ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಭ್ರಷ್ಟಾಚಾರದ ತನಿಖೆ ನಡೆಯಲಿ, ಕೋಮುಬಣ್ಣ ನೀಡುವ ಕೆಲಸ ನಿಲ್ಲಲಿ

Last Updated 6 ಮೇ 2021, 20:06 IST
ಅಕ್ಷರ ಗಾತ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೋವಿಡ್–19 ಪೀಡಿತರಿಗೆ ಹಾಸಿಗೆಗಳನ್ನು ಹಂಚುವ ಪ್ರಕ್ರಿಯೆಯಲ್ಲಿ ನಡೆಯುತ್ತಿದ್ದ ‘ಭ್ರಷ್ಟಾಚಾರ’ ಜಾಲವನ್ನು ಬಯಲಿಗೆ ಎಳೆದಿದ್ದೇವೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನ ಶಾಸಕರಾದ ಸತೀಶ ರೆಡ್ಡಿ, ಎಲ್.ಎ.ರವಿ ಸುಬ್ರಹ್ಮಣ್ಯ ಮತ್ತು ಉದಯ್ ಗರುಡಾಚಾರ್ ಅವರು ಹೇಳಿಕೊಂಡಿದ್ದಾರೆ.

ಸೋಂಕಿನ ಲಕ್ಷಣಗಳು ತೀವ್ರವಾಗಿಲ್ಲದ, ಮನೆ ಆರೈಕೆಯಲ್ಲಿ ಇರುವವರ ಹೆಸರಿನಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿ, ನಂತರ ಅವುಗಳನ್ನು ತೀರಾ ಅಗತ್ಯ ಇರುವ ರೋಗಿಗಳಿಗೆ ಭಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಇದರಲ್ಲಿ ಕೆಲವು ಆಸ್ಪತ್ರೆಗಳ ಸಿಬ್ಬಂದಿ, ಬಿಬಿಎಂಪಿ ಕೋವಿಡ್ ವಾರ್ ರೂಂ ಸಿಬ್ಬಂದಿ ಕೂಡ ಭಾಗಿಯಾಗಿರುವ ಅನುಮಾನ ಇದೆ ಎಂಬುದು ಬಿಜೆಪಿಯ ಈ ನಾಲ್ವರು ಮುಖಂಡರ ಆರೋಪದ ತಿರುಳು.

ಈಗ, ಶಾಸಕರೂ ಬಿಜೆಪಿ ಮುಖಂಡರೂ ಆಗಿರುವ ಸತೀಶ ರೆಡ್ಡಿ ಅವರು, ವಾರ್‌ ರೂಂನಲ್ಲಿ ತಮ್ಮ ಬೆಂಬಲಿಗರನ್ನು ಇರಿಸಿ, ತಮಗೆ ಬೇಕಾದವರಿಗೆ ಹಾಸಿಗೆ ಬ್ಲಾಕ್‌ ಮಾಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಕೋವಿಡ್‌ಗೆ ಒಳಗಾದವರು ಸೂಕ್ತ ಚಿಕಿತ್ಸೆ ಇಲ್ಲದೆ, ಆಮ್ಲಜನಕ ಹಾಗೂ ಆರೈಕೆ ಮಾಡುವ ಹಾಸಿಗೆ ಸಿಗದೆ ಸಾಯುತ್ತಿರುವ ಸಂದರ್ಭದಲ್ಲಿ ಇಂತಹ ಅವ್ಯವಹಾರಗಳು ನಡೆದಿವೆ ಹಾಗೂ ಈ ಅವ್ಯವಹಾರದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕೈವಾಡ ಇದೆ ಎಂಬ ಆರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಇಡೀ ಪ್ರಕರಣದ ಬಗ್ಗೆ ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ಚಿಕಿತ್ಸೆ ಸಿಗದೆ ಜನ ಸಾವಿಗೀಡಾಗುತ್ತಿರುವ ಆರೋಗ್ಯ ತುರ್ತುಸ್ಥಿತಿಯ ಸಂದರ್ಭದಲ್ಲಿ, ಭ್ರಷ್ಟ ಮಾರ್ಗದಲ್ಲಿ ಕಾಸು ಮಾಡಿಕೊಳ್ಳುವ ಹಾದಿ ಹಿಡಿದಿದ್ದವರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಅವರ ಕರಾಳಮುಖ ಸಮಾಜದ ಎದುರು ಅನಾವರಣಗೊಳ್ಳಬೇಕು.

ವಾರ್‌ ರೂಂಗೆ ದಿಢೀರ್‌ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿಯ ಜನಪ್ರತಿನಿಧಿಗಳು, ಮುಸ್ಲಿಂ ಸಮುದಾಯಕ್ಕೆ ಸೇರಿದ ಹದಿನಾರು ಜನರ ಹೆಸರುಗಳನ್ನು ಓದಿ, ‘ಇವರನ್ನೆಲ್ಲ ಏಕೆ ನೇಮಕ ಮಾಡಿಕೊಂಡಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಆ ಹದಿನಾರು ಜನ ನಿರ್ದಿಷ್ಟವಾಗಿ ಯಾವುದಾದರೂ ಅಪರಾಧ ಎಸಗಿದ್ದಾರೆಯೇ ಎಂಬುದನ್ನು ಹೇಳಿಲ್ಲ. ಅವರನ್ನು ಏಕೆ ನೇಮಕ ಮಾಡಿಕೊಳ್ಳಬಾರದಿತ್ತು, ಅವರ ಬದಲು ಯಾವ ಸಮುದಾಯಕ್ಕೆ ಸೇರಿದವರನ್ನು ನೇಮಕ ಮಾಡಿಕೊಳ್ಳಬೇಕಿತ್ತು ಎಂಬುದನ್ನೂ ಬಿಜೆಪಿಯ ಈ ನಾಯಕರು ಹೇಳಿಲ್ಲ. ‘ನೀವೇನು ಮದರಸಾ ನಡೆಸುತ್ತಿದ್ದೀರಾ’ ಎಂದು ಕೂಡ ಅವರು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪ್ರಯತ್ನ ಮೆಚ್ಚುವಂಥದ್ದೇ. ಆದರೆ, ಅದರ ಹೆಸರಿನಲ್ಲಿ, ಒಂದು ಸಮುದಾಯಕ್ಕೆ ಸೇರಿದವರ ಹೆಸರನ್ನು ಮಾತ್ರ ಉಲ್ಲೇಖಿಸಿರುವುದರ ಮರ್ಮ ಏನು? ಬಿಜೆಪಿ ಮುಖಂಡರು ಓದಿ ಹೇಳಿದ ಹದಿನಾರು ಜನರನ್ನು ಕೆಲಸದಿಂದ ತೆಗೆಯಲಾಗಿದೆ ಎಂಬ ವರದಿಗಳು ಇವೆ. ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಮಾತ್ರಕ್ಕೆ, ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿರುವುದು ಸರಿಯೇ? ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ವಿವರಣೆ ನೀಡುವರೇ? ಇಡೀ ಪ್ರಕರಣವು ಬಿಜೆಪಿ ಆಡಳಿತದ ಮೂಗಿನ ಅಡಿಯಲ್ಲಿ ನಡೆದಿದೆ.

ಬಿಜೆಪಿ ನಾಯಕರು ಓದಿ ಹೇಳಿದ ಹೆಸರುಗಳನ್ನು ಉಲ್ಲೇಖಿಸಿ, ಕೋಮು ಭಾವನೆ ಪ್ರಚೋದಿಸುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇಂತಹ ಸಂದೇಶಗಳು ರಾಜ್ಯದಲ್ಲಿನ ಸಾಮರಸ್ಯಕ್ಕೆ ಕೊಳ್ಳಿ ಇಟ್ಟರೆ ಅದರ ಹೊಣೆಯನ್ನು ನಾಲಿಗೆ ಹರಿಬಿಟ್ಟ ನಾಯಕರೇ ಹೊತ್ತುಕೊಳ್ಳಬೇಕು. ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇದೆ, ರಾಜ್ಯದಲ್ಲಿಯೂ ಬಿಜೆಪಿಯೇ ಅಧಿಕಾರ ಚಲಾಯಿಸುತ್ತಿದೆ. ಚುನಾಯಿತ ಕೌನ್ಸಿಲ್‌ ಅಸ್ತಿತ್ವದಲ್ಲಿ ಇಲ್ಲದ ಕಾರಣ ಬಿಬಿಎಂಪಿ ಕೂಡ ಈಗ ರಾಜ್ಯ ಸರ್ಕಾರದ ಅಧೀನದಲ್ಲಿದೆ.

ಬಿಜೆಪಿ ಮುಖಂಡರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿದ್ದರೆ ಅದರ ನೈತಿಕ ಹೊಣೆ ಹೊರಬೇಕಾದವರು ಯಾರು?ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇದ್ದರೆ ರಾಜ್ಯದಲ್ಲಿ ಹಾಲು–ಜೇನಿನ ಹೊಳೆ ಹರಿದೀತು ಎಂಬ ಕನಸನ್ನು ಜನರಲ್ಲಿ ಬಿತ್ತಿದ್ದರು ಬಿಜೆಪಿ ಮುಖಂಡರು. ಈಗ ಅದೇ ಪಕ್ಷದ ಮುಖಂಡರೇ ಬಿಬಿಎಂಪಿ ಆಡಳಿತ ಸಂಪೂರ್ಣವಾಗಿ ಕುಸಿದುಬಿದ್ದಿದೆ ಎಂಬರ್ಥದಲ್ಲಿ ಮಾತನಾಡಿರುವುದು ಏನನ್ನು ಸೂಚಿಸುತ್ತದೆ? ಕೋವಿಡ್–19ರಿಂದ ಸೃಷ್ಟಿಯಾಗಿರುವುದು ಆರೋಗ್ಯ ಬಿಕ್ಕಟ್ಟು.

ಈ ಆರೋಗ್ಯ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುವ ಬದಲು, ಅದನ್ನು ಕೋಮು ಬಿಕ್ಕಟ್ಟನ್ನಾಗಿ ಪರಿವರ್ತಿಸಲು ಬಿಜೆಪಿಯ ಈ ಮುಖಂಡರು ಯತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಈಗಿನ ಸಂಕಟದ ಸಂದರ್ಭದಲ್ಲಿ ವೃಥಾ ಕಾಲಹರಣ, ಅಧಿಕಾರ ರಾಜಕಾರಣ ನಡೆಸದೆ ರಾಜ್ಯದ ಜನರ ಜೀವ ಉಳಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು. ಇಂತಹ ಬಿಕ್ಕಟ್ಟಿನ ಸಂದರ್ಭಗಳನ್ನು ಯಾರಾದರೂ ರಾಜಕಾರಣಕ್ಕೆ ಬಳಸಿಕೊಂಡರೆ, ಅವರು ಯಾವುದೇ ಪಕ್ಷದವರಾಗಿರಲಿ ಕ್ಷಮೆಗೆ ಅರ್ಹರಲ್ಲ. ಅಂತಹವರ ಬಗ್ಗೆ ಜನ ಎಚ್ಚರದಿಂದ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT