ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂ‍ಪಾದಕೀಯ: ಜಿಡಿಪಿ ಪ್ರಮಾಣದಲ್ಲಿ ಹೆಚ್ಚಳ ಭರವಸೆದಾಯಕ, ಬೇಕು ಎಚ್ಚರ

Last Updated 3 ಡಿಸೆಂಬರ್ 2021, 20:00 IST
ಅಕ್ಷರ ಗಾತ್ರ

ಅರ್ಥ ವ್ಯವಸ್ಥೆಯಲ್ಲಿ ಕಂಡುಬಂದಿರುವ ಸಣ್ಣ ಪ್ರಮಾಣದ ಬೆಳವಣಿಗೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸರ್ಕಾರವು ಸಾರ್ವಜನಿಕ ವೆಚ್ಚವನ್ನು ಹೆಚ್ಚು ಮಾಡಬೇಕು

ಪ್ರಸಕ್ತ ಆರ್ಥಿಕ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಕಂಡಿರುವ ಬೆಳವಣಿಗೆ ಪ್ರಮಾಣ ಶೇಕಡ 8.4ರಷ್ಟು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ. ಹಿಂದಿನ ಆರ್ಥಿಕ ವರ್ಷದ (2020–21) ಇದೇ ತ್ರೈಮಾಸಿಕದ ದೇಶದ ಒಟ್ಟು ಆಂತರಿಕ ಉತ್ಪಾದನೆಯ ಮಟ್ಟಕ್ಕೆ ಹೋಲಿಸಿ ನೋಡಿದಾಗ, ಈ ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ. ಇದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಹಾಗೂ ಇತರ ಕೆಲವು ಹಣಕಾಸು ಸಂಸ್ಥೆಗಳು ಮಾಡಿದ್ದ ಅಂದಾಜಿಗಿಂತ ತುಸು ಹೆಚ್ಚೇ ಇದೆ. ಆದರೆ, ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ದೇಶದ ಅರ್ಥ ವ್ಯವಸ್ಥೆಯು ಲಾಕ್‌ಡೌನ್‌ ಸ್ಥಿತಿಯಿಂದ ಆಗಷ್ಟೇ ಹೊರಬರುತ್ತಿತ್ತು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಹಾಗಾಗಿ, ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಇದ್ದ ಸ್ಥಿತಿಯ ಜೊತೆ ಹೋಲಿಕೆ ಮಾಡಿ, ಈ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 8.4ಕ್ಕೆ ತಲುಪಿದೆ ಎನ್ನುವುದು ಸಮಾಧಾನ ತರುವಂಥದ್ದು ಹೌದಾದರೂ ತೀರಾ ಸಂಭ್ರಮಿಸಬಹುದಾದ ಸಂಗತಿಯೇನೂ ಅಲ್ಲ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದಲ್ಲಿ ನಡೆದ ಸೇವಾ ವಲಯ ಹಾಗೂ ಉತ್ಪಾದನಾ ವಲಯದ ಚಟುವಟಿಕೆಗಳ ಒಟ್ಟು ಮೌಲ್ಯವು₹ 35.73 ಲಕ್ಷ ಕೋಟಿ. ಕೋವಿಡ್‌ ಪೂರ್ವದ 2019–20ನೇ ಸಾಲಿನ ಸೆಪ್ಟೆಂಬರ್ ತ್ರೈಮಾಸಿಕದಲ್ಲಿನ ಜಿಡಿಪಿಯ ಒಟ್ಟು ಮೌಲ್ಯಕ್ಕೆ (₹ 35.62 ಲಕ್ಷ ಕೋಟಿ) ಹೋಲಿಸಿದರೆಇದು ತುಸು ಹೆಚ್ಚು. ಅಂದರೆ, ಜಿಡಿಪಿಯು ಕೋವಿಡ್‌ ಪೂರ್ವದ ಹಂತವನ್ನು ತಲುಪಿದೆ ಎನ್ನಲು ಅಡ್ಡಿಯಿಲ್ಲ. ಆದರೆ, ಅಂದಿನ ಮಟ್ಟವನ್ನು ದೊಡ್ಡ ಪ್ರಮಾಣದಲ್ಲಿ ಮೀರಿ ನಿಂತಿಲ್ಲ. ಅರ್ಥ ವ್ಯವಸ್ಥೆಯು ಯಾವ ದಿಕ್ಕಿನತ್ತ ಸಾಗಬಹುದು ಎನ್ನುವುದನ್ನು ತೀರಾ ಖಚಿತವಾಗಿ ಹೇಳಬಹುದಾದ ಸ್ಥಿತಿ ಈಗ ಇಲ್ಲ. ಹಣಕಾಸಿನ ಚಟುವಟಿಕೆಗಳಲ್ಲಿ ಹಲವು ಶುಭ ಸೂಚನೆಗಳು ಕಾಣುತ್ತಿವೆ. ಬಹುಕಾಲದ ನಂತರ ಹೂಡಿಕೆಗಳಲ್ಲಿ ದೊಡ್ಡ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಹಾಗಾಗಿ, ಭವಿಷ್ಯದ ಬಗ್ಗೆ ಆಶಾವಾದ ಇರಿಸಿಕೊಳ್ಳಲು ಅಡ್ಡಿಯಿಲ್ಲ.

ಸಾರ್ವಜನಿಕರು ಮಾಡುತ್ತಿರುವ ವೆಚ್ಚಗಳು 2019–20ನೇ ಹಣಕಾಸು ವರ್ಷದ ಇದೇ ತ್ರೈಮಾಸಿಕದ ಮಟ್ಟಕ್ಕೆ ಹೋಲಿಸಿದರೆ ಶೇ 3.5ರಷ್ಟು ಕಡಿಮೆ ಇವೆ. ದೇಶದ ಜಿಡಿಪಿಯಲ್ಲಿ ಈ ವೆಚ್ಚಗಳ ಕೊಡುಗೆ ಶೇ 54.5ರಷ್ಟು. ಸಾರ್ವಜನಿಕರ ಕಡೆಯಿಂದ ಆಗುತ್ತಿರುವ ವೆಚ್ಚಗಳಲ್ಲಿ ದೊಡ್ಡ ಏರಿಕೆ ಕಂಡುಬಂದಿಲ್ಲ ಎನ್ನುವುದು ಒಟ್ಟು ಆರ್ಥಿಕ ಬೆಳವಣಿಗೆಯ ಪ್ರೇರಕ ಶಕ್ತಿಗಳು ಬಲಗೊಂಡಿಲ್ಲ ಎನ್ನುವುದನ್ನು ಹೇಳುತ್ತಿವೆ. ಸಾರ್ವಜನಿಕರು ಸೇವೆಗಳನ್ನು ಪಡೆದುಕೊಳ್ಳಲು, ವಸ್ತುಗಳನ್ನು ಖರೀದಿಸಲು ನಿರ್ಭಯವಾಗಿ ಖರ್ಚು ಮಾಡದ ಹೊರತು ಹೂಡಿಕೆಯಲ್ಲಿ ಕಂಡುಬಂದಿರುವ ಏರಿಕೆಯು ಸ್ಥಿರವಾಗಿ ನಿಲ್ಲುವುದಿಲ್ಲ. ತೆರಿಗೆ ಸಂಗ್ರಹದ ಮೂಲಕ ಸರ್ಕಾರಕ್ಕೆ ಬರುವ ವರಮಾನದಲ್ಲಿ ಹೆಚ್ಚಳ ಆಗುತ್ತಿದೆ. ಆದರೆ, ಸರ್ಕಾರದ ಕಡೆಯಿಂದ ಹೂಡಿಕೆ ಹಿಂತೆಗೆತದ ಮೂಲಕ ವರಮಾನ ಸಂಗ್ರಹನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಎರಡನೆಯ ತ್ರೈಮಾಸಿಕದಲ್ಲಿ ಸರ್ಕಾರದ ಕಡೆಯಿಂದ ಆಗಿರುವ ಹೂಡಿಕೆಗಳಲ್ಲಿನ ಹೆಚ್ಚಳ ಶೇ 8ಕ್ಕಿಂತ ತುಸು ಜಾಸ್ತಿ. ಮೌಲ್ಯದ ಲೆಕ್ಕದಲ್ಲಿ ಇದು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕಡಿಮೆ. ಅರ್ಥ ವ್ಯವಸ್ಥೆಯಲ್ಲಿ ಕಂಡುಬಂದಿರುವ ಸಣ್ಣ ಪ್ರಮಾಣದ ಬೆಳವಣಿಗೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸರ್ಕಾರವು ಸಾರ್ವಜನಿಕ ವೆಚ್ಚವನ್ನು ಹೆಚ್ಚು ಮಾಡಬೇಕು. ಕೃಷಿ, ತಯಾರಿಕೆ ಮತ್ತು ಇಂಧನ ವಲಯದ ಬೆಳವಣಿಗೆ ದರವು ಎರಡನೆಯ ತ್ರೈಮಾಸಿಕದಲ್ಲಿ ಒಳ್ಳೆಯ ಮಟ್ಟದಲ್ಲಿಯೇ ಇದೆ. ಎಂಟು ಪ್ರಮುಖ ವಲಯಗಳ ಪೈಕಿ ಐದು ವಲಯಗಳಲ್ಲಿನ ಬೆಳವಣಿಗೆ ಪ್ರಮಾಣವು ಚೆನ್ನಾಗಿ ಇದೆ. ಕೆಲವು ವಲಯಗಳಲ್ಲಿನ ಬೆಳವಣಿಗೆ ಪ್ರಮಾಣವು ಕೋವಿಡ್ ಪೂರ್ವದ ಹಂತವನ್ನು ಮುಟ್ಟಿದೆ. ಆದರೆ, ಮನುಷ್ಯ–ಮನುಷ್ಯನ ನಡುವೆ ಹೆಚ್ಚಿನ ಪ್ರಮಾಣದ ಒಡನಾಟವನ್ನು ಬಯಸುವ ಕೆಲವು ವಲಯಗಳು ಕೋವಿಡ್‌ನ ಕೆಟ್ಟ ಪರಿಣಾಮವನ್ನು ಈಗಲೂ ಎದುರಿಸುತ್ತಿವೆ. ಈ ವಲಯಗಳು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ನೀಡುವ ಕೊಡುಗೆ ದೊಡ್ಡ ಮಟ್ಟದಲ್ಲಿಯೇ ಇದೆ ಎಂಬುದನ್ನು ಮರೆಯುವಂತೆ ಇಲ್ಲ.

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಹಾಲಿ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಅಂಕಿ–ಅಂಶಗಳು ಲಭ್ಯವಾದ ನಂತರದಲ್ಲಿ ದೇಶದ ಅರ್ಥ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದು ಇನ್ನಷ್ಟು ಸ್ಪಷ್ಟವಾಗಿ ಗೊತ್ತಾಗಲಿದೆ. ಉದ್ಯೋಗ ಸೃಷ್ಟಿಯು ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ವೇತನ ಹೆಚ್ಚಳದ ಪ್ರಮಾಣ ಕೂಡ ದೊಡ್ಡ ಮಟ್ಟದಲ್ಲಿ ಇಲ್ಲ ಎನ್ನುವ ವರದಿಗಳು ಇವೆ. ಇವು ಚುರುಕು ಪಡೆಯದೆ ಇದ್ದರೆ ಮಾರುಕಟ್ಟೆಯಲ್ಲಿ ಲವಲವಿಕೆ ಇರುವುದಿಲ್ಲ. ಹಣದುಬ್ಬರ ಪ್ರಮಾಣವು ನಿಯಂತ್ರಣದಲ್ಲಿ ಇರಬೇಕು ಎಂದಾದರೆ ದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆಯ ಮೇಲೆ ನಿಗಾ ಇರಿಸಲೇಬೇಕಾಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಕೊರೊನಾ ವೈರಾಣುವಿನ ಹೊಸ ರೂಪಾಂತರಿ ತಳಿ ಓಮೈಕ್ರಾನ್ ಕಾರಣದಿಂದಾಗಿ ಹಲವು ಬಗೆಯ ನಿರ್ಬಂಧಗಳು ಜಾರಿಗೆ ಬರುತ್ತಿವೆ. ಪ್ರತೀ ನಿರ್ಬಂಧವೂ ಆರ್ಥಿಕ ಚಟುವಟಿಕೆಗಳ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ಮಿತಿ ಹೇರುತ್ತದೆ. ಇದು ಕೂಡ ಆರ್ಥಿಕ ಚೇತರಿಕೆಗೆ ಅಡ್ಡಿಯಾಗಿ
ಪರಿಣಮಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT