ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಉನ್ನತ ಶಿಕ್ಷಣದಲ್ಲಿ ಮಹಿಳೆ: ಕೋವಿಡ್‌ ಸಂದರ್ಭದಲ್ಲಿ ಹಿನ್ನಡೆ

Last Updated 5 ಫೆಬ್ರುವರಿ 2023, 23:45 IST
ಅಕ್ಷರ ಗಾತ್ರ

ಕೋವಿಡ್‌–19 ಸಾಂಕ್ರಾಮಿಕದ ಪ್ರಭಾವವು ಕಡಿಮೆ ಆದ ನಂತರ ದೇಶದ ಉನ್ನತ ಶಿಕ್ಷಣ ವಲಯದಲ್ಲಿ ಏನಾಗಿದೆ ಎಂಬ ವಿಚಾರದಲ್ಲಿ 2020– 21ನೇ ಸಾಲಿನ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯು (ಎಐಎಸ್‌ಎಚ್‌ಇ) ಸಮ್ಮಿಶ್ರ ಚಿತ್ರಣವನ್ನು ನೀಡಿದೆ. ವರದಿಯು ಒಳ್ಳೆಯ ವಿಚಾರಗಳನ್ನೂ ಹೇಳಿದೆ, ಕಹಿ ಸಂಗತಿಗಳನ್ನೂ ತಿಳಿಸಿದೆ. ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಹೆಚ್ಚಾಗಿದೆ ಎಂಬುದನ್ನು ವರದಿ ಹೇಳಿದೆ. 2019–20ರಲ್ಲಿ 3.85 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರೆ, 2020–21ರಲ್ಲಿ ಆ ಸಂಖ್ಯೆಯು 4.14 ಕೋಟಿಗೆ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ವಿದ್ಯಾರ್ಥಿನಿಯರ ಪ್ರವೇಶ ಪ್ರಮಾಣವು 1.88 ಕೋಟಿ ಇದ್ದದ್ದು, 2.01 ಕೋಟಿಗೆ ಹೆಚ್ಚಾಗಿದೆ. ವಿಶ್ವವಿದ್ಯಾಲಯಗಳ ಒಟ್ಟು ಸಂಖ್ಯೆಯಲ್ಲಿ ಸರ್ಕಾರದ ವಿಶ್ವವಿದ್ಯಾಲಯಗಳ ಪ್ರಮಾಣವು ಶೇ 59.1ರಷ್ಟು ಇದೆ. ಸರ್ಕಾರದ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಪ್ರಮಾಣ ಹೆಚ್ಚಾಗಿದ್ದು, ವಿಶ್ವವಿದ್ಯಾಲಯಗಳಿಗೆ ಸೇರುವ ವಿದ್ಯಾರ್ಥಿಗಳ ಪೈಕಿ ಶೇ 73.1ರಷ್ಟು ಮಂದಿ ಇಲ್ಲಿಗೆ ಸೇರುತ್ತಿದ್ದಾರೆ. ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಬೋಧಕರ ಸಂಖ್ಯೆ ಕೂಡ ಹೆಚ್ಚಾಗಿದೆ. ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಸೇರಿದ ವಿದ್ಯಾರ್ಥಿಗಳು, ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗಿದೆ. ದೂರಶಿಕ್ಷಣ ಕೋರ್ಸ್‌ಗಳಿಗೆ ಸೇರಿದವರ ಸಂಖ್ಯೆ ಏರಿಕೆ ಕಂಡಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಹಾಗೂ ನಿರ್ದಿಷ್ಟ ಪ್ರದೇಶದಲ್ಲಿ ಕಾಲೇಜುಗಳ ಪ್ರಮಾಣದ ವಿಚಾರದಲ್ಲಿ ಕರ್ನಾಟಕವು ದೇಶದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಆದರೆ, ಎಂಜಿನಿಯರಿಂಗ್‌, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆಯಂತಹ ಕೋರ್ಸ್‌ಗಳಲ್ಲಿ ವಿದ್ಯಾರ್ಥಿನಿಯರ ಪ್ರಾತಿನಿಧ್ಯವು ಕಡಿಮೆ ಆಗಿರುವುದು ಗಂಭೀರವಾದ ವಿಚಾರ.

ವೈದ್ಯಕೀಯ ಹಾಗೂ ವಾಣಿಜ್ಯ ಕೋರ್ಸ್‌ಗಳಲ್ಲಿ ಲಿಂಗ ಸಮಾನತೆಯನ್ನು ದೊಡ್ಡ ಮಟ್ಟದಲ್ಲಿ ಸಾಧಿಸ ಲಾಗಿತ್ತು. ಆದರೆ ಈಗ ಆ ಸಮಾನತೆಯ ಹದ ತಪ್ಪಿದೆ. ತಂತ್ರಜ್ಞಾನ, ಕಾನೂನು ಮತ್ತು ವಾಣಿಜ್ಯ ಆಡಳಿತ ದಂತಹ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಪ್ರಾತಿನಿಧ್ಯ ಹೆಚ್ಚಾಗಿದೆ. ತರಗತಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ವರ್ಷಗಳಿಂದ ಸುಧಾರಣೆ ಕಂಡುಬರುತ್ತಿತ್ತು. ಆದರೆ ತರಗತಿಗಳಲ್ಲಿನ ಲಿಂಗ ಸಮಾನತೆಗೆ ಕೋವಿಡ್‌ ಸಂದರ್ಭದಲ್ಲಿ ಹಿನ್ನಡೆ ಆಗಿದೆ. ಆ ಅವಧಿಯಲ್ಲಿ ಕುಟುಂಬಗಳಲ್ಲಿ ಹಾಗೂ ಸಮಾಜದಲ್ಲಿ ಮಹಿಳೆಯರು ಹೆಚ್ಚಿನ ಬೆಲೆ ತೆರಬೇಕಾಯಿತು ಎಂಬ ವಾಸ್ತವದ ಜೊತೆಯಲ್ಲೇಈ ವಿಚಾರವನ್ನೂ ಅರ್ಥ ಮಾಡಿಕೊಳ್ಳಬೇಕು. ಮಹಿಳೆಯರು ಕೆಲಸ ಕಳೆದುಕೊಂಡ ಪ್ರಮಾಣ ಹೆಚ್ಚಿತ್ತು, ಅವರು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯಕ್ಕೆ ಈಡಾದರು, ಅವರು ಹಸಿದು ಕುಳಿತ ದಿನಗಳು ಪುರುಷರಿಗೆ ಹೋಲಿಸಿದರೆ ಹೆಚ್ಚಿದ್ದವು, ಸಮಾಜದಲ್ಲಿ ಇನ್ನೂ ಹಲವು ಬಗೆಗಳಲ್ಲಿ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸಿದರು. ಇದಕ್ಕೆ ಕಾರಣ, ಸಮಾಜದಲ್ಲಿ ಇರುವ ಪಕ್ಷಪಾತಿ ವರ್ತನೆಗಳು. ಈ ಪಕ್ಷಪಾತವನ್ನು ಹಲವು ವರ್ಷಗಳಿಂದ ಸರಿಪಡಿಸುತ್ತ ಬರುವ ಯತ್ನ ಸಾಗಿದೆ. ಶಿಕ್ಷಣವು ಅಂತಹ ಒಂದು ಕೆಲಸ. ಆದರೆ, ಕೋವಿಡ್‌ನ ಕಾರಣದಿಂದಾಗಿ ಇಡೀ ಸಮಾಜವು ಸವಾಲನ್ನು ಎದುರಿಸುತ್ತಿತ್ತು. ಆ ಸಂದರ್ಭದಲ್ಲಿ, ಹಿಂದಿನಿಂದಲೂ ಆಚರಣೆಯಲ್ಲಿ ಬಂದಿರುವ ಸಾಮಾಜಿಕ ಹಾಗೂ ಸಾಂಪ್ರದಾಯಿಕ ವರ್ತನೆಗಳು ಮತ್ತೆ ಹೆಚ್ಚು ವ್ಯಕ್ತವಾದವು. ಅವುಗಳ ಪರಿಣಾಮವು ಎಲ್ಲೆಡೆಯೂ ಕಂಡುಬಂದಿದೆ.

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಕ್ಕೆ ಸಂಬಂಧಿಸಿದ ಕೋರ್ಸ್‌ಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಆಗಿರುವುದು ಒಂದು ಪ್ರವೃತ್ತಿಯಾಗಿದೆಯೇ ಎಂಬುದನ್ನು ಈಗಲೇ ಹೇಳಲಾಗದು. ಆದರೂ, ಸರ್ಕಾರಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸೂಕ್ತ ನೀತಿಗಳನ್ನು ರೂಪಿಸುವ ಮೂಲಕ ಇಂತಹ ಬದಲಾವಣೆಗಳಿಗೆ ತಡೆಯೊಡ್ಡಬೇಕು. ವಿದ್ಯಾರ್ಥಿವೇತನ ಹಾಗೂ ಇತರ ನೆರವುಗಳನ್ನು ಒದಗಿಸಿ, ವಿದ್ಯಾರ್ಥಿನಿಯರು ಈ ಕೋರ್ಸ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಆಗುವಂತೆ ಮಾಡ ಬೇಕು. ಶಿಕ್ಷಣದ ಪ್ರತೀ ವಿಭಾಗದಲ್ಲಿಯೂ ಪ್ರತೀ ಕೋರ್ಸ್‌ನಲ್ಲಿಯೂ ಲಿಂಗ ಸಮಾನತೆ ಸಾಧಿಸುವ ಗುರಿ ಇರಬೇಕು. ಹಾಗೆ ನೋಡಿದರೆ, ವಿದ್ಯಾರ್ಥಿನಿಯರಿಗೆ ಹೆಚ್ಚು ಅನುಕೂಲ ಆಗುವ ರೀತಿಯಲ್ಲಿ ನೀತಿ ರೂಪಿಸಿದರೂ ಒಳ್ಳೆಯದೇ. ಏಕೆಂದರೆ, ಸುಶಿಕ್ಷಿತ ಹೆಣ್ಣು ಸಮಾಜಕ್ಕೆ ಸುಶಿಕ್ಷಿತ ಪುರುಷನಿಗಿಂತ ಹೆಚ್ಚಿನ ವಿಧಗಳಲ್ಲಿ ನೆರವಿಗೆ ಬರುತ್ತಾಳೆ. ಸುಶಿಕ್ಷಿತ ಹೆಣ್ಣಿನಿಂದ ಅರ್ಥ ವ್ಯವಸ್ಥೆಗೆ ಸಿಗುವ ಪ್ರಯೋಜನಗಳೂ ಹೆಚ್ಚಿನ ಮಟ್ಟದಲ್ಲಿಯೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT