ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಅನಪೇಕ್ಷಿತ, ಅಸಾಂವಿಧಾನಿಕ

Last Updated 21 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಚುನಾಯಿತ ಸರ್ಕಾರವೊಂದು ಅಸ್ತಿತ್ವದಲ್ಲಿ ಇರುವಾಗಲೇ, ಕೋವಿಡ್–19ಸಾಂಕ್ರಾಮಿಕದ ಪರಿಸ್ಥಿತಿ ಪರಿಶೀಲಿಸಲು ರಾಜ್ಯಪಾಲ ವಜುಭಾಯಿ ವಾಲಾ ಅವರು ಸರ್ವಪಕ್ಷ ಸಭೆ ನಡೆಸಿರುವುದು ಸಂವಿಧಾನದ ಮೂಲ ತತ್ವಗಳ ಉಲ್ಲಂಘನೆ. ದೇಶದ ಒಕ್ಕೂಟ ವ್ಯವಸ್ಥೆಯ ನಿಯಮಗಳಿಗೂ ಇದು ವಿರುದ್ಧ. ಆದರೆ, ಹೀಗೆ ಮಾಡಿದ್ದರ ಹೊಣೆಯನ್ನು ವಾಲಾ ಅವರೊಬ್ಬರ ಮೇಲೆಯೇ ಹೊರಿಸಲಾಗದು. ಇತ್ತೀಚೆಗೆ ನಡೆದ ರಾಜ್ಯಪಾಲರ ಸಮ್ಮೇಳನದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂತಹ ಸಭೆ ನಡೆಸುವಂತೆ ರಾಜ್ಯಪಾಲರಿಗೆ ಸೂಚಿಸಿದ್ದರು. ಆದರೆ ಚುನಾಯಿತ ರಾಜ್ಯ ಸರ್ಕಾರದ ಆಡಳಿತದಲ್ಲಿ ರಾಜ್ಯಪಾಲರು ನೇರ ಹಸ್ತಕ್ಷೇಪ ನಡೆಸುವಂತಿಲ್ಲ ಎನ್ನುವುದನ್ನು ಸಂವಿಧಾನದ ಹಲವು ವಿಧಿಗಳು ಸ್ಪಷ್ಟಪಡಿ
ಸಿವೆ. ಸಂವಿಧಾನದ 154ನೇ ವಿಧಿಯು ಸರ್ಕಾರದ ಕಾರ್ಯಾನುಷ್ಠಾನದ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಿದ್ದರೂ, ‘ರಾಜ್ಯ ಸಚಿವ ಸಂಪುಟದ ನೆರವು ಮತ್ತು ಸಲಹೆಯಂತೆ ರಾಜ್ಯಪಾಲರು ಕಾರ್ಯನಿರ್ವ ಹಿಸಬೇಕು’ ಎಂದು 163ನೇ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಕೋವಿಡ್–19ರ ಸವಾಲನ್ನು ನಿಭಾಯಿಸುವುದು ರಾಜ್ಯ ಸರ್ಕಾರದ ಹೊಣೆ ಎನ್ನುವು ದರಲ್ಲಿ ಎರಡು ಮಾತಿಲ್ಲ. ರಾಜ್ಯಪಾಲರು ಕರೆದ ಸರ್ವಪಕ್ಷ ಸಭೆಯು ಸದುದ್ದೇಶದಿಂದ ಕೂಡಿದ್ದು ಎಂದು ಎಷ್ಟೇ ವಾದಿಸಿದರೂ, ಸಚಿವ ಸಂಪುಟದ ಅಧಿಕಾರದಲ್ಲಿ ಇದು ನೇರ ಹಸ್ತಕ್ಷೇಪ ಎನ್ನದೇ ನಿರ್ವಾಹವಿಲ್ಲ. ಸಚಿವ ಸಂಪುಟದ ಸಲಹೆಗಳಿಗೆ ವ್ಯತಿರಿಕ್ತವಾಗಿ ಅಥವಾ ಹೊರತಾಗಿ ರಾಜ್ಯಪಾಲರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡಾ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ. ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯದ ಮುಖ್ಯಮಂತ್ರಿ ಪೂರ್ತಿ ವಿಫಲರಾಗಿದ್ದು, ತನ್ನ ಇತರ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಲು ಅಸಾಧ್ಯ ಎನ್ನುವ ಪರಿಸ್ಥಿತಿ ಇದ್ದರೆ ಮಾತ್ರ ರಾಜ್ಯ ಪಾಲರು ಮಧ್ಯಪ್ರವೇಶಿಸಿ ಇಂತಹ ಸಭೆಗಳನ್ನು ನಡೆಸಬಹುದು. ಸಂವಿಧಾನದ 353ನೇ ವಿಧಿಯ ಅನ್ವಯ ತುರ್ತುಪರಿಸ್ಥಿತಿ ಹೇರಿದ್ದರೆ, ರಾಷ್ಟ್ರಪತಿಯ ವಿಶೇಷ ಅನುಮೋದನೆಯಂತೆ ರಾಜ್ಯಪಾಲರು ಸಚಿವ ಸಂಪುಟದ ಸಲಹೆ, ಸೂಚನೆಗಳನ್ನೂ
ತಿರಸ್ಕರಿಸಬಹುದು. ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್–19ರಿಂದಾಗಿ ಆಸ್ಪತ್ರೆ ಸೇರಿದ್ದರೂ, ಸಚಿವ ಸಂಪುಟದ ಸದಸ್ಯರ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದು ಆಡಳಿತಾತ್ಮಕ ವಿಷಯಗಳಲ್ಲಿ ಸಲಹೆ–ಸೂಚನೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಪೂರ್ಣ ವಿಫಲರಾಗಿದ್ದಾರೆ ಎಂದು ರಾಜ್ಯಪಾಲರಿಗೆ ಮನವರಿಕೆ ಆಗಿದ್ದರೆ, ಅವರು ಸಂವಿಧಾನದ 356ನೇ ವಿಧಿಯನ್ವಯ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದಿತ್ತು. ಇವೆಲ್ಲವನ್ನೂ ಬಿಟ್ಟು ರಾಜ್ಯಪಾಲರು ನೇರವಾಗಿ ತಾವೇ ಅಧ್ಯಕ್ಷತೆ ವಹಿಸಿ ಸರ್ವಪಕ್ಷಗಳ ನಾಯಕರ ಸಭೆ ನಡೆಸಿರುವುದು ಸಂವಿಧಾನದ ವಿಧಿಗಳಿಂದ ಹೊರತಾದ ನಡೆ. ಮುಖ್ಯಮಂತ್ರಿಯವರ ಅಧಿಕಾರದಲ್ಲಿ ರಾಜ್ಯಪಾಲರು ನೇರ ಹಸ್ತಕ್ಷೇಪ ನಡೆಸಿರುವುದು ಅನಪೇಕ್ಷಿತ ಮತ್ತು ಅಸಾಂವಿಧಾನಿಕ.

ಸಂವಿಧಾನದ ವಿಧಿಗಳ ಇಂತಹ ಉಲ್ಲಂಘನೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ಕಟುವಾಗಿ ವಿರೋಧಿಸಬೇಕಿದೆ. ಸಂವಿಧಾನದ ವಿಧಿ, ಸತ್ಸಂಪ್ರದಾಯ ಮತ್ತು ಪೂರ್ವಪರಂಪರೆಗಳನ್ನು ಉಲ್ಲಂಘಿಸುವ ರಾಜ್ಯಪಾಲರ ಇಂತಹ ನಡೆಗಳಿಗೆ ರಾಜಕೀಯ ಪಕ್ಷಗಳು ಇನ್ನು ಮುಂದೆ ಯಾವುದೇ ಕಾರಣಕ್ಕೂ ಅವಕಾಶ ನೀಡಕೂಡದು. ‘ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದೇ ಸಂವಿಧಾನಬಾಹಿರ. ಆದರೆ ರಾಜ್ಯಪಾಲರಿಗೆ ಗೌರವ ಕೊಡಬೇಕು ಎಂದು ಈ ಸಭೆಯಲ್ಲಿ ಭಾಗವಹಿಸಿ ದ್ದೇನೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಕೂಡಾ ರಾಜ್ಯಪಾಲರ ನಡೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ‘ರಾಜ್ಯದಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿ ಇರುವಾಗ ರಾಜ್ಯಪಾಲರ ಈ ನಡೆ ಹೊಸ ವ್ಯವಸ್ಥೆಗೆ ನಾಂದಿ ಹಾಡಿದೆ’ ಎಂದು ಅವರು ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ. ರಾಜ್ಯಪಾಲರ ಇಂತಹ ಹಸ್ತಕ್ಷೇಪಕ್ಕೆ ರಾಜಕೀಯ ಪಕ್ಷಗಳು ನೇರ ವಿರೋಧ ವ್ಯಕ್ತಪಡಿಸದಿದ್ದರೆ, ಮುಂದೊಂದು ದಿನ ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ರಾಜ್ಯಪಾಲರ ಅನಗತ್ಯ ಹಸ್ತಕ್ಷೇಪಗಳು ಹೆಚ್ಚಾಗಿ, ಮುಖ್ಯಮಂತ್ರಿ ಹುದ್ದೆಯೇ ಅಪ್ರಸ್ತುತ ಎನ್ನುವ ವಾತಾವರಣ ನಿರ್ಮಾಣವಾಗಬಹುದು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳನ್ನು ತನ್ನ ಕೈಗೊಂಬೆಯಂತೆ ಪರಿಗಣಿಸುವುದು ಎಳ್ಳಷ್ಟೂ ಸರಿಯಲ್ಲ. ಹಾಗೆ ನೋಡಿದರೆ, ರಾಜ್ಯಪಾಲರ ಹುದ್ದೆಯೇ ಬ್ರಿಟಿಷ್ ಆಳ್ವಿಕೆಯ ಪಳೆಯುಳಿಕೆ. ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸಿ ತಮ್ಮ ಹುದ್ದೆಯ ಘನತೆಯನ್ನು ಮಣ್ಣುಪಾಲು ಮಾಡಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಚುನಾಯಿತ ಸರ್ಕಾರಗಳ ಮೇಲೆ ಸವಾರಿ ನಡೆಸುವ ಮನೋಭಾವವನ್ನು ರಾಜ್ಯಪಾಲ ಹುದ್ದೆಯಲ್ಲಿ ಇರುವವರು ಕೈಬಿಡಬೇಕು. ರಾಜ್ಯಪಾಲರ ಹುದ್ದೆಯ ಅಗತ್ಯದ ಕುರಿತು ಸಂವಿಧಾನ ತಜ್ಞರು ಮರುಪರಿಶೀಲನೆ ನಡೆಸುವುದಕ್ಕೂ ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT