ಈ ವರ್ಷದ ಏಪ್ರಿಲ್–ಜೂನ್ ತ್ರೈಮಾಸಿಕದ ಅವಧಿಯಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣವು ಶೇಕಡ 7.8ರಷ್ಟು ಆಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಅಂದಾಜಿಗಿಂತ ತುಸು ಕಡಿಮೆ ಆಗಿದ್ದರೂ, ವಿಶ್ವದ ಪ್ರಮುಖ ಆರ್ಥಿಕ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಭಾರತ ಸಾಧಿಸಿದಂತೆ ಆಗಿದೆ. ಚೀನಾದ ಆರ್ಥಿಕ ಬೆಳವಣಿಗೆ ದರವು ಭಾರತದ ಬೆಳವಣಿಗೆ ದರಕ್ಕಿಂತ ಕಡಿಮೆ ಇದೆ. ಸೇವಾ ವಲಯದ ಬೆಳವಣಿಗೆ ಪ್ರಮಾಣವು ಎರಡು ಅಂಕಿಗಳಲ್ಲಿ ಇದ್ದದ್ದು, ಈ ಬೆಳವಣಿಗೆಗೆ ಬಲ ತುಂಬಿದೆ.
ಹಿಂದಿನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ನಂತರದ ಅತಿಹೆಚ್ಚಿನ ಬೆಳವಣಿಗೆ ಪ್ರಮಾಣ ಇದು. ಹೊಸ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಅರ್ಥ ವ್ಯವಸ್ಥೆಯು ಈ ಪ್ರಮಾಣದಲ್ಲಿ ಬೆಳವಣಿಗೆ ಕಂಡಿರುವುದು ಸಂತಸ ತರುವ ಸಂಗತಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ತ್ರೈಮಾಸಿಕದುದ್ದಕ್ಕೂ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 5ಕ್ಕಿಂತ ಕಡಿಮೆ ಇತ್ತು. ಇದು ಕೂಡ ಜಿಡಿಪಿ ಬೆಳವಣಿಗೆಯು ಉತ್ತೇಜನಕಾರಿ ಮಟ್ಟದಲ್ಲಿ ಇರುವುದಕ್ಕೆ ನೆರವಾಗಿ ಬಂದಿರಬಹುದು. ಆದರೆ ಜುಲೈನಲ್ಲಿ ಹಣದುಬ್ಬರ ದರವು ಮತ್ತೆ ಮಿತಿ ಮೀರಿ ಬೆಳೆದಿದೆ. ಅದರ ಪರಿಣಾಮವು ಜಿಡಿಪಿ ಬೆಳವಣಿಗೆಯ ಮೇಲೆ ಯಾವ ರೀತಿ ಇರಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ಕೃಷಿ ವಲಯವು ಜೂನ್ ತ್ರೈಮಾಸಿಕದಲ್ಲಿ ಶೇ 3.5ರಷ್ಟು ಬೆಳವಣಿಗೆ ಸಾಧಿಸಿದೆ. ತಯಾರಿಕಾ ವಲಯವು ಶೇ 4.7ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ತಯಾರಿಕಾ ವಲಯವು ಶೇ 6.1ರಷ್ಟು ಬೆಳವಣಿಗೆ ಕಂಡಿತ್ತು. ರಫ್ತು ಪ್ರಮಾಣ ತಗ್ಗಿರುವುದು ತಯಾರಿಕಾ ವಲಯದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿರಬಹುದು. ಆದರೆ, ಕುಟುಂಬಗಳ ಮಟ್ಟದಲ್ಲಿ ಆಗುವ ಖರೀದಿಯು ಹೆಚ್ಚಿರುವುದು ಆಶಾದಾಯಕ ಬೆಳವಣಿಗೆ. ಇದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಮೂಲಕ ಆಗಿರುವ ವರಮಾನ ಸಂಗ್ರಹ ದಲ್ಲಿಯೂ ಗೊತ್ತಾಗುತ್ತಿದೆ.
ಈ ಬಾರಿಯ ಆರ್ಥಿಕ ಬೆಳವಣಿಗೆ ದರಕ್ಕೆ ಕೃಷಿ ವಲಯ ಹಾಗೂ ಸೇವಾ ವಲಯದಲ್ಲಿ ಆಗಿರುವ ಬೆಳವಣಿಗೆಯ ಕೊಡುಗೆ ದೊಡ್ಡದಿದೆ. ಆದರೆ, ಈ ಬಾರಿ ಮುಂಗಾರು ಮಳೆಯು ವಾಡಿಕೆಯಂತೆ ಆಗಿಲ್ಲ. ಇದರ ಪರಿಣಾಮ ಈಗ ಅಲ್ಲಲ್ಲಿ ಅರಿವಿಗೆ ಬರುತ್ತಿದೆ. ಜೂನ್ ನಂತರದಲ್ಲಿ ಆಹಾರ ವಸ್ತುಗಳ ಹಣದುಬ್ಬರದಲ್ಲಿ ಹೆಚ್ಚಳ ಆಗಿದೆ. ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯು ತಕ್ಷಣಕ್ಕೆ ನಿಲ್ಲುವ ಸಾಧ್ಯತೆ ಇಲ್ಲ. ಮಳೆಯ ಕೊರತೆಯು ದೇಶದ ಗ್ರಾಮೀಣ ಪ್ರದೇಶಗಳ ಜನರ ಆದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಹೆಚ್ಚಿನ ಅಧ್ಯಯನದ ಅಗತ್ಯ ಇಲ್ಲ. ಇದರ ಪರಿಣಾಮವಾಗಿ, ಗ್ರಾಮೀಣ ಪ್ರದೇಶಗಳ ಜನರನ್ನು ಗುರಿಯಾಗಿಸಿಕೊಂಡಿರುವ ವಿವಿಧ ಉದ್ಯಮ ವಲಯಗಳೂ ತೊಂದರೆ ಅನುಭವಿಸಬೇಕಾಗಬಹುದು. ಅದು ಯಾವ ಪ್ರಮಾಣದಲ್ಲಿ ಇರುತ್ತದೆ ಎಂಬುದು ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಅಂಕಿ–ಅಂಶಗಳು ಪ್ರಕಟವಾದಾಗ ಗೊತ್ತಾಗಲಿದೆ.
ಹಣದುಬ್ಬರವು ಮತ್ತೆ ಹೆಚ್ಚಳವಾಗಿದೆ ಎಂಬುದನ್ನು ಜುಲೈ ತಿಂಗಳ ಅಂಕಿ–ಅಂಶಗಳು ಹೇಳಿವೆ. ಇದನ್ನು ನಿಯಂತ್ರಿಸಲು ಆರ್‌ಬಿಐ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ. ಹಣಕಾಸು ನೀತಿಯ ವಿಚಾರದಲ್ಲಿ ಆರ್‌ಬಿಐ ಇನ್ನಷ್ಟು ಬಿಗಿಯಾದ ನಿಲುವು ತಾಳಿದರೆ, ಜಿಡಿಪಿ ಬೆಳವಣಿಗೆಗೆ ಪೆಟ್ಟು ಬೀಳುತ್ತದೆ. ಹೀಗಾಗಬಾರದು ಎಂದಾದರೆ, ಹಣದುಬ್ಬರದ ಪ್ರಮಾಣವು ತಗ್ಗಬೇಕು ಹಾಗೂ ಅದು ಸ್ಥಿರವಾಗಬೇಕು. ಇದು ಸಾಧ್ಯವಾಗಬೇಕು ಎಂದಾದರೆ ಸರ್ಕಾರಗಳ ನೆರವು ಬೇಕು. ಹಲವು ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ಹತ್ತಿರವಾಗುತ್ತಿದೆ.
ಲೋಕಸಭಾ ಚುನಾವಣೆ ಕೂಡ ಸನಿಹಕ್ಕೆ ಬಂದಿದೆ. ಹೀಗಾಗಿ, ಹಣದುಬ್ಬರ ನಿಯಂತ್ರಣದ ವಿಚಾರದಲ್ಲಿ ಸರ್ಕಾರಗಳಿಂದ ಒಂದಿಷ್ಟು ನೆರವು ಸಿಗುವುದು ಖಚಿತ ಎಂಬ ನಿರೀಕ್ಷೆಯನ್ನು ಆರ್‌ಬಿಐ ಹೊಂದಬಹುದೇನೋ. ಹಣದುಬ್ಬರ ನಿಯಂತ್ರಣವು ಸರ್ಕಾರಗಳಿಂದ ಸಿಗುವ ನೆರವಿನ ಪ್ರಮಾಣವು ಯಾವ ಮಟ್ಟದಲ್ಲಿ ಇರುತ್ತದೆ, ನೆರವು ಎಷ್ಟರಮಟ್ಟಿಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಆಧರಿಸಿ ನಿಂತಿದೆ. ಹಣದುಬ್ಬರದ ನಿಯಂತ್ರಣದಲ್ಲಿ ಜಿಡಿಪಿಯ ಹಿತವೂ ಅಡಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.