ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸೋಂಕು ಪರೀಕ್ಷೆ, ತ್ವರಿತ ಫಲಿತಾಂಶದ ವಿಚಾರದಲ್ಲಿ ಅಸಡ್ಡೆ ಮಾರಕ

Last Updated 3 ಜೂನ್ 2020, 19:45 IST
ಅಕ್ಷರ ಗಾತ್ರ

ಸಾಂಕ್ರಾಮಿಕವೊಂದು ಕಾಣಿಸಿಕೊಂಡಾಗ ಅದು ಹರಡುವುದನ್ನು ತಡೆಯಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಹೊಣೆಗಾರಿಕೆ. ವ್ಯಾಪಕವಾಗಿ ಪರೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆ ಮಾಡಿ, ಸಾಂಕ್ರಾಮಿಕವು ಸಮುದಾಯಕ್ಕೆ ವ್ಯಾಪಿಸದಂತೆ ನೋಡಿಕೊಳ್ಳಬೇಕು ಎಂಬುದು ವೈದ್ಯಕೀಯ ಜಗತ್ತು ಕಂಡುಕೊಂಡ ಮಾರ್ಗ. ಕೊರೊನಾ ವೈರಾಣುವಿನ ವಿಚಾರದಲ್ಲಿಯೂ ಇದನ್ನೇ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಸಾರಿ ಸಾರಿ ಹೇಳಿದೆ. ಈ ಹಿಂದೆ ಹಲವು ಸಾಂಕ್ರಾಮಿಕಗಳನ್ನು ಜಗತ್ತು ಕಂಡಿದ್ದರೂ

ಪಸರಿಸುವ ರೀತಿ ಮತ್ತು ವೇಗದಲ್ಲಿ ಕೊರೊನಾ ವೈರಾಣು ಹೊಸತು. ಹಾಗಾಗಿ, ಪ್ರಸರಣ ತಡೆಯಲು ಹೆಚ್ಚಿನ ಗಮನ ಕೊಡಬೇಕು. ಪರೀಕ್ಷೆಗಳು ವ್ಯಾಪಕವಾಗಿ ನಡೆದು, ತ್ವರಿತವಾಗಿ ಅದರ ಫಲಿತಾಂಶ ಬಂದು ಯಾರು ಸೋಂಕಿತರು, ಅವರ ಸಂಪರ್ಕದಲ್ಲಿ ಇದ್ದವರು ಯಾರು ಎಂಬುದನ್ನೆಲ್ಲ ಪತ್ತೆ ಮಾಡಿ, ವೈರಾಣುವನ್ನು ಅಲ್ಲಿಗೆ ಸೀಮಿತಗೊಳಿಸುವ ಕೆಲಸವಾದರೆ, ಯುದ್ಧಅರ್ಧ ಗೆದ್ದಂತೆಯೇ. ಆದರೆ, ನಮ್ಮ ಈಗಿನ ಸ್ಥಿತಿ ಹೀಗೆ ಇದ್ದಂತೆ ಅನಿಸುವುದಿಲ್ಲ. ಯಾರನ್ನು, ಯಾವಾಗ ಪರೀಕ್ಷೆ ಮಾಡಿ, ಎಷ್ಟು ಬೇಗ ಫಲಿತಾಂಶ ಕೊಡಬೇಕು ಎಂಬ ವಿಚಾರದಲ್ಲಿ ಗೊಂದಲ ಇದ್ದಂತಿದೆ.

ಲಾಕ್‌ಡೌನ್‌ ಸಡಿಲಿಕೆಯಾಗಿ, ಈಗ ಅಂತರರಾಜ್ಯ ಸಂಚಾರಕ್ಕೆ ಅವಕಾಶ ಇದೆ; ವಿಮಾನಯಾನ ಆರಂಭವಾಗಿದೆ. ಹೊರ ರಾಜ್ಯಗಳಿಂದ ಬಂದವರನ್ನು ‘ಪ್ರತ್ಯೇಕವಾಸ’ದಲ್ಲಿ ಇರಿಸುವ ನಿಯಮ ಇದೆ. ಆದರೆ, ಪ್ರತ್ಯೇಕವಾಸದಲ್ಲಿ ಇದ್ದವರು ಮನೆಗೆ ಮರಳಿದ ಬಳಿಕ ಪರೀಕ್ಷೆಯ ಫಲಿತಾಂಶಗಳು ಬರುತ್ತಿವೆ ಎಂದು ವರದಿಯಾಗಿದೆ. ಇದು, ಇಂತಹ ವ್ಯಕ್ತಿಯ ಕುಟುಂಬ ಸದಸ್ಯರು, ಸಂಪರ್ಕದಲ್ಲಿರುವ ವ್ಯಕ್ತಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ವ್ಯಕ್ತಿಗೆ ಸೋಂಕು ಇದೆ ಎಂಬುದುಮನೆಗೆ ಮರಳಿದ ಮೇಲೆ ದೃಢಪಟ್ಟರೆ, ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ‘ಪ್ರತ್ಯೇಕವಾಸ’ದಲ್ಲಿ ಇರಿಸಬೇಕಾಗುತ್ತದೆ. ಸೋಂಕು ನಿರ್ವಹಣೆ ಇಷ್ಟೊಂದು ಅಧ್ವಾನವಾಗಿದ್ದರೆ, ಸಾಂಕ್ರಾಮಿಕದ ನಿಯಂತ್ರಣ ಕಷ್ಟ ಎಂಬ ಸತ್ಯವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ಪರೀಕ್ಷೆಯ ವಿಚಾರದಲ್ಲಿ ಭಾರತದಲ್ಲಿ ಅಸಡ್ಡೆ ಇದೆ ಎಂಬುದು ಹಿಂದಿನಿಂದಲೂ ಚರ್ಚೆಯಾಗುತ್ತಿರುವ ವಿಚಾರ. ಪರೀಕ್ಷೆ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಡಬ್ಲ್ಯುಎಚ್‌ಒ ಕೂಡ ಹೇಳಿತ್ತು. ಸೋಂಕು ತಡೆಗೆ ಪರೀಕ್ಷೆಯೇ ಬಹುಮುಖ್ಯವಾದ ಮಾರ್ಗ ಆಗಿರುವುದರಿಂದ ಈ ವಿಚಾರದಲ್ಲಿ ಸ್ಫಟಿಕ ಸ್ಪಷ್ಟವಾದ ನೀತಿಯನ್ನು ಸರ್ಕಾರ ರೂಪಿಸಬೇಕಿತ್ತು. ಗೊಂದಲವಿಲ್ಲದ ರೀತಿಯಲ್ಲಿ ಅದು ಅನುಷ್ಠಾನ ಆಗಬೇಕಿತ್ತು. ಈಗಿನ ನಮ್ಮ ಪರೀಕ್ಷಾ ನೀತಿಯೇ ಲೋಪಗಳಿಂದ ಕೂಡಿರಬಹುದು ಎಂದು ಭಾವಿಸುವುದಕ್ಕೆ ಕಾರಣವಿದೆ. ಕರ್ನಾಟಕದಲ್ಲಿನ ಕೊರೊನಾ ಸೋಂಕಿತರ ಪೈಕಿ ಶೇ 96ರಷ್ಟು ಮಂದಿಗೆ ರೋಗದ ಯಾವುದೇ ಲಕ್ಷಣ ಇರಲಿಲ್ಲ ಎಂಬ ಮಾಹಿತಿ ಇರುವ ವರದಿಯನ್ನು ರಾಜ್ಯದ ಕೋವಿಡ್‌ ವಾರ್‌ ರೂಮ್‌ ಪ್ರಕಟಿಸಿದೆ. ದೆಹಲಿಯ ಸೋಂಕಿತರ ಪೈಕಿ ಶೇ 75ರಷ್ಟು ಮಂದಿಗೆ ಲಕ್ಷಣಗಳು ಇರಲಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಈಚೆಗೆ ಹೇಳಿದ್ದರು.

ಜಗತ್ತಿನಾದ್ಯಂತ ಪತ್ತೆಯಾದ ಪ್ರಕರಣಗಳಲ್ಲಿ ಶೇ 80ರಷ್ಟು ಮಂದಿಗೆ ಯಾವ ಲಕ್ಷಣವೂ ಇರಲಿಲ್ಲ ಎಂದು ಡಬ್ಲ್ಯುಎಚ್‌ಒ ಕೂಡ ಹೇಳಿದೆ. ಲಕ್ಷಣ ಇರುವ ವ್ಯಕ್ತಿಗಳು ಮತ್ತು ಲಕ್ಷಣ ಇಲ್ಲದ ವ್ಯಕ್ತಿಗಳಲ್ಲಿ ಇರುವ ವೈರಾಣು ಪ್ರಮಾಣವು ಸಮಾನವಾಗಿದೆ ಎಂದು ಯುರೋಪಿಯನ್‌ ಸೆಂಟರ್‌ ಫಾರ್‌ ಡಿಸೀಸ್‌ ಪ‍್ರಿವೆನ್‌ಷನ್‌ ಆ್ಯಂಡ್‌ ಕಂಟ್ರೋಲ್‌ ಹೇಳಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ (ಐಸಿಎಂಆರ್‌) ಇತ್ತೀಚಿನ ಪರೀಕ್ಷಾ ಮಾರ್ಗಸೂಚಿಯು ಈ ವಿಚಾರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈ ಮಾರ್ಗಸೂಚಿಯಲ್ಲಿ, ಲಕ್ಷಣರಹಿತ ವ್ಯಕ್ತಿಗಳಿಗೆ ಸಂಬಂಧಿಸಿ ಒಂದು ಅಂಶ ಮಾತ್ರ ಇದೆ.

ರೋಗ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ, ಸೋಂಕಿತ ವ್ಯಕ್ತಿಯ ಜತೆ ಸಂಪರ್ಕಕ್ಕೆ ಬಂದವರನ್ನು ಸಂ‍ಪರ್ಕಕ್ಕೆ ಬಂದ ಐದು ಮತ್ತು 10ನೇ ದಿನ ಪರೀಕ್ಷೆಗೆ ಒಳಪಡಿಸಬೇಕು ಎಂಬುದೇ ಈ ಅಂಶ. ಸೋಂಕಿತರ ಪೈಕಿ ಶೇ 80ಕ್ಕೂ ಹೆಚ್ಚು ಮಂದಿಯಲ್ಲಿ ಲಕ್ಷಣ ಇಲ್ಲ ಎಂಬುದು ಸ್ಪಷ್ಟ. ಆದರೆ, ಈ ವರ್ಗವನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವೇ ಇಲ್ಲ ಎಂದು ಮಾರ್ಗಸೂಚಿ ಹೇಳುತ್ತದೆ. ಪರೀಕ್ಷೆ ಮಾಡಿದವರ ಫಲಿತಾಂಶವು ಅವರು ಇತರರಿಗೆ ಸೋಂಕು ಹರಡಿದ ಮೇಲೆ ಬರುತ್ತಿದೆ. ಕೊರೊನಾದಂತಹ ಅಪಾಯಕಾರಿಯೂ ಆಗಬಲ್ಲ ಸೋಂಕನ್ನು ತಡೆಯುವಲ್ಲಿ ಈ ರೀತಿಯ ನಿರ್ಲಕ್ಷ್ಯ ಮಾರಕವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT