ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಶಿಕ್ಷಕರ ಹಿತಾಸಕ್ತಿ ರಕ್ಷಣೆ ಸರ್ಕಾರದ ಹೊಣೆಗಾರಿಕೆ

Last Updated 6 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭಿಸಲು ಹಾಗೂ ಪೋಷಕರಿಂದ ಶುಲ್ಕ ಸಂಗ್ರಹಿಸಲು ರಾಜ್ಯ ಸರ್ಕಾರವು ಖಾಸಗಿ ಶಾಲೆಗಳಿಗೆ ಅವಕಾಶ ಕಲ್ಪಿಸಿದೆ. ಇದು ತೀರಾ ಅನಿವಾರ್ಯವಾಗಿದ್ದ ಕ್ರಮ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಖಾಸಗಿ ಶಾಲಾ ಶಿಕ್ಷಕರು ಐದು ತಿಂಗಳಿಂದ ಸಂಬಳವಿಲ್ಲದೆ ಪರಿತಪಿಸಬೇಕಾದ ಸ್ಥಿತಿ ಉಂಟಾಗಿತ್ತು.

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪೋಷಕರ ಹಿತಾಸಕ್ತಿ ರಕ್ಷಿಸುವ ಸಲುವಾಗಿ, ಶುಲ್ಕ ಕಟ್ಟುವಂತೆ ಪೋಷಕರನ್ನು ಒತ್ತಾಯಿಸಬಾರದು ಎಂದು ಖಾಸಗಿ ಶಾಲೆಗಳಿಗೆ ಸರ್ಕಾರ ಮಾರ್ಚ್‌ 30ರಂದು ಆದೇಶಿಸಿತ್ತು. ಈ ಆದೇಶದಿಂದಾಗಿ ಪ್ರವೇಶ ಪ್ರಕ್ರಿಯೆ ಕುಂಠಿತಗೊಂಡು, ಹಲವು ಖಾಸಗಿ ಶಾಲೆಗಳು ಶಿಕ್ಷಕರಿಗೆ ಸಂಬಳ ನೀಡಲು ಅಸಹಾಯಕತೆ ವ್ಯಕ್ತಪಡಿಸಿ ಕೈಚೆಲ್ಲಿವೆ. ಪೋಷಕರ ಹಿತಾಸಕ್ತಿ ರಕ್ಷಣೆಗೆ ಕೈಗೊಂಡಿದ್ದ ಸರ್ಕಾರದ ಕ್ರಮವು ಶಿಕ್ಷಕರನ್ನು ತೊಂದರೆಗೆ ಸಿಲುಕಿಸಿದೆ. ಶಿಕ್ಷಕರ ಸಂಬಳವನ್ನೇ ನಂಬಿಕೊಂಡಿದ್ದ ಕುಟುಂಬಗಳು ಜೀವನ ಅವಶ್ಯಕ ಸಾಮಗ್ರಿಗಳನ್ನು ಹೊಂಚಿಕೊಳ್ಳಲು, ಮನೆ ಬಾಡಿಗೆ ಕಟ್ಟಲು ಪರಿತಪಿಸುವಂತಾಗಿದೆ. ಆರೋಗ್ಯದ ಸಮಸ್ಯೆಗಳಿರುವ ಶಿಕ್ಷಕರ ಪಾಡಂತೂ ಮತ್ತಷ್ಟು ಶೋಚನೀಯ.

ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಸಹಾಯಧನ ನೀಡಿದಂತೆ ಶಿಕ್ಷಕರ ನೆರವಿಗೆ ಬರಲು ಸರ್ಕಾರ ಮನಸ್ಸು ಮಾಡಲಿಲ್ಲ. ಬೇರೆ ದಾರಿ ಕಾಣದೆ ಕೆಲವು ಶಿಕ್ಷಕರು ತಾತ್ಕಾಲಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದರೆ, ಉಳಿದವರು ಇಂದಲ್ಲ ನಾಳೆ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಅಂಥ ಶಿಕ್ಷಕರಿಗೆ, ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸರ್ಕಾರದ ಕ್ರಮ ಸ್ವಲ್ಪಮಟ್ಟಿಗಿನ ನೆಮ್ಮದಿ ನೀಡಲಿದೆ. ಶಾಲಾ ಶುಲ್ಕದ ಮೊದಲ ಕಂತನ್ನು ಪೋಷಕರಿಂದ ಪಡೆಯಲು ಹಾಗೂ ಆ ಹಣವನ್ನು ಶಿಕ್ಷಕರ ಸಂಬಳ ಪಾವತಿಗೆ ಬಳಸಲು ಸರ್ಕಾರ ಸೂಚಿಸಿದೆ. ಹಾಗೆಯೇ ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಯಾವುದೇ ಕಾರಣಕ್ಕೂ ಹೆಚ್ಚುವರಿ ಶುಲ್ಕ ವಸೂಲಿ ಮಾಡದಂತೆಯೂ ಹೇಳಿದೆ.

ಖಾಸಗಿ ಶಾಲಾ ಶಿಕ್ಷಕರ ಹಿತಾಸಕ್ತಿ ರಕ್ಷಣೆಯ ಕುರಿತಂತೆ ಸರ್ಕಾರದ್ದು ದ್ವಂದ್ವ ನಿಲುವು. ಶಾಲಾ ಪ್ರವೇಶ ಪ್ರಕ್ರಿಯೆಗೆ ಷರತ್ತುಗಳನ್ನು ವಿಧಿಸುವ ಸರ್ಕಾರ, ಅದರಿಂದ ತೊಂದರೆಗೊಳಗಾಗುವ ಶಿಕ್ಷಕರ ನೆರವಿಗೆ ಯಾವುದೇ ಯೋಜನೆ ರೂಪಿಸಿಲ್ಲ. ಖಾಸಗಿ ಶಾಲೆಗಳ ಮಾತಿರಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಲೆಗಳಲ್ಲಿನ ಹೊರಗುತ್ತಿಗೆ ಶಿಕ್ಷಕರ ಪರಿಸ್ಥಿತಿಯ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಗುತ್ತಿಗೆ ಶಿಕ್ಷಕರಿಗೆ ಗೌರವಧನ ಪಾವತಿಸಲು ಬಿಬಿಎಂಪಿ ಹಿಂದೆ ಮುಂದೆ ನೋಡುತ್ತಿದೆ. ಶಾಲೆಗಳೇ ನಡೆಯದೆ ಶಿಕ್ಷಕರಿಗೆ ಗೌರವಧನ ನೀಡುವುದು ಹೇಗೆ ಎನ್ನುವುದು ಬಿಬಿಎಂಪಿ ಜಿಜ್ಞಾಸೆ.

ಸಂಕಷ್ಟದ ಸಮಯದಲ್ಲೂ ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಕುರಿತು ಯೋಚಿಸುವ ಬಿಬಿಎಂಪಿ, ಗುತ್ತಿಗೆ ನೌಕರರಿಗೆ ಮಾನವೀಯ ನೆಲೆಯಲ್ಲಿ ಗೌರವಧನ ಪಾವತಿಸುವ ಆಲೋಚನೆ ಮಾಡಬಹುದಿತ್ತು. ಮಹಾನಗರ ಪಾಲಿಕೆಯ ಚೌಕಾಸಿಯ ಬಗ್ಗೆ ಮೌನವಾಗಿರುವ ಸರ್ಕಾರಕ್ಕೆ ಖಾಸಗಿ ಶಾಲೆಗಳು ಶಿಕ್ಷಕರಿಗೆ ಸಂಬಳ ನೀಡಬೇಕೆಂದು ಹೇಳುವ ನೈತಿಕತೆ ಉಳಿದಿದೆಯೇ? ‘ಶಿಕ್ಷಕರು ಸಮಾಜಕ್ಕೆ ಮೇಲ್ಪಂಕ್ತಿಯಾಗಬೇಕು ಹಾಗೂ ಮೇಲ್ಪಂಕ್ತಿ ಆಗುವಂಥ ಸಾಧಕರನ್ನು ಬೆಳೆಸಬೇಕು’ ಎಂದು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಣ ಸಚಿವರು ಕರೆ ನೀಡಿದ್ದಾರೆ. ಆದರೆ, ಆ ಮೇಲ್ಪಂಕ್ತಿಯ ಆರಂಭ ಸರ್ಕಾರದ ಕಡೆಯಿಂದಲೇ ಆಗಬೇಕಾಗಿದೆ.

ಜೀವನದ ಅಭದ್ರತೆಯ ಸಂದರ್ಭದಲ್ಲಿ ಆದರ್ಶಗಳ ಕುರಿತ ಮಾತು ಸಂಕಷ್ಟದಲ್ಲಿರುವ ಬೋಧಕರಿಗೆ ವ್ಯಂಗ್ಯದಂತೆ ಕಾಣಿಸಿದರೆ ಆಶ್ಚರ್ಯವೇನಿಲ್ಲ. ನಾಡಿನ ಸಾವಿರಾರು ಶಿಕ್ಷಕರು ‘ಶಿಕ್ಷಕರ ದಿನಾಚರಣೆ’ ಸಂದರ್ಭದಲ್ಲಿ ಸಂಭ್ರಮಿಸುವ ಬದಲು ಸಂಕಟ ತೋಡಿಕೊಂಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ವೈಯಕ್ತಿಕ ಜೀವನವು ಅಭದ್ರತೆಯಿಂದ ಕೂಡಿದ್ದಾಗ ಶಿಕ್ಷಕರು ಮಕ್ಕಳಿಗೆ ನೆಮ್ಮದಿಯಿಂದ ಪಾಠ ಹೇಳಿಕೊಡಬೇಕೆಂದು ನಿರೀಕ್ಷಿಸಲಾಗದು. ಖಾಸಗಿ ಶಾಲೆಗಳ ಶಿಕ್ಷಕರ ವೈಯಕ್ತಿಕ ಜೀವನವನ್ನು ಸುಭದ್ರಗೊಳಿಸುವ ಜವಾಬ್ದಾರಿ ಸರ್ಕಾರ ಹಾಗೂ ಸಮಾಜ ಎರಡಕ್ಕೂ ಸೇರಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT