ಶನಿವಾರ, ಅಕ್ಟೋಬರ್ 24, 2020
18 °C
ಮಳೆ ವಿಕೋಪದ ಸನ್ನಿವೇಶವನ್ನು ಮುಂಚೆಯೇ ಊಹಿಸುವುದು, ಅದಕ್ಕೆ ತಕ್ಕಂತೆ ಕ್ರಿಯಾಯೋಜನೆ ರೂಪಿಸುವುದು ನಮ್ಮ ಆದ್ಯತೆಯಾಗಬೇಕು

ಸಂಪಾದಕೀಯ: ಮತ್ತೆ ಕಾಡುತ್ತಿದೆ ಪ್ರವಾಹ; ಸಂತ್ರಸ್ತರ ಕಣ್ಣೀರು ಒರೆಸಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕರಾವಳಿ ಪ್ರದೇಶವೂ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಎರಡು–ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಅದರಲ್ಲೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಅಟಾಟೋಪ ಹೆಚ್ಚಾಗಿದ್ದು, ಎರಡೂ ಜಿಲ್ಲೆಗಳ ನೂರಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿವೆ. ಬರೀ 24 ಗಂಟೆಗಳಲ್ಲಿ 45 ಸೆಂ.ಮೀ.ನಷ್ಟು ಮಳೆಯನ್ನು ಕಂಡಿರುವ ಉಡುಪಿ ಜಿಲ್ಲೆಯಲ್ಲಿ ಹಲವೆಡೆ ರಸ್ತೆಗಳೇ ಕಿತ್ತುಹೋಗಿವೆ.

ಸಂಪಾದಕೀಯ ಕೇಳಿ: ಮತ್ತೆ ಕಾಡುತ್ತಿದೆ ಪ್ರವಾಹ; ಸಂತ್ರಸ್ತರ ಕಣ್ಣೀರು ಒರೆಸಿ

ಸಣ್ಣ–ಪುಟ್ಟ ಸೇತುವೆಗಳು ಕೊಚ್ಚಿಹೋಗಿವೆ. ಹೀಗಾಗಿ ಹೆಚ್ಚಿನ ಗ್ರಾಮಗಳಿಗೆ ಸಂಪರ್ಕ ಕಡಿದುಹೋಗಿದೆ. ಪಡೀಲ್‌ನಲ್ಲಿ ಗುಡ್ಡ ಕುಸಿದು ರೈಲು ಸಂಪರ್ಕ ಕೂಡ ತುಂಡರಿಸಿಹೋಗಿದೆ. ಪ್ರವಾಹಪೀಡಿತ ಹಳ್ಳಿಗಳಲ್ಲಿ ಸಾವಿರಾರು ಜನ ಅಪಾಯದಲ್ಲಿ ಸಿಲುಕಿದ್ದಾರೆ. ತುರ್ತಾಗಿ ಅವರಿಗೆ ನೆರವಿನಹಸ್ತ ಚಾಚುವುದು ಅಗತ್ಯವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಕಾಫಿ ತೋಟಗಳಿಗೆ ಹಾನಿಯಾಗಿದೆ. ಚಾರ್ಮಾಡಿ ಘಾಟ್‌ ಬಳಿ ಮತ್ತೆ ಗುಡ್ಡ ಕುಸಿತವಾಗಿದೆ. ಕೊಡಗು ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದೆ. ಇತ್ತೀಚಿನ ದುರಂತದ ಕಹಿ ನೆನಪುಗಳಿಂದ ಜರ್ಜರಿತಗೊಂಡಿರುವ ಅಲ್ಲಿನ ಜನರಲ್ಲಿ ಈಗ ಆತಂಕ ಉಲ್ಬಣಗೊಂಡಿದೆ. ಇತ್ತ ಕೆಆರ್‌ಎಸ್‌ನಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ ಕೂಡ ಹೆಚ್ಚಾಗಿದ್ದು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ನದಿಪಾತ್ರದ ಆಸುಪಾಸಿನ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಉತ್ತರ ಕರ್ನಾಟಕದಲ್ಲಿ ತುಂಗಭದ್ರಾ, ಕೃಷ್ಣಾ ನದಿಗಳೂ ಅವುಗಳ ಉಪನದಿಗಳೂ ತಮ್ಮ ಪಾತ್ರವನ್ನು ಹಿಗ್ಗಿಸಿಕೊಂಡು ಹರಿಯುತ್ತಿವೆ. ಮುಂಗಾರು ಋತುವಿನಲ್ಲಿ ಹಲವು ದಿನಗಳವರೆಗೆ ಹರಿದು ಹಂಚಿಹೋಗಬೇಕಿದ್ದ ಮಳೆ, ಕೆಲವೇ ದಿನಗಳಲ್ಲಿ ಸುರಿಯುತ್ತಿರುವುದು ಇಂತಹ ವಿಪತ್ತಿನ ಸನ್ನಿವೇಶಗಳಿಗೆ ಕಾರಣವಾಗಿದೆ. ಒಮ್ಮೆ ಬರದಿಂದ, ಮಗದೊಮ್ಮೆ ಜಲ ಪ್ರಳಯದಿಂದ ರಾಜ್ಯದ ಹಲವು ಭಾಗಗಳು ಬಾಧೆಗೆ ಒಳಗಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಂಕಷ್ಟದಲ್ಲಿ ಸಿಲುಕಿದವರನ್ನು ರಕ್ಷಿಸಿ, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಬೇಕಿರುವುದು ತುರ್ತಾಗಿ ಆಗಬೇಕಿರುವ ಕೆಲಸ. ಹೀಗಾಗಿ ವಿಪತ್ತು ನಿರ್ವಹಣಾ ತಂಡಗಳನ್ನು ವಿಳಂಬ ಮಾಡದೆ ಆ ಪ್ರದೇಶಕ್ಕೆ ಕಳುಹಿಸಿಕೊಡಬೇಕು. ಪ್ರವಾಹದಲ್ಲಿ ಎಲ್ಲವನ್ನೂ ಕಳೆದುಕೊಂಡ ಜನರಿಗೆ ಆದ್ಯತೆ ಮೇರೆಗೆ ಪುನರ್ವಸತಿ ಕೇಂದ್ರಗಳನ್ನು ಆರಂಭಿಸಬೇಕು. ಕೋವಿಡ್‌ನ ಈ ಸಂಕಟದ ಕಾಲದಲ್ಲಿ ಪ್ರವಾಹಪೀಡಿತ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸುವಲ್ಲಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳಬೇಕು.

ಮಳೆಯ ಅಬ್ಬರ ಕಡಿಮೆ ಆಗುತ್ತಲೇ ಆಸ್ತಿ, ಬೆಳೆ ಹಾನಿಯ ಸಮೀಕ್ಷೆ ನಡೆಸಿ, ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಬೇಕು. ಆ ಮೂಲಕ ಹೊಸ ಬದುಕು ಕಟ್ಟಿಕೊಳ್ಳಲು ಅವರ ನೆರವಿಗೆ ನಿಲ್ಲಬೇಕು. ಸಂಕಷ್ಟದಲ್ಲಿರುವ ಮೀನುಗಾರರ ಕಣ್ಣೀರನ್ನೂ ಒರೆಸಬೇಕು. ಪ್ರಾಕೃತಿಕ ವಿಪತ್ತುಗಳನ್ನು ಎದುರಿಸಲು ನಾವು ಮಾಡಿಕೊಂಡ ಸಿದ್ಧತೆ ಏನೇನೂ ಸಾಲದು ಎನ್ನುವುದು ಇಂತಹ ಪ್ರವಾಹದ ಸಂದರ್ಭಗಳಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

ವಿಪತ್ತು ಸಂಭವಿಸಿದ ಮೇಲೆ ಜಾಗೃತವಾದರೆ ಏನೇನೂ ಪ್ರಯೋಜನವಿಲ್ಲ. ವಿಕೋಪದ ಸನ್ನಿವೇಶವನ್ನು ಮುಂಚೆಯೇ ಊಹಿಸುವುದು, ಅದಕ್ಕೆ ತಕ್ಕಂತೆ ಕ್ರಿಯಾಯೋಜನೆ ರೂಪಿಸುವುದು ನಮ್ಮ ಆದ್ಯತೆಯಾಗಬೇಕು. ಕೃಷ್ಣಾ, ಕಾವೇರಿಯಂತಹ ನದಿಗಳು 3–4 ರಾಜ್ಯಗಳಲ್ಲಿ ಹರಿದು ಹೋಗುತ್ತವೆ. ಯಾವುದೇ ರಾಜ್ಯದಲ್ಲಿ ಮಳೆಯಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾದರೆ ಕೆಳ ಹಂತದ ರಾಜ್ಯಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಆಯಾ ರಾಜ್ಯದ ಸನ್ನಿವೇಶದ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವ ವ್ಯವಸ್ಥೆಯನ್ನು ಬಲಪಡಿಸಬೇಕು. ಕಾವೇರಿ ಹಾಗೂ ಕೃಷ್ಣಾ ಸೇರಿದಂತೆ ಪ್ರಮುಖ ನದಿ ಕೊಳ್ಳಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರವಾಹ ಮುನ್ಸೂಚನಾ ವ್ಯವಸ್ಥೆಯನ್ನು ರೂಪಿಸಬೇಕು. ಹಾಗೆಯೇ ಭೂಕುಸಿತ, ಕಡಲ್ಕೊರೆತದಂತಹ ವಿಪತ್ತುಗಳ ನಿರ್ವಹಣೆಗೂ ನಿಖರ ಮುನ್ಸೂಚನಾ ವ್ಯವಸ್ಥೆಯನ್ನು ರೂಪಿಸುವ ಕೆಲಸ ಆಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು