ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಶಾಲೆಗಳು ಬಾಗಿಲು ತೆರೆಯಲಿನಿರಂತರ ಕಲಿಕೆ ಅಬಾಧಿತವಾಗಲಿ

Last Updated 27 ಜುಲೈ 2021, 19:31 IST
ಅಕ್ಷರ ಗಾತ್ರ

ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಮುಚ್ಚಿದ್ದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತೆ ಕಾರ್ಯಾರಂಭ ಮಾಡಿರುವುದು ಅಗತ್ಯವಾಗಿದ್ದ ಕ್ರಮ. ಕೊರೊನಾದ ಆತಂಕ ಇನ್ನೂ ದೂರವಾಗಿಲ್ಲ. ಸಂಭಾವ್ಯ ಮೂರನೇ ಅಲೆಯಲ್ಲಿ ಕೊರೊನಾ ಸೋಂಕು ಮಕ್ಕಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಆತಂಕದ ನಡುವೆಯೂ ಶಾಲಾ ಕಾಲೇಜುಗಳು ಆರಂಭವಾಗುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ. ಕೊರೊನಾ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ವಿದ್ಯಾರ್ಥಿಗಳು ಮನೆಗಳಲ್ಲಿಯೇ ಉಳಿದಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭ ಕೂಡ ಸೋಂಕಿನ ಭೀತಿಯಿಂದ ವಿಳಂಬವಾಗಿದೆ. ಸೋಂಕಿನ ಸಂಕಷ್ಟ ಯಾವಾಗ ಬಗೆಹರಿಯುತ್ತದೆಂದು ಹೇಳುವುದೂ ಸಾಧ್ಯವಿಲ್ಲ. ಹಾಗಾಗಿ, ಶಾಲೆಗಳನ್ನು ಮತ್ತಷ್ಟು ಸಮಯ ಮುಚ್ಚುವುದರಿಂದ ಮಕ್ಕಳ ಹಿತಾಸಕ್ತಿ ರಕ್ಷಣೆ ಸಾಧ್ಯವಾಗುವುದಕ್ಕಿಂತಲೂ ಅನನುಕೂಲಗಳೇ ಹೆಚ್ಚು. ಲಾಕ್‌ಡೌನ್‌ ಸಮಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ ಕುಸಿದಿರುವುದನ್ನು ಸಮೀಕ್ಷೆಗಳು ಗುರುತಿಸಿವೆ. ರಾಜ್ಯದ ಶೇ 30ರಷ್ಟು ಮಕ್ಕಳು ಕೊರೊನಾ ಕಾರಣದಿಂದಾಗಿ ಕಲಿಕೆಯಿಂದ ವಂಚಿತರಾಗಿರುವುದನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ಸಮೀಕ್ಷೆ ಗುರುತಿಸಿದೆ. ನಿರಂತರ ಕಲಿಕೆಗೆ ಉಂಟಾಗುವ ಅಡಚಣೆ ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ತೊಡಕಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇಂಥ ಸೂಕ್ಷ್ಮ ಸಂದರ್ಭದಲ್ಲಿ ಇನ್ನಷ್ಟು ಕಾಲ ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳ ಕಲಿಕೆಯ ಮೇಲೆ ತೀವ್ರ ದುಷ್ಪರಿಣಾಮ ಆಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳನಿರಂತರ ಕಲಿಕೆಗೆ ಅನುಕೂಲವಾಗುವಂತೆ ನಡೆಸಲಾಗುತ್ತಿರುವ ಆನ್‌ಲೈನ್‌ ಶಿಕ್ಷಣ ಕಾರ್ಯಕ್ರಮ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ. ಆದರೆ, ಮೊಬೈಲ್‌ ಫೋನ್‌ಗಳಿಲ್ಲದ, ಸ್ಮಾರ್ಟ್‌ ಫೋನ್‌ ಇದ್ದರೂ ದುರ್ಬಲ ನೆಟ್‌ವರ್ಕ್‌ ಕಾರಣದಿಂದಾಗಿ ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಿರುವ ಗ್ರಾಮೀಣ ಮಕ್ಕಳ ಸಂಖ್ಯೆ ದೊಡ್ಡದಿದೆ. ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಹೇಳುವ ಪ್ರಯತ್ನವೂ ಅಷ್ಟೇನು ಫಲಕಾರಿಯಾಗಿಲ್ಲ. ಕಲಿಕೆಯನ್ನು ಪರಿಣಾಮಕಾರಿ ಆಗಿಸುವುದು ಹಾಗೂ ಎಲ್ಲ ಮಕ್ಕಳನ್ನೂ ತಲುಪುವುದು ಭೌತಿಕ ತರಗತಿಗಳಿಂದಷ್ಟೇ ಸಾಧ್ಯ. ಈ ಹಿನ್ನೆಲೆಯಲ್ಲಿ ಶಾಲೆಗಳು ಆದಷ್ಟು ಬೇಗ ಆರಂಭವಾಗುವುದು ಅಪೇಕ್ಷಣೀಯ.

ಶಾಲೆಗಳನ್ನು ಮುಚ್ಚುವುದರ ದುಷ್ಪರಿಣಾಮ ಮಕ್ಕಳ ಕಲಿಕೆಯ ಮೇಲಷ್ಟೇ ಅಲ್ಲ, ಸಮಾಜದ ಮೇಲೂ ಆಗುತ್ತಿದೆ. ಲಾಕ್‌ಡೌನ್‌ ಸಮಯದಲ್ಲಿಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಾಗಿದೆ. ಬಾಲಕಾರ್ಮಿಕರೂ ಹೆಚ್ಚಾಗಿದ್ದಾರೆ. ಸಂಕಷ್ಟದ ಸಮಯದಲ್ಲಿ ಮದುವೆ ಮಾಡುವ ಮೂಲಕ ಹೆಣ್ಣುಮಕ್ಕಳ ಜವಾಬ್ದಾರಿಯನ್ನು ಹಗುರ ಮಾಡಿಕೊಳ್ಳುವ ಯೋಚನೆ ಕೆಲವು ಪೋಷಕರದು. ಶಾಲೆಗಳಿಲ್ಲದ ಕಾರಣ ಮನೆಯಲ್ಲಿಯೇ ಉಳಿದಿರುವ ಹುಡುಗರನ್ನು ಕೆಲಸಕ್ಕೆ ಹಚ್ಚುವ ಮೂಲಕ ಕುಟುಂಬ ನಿರ್ವಹಣೆಯ ಭಾರವನ್ನು ಕೊಂಚ ಸಹನೀಯವಾಗಿಸಿಕೊಳ್ಳುವ ಪ್ರಯತ್ನ ಮತ್ತೆ ಕೆಲವು ಪಾಲಕರದು. ಇದರಿಂದಾಗಿ, ಶಾಲೆಗೆ ಹೋಗಬೇಕಾದ ಮಕ್ಕಳು ಕೃಷಿ ಚಟುವಟಿಕೆಗಳಲ್ಲಿ ಹಿರಿಯರಿಗೆ ಹೆಗಲು ನೀಡಿದ್ದಾರೆ. 2021–22ರ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಮಾಣ ಕುಸಿದಿದೆ. ಈ ಕುಸಿತವು ಒಂದನೇ ತರಗತಿಗೆ ದಾಖಲಾಗುವ ಮೂಲಕ ಅಕ್ಷರಾಭ್ಯಾಸ ಶುರು ಮಾಡಬೇಕಾಗಿದ್ದ ಮಕ್ಕಳು ನೇರವಾಗಿ ದುಡಿಮೆಯತ್ತ ನಡೆದಿರುವುದನ್ನು ಸೂಚಿಸುವಂತಿದೆ. ಈ ಸಾಮಾಜಿಕ, ಶೈಕ್ಷಣಿಕ ಸಂಕಷ್ಟಗಳ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿವೆ.ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಗೆ, ಅತಿ ತೂಕದ ಕಾರಣದಿಂದಾಗಿ ಮಧುಮೇಹದಂತಹ ಸಮಸ್ಯೆಗಳು ಕೆಲವು ಎಳೆಯರಲ್ಲಿ ಕಾಣಿಸಿಕೊಂಡಿವೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ಖಿನ್ನತೆ ಹೆಚ್ಚುತ್ತಿರುವುದನ್ನು ಮಾನಸಿಕ ತಜ್ಞರು ಗುರುತಿಸಿದ್ದಾರೆ. ಶಾಲೆ ಮತ್ತು ಆಟದ ಬಯಲಿನಿಂದ ದೂರ ಇರುವುದರಿಂದಾಗಿ, ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ಪಾಲಕರು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮನೆಯಲ್ಲಿರುವ ಮಕ್ಕಳಲ್ಲೇ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವಾಗ, ಕೊರೊನಾ ಸೋಂಕಿನಿಂದ ವಿದ್ಯಾರ್ಥಿಗಳನ್ನು ರಕ್ಷಿಸುವುದಕ್ಕಾಗಿ ಶಾಲೆಗಳನ್ನು ಆರಂಭಿಸದೆ ಇರುವುದರಲ್ಲಿ ಅರ್ಥವಿಲ್ಲ.

ಕೊರೊನಾ ಹೆಸರಿನಲ್ಲಿ ಮಕ್ಕಳನ್ನು ಮನೆಗಳಲ್ಲಿ ಇರಿಸಿಕೊಳ್ಳುವುದರಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ವಿನಾ ಕಡಿಮೆಯಾಗುವುದಿಲ್ಲ ಎನ್ನುವುದು ಕಳೆದ ಒಂದೂವರೆ ವರ್ಷದಲ್ಲಿ ಸಾಬೀತಾಗಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಪ್ರಬಲವಾಗಿರುವುದರಿಂದ ಕೊರೊನಾ ಅವರನ್ನು ಹೆಚ್ಚು ಬಾಧಿಸುವುದಿಲ್ಲ ಎನ್ನುವುದನ್ನು ತಜ್ಞರು ಒತ್ತಿ ಹೇಳಿದ್ದಾರೆ. ಈ ಸಂಗತಿಗಳು ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ನಿರ್ಣಯ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಸೆ ನೀಡುವಂತಿವೆ. ಪದವಿ ಕಾಲೇಜುಗಳನ್ನು ತೆರೆದಿರುವುದರ ಬೆನ್ನಿಗೇ ಆಗಸ್ಟ್‌ 2ರಿಂದ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದ ಕಾರ್ಯಪಡೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ಒಂದೇ ಮಾದರಿಯ ಪ್ರಮಾಣಿತ ಕಾರ್ಯಾಚರಣೆ ವಿಧಾನ ಅನುಸರಿಸುವಂತೆ ಸಲಹೆ ಮಾಡಿದೆ.ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಕೂಡ,ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪಾಳಿಗಳಲ್ಲಿ ಅಥವಾ ದಿನ ಬಿಟ್ಟು ದಿನ ತರಗತಿಗಳನ್ನು ನಡೆಸಬೇಕೆಂದು ಸಲಹೆ ಮಾಡಿದೆ. ಈ ಸಲಹೆ, ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಿ ಶಾಲೆಗಳನ್ನು ಶೀಘ್ರದಲ್ಲಿ ಆರಂಭಿಸಲು ಸರ್ಕಾರ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT