ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬೈಡನ್‌– ಕಮಲಾ ಆಯ್ಕೆ ಬಹುತ್ವಕ್ಕೆ ದೊರೆತ ಗೆಲುವು

Last Updated 8 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೈಡನ್‌ ಭಾಷಣಗಳಲ್ಲಿ ವ್ಯಕ್ತವಾಗಿರುವ ಕಾಳಜಿಯು ಕಾರ್ಯರೂಪಕ್ಕೆ ಬರುವುದು ಜಗತ್ತಿನ ಶಾಂತಿ, ಸಾಮರಸ್ಯದ ದೃಷ್ಟಿಯಿಂದ ಮುಖ್ಯ

ತೀವ್ರ ಹಣಾಹಣಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌‌ ಪಕ್ಷದ ಜೋ ಬೈಡನ್‌ ಆಯ್ಕೆ ಆಗಿದ್ದಾರೆ. ಈ ಬಾರಿಯ ಚುನಾವಣೆ ಎಂದಿನಂತೆ ಇರಲಿಲ್ಲ. ಅತ್ಯಂತ ನಿಕಟ ಸ್ಪರ್ಧೆಯಿಂದಾಗಿ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗುವುದಕ್ಕೆ ಮೂರು ದಿನಗಳು ಬೇಕಾದವು. ಕೆಲವು ರಾಜ್ಯಗಳಲ್ಲಿ ಮರು ಮತ ಎಣಿಕೆಯೂ ನಡೆಯಲಿದೆ. ಎರಡನೇ ಅವಧಿಗೆ ಆಯ್ಕೆ ಬಯಸಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಮತ ಎಣಿಕೆಯ ಆರಂಭದಲ್ಲಿಯೇ ‘ನಾನು ಗೆದ್ದಾಗಿದೆ’ ಎಂದು ಘೋಷಿಸಿದ್ದರು. ಬೈಡನ್‌ ಅವರಿಗೆ ಸ್ಪಷ್ಟ ಬಹುಮತ ಬಂದ ಬಳಿಕವೂ ಟ್ರಂಪ್‌ ಸೋಲು ಒಪ್ಪಿಕೊಂಡಿಲ್ಲ. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಕಾನೂನು ಸಮರ ನಡೆಸುವುದಾಗಿಯೂ ಹೇಳಿದ್ದಾರೆ. ಹಾಗಾಗಿ, ಸಾಮಾನ್ಯವಾಗಿ ಅತ್ಯಂತ ಸುಗಮವಾಗಿ ನಡೆಯುವ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಈ ಬಾರಿ ಸಂಕೀರ್ಣವಾಗಬಹುದು. ಕಮಲಾ ದೇವಿ ಹ್ಯಾರಿಸ್‌ ಅವರು ಉಪಾಧ್ಯಕ್ಷೆ ಆಗುವುದರಿಂದಾಗಿ ಈ ಬಾರಿಯ ಚುನಾವಣೆ ಐತಿಹಾಸಿಕ. ಅಮೆರಿಕದ ಮೊದಲ ಉಪಾಧ್ಯಕ್ಷೆ ಎಂಬುದು ಅವರ ಹೆಗ್ಗಳಿಕೆ. ಲಿಂಗಸಮಾನತೆಯ ದಿಸೆಯಲ್ಲಿ ಇದೊಂದು ಬಹುದೊಡ್ಡ ನೆಗೆತ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್‌ ಅವರು ಟ್ರಂಪ್‌ ಎದುರು ಸೋತಿದ್ದರು. 36 ವರ್ಷಗಳ ಹಿಂದೆ ಜೆರಾಲ್ಡಿನ್‌ ಫೆರಾರೊ ಅವರೂ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿ ವಿಫಲರಾಗಿದ್ದರು. ಕಮಲಾ ಅವರ ತಾಯಿ ಭಾರತೀಯರಾಗಿದ್ದರೆ, ತಂದೆ ಜಮೈಕಾದವರು. ಬಿಳಿಯರಲ್ಲದ ಕಮಲಾ ಅವರು ಅಮೆರಿಕದ ಎರಡನೇ ಅತ್ಯುನ್ನತ ಹುದ್ದೆಗೆ ಆಯ್ಕೆ ಆಗಿರುವುದು ಇಡೀ ಜಗತ್ತಿಗೆ ಹೊಸ ಸಂದೇಶವೊಂದನ್ನು ನೀಡುತ್ತದೆ. ಅಮೆರಿಕದ ವಲಸಿಗ ಸಮುದಾಯ ಹೆಮ್ಮೆಪಡಬಹುದಾದ ಕ್ಷಣ ಇದು.

ಅಮೆರಿಕ ಮತ್ತು ಜಗತ್ತು ಹಿಂದೆಂದೂ ಇಲ್ಲದ ರೀತಿಯ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬೈಡನ್‌ ಮತ್ತು ಕಮಲಾ ಅಧಿಕಾರಕ್ಕೆ ಏರಲಿದ್ದಾರೆ. ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಅತಿ ಹೆಚ್ಚು ತೊಂದರೆಗೆ ಒಳಗಾದ ದೇಶ ಅಮೆರಿಕ. ಅಲ್ಲಿ, ಈ ಸಾಂಕ್ರಾಮಿಕದ ಹರಡುವಿಕೆ ಮತ್ತೆ ವೇಗ ಪಡೆದುಕೊಂಡಿದೆ. ಈ ಸಾಂಕ್ರಾಮಿಕದ ಕಾರಣದಿಂದಾಗಿಯೇ ನಿರುದ್ಯೋಗ ಹೆಚ್ಚಳವಾಗಿದೆ. ಅರ್ಥವ್ಯವಸ್ಥೆಯ ಮೇಲೆ ಭಾರಿ ಒತ್ತಡ ಸೃಷ್ಟಿಯಾಗಿದೆ. ಜನಾಂಗೀಯ ದ್ವೇಷ ಮತ್ತು ಹಿಂಸೆಯ ಹಲವು ಪ್ರಕರಣಗಳು ವರದಿಯಾಗಿವೆ. ಟ್ರಂಪ್‌ ಅವರ ‘ಅಮೆರಿಕ ಮೊದಲು’ ನೀತಿಯಿಂದಾಗಿ, ಜಾಗತಿಕವಾಗಿ ಅಮೆರಿಕದ ವರ್ಚಸ್ಸು ಕುಂದಿದೆ. ಹವಾಮಾನ ವೈಪರೀತ್ಯ ತಡೆಯುವ ದಿಸೆಯಲ್ಲಿ ಇಡೀ ಜಗತ್ತು ಕಾರ್ಯಪ್ರವೃತ್ತವಾಗಿದೆ. ಆದರೆ, ಇದಕ್ಕಾಗಿ ರೂಪಿಸಲಾದ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ. ಈ ಎಲ್ಲವನ್ನೂ ಸರಿಪಡಿಸುವುದಕ್ಕಾಗಿ ಬೈಡನ್‌ ಮತ್ತು ಕಮಲಾ ಅವರುಅಧಿಕಾರ ವಹಿಸಿದ ಮೊದಲ ದಿನದಿಂದಲೇ ಕೆಲಸ ಮಾಡಬೇಕಾಗಿದೆ. ‘ಅಮೆರಿಕವು ಅತ್ಯಂತ ಆಳವಾಗಿ ವಿಭಜನೆಗೊಂಡಿದೆ ಎಂಬುದನ್ನು ಫಲಿತಾಂಶದ ಪ್ರತೀ ಹಂತವೂ ತೋರಿಸಿಕೊಟ್ಟಿದೆ’ ಎಂದು ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವರು ಫಲಿತಾಂಶದ ಬಳಿಕ ನೀಡಿದ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕವನ್ನು ಒಗ್ಗೂಡಿಸುವ ಕೆಲಸ ತಮ್ಮದು ಎಂದು ಗೆಲುವಿನ ಬಳಿಕದ ಭಾಷಣದಲ್ಲಿ ಬೈಡನ್‌ ಹೇಳಿದ್ದಾರೆ. 77 ವರ್ಷದ ಬೈಡನ್‌ಗೆ ಎಂಟು ವರ್ಷ ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೆ. 56 ವರ್ಷದ ಕಮಲಾ ಅವರ ಆಯ್ಕೆಯು ಬಹುತ್ವವನ್ನು ಸಂಕೇತಿಸುತ್ತದೆ. ಸಾಂಕ್ರಾಮಿಕ, ಆರ್ಥಿಕ ಹಿನ್ನಡೆ, ಜನಾಂಗೀಯ ದ್ವೇಷವು ವ್ಯಾಪಕವಾಗಿರುವ ಈ ಸನ್ನಿವೇಶದಲ್ಲಿ ಜಗತ್ತಿಗೆ ಸಾಮರಸ್ಯ ಬೇಕಾಗಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ ಮಮತೆ, ಪ್ರಬುದ್ಧತೆ ಬೈಡನ್‌ ಅವರಲ್ಲಿ ಇದೆ ಎಂಬುದು ಅವರ ಭಾಷಣಗಳಲ್ಲಿ ಕಂಡಿದೆ. ಅವರು ವ್ಯಕ್ತಪಡಿಸಿರುವ ಕಾಳಜಿಯು ಕಾರ್ಯರೂಪಕ್ಕೆ ಬರುವುದು ಜಗತ್ತಿನ ಶಾಂತಿ, ಸಮಾಧಾನದ ದೃಷ್ಟಿಯಿಂದ ಮುಖ್ಯ. ಅಮೆರಿಕದ ಹೊಸ ಸರ್ಕಾರದಿಂದ ಭಾರತದ ಹಿತಾಸಕ್ತಿಗೆ ಬಾಧಕವಾಗಲಾರದು ಎಂಬ ನಿರೀಕ್ಷೆ ಇದೆ. ಭಾರತವನ್ನೂ ಸೇರಿಸಿ ಹಲವು ದೇಶಗಳನ್ನು ಕಾಡುತ್ತಿರುವ ಭಯೋತ್ಪಾದನೆಯಂತಹ ಪಿಡುಗಿನ ವಿಚಾರದಲ್ಲಿ ಡೆಮಾಕ್ರಟಿಕ್‌‌ ಪಕ್ಷವು ಹಿಂದಿನಿಂದಲೂ ಕಠಿಣ ನಿಲುವನ್ನೇ ತಳೆದಿದೆ. ಅದು ಮುಂದುವರಿಯಬಹುದು. ಚೀನಾದ ಅತಿಕ್ರಮಣಕಾರಿ ವರ್ತನೆಯು ಭಾರತಕ್ಕೆ ಮಾತ್ರವಲ್ಲ ಅಮೆರಿಕದ ಪ್ರಗತಿಗೂ ಮಾರಕ ಎಂಬ ಅರಿವು ಬೈಡನ್‌ ಅವರಿಗೆ ಇದೆ. ಹಾಗಾಗಿ ಈ ವಿಚಾರಗಳಲ್ಲಿ ಪರಸ್ಪರ ಸಹಕಾರ ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT