ಶನಿವಾರ, ನವೆಂಬರ್ 28, 2020
20 °C

ಈರುಳ್ಳಿ ದರ ವಿಪರೀತ ಏರಿಕೆ ತಡೆಗೆ ಶಾಶ್ವತ ವ್ಯವಸ್ಥೆ ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಈರುಳ್ಳಿಯ ಚಿಲ್ಲರೆ ಮಾರಾಟ ದರ ದೇಶದಾದ್ಯಂತ ತೀವ್ರವಾಗಿ ಏರುಗತಿಯಲ್ಲಿದೆ. ಕೆಲವು ದಿನಗಳ ಹಿಂದೆ ಈರುಳ್ಳಿಯ ದರ ಕೆ.ಜಿ.ಗೆ ₹ 20ರಷ್ಟು ಮಾತ್ರ ಇತ್ತು. ದೇಶದ ಕೆಲವೆಡೆ ಈಗ ಈರುಳ್ಳಿಯ ದರ ₹ 100 ದಾಟಿದ್ದರೆ, ಹೆಚ್ಚಿನ ಪ್ರದೇಶಗಳಲ್ಲಿ ₹ 80 ಮತ್ತು ಅದಕ್ಕಿಂತ ಹೆಚ್ಚಿದೆ. ಪ್ರತಿವರ್ಷವೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ದೇಶದಲ್ಲಿ ಈರುಳ್ಳಿಯ ದರ ಅನಿಯಂತ್ರಿತ ವಾಗಿ ಏರಿಕೆಯಾಗಿ, ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಮಾನ್ಯ ಸಂಗತಿಯಂತಾಗಿದೆ. ಕೋವಿಡ್‌ ಲಾಕ್‌ಡೌನ್‌, ಉದ್ಯೋಗ ನಷ್ಟ, ದಿನಬಳಕೆಯ ವಸ್ತುಗಳ ದರ ಏರಿಕೆಯಿಂದ ಈ ಬಾರಿ ಜನರು ಹೆಚ್ಚು ಕಷ್ಟದ ಸ್ಥಿತಿಯಲ್ಲಿದ್ದಾರೆ. ಈಗ ಈರುಳ್ಳಿಯ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಸಾಮಾನ್ಯ ಜನರು ಅಕ್ಷರಶಃ ಹೈರಾಣಾಗಿದ್ದಾರೆ. ದೇಶದ ಬಹುತೇಕ ಕುಟುಂಬಗಳ ನಿತ್ಯ ಬಳಕೆಯ ವಸ್ತುಗಳಲ್ಲಿ ಈರುಳ್ಳಿಯೂ ಒಂದು. ಕೇಂದ್ರ ಕೃಷಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿವರ್ಷ 2.5 ಕೋಟಿ ಟನ್‌ಗಳಿಗೂ ಹೆಚ್ಚು ಈರುಳ್ಳಿ ಉತ್ಪಾದನೆ ಆಗುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯಗಳಾಗಿವೆ. ಈ ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯ, ಪ್ರವಾಹ ಸ್ಥಿತಿ ತಲೆದೋರಿ ಈರುಳ್ಳಿ ಬೆಳೆ ನಾಶವಾದರೆ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಆಗುವುದು ಸಹಜ. ಈ ಬಾರಿ ಮೂರೂ ರಾಜ್ಯಗಳಲ್ಲಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಭಾರಿ ಪ್ರಮಾಣದ ಮಳೆ ಬಿದ್ದಿದೆ. ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಲಭ್ಯವಾಗುವ ಬೆಳೆಯನ್ನೂ ಅತಿಯಾದ ತೇವಾಂಶದ ಕಾರಣದಿಂದ ದಾಸ್ತಾನು ಮಾಡಲಾಗದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವ ಸಗಟು ಮಾರುಕಟ್ಟೆಯ ವರ್ತಕರೂ ದಾಸ್ತಾನು ಹೊರತೆಗೆಯದೆ ದರ ಏರಿಕೆಗೆ ಕಾರಣರಾಗಿದ್ದಾರೆ ಎಂಬ ಆರೋಪಗಳಿವೆ.

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ಸೂಚನೆ ದೊರಕುತ್ತಿದ್ದಂತೆ ಕೇಂದ್ರ ಸರ್ಕಾರ ತಾನು ಕಾಯ್ದಿರಿಸಿದ್ದ ದಾಸ್ತಾನಿನಿಂದ ವಿವಿಧ ರಾಜ್ಯಗಳಿಗೆ ಈರುಳ್ಳಿ ಪೂರೈಕೆ ಆರಂಭಿಸಿದೆ. ಇತ್ತೀಚೆಗೆ ಈರುಳ್ಳಿಯನ್ನು ಅಗತ್ಯ ವಸ್ತುಗಳ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟ ಬಳಿಕ ಮಾರುಕಟ್ಟೆ ನಿಯಂತ್ರಣಕ್ಕೆ ಇದ್ದ ಅವಕಾಶಗಳು ಕಡಿಮೆಯಾಗಿವೆ. ಆದರೂ, ಕೇಂದ್ರ ಸರ್ಕಾರ ವಿಶೇಷ ಅಧಿಕಾರ ಚಲಾಯಿಸಿ ಸಗಟು ಮತ್ತು ಚಿಲ್ಲರೆ ವರ್ತಕರು ಇರಿಸಿಕೊಳ್ಳಬಹುದಾದ ಈರುಳ್ಳಿ ದಾಸ್ತಾನಿಗೆ ಮಿತಿ ಹೇರಿದೆ. ಬಿಹಾರ ವಿಧಾನಸಭಾ ಚುನಾವಣೆಯ ಕಾರಣದಿಂದಾಗಿಯೇ ಕೇಂದ್ರ ಈ ಹೆಜ್ಜೆ ಇರಿಸಿದೆ ಎಂಬ ಮಾತುಗಳನ್ನು ಪೂರ್ಣವಾಗಿ ಅಲ್ಲಗಳೆಯಲಾಗದು. ಮಿತಿ ಹೇರಿಕೆಯನ್ನು ವಿರೋಧಿಸುತ್ತಿರುವ ವರ್ತಕರು ಖರೀದಿಯಿಂದ ದೂರ ಉಳಿದು ಪ್ರತಿಭಟಿಸುತ್ತಿದ್ದಾರೆ. ಇದು ಕೂಡ ಚಿಲ್ಲರೆ ಮಾರುಕಟ್ಟೆ ಯಲ್ಲಿನ ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ. ಈರುಳ್ಳಿ ಆಮದಿಗೆ ಇದ್ದ ನಿರ್ಬಂಧಗಳನ್ನೂ ಸಡಿಲಿಸಿದ್ದು, ರಾಷ್ಟ್ರೀಯ ಸಹಕಾರ ಒಕ್ಕೂಟದ ಮೂಲಕ ಈರುಳ್ಳಿ ಆಮದಿಗೆ ಬಿಡ್‌ ಆಹ್ವಾನಿಸಲಾಗಿದೆ. ಆಮದು ಈರುಳ್ಳಿ ಮಾರುಕಟ್ಟೆಗೆ ತಲುಪುವ ಸಮಯದಲ್ಲೇ ದೇಶದೊಳಗೆ ಉತ್ಪಾದನೆಯಾದ ಈರುಳ್ಳಿಯೂ ಪೂರೈಕೆ ಆಗಲಿದೆ. ಕೆಲವು ದಿನಗಳಲ್ಲಿ ದರ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ಆಗ ದರ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕುವ ಅಪಾಯ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ. ಈರುಳ್ಳಿ ಕಾಯ್ದಿರಿಸಿದ ದಾಸ್ತಾನಿನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಬೇಕು. ಅದಕ್ಕಾಗಿ ದೇಶದಾದ್ಯಂತ ಬೃಹತ್‌ ಸಂಖ್ಯೆಯ ಉಗ್ರಾಣಗಳನ್ನು ನಿರ್ಮಿಸಬೇಕು. ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಮಾಣದಲ್ಲಿ ದರ ಏರಿಕೆ ಆಗುವುದನ್ನು ತಡೆಯಲು ಮಾರ್ಗೋಪಾಯ ರೂಪಿಸುವ ಅಗತ್ಯವೂ ಇದೆ. ಜತೆಗೆ, ದರವು ತೀರಾ ಕುಸಿದು ರೈತರು ತೊಂದರೆಗೆ ಒಳಗಾಗದಂತೆಯೂ ನೋಡಿಕೊಳ್ಳಬೇಕು. ಪಡಿತರ ವ್ಯವಸ್ಥೆಯಡಿ ರಿಯಾಯಿತಿ ದರದಲ್ಲಿ ಈರುಳ್ಳಿ ವಿತರಣೆಗೆ ಗೋವಾ ಸರ್ಕಾರ ಮುಂದಾಗಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ಈ ಮಾದರಿಯನ್ನು ಅನುಸರಿಸಿದರೆ ಬೆಲೆ ಏರಿಕೆಯ ಬವಣೆಗೆ ಸಿಲುಕಿರುವ ಜನರು ಕೊಂಚ ನಿರಾಳರಾಗಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು