ಮಂಗಳವಾರ, ಅಕ್ಟೋಬರ್ 27, 2020
24 °C

ಸಂಪಾದಕೀಯ | ಗೌರವ ಡಾಕ್ಟರೇಟ್ ಖರೀದಿ ಪ್ರಜ್ಞಾವಂತಿಕೆಗೆ ಹತ್ತಿದೆ ಗೆದ್ದಲು

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಶ್ರಮ ಮತ್ತು ಸಾಧನೆಯಿಲ್ಲದೆಯೇ ಹಣ ತೆತ್ತು ಗೌರವ ಪಡೆಯಲು ಹಾತೊರೆಯುವವರನ್ನು ಬಳಸಿಕೊಳ್ಳುವ ನಕಲಿ ವಿಶ್ವವಿದ್ಯಾಲಯಗಳ ಹಾವಳಿ ಮಿತಿಮೀರಿರುವುದಕ್ಕೆ, ಮೈಸೂರಿನಲ್ಲಿ ಪೊಲೀಸರು ನಿಲ್ಲಿಸಿರುವ ಪದವಿ ಪ್ರದಾನ ಕಾರ್ಯಕ್ರಮ ಹೊಸ ಉದಾಹರಣೆ. ಹಣ ಪಡೆದು ಗೌರವ ಡಾಕ್ಟರೇಟ್‌ಗಳನ್ನು ನೀಡುತ್ತಿದ್ದ ಆರೋಪದ ಮೇಲೆ ಮೈಸೂರಿನ ಪೊಲೀಸರು ಇಬ್ಬರನ್ನು ಬಂಧಿಸಿ, ವಂಚನೆಯ ಪ್ರಕರಣ ದಾಖಲಿಸಿದ್ದಾರೆ.

ಕೊರೊನಾ ಸೋಂಕಿನ ಭೀತಿ ಹೆಚ್ಚಾಗಿರುವ ಸಂದರ್ಭದಲ್ಲೂ ಗೌರವ ಡಾಕ್ಟರೇಟ್‌ ದಂಧೆ ಚಾಲ್ತಿಯಲ್ಲಿರುವುದು ಹಾಗೂ ‘ಗೌರವ’ ಪಡೆಯಲು 142 ಮಂದಿ ಸೇರಿದ್ದುದು ಅಚ್ಚರಿ ಮತ್ತು ಆತಂಕ ಹುಟ್ಟಿಸುವಂತಿದೆ. ಆ ಪಟ್ಟಿಯಲ್ಲಿ ಹರಿಹರದ ಶಾಸಕ ಎಸ್‌.ರಾಮಪ್ಪ ಅವರು ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು, ರಾಜಕಾರಣಿಗಳು, ಪತ್ರಕರ್ತರು ಹಾಗೂ ಸ್ವಾಮೀಜಿಗಳಿದ್ದಾರೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದಲೂ ಡಾಕ್ಟರೇಟ್‌ ಗೌರವ ಪಡೆಯಲು ಜನ ಬಂದಿದ್ದುದು, ದಂಧೆ ಅದೆಷ್ಟು ವ್ಯಾಪಕ ಎಂಬುದನ್ನು ಸೂಚಿಸುವಂತಿದೆ. ಸಮಾರಂಭಕ್ಕೆ ಬಂದಿದ್ದ ಬಹುತೇಕ ಮಂದಿ ₹ 20 ಸಾವಿರದಿಂದ ₹ 1 ಲಕ್ಷದವರೆಗೆ ಹಣ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಮದರ್‌ ತೆರೆಸಾ ಹೆಸರಿನ ಅಮೆರಿಕದ ವಿಶ್ವವಿದ್ಯಾಲಯವೊಂದು ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ 100ಕ್ಕೂ ಹೆಚ್ಚು ಮಂದಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿತ್ತು. ವ್ಯಕ್ತಿಯೊಬ್ಬನ ವಿಶೇಷ ಸಾಧನೆಗಾಗಿ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನು ನೀಡುತ್ತವೆ. ಈ ಗೌರವವನ್ನು ನೀಡುವ ಮೂಲಕ ವಿಶ್ವವಿದ್ಯಾಲಯಗಳು ತಮ್ಮ ಗೌರವವನ್ನೂ ಹೆಚ್ಚಿಸಿಕೊಳ್ಳುತ್ತವೆ. ಆದರೆ, ನಕಲಿ ವಿಶ್ವವಿದ್ಯಾಲಯಗಳು ಯಾರಿಗೆ ಬೇಕಾದರೂ ‘ಗೌರವ’ವನ್ನು ಮಾರುವ ಮೂಲಕ, ಡಾಕ್ಟರೇಟ್‌ ಪದವಿಯ ಗೌರವವನ್ನೇ ಪೇಟೆಯ ಸರಕಾಗಿಸಿವೆ. ಈ ಬೀದಿವ್ಯಾಪಾರದ ‘ಗೌರವ ಪದವಿ’ಗಳ ಅಬ್ಬರದಲ್ಲಿ ಶೈಕ್ಷಣಿಕ ಸಂಸ್ಥೆಗಳ ನೈಜ ಡಾಕ್ಟರೇಟ್‌ ಪದವಿಗಳೇ ಹೊಳಪು ಕಳೆದುಕೊಳ್ಳುವಂತಾಗಿದೆ.

ಗೌರವ ಡಾಕ್ಟರೇಟ್‌ ದಂಧೆ ಕಳೆದ ವರ್ಷವೂ ಸುದ್ದಿಯಲ್ಲಿತ್ತು. ಭೀಮಾತೀರದ ಎರಡು ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಒಬ್ಬರಿಗೆ ‘ಏಷ್ಯನ್ ಇಂಟರ್‌ನ್ಯಾಷನಲ್‌ ಇಂಡೊನೇಷ್ಯಾ’ ಹೆಸರಿನ ವಿಶ್ವವಿದ್ಯಾಲಯವು ಪದವಿಯನ್ನು ನೀಡಿತ್ತು. ಮಂಡ್ಯ ಜಿಲ್ಲೆಯಲ್ಲಿ ನೂರಾರು ಮಂದಿ ಗೌರವ ಡಾಕ್ಟರೇಟ್‌ ಪದವಿ ಪಡೆದಿದ್ದುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹೀಗೆ ಹಣ ಕೊಟ್ಟು ಗೌರವ ಪದವಿ ಖರೀದಿಸಿದವರು, ತಮ್ಮ ಹೆಸರಿನ ಜೊತೆಗೆ ‘ಡಾಕ್ಟರೇಟ್‌’ ಅಂಟಿಸಿಕೊಂಡು ಸಂಭ್ರಮಿಸುತ್ತಾರೆ. ಅವರ ಸಾಧನೆಯನ್ನು ಬಿಂಬಿಸುವ ಹೋರ್ಡಿಂಗ್‌–ಕಟೌಟ್‌ಗಳು ಊರುಕೇರಿಗಳಲ್ಲಿ ರಾರಾಜಿಸುತ್ತವೆ. ಈ ಡಾಕ್ಟರೇಟ್‌ ಸಂಭ್ರಮದ ಪ್ರದರ್ಶನವು ವರ್ಷಗಟ್ಟಲೆ ಅಧ್ಯಯನ ಮಾಡಿ ಪ್ರೌಢಪ್ರಬಂಧ ರಚಿಸಿ ಪಿಎಚ್‌.ಡಿ. ಪಡೆದವರನ್ನು ನಾಚಿಸುವಂತಿರುತ್ತದೆ. ವ್ಯಾಪಾರ ವಹಿವಾಟಿನ ವೃದ್ಧಿಗೆ ಹಾಗೂ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಅಥವಾ ಬದಲಿಸಿಕೊಳ್ಳುವ ಉದ್ದೇಶದಿಂದ ಡಾಕ್ಟರೇಟ್‌ ಪದವಿ ಖರೀದಿಸುವವರೂ ಇದ್ದಾರೆ. ಅಪೂರ್ವ ಸಾಧನೆಗೆ ಸಲ್ಲಬೇಕಾದ ಗೌರವ ಡಾಕ್ಟರೇಟ್‌ ಮಾರುಕಟ್ಟೆಯ ಸರಕಾಗಿ, ಯಾವ ವಿದ್ಯಾರ್ಹತೆ ಹಾಗೂ ಸಾಧನೆ ಇಲ್ಲದವರೂ ಪದವಿಯನ್ನು ಖರೀದಿಸುವ ಪರಿಸ್ಥಿತಿ ರೂಪುಗೊಂಡಿದೆ.

ಬೇರೆ ರಾಜ್ಯಗಳ ಅಥವಾ ವಿದೇಶಗಳ ಹೆಸರಿನ ವಿಶ್ವವಿದ್ಯಾಲಯಗಳು ‘ಪ್ರಮಾಣ ಪತ್ರ’ಗಳನ್ನು ಹಂಚುವ ದಂಧೆಯನ್ನು ವ್ಯವಸ್ಥಿತವಾಗಿ ನಡೆಸುತ್ತಿವೆ. ಈ ನಕಲಿ ವಿಶ್ವವಿದ್ಯಾಲಯಗಳ ಏಜೆಂಟರು ಜಿಲ್ಲೆ–ತಾಲ್ಲೂಕು ಮಟ್ಟಗಳಲ್ಲಿ ಸಕ್ರಿಯರಾಗಿದ್ದು, ಸಮಾಜದ ವಿವಿಧ ವರ್ಗಗಳಲ್ಲಿನ ಜನರಿಗೆ ಗೌರವದ ಆಸೆ ತೋರಿಸಿ ಹಣ ದೋಚುತ್ತಿದ್ದಾರೆ. ರಾಜಕಾರಣಿಗಳು, ಕಲಾವಿದರು, ಶಿಕ್ಷಕರು, ಪತ್ರಕರ್ತರು, ಧಾರ್ಮಿಕ ಮುಖಂಡರು ಗೌರವ ಡಾಕ್ಟರೇಟ್‌ ಖರೀದಿಸುತ್ತಿರುವುದನ್ನು ನೋಡಿದರೆ ಪ್ರಜ್ಞಾವಂತಿಕೆಯ ಪರಿಕಲ್ಪನೆಗೇ ಕಿಲುಬು ಹತ್ತಿದಂತಿದೆ. ಡಾಕ್ಟರೇಟ್‌ಗಳ ಗೌರವ ಉಳಿಸಲಿಕ್ಕಾಗಿ, ನಕಲಿ ವಿಶ್ವವಿದ್ಯಾಲಯಗಳ ವ್ಯಾಪಾರಕ್ಕೆ ಕಡಿವಾಣ ಹಾಕುವುದನ್ನು ಸರ್ಕಾರ ಹಾಗೂ ಶಿಕ್ಷಣ ಕ್ಷೇತ್ರ ಗಂಭೀರವಾಗಿ ಪರಿಗಣಿಸಬೇಕು.

ಡಾಕ್ಟರೇಟ್‌ ವ್ಯಾಪಾರಿಗಳ ಜೊತೆಗೆ ದುಡ್ಡು ಕೊಟ್ಟು ಪದವಿ ಪಡೆಯುವವರ ಮೇಲೆಯೂ ಕ್ರಮ ಜರುಗಿಸಬೇಕು. ಇಲ್ಲದೆ ಹೋದರೆ ‘ಡಾಕ್ಟರ್‌’ಗಳ ಸಂಖ್ಯೆ ಮಿತಿಮೀರಿ, ಶೈಕ್ಷಣಿಕ ವ್ಯವಸ್ಥೆಯೇ ನಗೆಪಾಟಲಿಗೀಡಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು