ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಜೆ.ಪಿ.ಮಾರ್ಗನ್‌ ಸೂಚ್ಯಂಕಕ್ಕೆ ಭಾರತದ ಬಾಂಡ್‌: ಹೊಸ ಅವಕಾಶ

Published 2 ಅಕ್ಟೋಬರ್ 2023, 23:30 IST
Last Updated 2 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಭಾರತದ ಸರ್ಕಾರಿ ಬಾಂಡ್‌ಗಳನ್ನು ಅಮೆರಿಕದ ಪ್ರತಿಷ್ಠಿತ ಜೆ.ಪಿ.ಮಾರ್ಗನ್‌ನ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳ ಸೂಚ್ಯಂಕಕ್ಕೆ ಸೇರ್ಪಡೆ ಮಾಡುತ್ತಿರುವುದು ಇಲ್ಲಿನ ಹಣಕಾಸು ಮಾರುಕಟ್ಟೆಯು ಪಕ್ವವಾಗುತ್ತಿರುವುದನ್ನು ಹಾಗೂ ಈ ಮಾರುಕಟ್ಟೆಯು ಪಡೆದುಕೊಳ್ಳುತ್ತಿರುವ ಮಹತ್ವವನ್ನು ಸೂಚಿಸುತ್ತಿದೆ. ಈ ಸೂಚ್ಯಂಕದಲ್ಲಿ ಸ್ಥಾನ ಪಡೆಯಲು ಭಾರತವು 2013ರಿಂದಲೂ ಪ್ರಯತ್ನ ನಡೆಸಿದೆ. ಹೀಗಾಗಿ, ಈಗಿನ ಬೆಳವಣಿಗೆಯು ಆಶ್ಚರ್ಯ ಮೂಡಿಸುವಂಥದ್ದೇನೂ ಅಲ್ಲ. ರಷ್ಯಾವನ್ನು ಸೂಚ್ಯಂಕದಿಂದ ಹೊರಹಾಕಿರುವುದು ಮತ್ತು ಚೀನಾ ಜೊತೆ ಪಾಶ್ಚಾತ್ಯ ದೇಶಗಳ ಸಂಬಂಧವು ಹಳಸಿರುವುದು ಈಗ ಭಾರತವನ್ನು ಈ ಸೂಚ್ಯಂಕಕ್ಕೆ ಸೇರಿಸುವ ಪ್ರಕ್ರಿಯೆಗೆ ವೇಗ ತಂದುಕೊಟ್ಟಿರಬಹುದು. ಭಾರತದ ಸರ್ಕಾರಿ ಬಾಂಡ್‌ಗಳು ಈ ಸೂಚ್ಯಂಕವನ್ನು ಸೇರಲಿರುವ ಪರಿಣಾಮವಾಗಿ, ಭಾರತಕ್ಕೆ ವಿದೇಶಿ ಬಂಡವಾಳವು ಭಾರಿ ಪ್ರಮಾಣದಲ್ಲಿ ಹರಿದುಬರುವ ನಿರೀಕ್ಷೆ ಇದೆ. ಇದು ಭಾರತದ ಮಾರುಕಟ್ಟೆಗಳ ವ್ಯಾಪ್ತಿ ಇನ್ನಷ್ಟು ಹೆಚ್ಚಲು ನೆರವಾಗುತ್ತದೆ. ಭಾರತದ ಬಾಂಡ್‌ಗಳನ್ನು ಸೂಚ್ಯಂಕಕ್ಕೆ ಸೇರಿಸುವ ಕೆಲಸವು 2024ರ ಜೂನ್‌ನಿಂದ 10 ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಆಗಲಿದೆ. ಸೂಚ್ಯಂಕದಲ್ಲಿ ಭಾರತದ ಬಾಂಡ್‌ಗಳಿಗೆ ಸಿಗಬಹುದಾದ ಗರಿಷ್ಠ ಪ್ರಾಧಾನ್ಯ ಶೇಕಡ 10ರಷ್ಟು ಇರಲಿದೆ. ಚೀನಾ, ಬ್ರೆಜಿಲ್, ಇಂಡೊನೇಷ್ಯಾ ದೇಶಗಳ ಬಾಂಡ್‌ಗಳಿಗೆ ಇರುವಷ್ಟೇ ಪ್ರಾಧಾನ್ಯವು ಭಾರತದ ಬಾಂಡ್‌ಗಳಿಗೂ ಸಿಗಲಿದೆ. ಸೂಚ್ಯಂಕಕ್ಕೆ ಸೇರ್ಪಡೆಯಾಗುವ ಪರಿಣಾಮವಾಗಿ ಭಾರತಕ್ಕೆ 20 ಬಿಲಿಯನ್‌ ಡಾಲರ್‌ನಿಂದ (ಅಮೆರಿಕದ ಡಾಲರ್‌ ಎದುರು ರೂಪಾಯಿಯ ಈಗಿನ ಮೌಲ್ಯದ ಪ್ರಕಾರ ಅಂದಾಜು ₹ 1.66 ಲಕ್ಷ ಕೋಟಿ) 30 ಬಿಲಿಯನ್‌ ಡಾಲರ್‌ವರೆಗೆ (ಅಂದಾಜು ₹ 2.49 ಲಕ್ಷ ಕೋಟಿ) ಬಂಡವಾಳ ಹರಿದುಬರಬಹುದು ಎಂದು ನಿರೀಕ್ಷಿಸಲಾಗಿದೆ. ಜೆ.ಪಿ.ಮಾರ್ಗನ್ ಮಾತ್ರವೇ ಅಲ್ಲದೆ, ವಿಶ್ವದ ಇತರ ಪ್ರಮುಖ ಸೂಚ್ಯಂಕಗಳು ಕೂಡ ಇದೇ ಮಾದರಿಯಲ್ಲಿ ಭಾರತದ ಸರ್ಕಾರಿ ಬಾಂಡ್‌ಗಳಿಗೆ ತಮ್ಮಲ್ಲಿ ಸ್ಥಾನ ಕಲ್ಪಿಸಬಹುದು.

ಭಾರತದ ಮಾರುಕಟ್ಟೆಗಳಿಗೆ ಬರಲಿರುವ ಬಂಡವಾಳವು ಕೇಂದ್ರ ಸರ್ಕಾರಕ್ಕೆ ತನ್ನ ವಿತ್ತೀಯ ಕೊರತೆ ಹಾಗೂ ಚಾಲ್ತಿ ಖಾತೆ ಕೊರತೆಯನ್ನು ತುಂಬಿಕೊಳ್ಳುವುದಕ್ಕೆ ಇನ್ನೊಂದು ಹೊಸ ಮೂಲವನ್ನು ಸೃಷ್ಟಿಸಿಕೊಡಲಿದೆ. ಅಲ್ಲದೆ, ಸರ್ಕಾರಕ್ಕೆ ಬಂಡವಾಳ ಸಂಗ್ರಹದ ವೆಚ್ಚವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ಭಾರತದ ಬಾಂಡ್ ಮಾರುಕಟ್ಟೆಯು ಇನ್ನಷ್ಟು ಬಲಗೊಳ್ಳಲಿದೆ. ಭಾರತವು ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಾದರೆ, ಭಾರತಕ್ಕೆ ಅದನ್ನು ತಾಳಿಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಮಾರುಕಟ್ಟೆಯ ಅನಿಶ್ಚಿತತೆಗಳನ್ನು ಹಾಗೂ ಏರಿಳಿತಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ವಿದೇಶಿ ಬಂಡವಾಳದ ಒಳಹರಿವಿನ ಕಾರಣದಿಂದಾಗಿ ಭಾರತದ ರೂಪಾಯಿಯು ಬಲ ಪಡೆದುಕೊಳ್ಳಬಹುದು.
ವಿನಿಮಯ ದರದಲ್ಲಿ ಸ್ಥಿರತೆ ಕಂಡುಕೊಂಡರೆ ಇನ್ನಷ್ಟು ವಿದೇಶಿ ಸಾಂಸ್ಥಿಕ ಹೂಡಿಕೆ ಭಾರತದತ್ತ ಹರಿಯಬಹುದು. ಬ್ಯಾಂಕ್‌ಗಳಿಗೆ ಸರ್ಕಾರದ ಬಾಂಡ್‌ಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕಾದ ಒತ್ತಡ ಇರುವುದಿಲ್ಲವಾದ ಕಾರಣ, ಅವು ಖಾಸಗಿ ವಲಯಕ್ಕೆ ಹೆಚ್ಚು ಸಾಲ ನೀಡಲು ಸಾಧ್ಯವಾಗುತ್ತದೆ. ಮೂಲಸೌಕರ್ಯ ವಲಯದ ಮೇಲಿನ ಹೂಡಿಕೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಅಲ್ಲದೆ, ಭಾರತದ ಹಣಕಾಸು ಮಾರುಕಟ್ಟೆಗಳು ಜಾಗತಿಕ ಮಾರುಕಟ್ಟೆಗಳೊಂದಿಗೆ ಇನ್ನಷ್ಟು ಉತ್ತಮವಾಗಿ
ಸೇರಿಕೊಳ್ಳಬಹುದು.

ಜೆ.ಪಿ.ಮಾ‌ರ್ಗನ್ ತೀರ್ಮಾನವನ್ನು ಎಲ್ಲರೂ ಸ್ವಾಗತಿಸಿದ್ದಾರಾದರೂ, ಅದು ಬಂಡವಾಳ ಮಾರುಕಟ್ಟೆಗಳಲ್ಲಿ ಭಾರಿ ಪರಿಣಾಮ ಉಂಟುಮಾಡಿಲ್ಲ. ಏಕೆಂದರೆ ಈ ಸೇರ್ಪಡೆಯನ್ನು ಬಹುತೇಕರು ನಿರೀಕ್ಷಿಸಿದ್ದರು ಹಾಗೂ ಇದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲು ಒಂದು ವರ್ಷ ಬೇಕಿದೆ. ಕೆಲವು ಅಡ್ಡಿಗಳನ್ನು ನಿವಾರಿಸಿಕೊಳ್ಳಬೇಕಿದೆ, ಕೆಲವು ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಇಡೀ ಪ್ರಕ್ರಿಯೆಯಲ್ಲಿ, ಅಂದರೆ ಭಾರತವು ಜಾಗತಿಕ ಹಣಕಾಸು ಮಾರುಕಟ್ಟೆಗಳ ಜೊತೆ ಇನ್ನಷ್ಟು ಒಗ್ಗೂಡುವುದರಲ್ಲಿ ಒಂದಿಷ್ಟು ಸವಾಲುಗಳು ಕೂಡ ಇವೆ. ಬಂಡವಾಳದ ಒಳಹರಿವು ಹೆಚ್ಚಳದ ಪರಿಣಾಮವಾಗಿ ರೂಪಾಯಿ ಮೌಲ್ಯವು ಹೆಚ್ಚಾದರೆ, ರಫ್ತಿನ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಇದನ್ನು ನಿಭಾಯಿಸಬೇಕಾಗುತ್ತದೆ. ಭಾರತದ ಹಣಕಾಸಿನ ಪರಿಸ್ಥಿತಿ ಹಾಗೂ ಇಲ್ಲಿನ ಹಣಕಾಸು ವಲಯದಲ್ಲಿನ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇರುತ್ತದೆ. ಸರ್ಕಾರವು ತನ್ನ ವಿತ್ತೀಯ ಹೊಣೆಗಾರಿಕೆಯನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಗಮನ ಇರುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸಿನ ಬಿಕ್ಕಟ್ಟುಗಳು ಇದ್ದಾಗ, ಭಾರತದ ಬಾಂಡ್‌ಗಳ ಮೇಲೆಯೂ ಒತ್ತಡ ಉಂಟಾಗಬಹುದು. ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಕೂಡ ಒಂದಿಷ್ಟು ಸವಾಲುಗಳು ಎದುರಾಗಬಹುದು. ಆದರೆ ಅದಕ್ಕೆ ರೂಪಾಯಿಯ ನಿರ್ವಹಣೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ. ಹಾಗೆಯೇ, ಆರ್‌ಬಿಐ ಜೊತೆ ಸರ್ಕಾರ ಹೇಗೆ ವರ್ತಿಸುತ್ತದೆ ಎಂಬುದನ್ನು ಜಗತ್ತು ಹೆಚ್ಚು ಸೂಕ್ಷ್ಮವಾಗಿ ಗಮನಿಸಲಿದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT