ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಹಣ್ಣು– ತರಕಾರಿ ಬೆಳೆಗಾರರ ಹಿತರಕ್ಷಣೆಗೆ ಮಾರ್ಗೋಪಾಯ ಹುಡುಕಿ

Last Updated 16 ಏಪ್ರಿಲ್ 2020, 2:05 IST
ಅಕ್ಷರ ಗಾತ್ರ

ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಸ್ಯೆಯು ನಮ್ಮ ರಾಜ್ಯವನ್ನು ಲಾಗಾಯ್ತಿನಿಂದಲೂ ಕಾಡುತ್ತಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಅದು ಹಿಂದೆಂದೂ ಇಲ್ಲದ ಮಟ್ಟಿಗೆ ಈಗ ಉಲ್ಬಣಿಸಿದೆ. ಈ ಬಿಕ್ಕಟ್ಟು, ನಮ್ಮ ಕಣ್ಣು ತೆರೆಸಬೇಕಿದೆ, ಬೆಳೆಗಾರರ ಶ್ರಮಕ್ಕೆ ಯೋಗ್ಯ ಬೆಲೆ ದೊರಕಿಸಿಕೊಡುವ ಮಾರ್ಗೋಪಾಯಗಳ ಶೋಧಕ್ಕೆ ನಮ್ಮನ್ನು ಪ್ರೇರೇಪಿಸಬೇಕಿದೆ. ಕೃಷಿಯ ಕಾಯಕಲ್ಪವೆಂದರೆ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಮತ್ತು ಅದಕ್ಕಾಗಿ ಶ್ರಮಿಸಿದವರಿಗೆ ತಕ್ಕ ಪ್ರತಿಫಲ ಸಿಗುವ ವಾತಾವರಣ ನಿರ್ಮಿಸುವುದೇ ಆಗಿದೆ. ಲಾಕ್‌ಡೌನ್ ಘೋಷಣೆಯಾದ ಆರಂಭದ ದಿನಗಳಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆಸಾಗಿಸಲೂ ರೈತರಿಗೆ ಸಾಧ್ಯವಾಗಲಿಲ್ಲ. ದ್ರಾಕ್ಷಿ, ಟೊಮೆಟೊ ತಿಪ್ಪೆಪಾಲಾದ ನಂತರ ಎಚ್ಚೆತ್ತುಕೊಂಡ ಸರ್ಕಾರವು ರೈತರಿಗೆ ‘ಹಸಿರು ಪಾಸ್‌’ ನೀಡುವುದಾಗಿಯೂ ಮತ್ತು ರೈತರ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಉಂಟಾಗಿದ್ದ ಅಡ್ಡಿ–ಆತಂಕಗಳನ್ನು ನಿವಾರಿಸುವುದಾಗಿಯೂ ಭರವಸೆ ಕೊಟ್ಟಿತು. ಆದರೆ, ಸಕಾಲಕ್ಕೆ ಹಸಿರು ಪಾಸ್‌ ಸಿಗುತ್ತಿಲ್ಲ ಎಂಬ ದೂರುಗಳು ರೈತ ಸಮುದಾಯದಿಂದ ವ್ಯಕ್ತವಾಗಿವೆ. ಹಾಪ್‌ಕಾಮ್ಸ್‌ ಮೂಲಕ ಉತ್ಪನ್ನಗಳ ಖರೀದಿಗೆ ಸರ್ಕಾರ ಪ್ರಯತ್ನಿಸುತ್ತಿದೆಯಾದರೂ ಅದರ ವಹಿವಾಟಿನ ಪ್ರಮಾಣವೇ ಕಡಿಮೆ ಇರುವುದರಿಂದ ಅದು ಸಾಂಕೇತಿಕ ಸ್ವರೂಪದಲ್ಲೇ ಉಳಿದಿದೆ ಎಂಬ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ. ರಾಜ್ಯದ ವಿವಿಧೆಡೆ ಕೆಲವು ರೈತ ಉತ್ಪಾದಕ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ರೈತರಿಗೆ ನೆರವಾಗುತ್ತಿವೆ. ಕೆಲವು ರೈತರು ಹತ್ತಿರದ ಪಟ್ಟಣಗಳಿಗೆ ತಮ್ಮ ಉತ್ಪನ್ನಗಳನ್ನು ತಂದು ಜನವಸತಿಗಳಲ್ಲಿ ಮಾರುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳನ್ನು ಸೇತುವೆಗಳಂತೆ ಬಳಸಿಕೊಂಡ ನಿದರ್ಶನಗಳೂ ಇವೆ. ಆದರೆ ಇಂತಹವುಗಳ ಸಂಖ್ಯೆ ವಿರಳ. ಬೆಂಗಳೂರು ಮತ್ತು ರಾಜ್ಯದ ಕೆಲವು ನಗರ–ಪಟ್ಟಣಗಳಲ್ಲಿ ಹಾಪ್‌ಕಾಮ್ಸ್‌ ಮೂಲಕ ಅಪಾರ್ಟ್‌ಮೆಂಟ್‌ಗಳ ಬಳಿಗೆ ‘ಮಾರುಕಟ್ಟೆ’ ಕೊಂಡೊಯ್ಯಲಾಗುತ್ತಿದೆ. ತೋಟಗಾರಿಕೆ ಇಲಾಖೆಗೆ ಈ ಕಾರ್ಯದ ಉಸ್ತುವಾರಿ ವಹಿಸಲಾಗಿದೆ. ಅಗತ್ಯವಿರುವಷ್ಟು ತರಕಾರಿ, ಹಣ್ಣನ್ನು ಜಿಲ್ಲೆಯಲ್ಲೇ ಮಾರಾಟ ಮಾಡಿ, ಉಳಿದದ್ದನ್ನು ಅಕ್ಕಪಕ್ಕದ ಜಿಲ್ಲೆಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯೂ ಆರಂಭವಾಗಿದೆ. ಶಾಸಕ–ಸಂಸದರು ಕೆಲವರು ರೈತರಿಂದ ಹಣ್ಣು– ತರಕಾರಿ ಖರೀದಿಸಿ, ತಮ್ಮ ಕ್ಷೇತ್ರದ ಮತದಾರರಿಗೆ ಉಚಿತವಾಗಿ ಹಂಚಿದ ಸುದ್ದಿಗಳು ಬಂದಿವೆ. ವ್ಯಕ್ತಿ ನೆಲೆಯ ಇಂತಹ ಮಾನವೀಯ ಸ್ಪಂದನ ಸ್ವಾಗತಾರ್ಹ. ಆದರೆ, ಇದರ ವ್ಯಾಪ್ತಿ ಸೀಮಿತವಾದುದು. ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಮುಕ್ಕಾಲು ಪಾಲು ಹಣ್ಣು– ತರಕಾರಿ ರೈತರ ಹೊಲಗಳಲ್ಲಿಯೇ ಉಳಿಯುವಂತಹ ಸ್ಥಿತಿ ಇರುವುದು ರೈತರನ್ನು ಚಿಂತೆಗೀಡುಮಾಡಿದೆ. ಸಾಲ–ನಷ್ಟದ ಹೊರೆ ಹಲವು ಪಟ್ಟು ಹೆಚ್ಚುವ ಭೀತಿ ಆವರಿಸಿದೆ.

ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಜಾಲವನ್ನು ಬಲಪಡಿಸಬೇಕಾದ ಮತ್ತು ವಿಸ್ತರಿಸಬೇಕಾದ ಅಗತ್ಯ ಇದೆ ಎಂಬುದು ಗೊತ್ತಿದ್ದರೂ ನಮ್ಮ ನೀತಿ–ನಿಲುವುಗಳಲ್ಲಿ ಅದಕ್ಕೆ ಆದ್ಯತೆ ದೊರೆತಿಲ್ಲ ಎಂಬುದು ಇಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಹೆಚ್ಚು ಢಾಳಾಗಿ ಗೋಚರಿಸುತ್ತದೆ. ಲಾಕ್‌ಡೌನ್‌ನಿಂದ ಬಹುಮುಖ್ಯವಾಗಿ ಕಲಿಯಬೇಕಾದ ಪಾಠ ಇದು.ತಕ್ಷಣಕ್ಕೆ ಬೇಕಾದ ಪರಿಹಾರ ಕ್ರಮಗಳತ್ತ ಯೋಚಿಸುತ್ತಲೇ ದೂರದೃಷ್ಟಿಯುಳ್ಳ ಕಾರ್ಯಯೋಜನೆಗಳ ಕುರಿತು ಚಿಂತಿಸಬೇಕಾಗಿದೆ.ವಿತರಣೆ ವ್ಯವಸ್ಥೆಯು ನಮ್ಮಲ್ಲಿ ಬಹುಮಟ್ಟಿಗೆ ಮಧ್ಯವರ್ತಿ ಕೇಂದ್ರಿತವಾಗಿದೆ. ಅವರ ಹಿಡಿತದಿಂದ ಇದನ್ನು ಬಿಡಿಸುವ ಬಗೆ ಹೇಗೆ ಎಂಬುದರ ಕುರಿತು ಯೋಚಿಸಬೇಕಾಗಿದೆ. ಪಂಚಾಯಿತಿ ಇಲ್ಲವೇ ಹೋಬಳಿ ವ್ಯಾಪ್ತಿಯಲ್ಲಿ ಬೆಳೆಯುವ ಉತ್ಪನ್ನಗಳನ್ನು ಸ್ಥಳೀಯ ಗ್ರಾಹಕರ ಕೈಗೆ ತಲುಪಿಸುವಂತಹ ವ್ಯವಸ್ಥೆ ಆಗಬೇಕು. ಪ್ರಾಯೋಗಿಕ ನೆಲೆಯಲ್ಲಾದರೂ ಅಂತಹ ಸಾಧ್ಯತೆಗಳನ್ನು ಶೋಧಿಸಬೇಕು. ಕಾರ್ಯಸಾಧ್ಯ ಎಂದು ಮನವರಿಕೆಯಾದರೆ ಅದನ್ನುಆನಂತರ ತಾಲ್ಲೂಕು, ಜಿಲ್ಲಾ ಮಟ್ಟಕ್ಕೂ ವಿಸ್ತರಿಸಬಹುದು. ಕಾಸರಗೋಡು ಸಮೀಪದ ಮೀಯಪದವಿನಲ್ಲಿ ಬೆಳೆಗಾರರು ‘ನಮ್ಮೂರ ತರಕಾರಿ ನಮಗೆ’ ಎಂಬ ಪರಿಕಲ್ಪನೆಯಲ್ಲಿ ಹಳ್ಳಿ ಮಟ್ಟದಲ್ಲೇ ಹಣ್ಣು–ತರಕಾರಿ ಮಾರಾಟದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂಥ ಪ್ರಯೋಗಗಳು ಮಾದರಿಯಾಗಬೇಕು. ಕೆಎಂಎಫ್‌ ಮಾದರಿಯಲ್ಲಿ ರೈತರಿಂದ ತೋಟಗಾರಿಕಾ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವಂತಹ ಒಕ್ಕೂಟ ವ್ಯವಸ್ಥೆಯು ರೂಪುಗೊಂಡರೆ ರೈತರಿಗೆ ಅನುಕೂಲ ಆಗುತ್ತದೆ. ರೈತರು ಹಾಗೂ ಪಂಚಾಯಿತಿ ಪ್ರತಿನಿಧಿಗಳು ಈ ದಿಸೆಯಲ್ಲಿ ಪ್ರಯತ್ನಿಸಬೇಕು. ಇದಕ್ಕೆ ಮೊಬೈಲ್ ಆ್ಯಪ್‌ಗಳಂತಹ ಡಿಜಿಟಲ್‌ ವೇದಿಕೆಗಳನ್ನೂ ಬಳಸಿದರೆ, ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT