ಶನಿವಾರ, ಜುಲೈ 24, 2021
27 °C

ಸಂಪಾದಕೀಯ | ಹುಲಿಗಳ ಸಾವು ಕಳವಳಕಾರಿ; ಸಂರಕ್ಷಣೆಗೆ ಗಮನ ಹರಿಸಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರೆ ಕಾಡು ಆರೋಗ್ಯದಿಂದ ಇದೆ ಎಂದು ಅರ್ಥ. ಆದರೆ, ವ್ಯಾಘ್ರ ಸಂತತಿಯನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ ಎಂಬುದು ನೋವಿನ ಸಂಗತಿ. ಕಳೆದ ಎಂಟು ವರ್ಷಗಳಲ್ಲಿ ಭಾರತವು 750 ಹುಲಿಗಳನ್ನು ಕಳೆದುಕೊಂಡಿದೆ ಎಂಬ ಆಘಾತಕಾರಿ ವರದಿಯು ವಿಶ್ವ ಪರಿಸರ ದಿನದಂದೇ ಪ್ರಕಟವಾಗಿದೆ. ಇದರಲ್ಲಿ ಸಹಜ ಸಾವು, ಕಳ್ಳಬೇಟೆಯೂ ಸೇರಿವೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) 2018ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಮಧ್ಯಪ್ರದೇಶವು ಅತಿಹೆಚ್ಚು, ಅಂದರೆ 526 ಹುಲಿಗಳನ್ನು ಹೊಂದಿದ ಹಿರಿಮೆಗೆ ಪಾತ್ರವಾಗಿದೆ. ಈ ರಾಜ್ಯದಲ್ಲೇ ಅತಿಹೆಚ್ಚು ಹುಲಿಗಳ ಸಾವೂ ಸಂಭವಿಸಿದೆ ಎಂಬ ಅಂಶವು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ವಿವರಗಳಿಂದ ಬೆಳಕಿಗೆ ಬಂದಿದೆ.

ಎಂಟು ವರ್ಷಗಳಲ್ಲಿ ಆ ರಾಜ್ಯದಲ್ಲಿ 173 ಹುಲಿಗಳ ಸಾವು ಸಂಭವಿಸಿದೆ. ದೇಶದಲ್ಲಿನ ಹುಲಿಗಳ ಒಟ್ಟು ಸಾವಿನಲ್ಲಿ ಕಳ್ಳಬೇಟೆಗೆ 168 ಹುಲಿಗಳು ಬಲಿಯಾಗಿವೆ ಎಂಬುದು ಕಳವಳದ ಸಂಗತಿ. 369 ಹುಲಿಗಳ ಸಾವು ಸಹಜವಾಗಿ ಆಗಿದೆ ಎಂದು ದಾಖಲಾಗಿದೆ. ಉಳಿದಂತೆ 42 ಹುಲಿಗಳು ಅಪಘಾತ ಮತ್ತು ಸಂಘರ್ಷದಲ್ಲಿ ಪ್ರಾಣ ತೆತ್ತಿವೆ. 70 ಹುಲಿಗಳ ಸಾವಿಗೆ ಕಾರಣ ಇನ್ನೂ ನಿಖರವಾಗಿ ಗೊತ್ತಾಗಿಲ್ಲ.

2018ರವರೆಗೆ ಹುಲಿಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಕರ್ನಾಟಕವು ಬರೀ ಎರಡು ಹುಲಿಗಳ ಅಂತರದಿಂದ ಎರಡನೇ ಸ್ಥಾನಕ್ಕೆ ಇಳಿಯಿತು. ಕಾಕತಾಳೀಯ ಎಂಬಂತೆ, ಈಗ ಕಳ್ಳಬೇಟೆಗೆ ಹುಲಿಗಳನ್ನು ಕಳೆದುಕೊಂಡ ಪ್ರಮಾಣದಲ್ಲೂ ಎರಡನೇ ಸ್ಥಾನದಲ್ಲಿದೆ. ಕಳ್ಳಬೇಟೆಗೆ ಮಧ್ಯಪ್ರದೇಶದಲ್ಲಿ 38 ಪಟ್ಟೆ ಹುಲಿಗಳು ಆಹುತಿ ಆಗಿವೆ. ಕರ್ನಾಟಕ ಹಾಗೂ ಮಹಾರಾಷ್ಟ್ರವು ಕಳ್ಳಬೇಟೆಯಿಂದ ತಲಾ 28 ಹುಲಿಗಳನ್ನು ಕಳೆದುಕೊಂಡಿವೆ.

2018ರ ಎನ್‌ಟಿಸಿಎ ವರದಿಯನ್ನು ಆಧರಿಸಿ, ದೇಶದಲ್ಲಿ 2,976 ಹುಲಿಗಳಿವೆ ಎಂದು ಕೇಂದ್ರ ಪರಿಸರ ಸಚಿವರು‌ ಕಳೆದ ಡಿಸೆಂಬರ್‌ನಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದರು. 2014ರಲ್ಲಿ ನಡೆಸಿದ ಗಣತಿ ಪ್ರಕಾರ, ಭಾರತದಲ್ಲಿ 2,226 ಹುಲಿಗಳಿದ್ದವು. ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ 750 ಹುಲಿಗಳು ಹೆಚ್ಚಾಗಿದ್ದವು. ಆದರೆ, ಇಷ್ಟೇ ಪ್ರಮಾಣದ ಹುಲಿಗಳು ಎಂಟು ವರ್ಷಗಳ ಅವಧಿಯಲ್ಲಿ ಸಾವಿಗೀಡಾಗಿವೆ ಎನ್ನುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ.

ಕಳ್ಳಬೇಟೆಗೆ ಕಡಿವಾಣ ಹಾಕಲು ಇನ್ನೂ ಬಿಗಿ  ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಇದು ಸೂಚಿಸುತ್ತದೆ. ಅಪಾಯದ ಅಂಚಿನಲ್ಲಿರುವ ಹುಲಿ ಮತ್ತು ಇತರ ವನ್ಯಮೃಗಗಳನ್ನು ಉಳಿಸಿ ಕೊಳ್ಳಲು ಸರ್ಕಾರ ಮತ್ತು ಜನರು ಇನ್ನಷ್ಟು ಆಸ್ಥೆ ವಹಿಸಬೇಕಾದ ಅನಿವಾರ್ಯವನ್ನೂ ಇದು ಎತ್ತಿ ಹಿಡಿಯುತ್ತದೆ.

ಭಾರತದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾದರೂ ಆವಾಸಸ್ಥಾನದ ಗಾತ್ರ ಮಾತ್ರ ಅದೇ ಪ್ರಮಾಣದಲ್ಲಿದೆ. ಹುಲಿಗಳು ಕಾಡಿನಲ್ಲಿ ಸುಮಾರು 20ರಿಂದ 50 ಚದರ ಕಿ.ಮೀ. ವ್ಯಾಪ್ತಿಯಲ್ಲಿ ತಮ್ಮ ಪ್ರಭಾವ ವಲಯವನ್ನು ಸೃಷ್ಟಿಸಿಕೊಳ್ಳುತ್ತವೆ. ಈ ವಲಯದೊಳಗೆ ಮತ್ತೊಂದು ಹುಲಿ ಕಾಲಿಟ್ಟರೆ ಘರ್ಷಣೆ ಏರ್ಪಡುತ್ತದೆ. ಸೋತ ಅಥವಾ ಹೊಸದಾಗಿ ಪ್ರವೇಶ ಬಯಸಿದ ಹುಲಿಗಳು ಕಾಡಿನ ಅಂಚಿನಲ್ಲಿ ಹೊಸ ಆವಾಸಸ್ಥಾನ ಹುಡುಕುತ್ತವೆ. ಇಂತಹ ಸಂಘರ್ಷಕ್ಕೆ ಒಳಗಾದ 101 ಹುಲಿಗಳನ್ನು 2012–19ರ ಅವಧಿಯಲ್ಲಿ ಸೆರೆ ಹಿಡಿಯಲಾಗಿದೆ.

ಪಶ್ಚಿಮಘಟ್ಟ ಮತ್ತು ಮಧ್ಯ ಭಾರತದ ಕೆಲವು ಕಾಡುಗಳ ಗಣನೀಯ ಪ್ರದೇಶದಲ್ಲಿ ಮಾತ್ರ ಪ್ರಾಣಿಗಳ ತಡೆರಹಿತ ಓಡಾಟಕ್ಕೆ ಅವಕಾಶ ಇದೆ. ಈ ಕಾಡುಗಳ ನಡುವೆ ರಸ್ತೆ ನಿರ್ಮಾಣ, ವಿದ್ಯುತ್‌ ಪ್ರಸರಣ ಮಾರ್ಗ, ರೈಲು ಮಾರ್ಗ ನಿರ್ಮಾಣ ಮತ್ತು ಗಣಿಗಾರಿಕೆಯಂತಹ ಯೋಜನೆಗಳಿಂದಾಗಿ ಕಾಡಿನ ವಿಭಜನೆ ಆಗುತ್ತಿದೆ. ಕಾಡಿನ ಸಂರಕ್ಷಣೆಗಾಗಿಯೇ ಇರುವ ಕೇಂದ್ರ ವನ್ಯಜೀವಿ ಮಂಡಳಿ ಮತ್ತು ವಿವಿಧ ರಾಜ್ಯಗಳ ವನ್ಯಜೀವಿ ಮಂಡಳಿಗಳು ಇಂತಹ ಯೋಜನೆಗಳಿಗೆ ಹಸಿರು ನಿಶಾನೆ ತೋರುತ್ತಿರುವುದು ಆತಂಕಕಾರಿ.

ಕಾಳಿ ಹುಲಿ ಅಭಯಾರಣ್ಯದ ನಡುವೆ ಹಾದು ಹೋಗಲಿರುವ ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಗೆ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯು ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ ಅನುಮತಿ ನೀಡಿರುವುದು ಇದಕ್ಕೊಂದು ಇತ್ತೀಚಿನ ನಿದರ್ಶನ. ಮೂಲ ಸೌಕರ್ಯ ಯೋಜನೆಗಳ ವಿಸ್ತರಣೆಯಿಂದ ಹುಲಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ ಕಿರಿದಾಗುತ್ತಿವೆ ಮತ್ತು ಛಿದ್ರವಾಗುತ್ತಿವೆ. ಹುಲಿ, ಆನೆಗಳ ತಡೆರಹಿತ ಸಂಚಾರಕ್ಕೆ ಕಾಡುಗಳ ನಡುವೆ ಕಾರಿಡಾರ್‌ ನಿರ್ಮಾಣವಾಗಬೇಕು. ಎಲ್ಲಾ ರೀತಿಯ ಕಾಡುಗಳ ಸುತ್ತ ಬಫರ್‌ ವಲಯ ಸೃಷ್ಟಿಯಾಗಬೇಕು. ಆಗಮಾತ್ರ ಎಲ್ಲಾ ಬಗೆಯ ಪ್ರಾಣಿಗಳ ವಲಸೆ ಸಾಧ್ಯವಾಗುತ್ತದೆ. ಇಲ್ಲವಾದರೆ ಪ್ರಾಣಿ– ಮನುಷ್ಯ ಸಂಘರ್ಷ ಹೆಚ್ಚಾಗುತ್ತಲೇ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು