ಮಂಗಳವಾರ, ಸೆಪ್ಟೆಂಬರ್ 21, 2021
21 °C
ಅರ್ಥವ್ಯವಸ್ಥೆಯಲ್ಲಿನ ಅಸಾಮಾನ್ಯ ಬಿಕ್ಕಟ್ಟುಗಳನ್ನು ಸರಿಪ‍ಡಿಸಲು, ಅಸಾಧಾರಣವಾದ ಪರಿಹಾರ ಮಾರ್ಗಗಳನ್ನೇ ಕಂಡುಕೊಳ್ಳಬೇಕಾಗಿದೆ

ಸಂಪಾದಕೀಯ | ಜಿಡಿಪಿ ದರ ಕುಸಿತ ನಿರೀಕ್ಷಿತ ಬೇಕಿದೆ ವಿಶ್ವಾಸ ವೃದ್ಧಿ ಯತ್ನ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ದೇಶದ ಒಟ್ಟು ಆಂತರಿಕ ಉತ್ಪನ್ನದ ಏರಿಕೆ, ಇಳಿಕೆಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆಯೇ, ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರಿ ಕುಸಿತ ಕಂಡುಬಂದಿದೆ. 1996ರಲ್ಲಿ ಭಾರತವು ತ್ರೈಮಾಸಿಕದ ಆಧಾರದಲ್ಲಿ ಜಿಡಿಪಿ ಅಂಕಿ–ಅಂಶಗಳನ್ನು ದಾಖಲಿಸಿಕೊಳ್ಳುವ ಹಾಗೂ ಅದನ್ನು ಪ್ರಕಟಿಸುವ ಕೆಲಸ ಆರಂಭಿಸಿತು. ಅದಾದ ನಂತರದಲ್ಲಿ ದೇಶ ಕಂಡ ಅತ್ಯಂತ ತೀವ್ರವಾದ ತ್ರೈಮಾಸಿಕ ಕುಸಿತ ಇದು.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿಯ ಅನುಸಾರ, ತಯಾರಿಕಾ ವಲಯ (ಶೇಕಡ 39.3ರಷ್ಟು), ನಿರ್ಮಾಣ ವಲಯ (ಶೇ 50.3ರಷ್ಟು), ಗಣಿಗಾರಿಕೆ (ಶೇ 23.3ರಷ್ಟು) ತೀವ್ರ ಕುಸಿತ ದಾಖಲಿಸಿವೆ. ಮೊದಲ ತ್ರೈಮಾಸಿಕದ ಬಹುತೇಕ ಅವಧಿಯಲ್ಲಿ ದೇಶವು ಲಾಕ್‌ಡೌನ್‌ ಸ್ಥಿತಿಯಲ್ಲಿ ಇತ್ತು. ಜನಸಂಚಾರದ ಮೇಲೆ ಹಿಂದೆಂದೂ ಕಾಣದಂತಹ ನಿರ್ಬಂಧ ವಿಧಿಸಲಾಗಿತ್ತು. ಅಗತ್ಯ ವಸ್ತುಗಳನ್ನು ಹೊರತುಪಡಿಸಿದರೆ ಬೇರೆ ವಸ್ತುಗಳ ಮಾರಾಟ ಅಥವಾ ತಯಾರಿಕಾ ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡಿದ್ದವು. ಕೆಲಸ ಇಲ್ಲದುದರ ಪರಿಣಾಮವಾಗಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದರು; ಮಾನವ ಶ್ರಮವನ್ನು ಹೆಚ್ಚು ಬೇಡುವ ವಲಯಗಳು ಲಾಕ್‌ಡೌನ್‌ ಸಡಿಲಿಕೆ ನಂತರ ಕಾರ್ಮಿಕರ ಕೊರತೆ ಎದುರಿಸಿದವು. ಜನರ ಸಂಚಾರದ ಮೇಲೆ ನಿರ್ಬಂಧವೆಂದರೆ, ಹಣದ ಮುಕ್ತ ಹರಿವಿನ ಮೇಲೆ ಹಿಂದೆಂದೂ ಕಾಣದಿದ್ದ ನಿರ್ಬಂಧ ಎಂದೇ ಅರ್ಥ. ಇವೆಲ್ಲವುಗಳ ಪರಿಣಾಮ ಈಗ ಜಿಡಿಪಿಯಲ್ಲಿ ಕಂಡುಬಂದಿರುವ ದಾಖಲೆಯ ಕುಸಿತ.

ಇದು ನಿರೀಕ್ಷಿತ ಎಂಬುದರಲ್ಲಿ ಎಳ್ಳಷ್ಟೂ ಅನುಮಾನ ಇಲ್ಲ. ಆದರೆ, ದೇಶ ಈಗ ಅನ್‌ಲಾಕ್‌ ಪ್ರಕ್ರಿಯೆಯಲ್ಲಿ ಇದೆ, ಇನ್ನು ಮುಂದಿನ ತ್ರೈಮಾಸಿಕಗಳಲ್ಲಿ ಜಿಡಿಪಿ ಬೆಳವಣಿಗೆ ಕಾಣಬಹುದು ಎಂದು ಸರಳವಾದ ತೀರ್ಮಾನಗಳನ್ನು ನೀಡಲು ಆಗದ ಸ್ಥಿತಿ ಇದೆ ಎಂಬುದನ್ನು ಗಮನಿಸಬೇಕು.

ಕೇಳಲು: Podcast ಸಂಪಾದಕೀಯ: ಜಿಡಿಪಿ ದರ ಕುಸಿತ ನಿರೀಕ್ಷಿತ ಬೇಕಿದೆ ವಿಶ್ವಾಸ ವೃದ್ಧಿ ಯತ್ನ

ಲಾಕ್‌ಡೌನ್‌ಗೂ ಹಿಂದಿನ ಅವಧಿಯಲ್ಲಿ ಕೂಡ ದೇಶದ ಜಿಡಿಪಿ ಹೆಚ್ಚಳದ ಪ್ರಮಾಣವು ಒಂದು ತ್ರೈಮಾಸಿಕದಿಂದ ಇನ್ನೊಂದು ತ್ರೈಮಾಸಿಕಕ್ಕೆ ಕುಸಿಯುತ್ತ ಬಂದಿದೆ. ಇದಕ್ಕೆ ನೋಟು ರದ್ದತಿ ಕಾರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಸರಿಯಾದ ಪೂರ್ವಸಿದ್ಧತೆ ಇಲ್ಲದೆ ಜಾರಿಗೆ ತಂದಿದ್ದು ಕಾರಣ ಎಂದು ಅರ್ಥಶಾಸ್ತ್ರಜ್ಞರಲ್ಲಿ ಕೆಲವರು ಹೇಳಿದ್ದಿದೆ. ಲಾಕ್‌ಡೌನ್‌ಗೆ ಮೊದಲು ಅರ್ಥವ್ಯವಸ್ಥೆಯಲ್ಲಿ ಕಂಡುಬಂದಿದ್ದ ಹಿನ್ನಡೆಗೆ ಕಾರಣ ಪೂರೈಕೆ ವ್ಯವಸ್ಥೆಯಲ್ಲಿನ (ಉತ್ಪನ್ನಗಳನ್ನು ಸಿದ್ಧಪಡಿಸಿ, ತಯಾರಿಸಿ ಗ್ರಾಹಕರಿಗೆ ತಲುಪಿಸುವುದು ಹಾಗೂ ಸೇವೆಗಳನ್ನು ನೀಡುವುದು) ಲೋಪ ಅಲ್ಲ; ಇದಕ್ಕೆ ಕಾರಣ ಸೇವೆಗಳನ್ನು ಹಾಗೂ ಉತ್ಪನ್ನಗಳನ್ನು ಬಳಕೆ ಮಾಡಬೇಕಾದ ಗ್ರಾಹಕರ ಕೊಳ್ಳುವ ಶಕ್ತಿ ಕುಂದಿರುವುದು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದರು. ಅಂದರೆ ಆಗ, ಉತ್ಪಾದನಾ ವಲಯ ಹಾಗೂ ಸೇವಾ ಪೂರೈಕೆ ವಲಯ ಈಗ ಅನುಭವಿಸುತ್ತಿರುವ ಸಂಕಷ್ಟಕ್ಕೆ ಗುರಿಯಾಗಿರಲಿಲ್ಲ.

ಜಗತ್ತು ಕಂಡ ಅತ್ಯಂತ ಕಠಿಣ ಲಾಕ್‌ಡೌನ್‌ಗಳಲ್ಲಿ ಒಂದಾಗಿದ್ದ ಭಾರತದ ಲಾಕ್‌ಡೌನ್‌ ಈಗ ಗ್ರಾಹಕರ ಶಕ್ತಿಯನ್ನಷ್ಟೇ ಅಲ್ಲ, ಉದ್ಯಮಗಳ ಶಕ್ತಿಯನ್ನೂ ದೊಡ್ಡ ಪ್ರಮಾಣದಲ್ಲಿ ಉಡುಗಿಸಿದೆ. ಜಿಡಿಪಿ ದರದಲ್ಲಿ ಈಗ ಕಂಡುಬಂದಿರುವ ಕುಸಿತವು ಅತ್ಯಂತ ಅಸಾಧಾರಣ ಸಂದರ್ಭದಲ್ಲಿ ದಾಖಲಾಗಿರುವುದು ನಿಜವಾದರೂ, ಈ ಕುಸಿತವನ್ನು ಹಿಂದಿನ ಕೆಲವು ತ್ರೈಮಾಸಿಕಗಳಲ್ಲಿ ಜಿಡಿಪಿ ಬೆಳವಣಿಗೆ ಪ್ರಮಾಣದಲ್ಲಿ ಕಂಡುಬಂದಿದ್ದ ಇಳಿಕೆಯ ಜೊತೆಯಲ್ಲೇ ಗ್ರಹಿಸಲು ಯತ್ನಿಸಬೇಕು. ಹಾಗೆ ಮಾಡಿದಾಗ, ಈಗಿನ ಪರಿಸ್ಥಿತಿಯಿಂದ ಹೊರಬರುವ ದಾರಿಗಳು ಕಾಣಿಸಬಹುದು.

ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಕೇಂದ್ರವು ಆರ್ಥಿಕ ಪ್ಯಾಕೇಜನ್ನು ಘೋಷಿಸಿದೆ. ಆದರೆ, ಅದಷ್ಟೇ ಸಾಕಾಗದು, ಇನ್ನೊಂದು ಸುತ್ತಿನ ಪ್ಯಾಕೇಜ್‌ ಬೇಕು ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಗಣಿಸಬಹುದು. ಜಿಡಿಪಿ ಕುಸಿತವು ನೇರವಾಗಿ ಉದ್ಯೋಗ ನಷ್ಟ ಹಾಗೂ ಆದಾಯ ಕುಸಿತದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿಸಲು ಪೂರಕವಾಗುವ, ಹಣದ ಹರಿವನ್ನು ಇನ್ನಷ್ಟು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಕೇಂದ್ರದ ಈಗಿನ ಆರ್ಥಿಕ ಸ್ಥಿತಿಯಲ್ಲಿ ಅಂಥದ್ದೊಂದು ಕೆಲಸ ತೀರಾ ಕಷ್ಟದ್ದಾಗಿರಬಹುದು. ಆದರೆ, ಅಸಾಮಾನ್ಯ ಬಿಕ್ಕಟ್ಟಿನ ಹೊತ್ತಿನಲ್ಲಿ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳೂ ಅಸಾಧಾರಣವೇ ಆಗಿರಬೇಕಾಗುತ್ತವೆ ಎಂಬುದನ್ನು ನಿರಾಕರಿಸಲಾಗದು. ಜನಸಾಮಾನ್ಯರಲ್ಲಿನ ಆರ್ಥಿಕ ವಿಶ್ವಾಸ
ಹೆಚ್ಚಿಸದಿದ್ದರೆ, ಅರ್ಥವ್ಯವಸ್ಥೆಯಲ್ಲಿ ಇನ್ನಷ್ಟು ಬಿಕ್ಕಟ್ಟುಗಳು ಸೃಷ್ಟಿಯಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು