ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮೂಲಸೌಕರ್ಯಕ್ಕೆ ಭಾರಿ ಹೂಡಿಕೆ: ಆರ್ಥಿಕತೆಗೆ ಚೈತನ್ಯದ ನಿರೀಕ್ಷೆ

ಎಲ್ಲ ಬಗೆಯ ಅಡೆತಡೆಗಳನ್ನು ನಿವಾರಿಸಿಕೊಂಡು ಕಾಲಮಿತಿ ಒಳಗೆ ಯೋಜನೆಗಳನ್ನು ಪೂರ್ಣಗೊಳಿಸಿದರೆ ಅರ್ಥವ್ಯವಸ್ಥೆಗೆ ಉದ್ದೇಶಿತ ಪ್ರಯೋಜನ ದೊರೆಯಬಹುದು
Last Updated 2 ಜನವರಿ 2020, 2:12 IST
ಅಕ್ಷರ ಗಾತ್ರ

ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ₹102 ಲಕ್ಷ ಕೋಟಿಗಳಷ್ಟು ಭಾರಿ ಮೊತ್ತದ ಬಂಡವಾಳ ಹೂಡಿಕೆ ಮಾಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಆರ್ಥಿಕ ಚೇತರಿಕೆಗೆಹೊಸ ವರ್ಷದ ಹೊಸ್ತಿಲಲ್ಲಿ ಕೈಗೊಂಡ ರಚನಾತ್ಮಕ ಉಪಕ್ರಮ ಇದು. ಪ್ರಗತಿ ಕುಂಠಿತಗೊಂಡು, ಆತಂಕ ಮೂಡಿಸಿರುವ ದೇಶಿ ಅರ್ಥ ವ್ಯವಸ್ಥೆಯು ಪುಟಿದೇಳಲು ಮಹತ್ವಾಕಾಂಕ್ಷೆಯ ಈ ಯೋಜನೆ ನೆರವಾಗಬಹುದು ಎಂಬ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ಮೂಲ ಸೌಕರ್ಯ ಕ್ಷೇತ್ರದಲ್ಲಿ ₹100 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನೋತ್ಸವ ಭಾಷಣದಲ್ಲಿ ಪ್ರಕಟಿಸಿದ್ದರು. ಅದಕ್ಕೆ ಈಗ ಸ್ಪಷ್ಟರೂಪ ನೀಡಲಾಗಿದೆ. ಈ ಹಿಂದಿನ 6 ವರ್ಷಗಳ ಅವಧಿಯಲ್ಲಿ ಮೂಲಸೌಕರ್ಯ ವಲಯದಲ್ಲಿ ₹51 ಲಕ್ಷ ಕೋಟಿಯಷ್ಟು ಹೂಡಿಕೆ ಆಗಿತ್ತು. ಅದಕ್ಕೆ ಹೋಲಿಸಿದರೆ ಉದ್ದೇಶಿತ ಹೂಡಿಕೆ ಮೊತ್ತವು ದುಪ್ಟಟ್ಟು.

ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2024– 25ರ ವೇಳೆಗೆ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸುವ ದೀರ್ಘಾವಧಿ ಯೋಜನೆಗಳಿಗೆ ಸರ್ಕಾರವು ಮೂರ್ತ ರೂಪ ನೀಡಿದೆ. ಇಂಧನ, ನಗರಾಭಿವೃದ್ಧಿ, ರೈಲ್ವೆ ಮತ್ತು ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ದೊರೆತಿದೆ.

ನೀರಾವರಿ, ಆರೋಗ್ಯ ಮತ್ತು ಶಿಕ್ಷಣ ಒಳಗೊಂಡ ಸಾಮಾಜಿಕ ಮೂಲಸೌಕರ್ಯಗಳಿಗೂ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವ ಉದ್ದೇಶ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಉದ್ಯೋಗ ಅವಕಾಶಗಳು ಹೆಚ್ಚಲಿವೆ. ಸರಕು ಮತ್ತು ಸೇವೆಗಳ ಬೇಡಿಕೆ ಕೂಡ ಹೆಚ್ಚುವ ಸಾಧ್ಯತೆ ಇದೆ.

ಐದು ವರ್ಷಗಳಲ್ಲಿ ದೇಶಿ ಆರ್ಥಿಕತೆಯ ಗಾತ್ರವನ್ನು (ಜಿಡಿಪಿ) ₹ 350 ಲಕ್ಷ ಕೋಟಿ ಮೊತ್ತಕ್ಕೆ ಹಿಗ್ಗಿಸುವ ಆಶಯವನ್ನು ಸರ್ಕಾರ ಹೊಂದಿದೆ. ಇದು ಈಡೇರಬೇಕಾದರೆ ಭಾರಿ ಮೊತ್ತದ ಹೂಡಿಕೆ ಅಗತ್ಯ. ಮೂಲಸೌಕರ್ಯ ಕ್ಷೇತ್ರದ ಉದ್ದೇಶಿತ ಹೂಡಿಕೆಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಪಾಲುದಾರಿಕೆಯನ್ನು 39:39:22 ಅನುಪಾತದಲ್ಲಿ ನಿಗದಿಪಡಿಸಲಾಗಿದೆ.

ಕೇಂದ್ರದ ಆಶಯ ಸಾಕಾರಗೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಸಂಪೂರ್ಣ ಬೆಂಬಲ ಅಗತ್ಯ. ಆದರೆ ಇಷ್ಟು ದೊಡ್ಡ ಮೊತ್ತದ ಹಣ ಹೊಂದಿಸಿಕೊಳ್ಳುವುದು ಸವಾಲಿನ ಕೆಲಸ. ಪ್ರಸಕ್ತ ಹಣಕಾಸು ವರ್ಷದ ಉಳಿದ ಮೂರು ತಿಂಗಳಿಗೆ ಸರ್ಕಾರಿ ವೆಚ್ಚ ಕಡಿತ ಮಾಡಲು ಕೇಂದ್ರ ನಿರ್ಧರಿಸಿದ ಸಂದರ್ಭದಲ್ಲಿಯೇ ಈ ಯೋಜನೆ ಪ್ರಕಟಗೊಂಡಿರುವುದು ಒಂದು ರೀತಿ ವಿರೋಧಾಭಾಸದಂತೆ ತೋರಬಹುದು. ವಿತ್ತೀಯ ಕೊರತೆಯೂ ಬಜೆಟ್‌ ಅಂದಾಜನ್ನು ಮೀರಿದೆ. ಭಾರಿ ಮೊತ್ತದ ಸಂಪನ್ಮೂಲ ಸಂಗ್ರಹಿಸಲು ಸರ್ಕಾರವು ಮಾರುಕಟ್ಟೆ ಸಾಲ ಮತ್ತು ಪರ್ಯಾಯ ಹೂಡಿಕೆ ನಿಧಿಗಳ ಮೊರೆ ಹೋಗಲಿದೆ.

ಈ ಪ್ರಯತ್ನಗಳ ಯಶಸ್ಸೇ ಯೋಜನೆಗಳ ಭವಿಷ್ಯವನ್ನೂ ನಿರ್ಧರಿಸಲಿದೆ. ಎಂಟು ಪ್ರಮುಖ ವಲಯಗಳ ಬೆಳವಣಿಗೆಯು ನವೆಂಬರ್‌ನಲ್ಲಿ ಕುಂಠಿತಗೊಂಡಿದೆ. ಸತತ ನಾಲ್ಕನೇ ತಿಂಗಳ ಕುಸಿತ ಇದಾಗಿದೆ. ಮೂಲ ಸೌಕರ್ಯ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡಲೇಬೇಕಾದ ಅಗತ್ಯವನ್ನು ಇದು ಬಲವಾಗಿ ಪ್ರತಿಪಾದಿಸುತ್ತದೆ.

ಈಗ ಪ್ರಕಟಿಸಿರುವ ಯೋಜನೆಯಿಂದ ಹೊರಗೆ ಇರುವ ರಾಜ್ಯಗಳು ತಮ್ಮ ಯೋಜನೆಗಳ ರೂಪುರೇಷೆಗಳನ್ನು ಇನ್ನಷ್ಟೇ ಕೇಂದ್ರಕ್ಕೆ ಸಲ್ಲಿಸಬೇಕಿದೆ. ಕೇಂದ್ರ ಸರ್ಕಾರವು ಈ ಯೋಜನೆಗೆ ಆದ್ಯತೆ ಮೇರೆಗೆ ಹಣ ಒದಗಿಸಲು ಬದ್ಧತೆ ತೋರಬೇಕು. ಎಲ್ಲ ಬಗೆಯ ಅಡೆತಡೆಗಳನ್ನು ನಿವಾರಿಸಿಕೊಂಡು ಕಾಲಮಿತಿ ಒಳಗೆ ಯೋಜನೆಗಳನ್ನು ಪೂರ್ಣಗೊಳಿಸಿದರೆ ಅರ್ಥವ್ಯವಸ್ಥೆಗೆ ಉದ್ದೇಶಿತ ಪ್ರಯೋಜನ ದೊರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT