ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮಾಧ್ಯಮ ಕಡಿವಾಣದ ನಿಯಮ: ಎರಡು ಅಲಗಿನ ಕತ್ತಿ

Last Updated 26 ಫೆಬ್ರುವರಿ 2021, 21:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳು, ಒಟಿಟಿ ವೇದಿಕೆಗಳು ಮತ್ತು ಡಿಜಿಟಲ್‌ ಸುದ್ದಿ ಪೋರ್ಟಲ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗುವಂತಹ ‘ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮಕ್ಕೆ ನೀತಿ ಸಂಹಿತೆ) ನಿಯಮಗಳು– 2021’ ಅನ್ನು ಕೇಂದ್ರ ಸರ್ಕಾರವು ಪ್ರಕಟಿಸಿದೆ. ಈ ಮಾಧ್ಯಮಗಳ ದುರ್ಬಳಕೆಯ ಬಗ್ಗೆ ಸರ್ಕಾರಕ್ಕೆ ಹಲವು ದೂರುಗಳು ಬಂದಿದ್ದವು. ಹಾಗಾಗಿ, ನಿಯಂತ್ರಣದ ನಿಯಮಗಳನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಹೊಸ ನಿಯಮಗಳಿಂದಾಗಿ ಈ ರೀತಿಯ ಮಾಧ್ಯಮಗಳ ಕಾರ್ಯನಿರ್ವಹಣೆಯಲ್ಲಿ ಗಣನೀಯವಾದ ಬದಲಾವಣೆ ಆಗುವ ಸಾಧ್ಯತೆ ಇದೆ. ಬಳಕೆದಾರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದಕ್ಕೆ ವೇದಿಕೆ ಒದಗಿಸುವ ಕೆಲಸವನ್ನಷ್ಟೇಸಾಮಾಜಿಕ ಜಾಲತಾಣಗಳು ಮಾಡುತ್ತವೆ. ಹಾಗಾಗಿ, ಈ ಸಂಸ್ಥೆಗಳಿಗೆ ‘ರಕ್ಷಣೆಯ ಸೌಲಭ್ಯ’ ಈವರೆಗೆ ಇತ್ತು. ಅಂದರೆ, ಬಳಕೆದಾರರು ವ್ಯಕ್ತಪಡಿಸಿದ ಅನಿಸಿಕೆಗಳಿಗೆ ಸಾಮಾಜಿಕ ಜಾಲತಾಣ ಸಂಸ್ಥೆಯನ್ನು ಹೊಣೆ ಮಾಡಲು ಅವಕಾಶ ಇರಲಿಲ್ಲ. ಆದರೆ, ಈಗ ರೂಪಿಸಿರುವ ನಿಯಮಗಳನ್ನು ಪಾಲಿಸದೇ ಇದ್ದರೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಈ ರಕ್ಷಣೆಯು ಇನ್ನು ಮುಂದೆ ದೊರೆಯುವುದಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ. ಇದು ಸಾಮಾಜಿಕ ಜಾಲತಾಣಗಳ ಸ್ವರೂಪವನ್ನೇ ಬದಲಿಸಬಹುದು. ಆಕ್ಷೇಪಾರ್ಹ ಕಂಟೆಂಟ್‌ಗಳನ್ನು (ಆಡಿಯೊ, ವಿಡಿಯೊ, ಚಿತ್ರ, ಫೋಟೊ, ಬರಹ ಇತ್ಯಾದಿ) 24 ತಾಸುಗಳಲ್ಲಿ ಅಳಿಸಿ ಹಾಕುವ ವ್ಯವಸ್ಥೆ, ದೂರು ನಿರ್ವಹಣಾ ವ್ಯವಸ್ಥೆ, ನಿಯಮಗಳ ಪಾಲನೆಗೆ ಅಧಿಕಾರಿ ನೇಮಕದಂತಹ ಅಂಶಗಳು ನಿಯಮಗಳಲ್ಲಿ ಸೇರಿವೆ. ಹೊಸ ನಿಯಮಗಳಿಂದಾಗಿ, ತಾವು ಪ್ರಸಾರ ಮಾಡುವ ಕಾರ್ಯಕ್ರಮಗಳಿಗೆ ಸ್ವಯಂಪ್ರೇರಿತ ಸೆನ್ಸಾರ್‌ನಂತಹ ವ್ಯವಸ್ಥೆಯೊಂದನ್ನು ಒಟಿಟಿ ವೇದಿಕೆಗಳು ಜಾರಿಗೆ ತರಬೇಕಾಗುತ್ತದೆ. ಡಿಜಿಟಲ್‌ ಸುದ್ದಿ ಪೋರ್ಟಲ್‌ಗಳು, ಭಾರತೀಯ ಪತ್ರಿಕಾ ಮಂಡಳಿಯ ನಡವಳಿಕೆ ಸಂಹಿತೆ ಮತ್ತು ಕೇಬಲ್ ಟಿ.ವಿ. ಜಾಲಗಳ ನಿಯಂತ್ರಣ ಕಾಯ್ದೆಯ ಕಾರ್ಯಕ್ರಮ ಸಂಹಿತೆಗೆ ಅನುಗುಣವಾಗಿಯೇ ಕೆಲಸ ಮಾಡಬೇಕಾಗುತ್ತದೆ.

ಕೇಂದ್ರ ಸರ್ಕಾರ ಪ್ರಕಟಿಸಿರುವ ನಿಯಮಗಳ ಬಗ್ಗೆ ಸಹಮತ ಮತ್ತು ಭಿನ್ನಮತಗಳೆರಡೂ ವ್ಯಕ್ತವಾಗಿವೆ. ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಹೋರಾಟಗಾರರು, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ಯತ್ನ ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಪ್ರಕಟವಾದ ‘ಪ್ರಚೋದನಕಾರಿ’ ಎಂದು ಸರ್ಕಾರ ಹೇಳಿದ್ದ 1500 ಟ್ವೀಟ್‌ ಅಥವಾ ಟ್ವಿಟರ್‌ ಖಾತೆಗಳನ್ನು ಅಳಿಸುವಂತೆ ನೀಡಿದ ಸೂಚನೆಯನ್ನು ಪಾಲಿಸಲು ಟ್ವಿಟರ್‌ ಸಂಸ್ಥೆಯು ಆರಂಭದಲ್ಲಿ ಹಿಂದೇಟು ಹಾಕಿತ್ತು. ಇದು, ಸರ್ಕಾರ ಮತ್ತು ಟ್ವಿಟರ್‌ ನಡುವೆ ಜಟಾಪಟಿಗೆ ಕಾರಣವಾಗಿತ್ತು. ರೈತರ ಪ್ರತಿಭಟನೆಗೆ ಬೆಂಬಲವಾಗಿ ರೂಪಿಸಿದ ಟೂಲ್‌ಕಿಟ್‌ ಅನ್ನು ತಿದ್ದಿ ಕೊಟ್ಟ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನವೂ ಇತ್ತೀಚೆಗೆ ಆಗಿತ್ತು. ಈ ಸಂದರ್ಭದಲ್ಲಿಯೇ ನಿಯಂತ್ರಣ ನಿಯಮಗಳು ಪ್ರಕಟವಾಗಿರುವುದು ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ಮೂಡಿಸಬಹುದು. ಯಾವುದೇ ರೀತಿಯ ಮಾಧ್ಯಮದ ಮೇಲೆ ನಿಯಂತ್ರಣ ಹೇರುವ ಪ್ರಯತ್ನವು ಎರಡು ಅಲಗಿನ ಕತ್ತಿ. ಬಾಹ್ಯವಾದ ಯಾವ ನಿಯಂತ್ರಣವೂ ಇಲ್ಲದ ಸಾಮಾಜಿಕ ಜಾಲತಾಣ, ಒಟಿಟಿ, ಡಿಜಿಟಲ್‌ ಸುದ್ದಿ ಪೋರ್ಟಲ್‌ಗಳ ಅತಿರೇಕದ ವರ್ತನೆಗೆ ಕಡಿವಾಣ ಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ದ್ವೇಷ ಕಾರಿದ, ಜನರನ್ನು ಪ್ರಚೋದಿಸಿದ, ಹಿಂಸೆಗೆ ಕಾರಣವಾದ ವಸ್ತು–ವಿಷಯಗಳು ಈ ಮಾಧ್ಯಮಗಳಲ್ಲಿ ಪ್ರಕಟವಾಗಿವೆ ಎಂಬುದು ಕಡಿವಾಣ ಬೇಕು ಎನ್ನುವ ವಾದಕ್ಕೆ ಪುಷ್ಟಿ ಕೊಡುತ್ತವೆ. ಆದರೆ, ಅಪರಿಮಿತವಾದ ಅಧಿಕಾರ ಸಿಕ್ಕಾಗ, ಜನರೆಲ್ಲರೂ ತಾವು ಬಯಸುವಂತಹ ರೀತಿಯಲ್ಲೇ ಚಿಂತಿಸಬೇಕು ಮತ್ತು ವರ್ತಿಸಬೇಕು ಎಂಬಂತೆ ಸರ್ಕಾರ ನಡೆಸುವವರು ವರ್ತಿಸಿದ ಉದಾಹರಣೆಗಳು ಜಗತ್ತಿನ ಎಲ್ಲೆಡೆಯಲ್ಲಿಯೂ ಇವೆ. ಹಾಗಾಗಿಯೇ, ಮಾಧ್ಯಮಗಳ ನಿಯಂತ್ರಣವು ಜನರ ಅಭಿವ್ಯಕ್ತಿಯ ಮೇಲೆ ಸದಾ ತೂಗುಗತ್ತಿಯಂತೆ ಇರುವುದಿಲ್ಲ ಎಂಬುದನ್ನು ಖಾತರಿಪಡಿಸುವುದು ಸರ್ಕಾರದ ಹೊಣೆ. ಎಲ್ಲೆಡೆಯೂ ಬಳಕೆಯಾಗುತ್ತಿರುವ ಈ ಮೂರೂ ರೀತಿಯ ಮಾಧ್ಯಮಗಳಿಗೆ ನಿಯಂತ್ರಣ ಹೇರುವ ಮುನ್ನ ರಾಷ್ಟ್ರವ್ಯಾಪಿ ಸಮಾಲೋಚನೆ ನಡೆಸುವುದು ಸರ್ಕಾರದ ಕರ್ತವ್ಯ; ಸಾಮಾಜಿಕ ಜಾಲತಾಣದ ನಿಯಂತ್ರಣದ ಸಂಬಂಧ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾರ್ವಜನಿಕರ ಅಭಿಪ್ರಾಯ ವನ್ನು ಕೋರಿತ್ತು. ‘ನಿಯಂತ್ರಣದ ಪರವಾಗಿ 171 ಮತ್ತು ವಿರುದ್ಧವಾಗಿ 80 ಪ್ರತಿಕ್ರಿಯೆಗಳು ಬಂದಿವೆ. ಒಟಿಟಿ ನಿಯಂತ್ರಣಕ್ಕೆ ಸಂಬಂಧಿಸಿ ದೆಹಲಿ, ಮುಂಬೈ ಮತ್ತು ಚೆನ್ನೈಯಲ್ಲಿ ಸಮಾಲೋಚನೆ ನಡೆಸಲಾಗಿದೆ’ ಎಂದು ಹೇಳಲಾಗಿದೆ. 130 ಕೋಟಿಗೂ ಹೆಚ್ಚು ಜನಸಂಖ್ಯೆಯ ಈ ದೇಶದಲ್ಲಿ ಈ ಪ್ರತಿಕ್ರಿಯೆ ಮತ್ತು ಸಮಾಲೋಚನೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಆಗಲಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT