಂರಕ್ಷಣೆಗೆ ಅಗತ್ಯವಾದ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಬೇಕು. ಕಾಡುಗಳನ್ನು ಬೆಂಕಿ ಅನಾಹುತಗಳಿಂದ ಕಾಪಾಡುವತ್ತ ಗಮನಹರಿಸಲು ಬನ್ನೇರುಘಟ್ಟ ಅವಘಡವನ್ನು ಒಂದು ಎಚ್ಚರಿಕೆ ಗಂಟೆಯಾಗಿ ಪರಿಗಣಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು