‘ಐಪಿಎಲ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (ಆರ್ಸಿಬಿ) ತಂಡ ಸಾಧಿಸಿದ ಗೆಲುವನ್ನು ಸಂಭ್ರಮಿಸಲು ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಹನ್ನೊಂದು ಜನ ಸಾವಿಗೀಡಾಗಿದ್ದರು. ಜೂನ್ 4ರಂದು ಸಂಭವಿಸಿದ ಆ ದುರ್ಘಟನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ನೇತೃತ್ವದ ವಿಚಾರಣಾ ಆಯೋಗ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆಯೋಗದ ವರದಿಯಲ್ಲಿ, ದುರ್ಘಟನೆಯ ಹೊಣೆಗಾರರನ್ನಾಗಿ ‘ಆರ್ಸಿಬಿ’ ಆಡಳಿತ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ), ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಲಿ. ಹಾಗೂ ಆಗ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಗುರ್ತಿಸಲಾಗಿದೆ. ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ಗೆ ವರದಿ ಸಲ್ಲಿಸಿರುವ ಸರ್ಕಾರ, ಸಂಘಟಕರ ಸೇವಕರಂತೆ ಪೊಲೀಸರು ವರ್ತಿಸಿದ್ದಾರೆ ಎಂದು ಕಟುವಾಗಿ ಹೇಳಿದೆ. ತಪ್ಪಿತಸ್ಥರ ಸ್ಥಾನದಲ್ಲಿ ಪೊಲೀಸರನ್ನು ಏಕಪಕ್ಷೀಯವಾಗಿ ನಿಲ್ಲಿಸುವುದು ಎಷ್ಟು ಸರಿ ಹಾಗೂ ಇಂಥ ಧೋರಣೆಯಿಂದ ಅವರ ಆತ್ಮವಿಶ್ವಾಸ ಮತ್ತು ನೈತಿಕತೆಯನ್ನು ಕುಗ್ಗಿಸಿದಂತೆ ಆಗುವುದಿಲ್ಲವೇ ಎನ್ನುವ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಾಗಿದೆ. ದುರಂತದ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿ ನುಣುಚಿಕೊಳ್ಳುವ ಬದಲಾಗಿ, ತೀರ್ಮಾನಗಳನ್ನು ತೆಗೆದುಕೊಳ್ಳುವುದರಲ್ಲಿ ಆಗಿರುವ ಸಾಂಸ್ಥಿಕ ಲೋಪ ಹಾಗೂ ನಿರ್ಲಕ್ಷ್ಯದ ಫಲಿತಾಂಶದ ರೂಪದಲ್ಲಿ ಸಂಭವಿಸಿದ ದುರ್ಘಟನೆಯನ್ನು ಗುರ್ತಿಸಬೇಕಾಗಿದೆ. ವಿಜಯೋತ್ಸವದಂಥ ಕಾರ್ಯಕ್ರಮವನ್ನು ಆಯೋಜಿಸಲು ಅಗತ್ಯವಾಗಿದ್ದ ಪೊಲೀಸರ ಕಡ್ಡಾಯ ಅನುಮತಿಯನ್ನು ಪಡೆಯದಿರುವ ಆಯೋಜಕರು, ಸಾರ್ವಜನಿಕ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದ ಬೃಹತ್ ಕಾರ್ಯಕ್ರಮವೊಂದನ್ನು ಪೊಲೀಸ್ ಅನುಮತಿಇಲ್ಲದೆ ನಡೆಸಲು ಮುಂದಾಗುವುದು ಬರೀ ನಿರ್ಲಕ್ಷ್ಯ ಮಾತ್ರವಲ್ಲ, ಉದ್ಧಟತನವೂ ಹೌದು. ಅನುಮತಿ ಪಡೆಯದೆಯೇ ಭಾರೀ ಜನಸ್ತೋಮ ಸೇರುವ ಕಾರ್ಯಕ್ರಮವೊಂದರ ಆಯೋಜನೆಗೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಾದರೂ, ಮ್ಯಾಜಿಸ್ಟ್ರೇಟರು ತಮ್ಮ ಅಧಿಕಾರವನ್ನು ಬಳಸಿ ಜನ ಸೇರುವುದನ್ನು ನಿರ್ಬಂಧಿಸಿ ನಿಷೇಧಾಜ್ಞೆ ಜಾರಿ ಮಾಡಬಹುದಾಗಿತ್ತು; ನಿರ್ಣಾಯಕ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ವಿಪತ್ತನ್ನು ತಪ್ಪಿಸುವ ಅವಕಾಶವೂ ಇತ್ತು.

ಪರಿಸ್ಥಿತಿ ಹತೋಟಿ ತಪ್ಪುವಲ್ಲಿ ರಾಜಕಾರಣದ ಹಸ್ತಕ್ಷೇಪವೂ ಸ್ಪಷ್ಟವಾಗಿದೆ. ಐಪಿಎಲ್ ಆಟಗಾರರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ‘ಆರ್ಸಿಬಿ’ ಧ್ವಜವನ್ನು ಹಿಡಿದುಕೊಂಡು ಸಂಭ್ರಮಿಸಿದ್ದರು. ವಿಧಾನಸೌಧದ ಆವರಣದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಸೇರಿದಂತೆ ಇಡೀ ಆಡಳಿತಾಂಗವೇ ಹಾಜರಿತ್ತು. ಹೀಗೆ ವಿಜಯೋತ್ಸವದ ಭಾಗವಾಗಿ ಗುರ್ತಿಸಿಕೊಂಡ ಸರ್ಕಾರ, ದುರ್ಘಟನೆ ಸಂಭವಿಸಿದ ನಂತರ ಅಂತರ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಹಾಗೂ ಅನಾಹುತದ ಸಂಪೂರ್ಣ ಹೊಣೆಗಾರಿಕೆಯನ್ನು ಪೊಲೀಸರ ಹೆಗಲಿಗೇರಿಸಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕಾರ್ಯತಂತ್ರದ ಭಾಗವಾಗಿಯೇ, ಸರ್ಕಾರದ ವರದಿ ಹೈಕೋರ್ಟ್ಗೆ ಸಲ್ಲಿಕೆಯಾದ ದಿನವೇ ಆಯೋಗದ ವರದಿಯ ಕೆಲವು ಭಾಗಗಳು ಮಾಧ್ಯಮಗಳಿಗೆ ಬಿಡುಗಡೆಯಾದುದನ್ನು ಗಮನಿಸಬೇಕಾಗಿದೆ. ಪೊಲೀಸರ ಮೇಲಿನ ರಾಜಕೀಯ ಒತ್ತಡವು ದುರದೃಷ್ಟಕರ ವಾಸ್ತವವಾಗಿದೆ. ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಮೌಖಿಕ ಆದೇಶಗಳನ್ನು ಅನುಸರಿಸಿ ಪೊಲೀಸರು ಕಾರ್ಯ ನಿರ್ವಹಿಸಬಾರದು ಎನ್ನುವುದಕ್ಕೆ ಐಪಿಎಲ್ ವಿಜಯೋತ್ಸವ ಸಂದರ್ಭದಲ್ಲಿ ಘಟಿಸಿದ ದುರಂತ ಪೊಲೀಸ್ ಇಲಾಖೆಗೆ ಪಾಠ ಆಗಬೇಕಾಗಿದೆ. ಕಾಲ್ತುಳಿತದಿಂದ ಸಂಭವಿಸಿದ ಸಾವುಗಳ ಹೊಣೆಗಾರಿಕೆ ಸಾಮೂಹಿಕವಾದುದು. ಸಂಘಟಕರ ನಿರ್ಲಕ್ಷ್ಯ, ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ತೀರ್ಮಾನಗಳಲ್ಲಿ ಪೊಲೀಸರು ಎಸಗಿದ ಲೋಪಗಳು ಹಾಗೂ ರಾಜಕೀಯ ಹಸ್ತಕ್ಷೇಪ, ಇವೆಲ್ಲವೂ ಕಾಲ್ತುಳಿತದ ಸಾವು– ನೋವುಗಳಿಗೆ ಕಾರಣವಾಗಿವೆ. ಮುಂದೆ, ಇಂಥ ಕಾರ್ಯಕ್ರಮಗಳು ನಡೆಯುವಾಗ ಸಾರ್ವಜನಿಕರ ಹಿತಾಸಕ್ತಿ ಮತ್ತು ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುವ ಹೊಣೆಗಾರಿಕೆಯನ್ನು ಎಲ್ಲರೂ ಪ್ರದರ್ಶಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.